6

‘ವೆಂಕಟೇಶ್ವರನಿಗೂ ನಮಗೂ ಹತ್ತಿರದ ಸಂಬಂಧ’

Published:
Updated:
‘ವೆಂಕಟೇಶ್ವರನಿಗೂ ನಮಗೂ ಹತ್ತಿರದ ಸಂಬಂಧ’

ನನ್ನ ಹೆಸರು ಟಿ.ಎ.ಪಿ.ನಾಗರಾಜ್‌. ಅವೆನ್ಯೂ ರಸ್ತೆಯ ಚೌಡಮ್ಮನ ಗುಡಿ ಬೀದಿಯಲ್ಲಿ ಟಿ.ಎ.ಪದ್ಮನಾಭಯ್ಯ ಶೆಟ್ಟಿ ಆ್ಯಂಡ್‌ ಕಂಪೆನಿ ಆಭರಣದ ಅಂಗಡಿ ನಡೆಸುತ್ತಿದ್ದೇನೆ. ಅದರೊಂದಿಗೆ ಲಕ್ಷಾಂತರ ಭಕ್ತಾದಿಗಳ ಆರಾಧ್ಯ ದೈವವಾಗಿರುವ ತಿರುಮಲದ ವೆಂಕಟೇಶ್ವರರಿಗೆ ವಿಶೇಷ ಸೇವೆಯೊಂದನ್ನು ಸಲ್ಲಿಸುತ್ತಿದ್ದೇನೆ. ಅದೆಂದರೆ, ದೇವರ ವಿಗ್ರಹಕ್ಕೆ ಧಾರಣೆ ಮಾಡುವ ಆಭರಣಗಳ ಪಾಲಿಷ್ ಮತ್ತು ರಿಪೇರಿ ಮಾಡುವುದು. ದೇವಸ್ಥಾನಕ್ಕೆ ಕಾಣಿಕೆಯಾಗಿ ಬರುವ ಚಿನ್ನ, ಬೆಳ್ಳಿ ಮತ್ತು ವಜ್ರದ ಕಾಣಿಕೆಗಳನ್ನು ಪರೀಕ್ಷಿಸುವುದು.

2000ರಲ್ಲಿ ಒಮ್ಮೆ ಪರಿಚಯಸ್ಥರೊಬ್ಬರು ಅಂಗಡಿಗೆ ಬಂದಾಗ, ಹಾಗೇ ಮಾತನಾಡುತ್ತ, ತಿರುಮಲದ ದೇವಸ್ಥಾನಕ್ಕೆ ಕಾಣಿಕೆಯಾಗಿ ಬರುವ ಚಿನ್ನವನ್ನು ಪರೀಕ್ಷಿಸಲು ಸಮಿತಿಯೊಂದನ್ನು ರಚಿಸುತ್ತಿದ್ದಾರೆ. ನೀವೂ ಒಂದು ಬಯೋಡೆಟಾ ಕೊಡಿ ಎಂದು ತೆಗೆದುಕೊಂಡು ಹೋದರು. ಒಂದೇ ವಾರದಲ್ಲಿ ದೇವಸ್ಥಾನದಿಂದ ಕೆಲಸಕ್ಕೆ ಕರೆಬಂತು. ನಮ್ಮ ಮನೆದೇವರು ಕೂಡ ವೆಂಕಟೇಶ್ವರಸ್ವಾಮಿ. ದೇವರೇ ಕರುಣಿಸಿದ ಸೇವೆಯ ಸೌಭಾಗ್ಯವೆಂದು ಸಂತಸದಿಂದ ಒಪ್ಪಿಕೊಂಡೆ.

ಭಕ್ತಾದಿಗಳಲ್ಲಿ ಬಹುತೇಕರು ಚಿನ್ನವನ್ನು ಹುಂಡಿಯಲ್ಲಿ ಹಾಕುತ್ತಾರೆ, ಕೆಲವರು ಅಫೀಷಿಯಲ್‌ ಆಗಿ ಟಿಟಿಡಿಗೆ ಕೊಡುತ್ತಾರೆ. ಅವುಗಳಲ್ಲಿ ಉಂಗುರ, ಶಂಖ, ಓಲೆ, ನೆಕ್ಲೆಸ್‌, ಬಳೆ, ನಾಣ್ಯ ಹಾಗೂ ವಜ್ರಗಳು ಇರುತ್ತವೆ. ಅವುಗಳನ್ನು ವಿಶೇಷ ಸಿಬ್ಬಂದಿ ಪ್ರಾಥಮಿಕ ಪರೀಕ್ಷೆ ಮಾಡಿ, ಅವು ಅಸಲಿ ಚಿನ್ನ, ಬೆಳ್ಳಿ, ವಜ್ರವೆಂದು ಖಚಿತಪಡಿಸಿಕೊಳ್ಳುತ್ತಾರೆ. ಅವರು ಪರೀಕ್ಷಿಸಿದ್ದು ಸರಿಯಾಗಿದೆ ಎಂಬುದನ್ನು ದೃಢಿಕರಿಸುವುದು ನನ್ನ ಕೆಲಸ. ನನ್ನೊಂದಿಗೆ ಇನ್ನೂ ಮೂರು ಪರಿಣಿತರಿದ್ದಾರೆ.

ಕಾಣಿಕೆಗಳ ಪರಿಶೀಲನೆಗೆಂದು ವರ್ಷಕ್ಕೆ ಹನ್ನೆರೆಡು ಬಾರಿ ತಿರುಪತಿಗೆ ಹೋಗಿ ಬರುತ್ತೇನೆ. ಒಂದು ಬಾರಿ ಹೋದರೆ ಬೆಳಿಗ್ಗೆ 9ರಿಂದ ಸಂಜೆ 5ರವರೆಗೆ ಎರಡು ಮೂರು ದಿನ ಚಿನ್ನ, ಬೆಳ್ಳಿ, ವಜ್ರಗಳಲ್ಲೇ ಕೈಯಾಡಿಸುತ್ತಿರಬೇಕು. ಬೆಲೆಬಾಳುವ ಲೋಹಗಳ ಕೆ.ಜಿ.ಗಟ್ಟಲೇ ಪರಿಕರಗಳನ್ನು ಪರಿಶೀಲಿಸಬೇಕು.

ನನ್ನ ಕೆಲಸದ ವೈಖರಿ ಮತ್ತು ಭಕ್ತಿಯನ್ನು ಗಮನಿಸಿ 2009ರಲ್ಲಿ ಗರ್ಭಗುಡಿ ಹಾಗೂ ಉತ್ಸವ ಮೂರ್ತಿಗಳ ಆಭರಣಗಳ ಕ್ಲೀನಿಂಗ್‌, ಪಾಲಿಷಿಂಗ್ ಮತ್ತು ರಿಪೇರಿಯ ಜವಾಬ್ದಾರಿ ವಹಿಸಿದರು. ನನಗೆ ಬಹಳ ಖುಷಿಯಾಯಿತು. ನವರಾತ್ರಿ ಸಮಯದಲ್ಲಿ ಅಲ್ಲಿ ಬ್ರಹ್ಮೋತ್ಸವ ನಡೆಯುತ್ತೆ. ಆ ಉತ್ಸವಕ್ಕೆ ಮೂರು ವಾರಗಳ ಮುಂಚಿತವಾಗಿ ಬುಲಾವ್‌ ಬರುತ್ತದೆ. ನಾನು, ನನ್ನ ಅಂಗಡಿಯ 18 ಜನ ನುರಿತ ಅಕ್ಕಸಾಲಿಗರ ತಂಡವನ್ನು ಕರೆದುಕೊಂಡು ಹೋಗುತ್ತೇನೆ. ಹೋಗುವಾಗ ಕ್ಲೀನಿಂಗ್‌ಗೆ ಬೇಕಾದ ಬ್ರಷ್‌ಗಳು, ಕೆಮಿಕಲ್‌ಗಳನ್ನು ತೆಗೆದುಕೊಂಡು ಹೋಗುತ್ತೇವೆ.

ಒಂದು ವರ್ಷದ ಹಿಂದೆ ದೇವಸ್ಥಾನದ ಧ್ವಜಸ್ತಂಭ ಮೇಲಿನ 20 ಕೆ.ಜಿ. ಚಿನ್ನದ ಕಳಸಕ್ಕೆ ರಂಧ್ರವಾಗಿತ್ತು, ಅದನ್ನು ತುಂಬಾ ಕಷ್ಟಾಪಟ್ಟು ಸರಿಪಡಿಸಿದೆವು. ನಾಲ್ಕು ವರ್ಷದ ಹಿಂದೆ ದೇವಸ್ಥಾನದಲ್ಲಿದ್ದ ರಾಮನ ಚಿನ್ನದ ಬಿಲ್ಲು–ಬಾಣಗಳು ಬಿರುಕು ಬಿಟ್ಟಿದ್ದವು. ಅವುಗಳನ್ನು ರಿಪೇರಿ ಮಾಡಿದೆವು.

ಪರಿಶೀಲನಾ ಕೆಲಸದ ವೇಳೆಯಲ್ಲಿ ಕೆಲ ಭಕ್ತಾದಿಗಳು ನೀಡಿದ ಅಪರೂಪದ ಕಾಣಿಕೆಗಳನ್ನು ಕಂಡಿದ್ದೇನೆ. ವಿದೇಶಿ ಭಕ್ತರೊಬ್ಬರು ಪದ್ಮಾವತಿ ದೇವಿಗೆ ಚಿನ್ನದ ಫ್ರಾಕ್‌ ಮಾಡಿಸಿದ್ದರು. ಫುಟ್‌ಬಾಲ್‌ ಆಟಗಾರರೊಬ್ಬರು 12 ಸಾವಿರ ವಜ್ರಗಳನ್ನು ಜೋಡಿಸಿದ ಚಿನ್ನದ ಕಾಲ್ಚೆಂಡನ್ನು ನೀಡಿದ್ದರು. ಸ್ವಾಮೀಜಿಯೊಬ್ಬರು 10 ಕೆ.ಜಿ. ಚಿನ್ನದ ಬಲಮುರಿ ಶಂಖವನ್ನು ಕೊಟ್ಟಿದ್ದರು. ಯಾರೋ ನಾಲ್ಕು ಕೋಟಿ ರೂಪಾಯಿ ಬೆಲೆಬಾಳುವ ನಾಲ್ಕು ಸೆಟ್‌ ವಜ್ರದ ಉಂಗುರಗಳನ್ನು ಹುಂಡಿಗೆ ಹಾಕಿದ್ದರು.

ನಾನು ಐದಾರು ವರ್ಷದವನಿದ್ದಾಗ ಮೊದಲ ಬಾರಿಗೆ ತಿರುಪತಿಗೆ ಹೋಗಿದ್ದು ಇಂದಿಗೂ ನೆನಪಿದೆ. ಆದರೆ ಈ ರೀತಿ ದೇವರ ಸೇವೆ ಮಾಡುವ ಅವಕಾಶ ಸಿಗುತ್ತದೆ ಎಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ದೇವರು ನನ್ನ ಮೇಲೆ ಇಟ್ಟಿರುವ ಕರುಣೆ ಮತ್ತು ನನ್ನ ಪುಣ್ಯದಿಂದ ಮಾತ್ರ ಇಂಥ ಭಾಗ್ಯ ದೊರೆತಿದೆ. ನನ್ನ ಮಗ ಟಿ.ಎನ್‌.ಸಂದೀಪ್‌ ಕೂಡ ದೇವರ ಸೇವೆಗೆ ಸಾತ್‌ ನೀಡುತ್ತಿದ್ದಾನೆ.

ನಾನು ಚಿನ್ನಾಭರಣಗಳ ಕೆಲಸಕ್ಕೆ ಬರಲು ತಂದೆಯೇ ಪ್ರೇರಣೆ. 22ನೇ ವಯಸ್ಸಿಗೆ ಕಸುಬು ಆರಂಭಿಸಿದೆ, ಈಗ ನನಗೆ 68 ವರ್ಷ. ಓದಿದ್ದು ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌. ನನ್ನೆಲ್ಲಾ ಕೆಲಸಗಳಿಗೂ ಜೀವನ ಸಂಗಾತಿಯಾದ ಹೇಮಾವತಿ ಬೆಂಬಲ ನೀಡುತ್ತಾರೆ. ಈ ಕೆಲಸಗಳ ನಡುವೆ ಸಾಹಿತ್ಯ ಅಧ್ಯಯನವನ್ನೂ ರೂಢಿಸಿಕೊಂಡಿದ್ದೇನೆ. ಬಿಡುವಿದ್ದಾಗ ಚಾಮರಾಜಪೇಟೆಯಲ್ಲಿನ ಮನೆಯಲ್ಲಿ ಕೂತು ಓದುತ್ತೇನೆ, ಬರೆಯುತ್ತೇನೆ. ನನ್ನ ಮೆಚ್ಚಿನ ಸಾಹಿತಿ ಡಿವಿಜಿ. ನಿಮಗೆ ಗೊತ್ತಾ, ನನ್ನ ಎರಡು ಕವನ ಸಂಕಲನಗಳು ಬಿಡುಗಡೆಯಾಗಿವೆ.

80 ಕೆಲಸಗಾರರ ಸಹಕಾರದಿಂದ ವ್ಯಾಪಾರ ಬೆಳೆಯುತ್ತಿದೆ. ದೇವರ ಸೇವೆಯಿಂದ ಗೌರವ ಸಿಗುತ್ತಿದೆ. ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಗಂಪಲಹಳ್ಳಿಯವನಾದ ನನಗೆ ಈವರೆಗಿನ ಜೀವನ ಪಯಣ ತೃಪ್ತಿ ನೀಡಿದೆ.

ನಮ್ಮದು ವಿಶಿಷ್ಟ ಕಾಯಕ

ನಮ್ಮನ್ನು ಬೆಳಿಗ್ಗೆ 4 ಗಂಟೆಗೆ ಒಳಗೆ ಬಿಡುತ್ತಾರೆ. ಒಳಹೊಕ್ಕ ನಾವು ಭಕ್ತಿಯಿಂದ ದೇವರಿಗೆ ಕೈಮುಗಿದು, ನಂತರ ಕಾಯಕ ಶುರುಮಾಡುತ್ತೇವೆ. ದೇವರಿಗೆ ಧರಿಸುವ ಶಂಖಚಕ್ರ, ಕಿರೀಟ, ಕಾಸಿನ ಸರ, ಸಾಲಿಗ್ರಾಮದ ಹಾರ, ಮೂರೆಳೆ ಸರ, ತೋಳುಬಂದಿ, ಹಸ್ತಬಂಧಿ, ಪೀತಾಂಬರ, ಭುಜಕೀರ್ತಿ, ನಾಗಾಭರಣ, ಕಂಠಿಹಾರಗಳನ್ನು ಶುಚಿಗೊಳಿಸುತ್ತೇವೆ. ನಾಜೂಕಾಗಿ ಪಾಲೀಷ್ ಮಾಡುತ್ತೇವೆ.

‌ಯಾವುದಾದರೂ ಆಭರಣಕ್ಕೆ ಡ್ಯಾಮೆಜ್‌ ಆಗಿದ್ರೆ, ರಿಪೇರಿ ಮಾಡ್ತೇವೆ. ಇಷ್ಟೆಲ್ಲಾ ಕೆಲಸವನ್ನು ಮಧ್ಯಾಹ್ನ 1.30ರೊಳಗೆ ಮುಗಿಸಿ ಹೊರಬರುತ್ತೇವೆ. ರಿಪೇರಿಗೆ ಬೇಕಾದ ಚಿನ್ನವನ್ನು ನಮ್ಮ ಅಂಗಡಿಯಿಂದಲೇ ತೆಗೆದುಕೊಂಡು ಹೋಗುತ್ತೇವೆ. ಇದನ್ನು ನಾವು ದೈವಸೇವೆ ಎಂದು ಪರಿಗಣಿಸಿದ್ದೇವೆ. ಹಾಗಾಗಿ ಈ ಕೆಲಸಗಳಿಗಾಗಿ ದೇವಸ್ಥಾನದಿಂದ ಒಂದು ರೂಪಾಯಿ ಗೌರವಧನವನ್ನೂ ಪಡೆಯಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry