ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ರಿವಳಿ ತಲಾಖ್ ಮಸೂದೆ ಸ್ವಾಗತಾರ್ಹ: ಪ್ರಾಯೋಗಿಕ ವಿಧಾನಗಳನ್ನು ಚರ್ಚಿಸಿ

Last Updated 29 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಮುಸ್ಲಿಂ ಗಂಡಸರು ಒಂದೇ ಉಸಿರಲ್ಲಿ ಮೂರು ಬಾರಿ ತಲಾಖ್‌ ಉಚ್ಚರಿಸಿ ಪತ್ನಿಗೆ ವಿಚ್ಛೇದನ ನೀಡುವ ತ್ರಿವಳಿ ತಲಾಖ್‌ ಪದ್ಧತಿಯನ್ನು ನಿಷೇಧಿಸುವ ಮತ್ತು ಅದನ್ನು ಕ್ರಿಮಿನಲ್‌ ಅಪರಾಧ ಎಂದು ಪರಿಗಣಿಸುವ ಮಸೂದೆಯನ್ನು ಲೋಕಸಭೆ ಗುರುವಾರ ಅಂಗೀಕರಿಸಿದೆ. ನಾಲ್ಕು ತಿಂಗಳ ಹಿಂದೆ ತ್ರಿವಳಿ ತಲಾಖ್‌ ನಿಷೇಧ ಕೋರಿದ ಅರ್ಜಿಗಳ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್‌ನ ಪಂಚಸದಸ್ಯ ಪೀಠವು ‘ತ್ರಿವಳಿ ತಲಾಖ್‌ ಪದ್ಧತಿ ಸಂವಿಧಾನಬಾಹಿರ’ ಎಂದು ತೀರ್ಪು ನೀಡಿದ್ದು, ಈ ಕುರಿತು ಸೂಕ್ತ ಕಾನೂನು ತರುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ಸರ್ಕಾರ ಕಾನೂನು ರಚಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯನ್ನು ಇಟ್ಟಿರುವುದು ಸ್ವಾಗತಾರ್ಹ.

ಈಗ ಲೋಕಸಭೆಯಲ್ಲಿ ಅಂಗೀಕರಿಸಿರುವ ‘ಮುಸ್ಲಿಂ ಮಹಿಳೆ (ವೈವಾಹಿಕ ಹಕ್ಕುಗಳ ಸಂರಕ್ಷಣೆ) ಮಸೂದೆ’ಯ ಅನುಸಾರ, ಇನ್ನು ಮುಂದೆ ತ್ರಿವಳಿ ತಲಾಖ್‌ ಅನ್ನು ಮೌಖಿಕವಾಗಿ, ಲಿಖಿತವಾಗಿ ಅಥವಾ ಯಾವುದೇ ಎಲೆಕ್ಟ್ರಾನಿಕ್‌ ಮಾಧ್ಯಮ ಮೂಲಕ ಕೊಡುವಂತಿಲ್ಲ. ಹೀಗೆ ಕೊಡುವ ವ್ಯಕ್ತಿಯ ವಿರುದ್ಧ ಮೊಕದ್ದಮೆ ದಾಖಲಾದರೆ ಗರಿಷ್ಠ  ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು ದಂಡ ವಿಧಿಸಬಹುದು. ಹಾಗೆಯೇ ತಲಾಖ್‌ ನೀಡಿದ ಗಂಡನಿಂದ ಜೀವನಾಂಶ ಪಡೆಯುವ ಮತ್ತು ಮಕ್ಕಳನ್ನು ವಶಕ್ಕೆ ಪಡೆಯುವ ಅಧಿಕಾರವನ್ನೂ ತಲಾಖ್‌ ಪಡೆದ ಪತ್ನಿಗೆ ನೀಡಲಾಗಿದೆ.

‘ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿನ ಅನುಸಾರವೇ ಈ ಹೊಸ ಕಾಯ್ದೆಯನ್ನು ರೂಪಿಸಲಾಗಿದೆ’ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್‌ ಪ್ರಸಾದ್ ಲೋಕಸಭೆಯಲ್ಲಿ ಹೇಳಿದ್ದಾರೆ. ಕಾಂಗ್ರೆಸ್‌ ಪಕ್ಷ ಈ ಮಸೂದೆಯನ್ನು ಸ್ವಾಗತಿಸಿದ್ದರೂ, ಸಂಸದೀಯ ಸಮಿತಿ ರಚಿಸಿ ಇನ್ನಷ್ಟು ಚರ್ಚಿಸಲು ಆಗ್ರಹಿಸಿತ್ತು. ಬಿಜೆಡಿ, ಅಣ್ಣಾಡಿಎಂಕೆ, ತೃಣಮೂಲ ಕಾಂಗ್ರೆಸ್‌ ಪಕ್ಷಗಳು ಮತದಾನದಿಂದ ದೂರ ಉಳಿದು ಮಸೂದೆಯ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿವೆ. ಎಐಎಂಐಎಂ ಮುಖಂಡ ಒವೈಸಿ ‘ಈ ಮಸೂದೆಯಿಂದ ಮುಸ್ಲಿಂ ಮಹಿಳೆಯರು ಇನ್ನಷ್ಟು ತೊಂದರೆಗೆ ಒಳಗಾಗಲಿದ್ದಾರೆ’ ಎಂದು ಟೀಕಿಸಿದ್ದಾರೆ. ಅವರು ಮಸೂದೆಗೆ ಸೂಚಿಸಿದ ಮೂರು ತಿದ್ದುಪಡಿಗಳನ್ನು ತಿರಸ್ಕರಿಸಿದ ಸರ್ಕಾರ, ಮಸೂದೆ ಶೀಘ್ರ ಅಂಗೀಕಾರವಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ. ಮಸೂದೆ ಇನ್ನು ರಾಜ್ಯಸಭೆಯಲ್ಲಿ ಮಂಡನೆಯಾಗಲಿದ್ದು ಅಲ್ಲಿ ತಿದ್ದುಪಡಿಗಳನ್ನು ಸೂಚಿಸಲು ವಿರೋಧಪಕ್ಷಗಳು ನಿರ್ಧರಿಸಿವೆ.

ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ, ಗಂಡಸರು ಪತ್ನಿಗೆ ಮೂರು ವಿಧಾನಗಳಲ್ಲಿ ತಲಾಖ್‌ ನೀಡಲು ಅವಕಾಶವಿದೆ. ಮೂರು ತಲಾಖ್‌ಗಳ ಮಧ್ಯೆ ತಲಾ ಮೂರು ತಿಂಗಳ ಅವಕಾಶವಿರುವ ತಲಾಖ್‌ ಎಹ್ಸಾನ್‌, ತಲಾಖ್‌ ಹಸನ್‌ ಮತ್ತು ಒಂದೇ ಉಸಿರಿಗೆ ಮೂರು ತಲಾಖ್‌ ನೀಡುವ ತಲಾಖ್‌ ಎ– ಬಿದ್ದತ್‌ ಈ ವಿಧಾನಗಳು. ಸುಪ್ರೀಂ ಕೋರ್ಟ್‌ ತನ್ನ ತೀರ್ಪಿನಲ್ಲಿ ಮೂರನೆಯ ವಿಧಾನವನ್ನು ಅಸಾಂವಿಧಾನಿಕ ಎಂದು ತೀರ್ಪು ನೀಡಿದ್ದು ಮಾತ್ರವಲ್ಲದೆ, ಅದು ಮುಸ್ಲಿಮರ ಪವಿತ್ರ ಗ್ರಂಥ ಕುರಾನ್‌ನ ತತ್ವಗಳಿಗೂ ವಿರುದ್ಧವಾಗಿದೆಯೆಂದು ಅಭಿಪ್ರಾಯಪಟ್ಟಿತ್ತು. ಈಗ ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಅಂಗೀಕರಿಸಿರುವ ಹೊಸ ಮಸೂದೆಯಲ್ಲಿ ನಿಷೇಧಿತ ತ್ರಿವಳಿ ತಲಾಖ್‌ನ ವಿಧಾನದ ಕುರಿತು ಸ್ಪಷ್ಟ ವ್ಯಾಖ್ಯೆ ಇಲ್ಲ. ತಲಾಖ್‌ ಕೊಟ್ಟರೆ ಗಂಡ– ಹೆಂಡತಿ ನಡುವೆ ಮರುಪರಿಶೀಲನೆ, ಕೌಟುಂಬಿಕ ರಾಜಿ ಮುಂತಾದ ಕ್ರಮಗಳಿಗೆ ಅವಕಾಶ ಇರಲೆಂದೇ ಇಸ್ಲಾಂ ಮೂರು ಪ್ರತ್ಯೇಕ ತಲಾಖ್‌ಗಳ ವಿಧಾನವನ್ನು ರೂಪಿಸಿದೆ. ಹೊಸ ಮಸೂದೆಯ ಪ್ರಕಾರ, ತ್ರಿವಳಿ ತಲಾಖ್‌ ನೀಡಿದ ಗಂಡನನ್ನು ಜೈಲುಪಾಲು ಮಾಡಿದರೆ, ಪರಿಹಾರ ಕೊಡುವವರು ಯಾರು ಎನ್ನುವ ಪ್ರಶ್ನೆ ಎದುರಾಗುತ್ತದೆ.

ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ ಮದುವೆ ಎನ್ನುವುದು ಒಂದು ಸಿವಿಲ್‌ ಒಪ್ಪಂದ. ಸಿವಿಲ್‌ ಒಪ್ಪಂದದ ಉಲ್ಲಂಘನೆಯನ್ನು ಕ್ರಿಮಿನಲ್‌ ಕೃತ್ಯ ಎಂದು ಪರಿಗಣಿಸುವುದು ಸರಿಯೇ ಎನ್ನುವ ವಾದವೂ ಇದೆ. ಈ ಮಸೂದೆಯನ್ನು ರೂಪಿಸುವಾಗ ಮುಸ್ಲಿಂ ಸಮುದಾಯದ ಕಾನೂನು ಪರಿಣತರನ್ನು ಮತ್ತು ಮುಖ್ಯವಾಗಿ ಸುಪ್ರೀಂ ಕೋರ್ಟ್‌ಗೆ ಮೂಲ ಅರ್ಜಿ ಸಲ್ಲಿಸಿದ ಮಹಿಳಾ ಸಂಘಟನೆಗಳ ಮುಖಂಡರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಹೊಸ ಕಾನೂನು ಪ್ರಾಯೋಗಿಕವಾಗಿ ವಿಚ್ಛೇದಿತ ಮುಸ್ಲಿಂ ಮಹಿಳೆಯರಿಗೆ ನೆರವಾಗುವಂತೆ ಮಾಡಲು ಇನ್ನಷ್ಟು ವಿಸ್ತೃತ ಚರ್ಚೆಯ ಅಗತ್ಯವಿದೆ ಎನ್ನುವ ವಾದವನ್ನು ಅಲ್ಲಗಳೆಯಲಾಗದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT