7

ವಿಟ್ಲ ಪಶು ಆಸ್ಪತ್ರೆ ಕಟ್ಟಡ ಕಾಮಗಾರಿ ಸ್ಥಗಿತ

Published:
Updated:

ವಿಟ್ಲ: 14 ಗ್ರಾಮಗಳ ವ್ಯಾಪ್ತಿಯನ್ನು ಹೊಂದಿರುವ ವಿಟ್ಲ ಪಶುವೈದ್ಯ ಆಸ್ಪತ್ರೆಯ ಹೊಸ ಕಟ್ಟಡ ನಿರ್ಮಾಣ ಹಂತದಲ್ಲಿದ್ದು, 5 ತಿಂಗಳ ಹಿಂದೆ ಕಾಮಗಾರಿ ಸ್ಥಗಿತಗೊಂಡಿದೆ. ವಿಟ್ಲ, ವಿಟ್ಲಪಡ್ನೂರು, ವಿಟ್ಲಮುಡ್ನೂರು, ಇಡ್ಕಿದು, ಕುಳ, ಪುಣಚ, ಕೇಪು, ಅಳಿಕೆ, ಕೊಳ್ನಾಡು, ಸಾಲೆತ್ತೂರು, ಕನ್ಯಾನ, ಕರೋಪಾಡಿ, ಪೆರುವಾಯಿ, ಮಾಣಿಲ ಗ್ರಾಮಗಳಿಗೆ ಈ ಪಶುವೈದ್ಯ ಆಸ್ಪತ್ರೆಯ ವ್ಯಾಪ್ತಿಯಿದೆ. ಕೊಳ್ನಾಡಿನ ಕುಡ್ತಮುಗೇರು, ಕನ್ಯಾನ ಮತ್ತು ಪುಣಚ ಗ್ರಾಮದ ಪರಿಯಾಲ್ತಡ್ಕದಲ್ಲಿ ಉಪಕೇಂದ್ರಗಳಿವೆ.

ವಿಟ್ಲದ ಸಹಾಯಕ ನಿರ್ದೇಶಕರಿಗೆ 2016ನೇ ಸಾಲಿನ ಸೆಪ್ಟೆಂಬರ್ ತಿಂಗಳಲ್ಲಿ ವರ್ಗಾವಣೆಯಾಗಿದೆ. ಹುದ್ದೆ ಖಾಲಿ ಇದೆ. ಕೇಪು ಗ್ರಾಮದ ಅಡ್ಯನಡ್ಕವನ್ನು ಕೇಂದ್ರವಾಗಿರಿಸಿಕೊಂಡು ಕೇಪು, ಪೆರುವಾಯಿ, ಮಾಣಿಲ ಗ್ರಾಮಗಳನ್ನು ಅಡ್ಯನಡ್ಕದ ಪಶು ವೈದ್ಯಾಧಿಕಾರಿ ಡಾ. ಪರಮೇಶ್ವರ ನಾಯ್ಕ ಅವರು ನೋಡಿಕೊಳ್ಳಬೇಕು. ಅವರನ್ನೇ ವಿಟ್ಲ ವ್ಯಾಪ್ತಿಗೂ ಪ್ರಭಾರ ವಹಿಸಲಾಗಿದೆ.

ಎರಡೂ ವಿಭಾಗಗಳಲ್ಲಿ ಸಿಬ್ಬಂದಿ ಇಲ್ಲ. ಒಬ್ಬರು ವಶು ವೈದ್ಯಾ„ಕಾರಿ ಮತ್ತು ಇಬ್ಬರು ಹಿರಿಯ ಪಶುವೈದ್ಯಕೀಯ ಪರೀಕ್ಷಕರು ಇಷ್ಟೊಂದು ಗ್ರಾಮಗಳಿಗೆ ಓಡಾಡಬೇಕು. ಒಂದೆರಡು ಮಂದಿ ಗ್ರೂಪ್ ಡಿ ಸಿಬ್ಬಂದಿ ಇದ್ದಾರೆ. ಗುತ್ತಿಗೆ ಆಧಾರದಲ್ಲಿ ನಾಲ್ಕು ಮಂದಿಯಿದ್ದಾರೆ. ಅವರಿಗೆ ಡಿಸೆಂಬರ್ ತಿಂಗಳು ಕೊನೆಯಾಗಿದೆ. ಅವರ ಗುತ್ತಿಗೆಯನ್ನು ಮುಂದುವರಿಸಿದಲ್ಲಿ ಮಾತ್ರ ಕೆಲ ಹುದ್ದೆಗಳಿದ್ದಂತಾಗುತ್ತದೆ. ಇರುವ ಮೂರು-ನಾಲ್ಕು ಸಿಬ್ಬಂದಿಯ ಭಾರ ಕಡಿಮೆಯಾಗುತ್ತದೆ.

ಔಷಧಿ ವಿತರಣೆ : ವಿಟ್ಲ ಆಸ್ಪತ್ರೆಯಲ್ಲಿ ಹಸುವಿನ ಅನಾರೋಗ್ಯ, ನಾಯಿ, ಕೋಳಿ, ಆಡು ಮತ್ತಿತರ ಸಾಕುಪ್ರಾಣಿಗಳ ಅನಾರೋಗ್ಯ ನಿವಾರಣೆಗೆ ಸರಕಾರದಿಂದ ಸಾಕಷ್ಟು ಔಷಧಿ ವಿತರಣೆ ಮಾಡಲಾಗುತ್ತಿದೆ. ಉಚಿತವಾಗಿ ಲಭ್ಯವಿದೆ. ಹೆಚ್ಚಿನ ಸಾರ್ವಜನಿಕರು, ಹೈನುಗಾರರು ಇವುಗಳ ಪ್ರಯೋಜನ ಪಡೆದುಕೊಳ್ಳುತ್ತಾರೆ. ಆದರೆ ಔಷಧಿ ವಿತರಣೆಗೆ ಜಾನುವಾರು ಅಧಿಕಾರಿ ಹಾಗೂ ಪರೀಕ್ಷಕರು ವ್ಯವಸ್ಥೆ ಮಾಡುತ್ತಾರೆ. ಸ್ಥಳದಲ್ಲಿ ಆಗಬೇಕಾದ ಚಿಕಿತ್ಸೆಗೆ ಕರ್ತವ್ಯದಲ್ಲಿರುವ ಸಿಬಂದಿ ಭೇಟಿ ನೀಡಿ, ಈ 14 ಗ್ರಾಮಗಳನ್ನು ನಿಭಾಯಿಸುವ ಕಾರಣ ಕೆಲಸದ ಒತ್ತಡ ಹೆಚ್ಚಿದೆ.

ಹೊಸ ಕಟ್ಟಡ: ವಿಟ್ಲ ಪಶುವೈದ್ಯ ಆಸ್ಪತ್ರೆಗೆ 50 ಸೆಂಟ್ಸ್ ಜಾಗವಿದೆ. ಅದರಲ್ಲಿ ಪುರಾತನ ಹಂಚಿನ ಮಾಡಿನ ಕಟ್ಟಡವಿದೆ. ಕುಡ್ತಮುಗೇರು ಕೇಂದ್ರಕ್ಕೆ ಸರಕಾರದಿಂದ ಮಂಜೂರಾದ 5 ಸೆಂಟ್ಸ್ ಜಾಗವಿದೆ. ಕಟ್ಟಡಕ್ಕೆ ಪ್ರಸ್ತಾಪ ಸಲ್ಲಿಸಲಾಗಿದೆ. ಪುಣಚ ಮತ್ತು ಅಡ್ಯನಡ್ಕದಲ್ಲಿಯೂ ಸ್ವಂತ ಜಾಗವಿದೆ. ಅಡ್ಯನಡ್ಕದಲ್ಲಿ ಕಟ್ಟಡವಿದೆ. ಕನ್ಯಾನದಲ್ಲಿ ಗ್ರಾಮ ಪಂಚಾಯಿತಿ ಕಟ್ಟಡದಲ್ಲಿ ಕೇಂದ್ರ ಕಾರ್ಯನಿರ್ವಹಿಸುತ್ತಿದೆ.

‘ಆಸ್ಪತ್ರೆಗೆ ₹18.90 ಲಕ್ಷ  ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಗುತ್ತಿದೆ. 14 ಗ್ರಾಮಗಳ ಪ್ರಮುಖ ಕೇಂದ್ರವಾಗಿರುವ ವಿಟ್ಲಕ್ಕೆ ಈ ಕಟ್ಟಡ ಚಿಕ್ಕದಾಯಿತೆಂಬ ಅಭಿಪ್ರಾಯ ಕೃಷಿಕರದ್ದು. ಆದರೆ ನಿರ್ಮಾಣವಾಗುತ್ತಿರುವ ಈ ಚಿಕ್ಕ ಕಟ್ಟಡ ಕಾಮಗಾರಿಯೂ ಸ್ಥಗಿತಗೊಂಡಿದೆ. ಕರ್ನಾಟಕ ರೂರಲ್ ಇನ್‌ಫ್ರಾಸ್ಟ್ರಕ್ಚರ್‌ ಡೆವೆಲೆಪ್‍ಮೆಂಟ್ ಲಿಮಿಟಿಡ್ (ಕೆಆರ್‍ಐಡಿಎಲ್) ಈ ಕಟ್ಟಡದ ಗುತ್ತಿಗೆದಾರರು. ಆರ್‍ಐಡಿಎಫ್ ಸ್ಕೀಮ್‍ನಲ್ಲಿ ಕಟ್ಟಡ ನಿರ್ಮಾಣವಾಗುತ್ತಿದೆ. ಕೆಆರ್‍ಐಡಿಎಲ್ ಉಪಗುತ್ತಿಗೆದಾರರನ್ನು ನೇಮಿಸಿದ್ದು ಅವರಿಗೆ ಅನುದಾನ ಬಿಡುಗಡೆಗೊಳಿಸದೇ ಇರುವುದು ಕಾಮಗಾರಿ ಸ್ಥಗಿತಗೊಳಿಸಲು ಕಾರಣ’ ಎಂಬ  ದೂರುಗಳು ಇವೆ.

* * 

ಕೆಆರ್‍ಐಡಿಎಲ್‍ ಗುತ್ತಿಗೆದಾರರಿಗೆ ಹಣ ಬಿಡುಗಡೆ ಮಾಡಿಲ್ಲ, ತೊಂದರೆಯಾಗಿದೆ. ಕಟ್ಟಡ ಕಾಮಗಾರಿ ಸ್ಥಗಿತ, ಸಿಬ್ಬಂದಿ ಕೊರತೆ ಬಗ್ಗೆ ಮೇಲಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತರಲಾಗಿದೆ.

ಡಾ.ಹೆನ್ರಿ ಲಸ್ರಾದೋ

ಸಹಾಯಕ ನಿರ್ದೇಶಕರು, ಬಂಟ್ವಾಳ ತಾಲ್ಲೂಕು ಪಶು ಸಂಗೋಪನೆ ಇಲಾಖೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry