7

ಭದ್ರಾವತಿ: ವಿವಿಧ ದೇಗುಲಗಳಲ್ಲಿ ವೈಕುಂಠ ದರ್ಶನ

Published:
Updated:

ಭದ್ರಾವತಿ: ವೈಕುಂಠ ಏಕಾದಶಿ ದಿನದ ಅಂಗವಾಗಿ ನಗರದ ವಿವಿಧ ದೇವಾಲಯಗಳಲ್ಲಿ ಶುಕ್ರವಾರ ವೈಕುಂಠನಾಥನ ದರ್ಶನ ಹಾಗೂ ದೇವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಕಾಗದ ನಗರದ ಶ್ರೀ ಕ್ಷೇತ್ರ ನಾಗರಕಟ್ಟೆ ದೇವಸ್ಥಾನದಲ್ಲಿ ಬೆಳಿಗ್ಗೆ 5.30ಕ್ಕೆ ವೈಕುಂಠನಾಥನ ದರ್ಶನಕ್ಕೆ ದೇವಸ್ಥಾನದ ಆವರಣದಲ್ಲಿ ಅದ್ದೂರಿವ್ಯವಸ್ಥೆ ಮಾಡಲಾಗಿತ್ತು. ಭಜನೆ, ಹೋಮ, ಹವನಗಳನ್ನು ನೆರವೇರಿಸಲಾಯಿತು. ದೇವಸ್ಥಾನದ ಆವರಣದಲ್ಲಿ ಏಳು ದ್ವಾರಗಳನ್ನು ನಿರ್ಮಿಸಲಾಗಿತ್ತು. ಭಕ್ತರು ಒಂದೊಂದೇ ದ್ವಾರವನ್ನು ಪ್ರವೇಶಿಸುವಂತೆ ಆಕರ್ಷಣೀಯವಾಗಿ ಸಿದ್ಧಪಡಿಸಲಾಗಿತ್ತು.

ನಾಗ ದೇಗುಲದಲ್ಲಿ ನಾಗತೀರ್ಥ ಪಡೆಯಲು ಭಕ್ತರು ಸಾಲುಗಟ್ಟಿ ನಿಂತಿದ್ದರು. ಸಂಜೆ ಸಹಸ್ರದೀಪೋತ್ಸವ ಕಾರ್ಯಕ್ರಮವನ್ನು ಆಯೋಜಿಸಿದ್ದು, 6–7 ಸಾವಿರ ಭಕ್ತರು ಪೂಜಾಕಾರ್ಯದಲ್ಲಿ ಭಾಗವಹಿಸಿದ್ದರು. ಮಿಲಿಟರಿ ಕ್ಯಾಂಪ್ ಶ್ರೀನಿವಾಸನ ಸನ್ನಿಧಿ: ಮಿಲಿಟರಿ ಕ್ಯಾಂಪ್‌ನಲ್ಲಿರುವ ಶ್ರೀನಿವಾಸನ ದೇವಾಲಯದಲ್ಲಿ ವಿಶೇಷ ಪೂಜೆ, ಹೋಮ, ಹವನ ನೆರವೇರಿತು. ಸ್ವಾಮಿಗೆ ಅಲಂಕಾರ ಮಾಡಲಾಗಿತ್ತು.

ಲೋಯರ್ ಹುತ್ತಾ: ಇಲ್ಲಿನ ತಿರುಮಲ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಮ್ಮಿಕೊಳ್ಳಲಾಯಿತು. ಶ್ರೀದೇವಿ ಭೂದೇವಿ ಸಮೇತ ವೆಂಕಟೇಶ್ವರನ ಮೂರ್ತಿಯ ಕೆಳಗೆ ಭಕ್ತರು ಹಾದುಹೋಗುವ ಮೂಲಕ ಮುಖ್ಯ ಸ್ವಾಮಿಯ ದರ್ಶನ ಪಡೆದರು. 15 ಸಾವಿರಕ್ಕೂ ಅಧಿಕ ಭಕ್ತರು ದೇವರ ದರ್ಶನ ಪಡೆದರು. ಭಕ್ತರಿಗೆ ಪ್ರಸಾದವಾಗಿ ಲಡ್ಡು ಹಾಗೂ ಹಾಲು ವಿತರಿಸಲಾಯಿತು.

ಹಳೇನಗರ: ಹಳೇನಗರದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ಏಕಾದಶಿ ದಿನವಾದ ಶುಕ್ರವಾರ ಮುಂಜಾನೆ 4ಕ್ಕೆ ದೇವರ ದರ್ಶನ ದೇವಸ್ಥಾನದ ಆವರಣದಲ್ಲಿ ಅದ್ದೂರಿಯಾಗಿ ನೆರವೇರಿತು. ಬೆಳಗಿನ ಜಾವ 3ಕ್ಕೆ ಮೂಲದೇವರಿಗೆ ಪೂಜೆ ಸಲ್ಲಿಸಿದ ನಂತರ ದೇಗುಲದ ಒಳಾವರಣದಲ್ಲಿ ನಿರ್ಮಿಸಲಾದ ವೈಕುಂಠ ದ್ವಾರಕ್ಕೆ ಪೂಜೆ ಸಲ್ಲಿಸಲಾಯಿತು.

ತಾಲ್ಲೂಕು ಆಡಳಿತದಿಂದ ನಡೆದ ಪೂಜಾಕಾರ್ಯದಲ್ಲಿ ದಂಪತಿ ಸಹಿತ ಹಾಜರಿದ್ದ ತಹಶೀಲ್ದಾರ್ ಎಂ.ಆರ್.ನಾಗರಾಜ್ ದೇವರ ದರ್ಶನ ಪಡೆದರು. ಶಾಸಕ ಎಂ.ಜೆ.ಅಪ್ಪಾಜಿ ಪತ್ನಿ ಶಾರದಾ ಅವರೊಂದಿಗೆ ಪೂಜೆಯಲ್ಲಿ ಪಾಲ್ಗೊಂಡಿದ್ದರು. ಶಿವಮೊಗ್ಗ ಕ್ಷೇತ್ರದ ಶಾಸಕ ಪ್ರಸನ್ನಕುಮಾರ್ ಕೂಡ ಪತ್ನಿ ಸಹಿತರಾಗಿ ಭೇಟಿ ನೀಡಿದರು.

ದೇವಾಲಯದ ಪ್ರಧಾನ ಅರ್ಚಕ ರಂಗನಾಥ ಶರ್ಮ ಮತ್ತು ಸಹೋದರರು ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಕಲಾವಿದ ಸುಬ್ರಮಣಿ ತಂಡದವರು ನಿರ್ಮಿಸಿದ ಭೂ ವೈಕುಂಠ ಹಾಗೂ ಲಕ್ಷ್ಮೀ ಸಹಿತನಾದ ನಾರಾಯಣನ ಬೃಹತ್ ಮೂರ್ತಿ ಆಕರ್ಷಕವಾಗಿತ್ತು.

ದರ್ಶನಕ್ಕೆ ಬಂದ ಭಕ್ತರಿಗೆ ಪ್ರಸಾದವಾಗಿ ನೀಡಲು 10 ಸಾವಿರ ಲಾಡುಗಳನ್ನು ತಯಾರಿಸಲಾಗಿತ್ತು. ಕೆಲವು ಸಂಸ್ಥೆಗಳಿಂದ ಹಾಲು ವಿತರಿಸಲಾಯಿತು. ನಗರಸಭೆ ಅಧ್ಯಕ್ಷೆ ಹಾಲಮ್ಮ, ಉಪಾಧ್ಯಕ್ಷೆ ಮಹಾದೇವಿ, ಸುಧಾಮಣಿ ಭಾಗವಹಿಸಿದ್ದರು. ಕೂಡಲಿ ಸ್ವಾಮೀಜಿ ಭೇಟಿ: ದೇವಾಲಯಕ್ಕೆ ಆಗಮಿಸಿದ ಕೂಡಲಿ ಶ್ರೀಗಳನ್ನು ಪೂರ್ಣ ಕುಂಭದೊಂದಿಗೆ ಸ್ವಾಗತಿಸಲಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry