7

ಕೊಳೆಯುತ್ತಿದೆ 3,000 ಟನ್‌ ಬಿತ್ತನೆ ಗಡ್ಡೆ

Published:
Updated:
ಕೊಳೆಯುತ್ತಿದೆ 3,000 ಟನ್‌ ಬಿತ್ತನೆ ಗಡ್ಡೆ

ಚಿಕ್ಕಬಳ್ಳಾಪುರ: ಕಳಪೆ ಬೀಜ, ಸತತ ಬೆಲೆ ಕುಸಿತ, ಕಾರ್ಮಿಕರ ಸಮಸ್ಯೆ, ಹೆಚ್ಚಿದ ಉತ್ಪಾದನಾ ವೆಚ್ಚ... ಹೀಗೆ ನಾನಾ ಕಾರಣಗಳಿಂದ ವರ್ಷದಿಂದ ವರ್ಷಕ್ಕೆ ಜಿಲ್ಲೆಯಲ್ಲಿ ರೈತರು ಆಲೂಗಡ್ಡೆ ಬೆಳೆ ಬಿಟ್ಟು, ಪರ್ಯಾಯ ಬೆಳೆಗಳತ್ತ ಚಿತ್ತ ಹರಿಸುತ್ತಿದ್ದಾರೆ. ಪರಿಣಾಮ, ಈ ಬಾರಿ ಜಿಲ್ಲೆಯಲ್ಲಿ ಮಾರಾಟಕ್ಕೆ ತರಿಸಿದ್ದ 3,000 ಟನ್‌ಗೂ ಅಧಿಕ ಬಿತ್ತನೆ ಗಡ್ಡೆ ಕೊಳೆಯಲು ಆರಂಭಿಸಿದೆ.

ಒಂದು ಕ್ವಿಂಟಲ್‌ ಬಿತ್ತನೆ ಗಡ್ಡೆಗೆ ₹ 1,200 ನೀಡಿ ಪಂಜಾಬ್‌ನಿಂದ ವರ್ತಕರು ಗಡ್ಡೆ ಖರೀದಿಸಿದ್ದರು. ಈಗ ಉಚಿತವಾಗಿ ತೆಗೆದುಕೊಂಡು ಹೋಗಿ ಎಂದರೂ ಗಡ್ಡೆ ತೆಗೆದುಕೊಂಡು ಹೋಗಲು ರೈತರು ಮುಂದೆ ಬರುತ್ತಿಲ್ಲ. ಅನೇಕ ವರ್ತಕರು ಕೊಳೆಯುತ್ತಿರುವ ಗಡ್ಡೆಗಳನ್ನು ದ್ರಾಕ್ಷಿ ತೋಟಗಳಿಗೆ ಗೊಬ್ಬರವಾಗಿ ಬಳಸಲು ಉಚಿತವಾಗಿ ನೀಡುತ್ತಿದ್ದಾರೆ.

ಹಾಸನ ಬಿಟ್ಟರೆ ರಾಜ್ಯದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಎರಡನೇ ಅತಿದೊಡ್ಡ ಆಲೂಗಡ್ಡೆ ಬಿತ್ತನೆ ಗಡ್ಡೆ ಮಾರುಕಟ್ಟೆ ಹೊಂದಿದೆ. ಜಿಲ್ಲೆಯಲ್ಲಿ ಸುಮಾರು 5,000 ಎಕರೆಯಲ್ಲಿ ಆಲೂಗಡ್ಡೆ ಬಿತ್ತನೆ ಮಾಡಲಾಗುತ್ತದೆ. ಕುಪ್ರಿ ಜ್ಯೋತಿ ತಳಿ ಈ ಭಾಗದಲ್ಲಿ ಬೆಳೆಯಲಾಗುತ್ತದೆ. ಹಿಂಗಾರು ಋತುವಿನಲ್ಲಿ (ಆಗಸ್ಟ್‌– ಜನವರಿ 15ರ ವರೆಗೆ) ಆಲೂಗಡ್ಡೆ ಬಿತ್ತನೆ ಕಾರ್ಯ ನಡೆಯುತ್ತದೆ.

ಸ್ಥಳೀಯರಲ್ಲದೆ ಮಂಡ್ಯ, ತುಮಕೂರು, ಆಂಧ್ರಪ್ರದೇಶದ ಅನಂತಪುರ, ಧರ್ಮಾವರಂ, ಗೋರಂಟ್ಲಾ, ಕದಿರಿ ಕಡೆಗಳಿಂದ  ರೈತರು ಬಿತ್ತನೆ ಗಡ್ಡೆ ಖರೀದಿಸುವರು. ಈ ಬಾರಿ ಬೆರಳೆಣಿಕೆ ರೈತರು ಮಾತ್ರ ಗಡ್ಡೆ ಖರೀದಿಸಿದ್ದಾರೆ.

ಜಿಲ್ಲೆಯಲ್ಲಿ ಬಿತ್ತನೆ ಗಡ್ಡೆ ಮಾರಾಟ ಮಾಡುವ 40 ವರ್ತಕರಿದ್ದಾರೆ. ಕೆಲ ವರ್ಷಗಳ ಹಿಂದೆ ಹಿಂಗಾರು ಋತುವಿನಲ್ಲಿ 24 ಸಾವಿರ ಟನ್‌ (1,200 ಲಾರಿ) ವರೆಗೆ ಗಡ್ಡೆ ಮಾರಾಟವಾಗುತ್ತಿತ್ತು. ಕಳೆದ ವರ್ಷ 16 ಸಾವಿರ ಟನ್‌ಗೆ ಇಳಿಕೆಯಾಗಿತ್ತು. ಈ ವರ್ಷ ವರ್ತಕರು 8,000 ಟನ್‌ ಬಿತ್ತನೆ ಗಡ್ಡೆ ತರಿಸಿದ್ದರು. ಅದರಲ್ಲಿ ಬಿತ್ತನೆ ಅವಧಿ ಕೊನೆಗೊಳ್ಳುತ್ತ ಬಂದರೂ ಈವರೆಗೆ  5,000 ಟನ್‌ ಮಾತ್ರ ಮಾರಾಟವಾಗಿದೆ.

ಸದ್ಯ, ಹೊಸಕೋಟೆ ಮತ್ತು ಚಿಕ್ಕಬಳ್ಳಾಪುರದ ಶೀತಲಗೃಹದಲ್ಲಿ 20 ಸಾವಿರ ಮೂಟೆಗಳು (1,000 ಟನ್‌) ಮತ್ತು ಚಿಕ್ಕಬಳ್ಳಾಪುರ ಎಪಿಎಂಸಿ ಮಾರುಕಟ್ಟೆಯಲ್ಲಿ 2,000 ಟನ್‌  ಗಡ್ಡೆ ಇದೆ.

‘ಕಳೆದ ವರ್ಷ ಚಿಕ್ಕಬಳ್ಳಾಪುರ ಮಾರುಕಟ್ಟೆಯಲ್ಲಿ ₹ 400 ಕೋಟಿ ವಹಿವಾಟು ನಡೆದಿತ್ತು. ಈ ಬಾರಿ ಶೇ 25 ರಷ್ಟು ವ್ಯಾಪಾರವಾಗಿಲ್ಲ.  ಪ್ರತಿ ವರ್ತಕರಿಗೂ ಈ ಬಾರಿ ಕನಿಷ್ಠ ₹ 15 ರಿಂದ 20 ಲಕ್ಷ ನಷ್ಟವಾಗಿದೆ’ ಎಂದು ಆಲೂಗಡ್ಡೆ ವರ್ತಕರ ಸಂಘದ ಅಧ್ಯಕ್ಷ ವಿಜಯಕುಮಾರ್ ತಿಳಿಸಿದರು.

‘ಸತತ ನಾಲ್ಕು ವರ್ಷಗಳಿಂದ ಆಲೂಗಡ್ಡೆ ಬೆಲೆ ಕಳೆದುಕೊಂಡಿದೆ. ಬೆಂಗಳೂರು ಮಾರುಕಟ್ಟೆಗೆ ಸ್ಥಳೀಯ 10 ಗಾಡಿಗಳು ಹೋದರೆ, ಹೊರ ರಾಜ್ಯಗಳಿಂದ 60 ಗಾಡಿ ಗಡ್ಡೆ ಬರುತ್ತದೆ. ರೈತರಿಗೆ ಒಂದು ಕೆ.ಜಿ ಆಲೂಗಡ್ಡೆಗೆ ಕನಿಷ್ಠ ₹ 12 ರಿಂದ ₹ 15 ಬೆಲೆ ಸಿಕ್ಕರೆ ಬೆಳೆಯುತ್ತಾರೆ. ಆದರೆ ₹ 6 ರಿಂದ ₹ 8 ಸಿಗುತ್ತಿದೆ. ಸದ್ಯ ಒಂದು ಎಕರೆ ಆಲೂಗಡ್ಡೆ ಬೆಳೆಯಲು ₹ 1 ಲಕ್ಷ ಖರ್ಚಾಗುತ್ತಿದೆ. ₹ 50 ಸಾವಿರ ಆದಾಯ ಬರುತ್ತಿದೆ. ಹೀಗಾಗಿ ರೈತರು ಆಲೂಗಡ್ಡೆಯಿಂದ ವಿಮುಖರಾಗುತ್ತಿದ್ದಾರೆ’ ಎಂದು ವರ್ತಕ ಆರ್‌.ಎಚ್‌.ನಾರಾಯಣಸ್ವಾಮಿ ತಿಳಿಸಿದರು.

ಇನ್ನೂ ಇದೇ ಫಜೀತಿ

‘ಬೆಂಗಳೂರಿನ ವೈಟ್‌ಫೀಲ್ಡ್‌ಗೆ ಕಳುಹಿಸಲು ಸದ್ಯ ಪಂಜಾಬ್‌ನಲ್ಲಿ ಮೂರು ರ‍್ಯಾಕ್ (ಒಂದು ರ‍್ಯಾಕ್ ಎಂದರೆ 40 ಬೋಗಿವುಳ್ಳ ಸರಕು ಸಾಗಣೆ ರೈಲು) ಆಲೂಗಡ್ಡೆ ಬಿತ್ತನೆ ಗಡ್ಡೆ ಲೋಡ್ ಮಾಡಲಾಗುತ್ತಿದೆ ಎಂಬ ಮಾಹಿತಿ ಇದೆ. ಒಂದೊಮ್ಮೆ ಅದು 1.25 ಲಕ್ಷ ಮೂಟೆಗಳು ಬಂದರೆ ಬಿತ್ತನೆ ಗಡ್ಡೆ ಮಾರುಕಟ್ಟೆ ಇನ್ನಷ್ಟು ಫಜೀತಿಯಾಗುತ್ತದೆ’ ಎಂದು ವರ್ತಕ ನಾರಾಯಣಸ್ವಾಮಿ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry