7

ರಸಗೊಬ್ಬರ ಖರೀದಿಗೆ ಆಧಾರ್ ಕಡ್ಡಾಯ

Published:
Updated:

ವಿಜಯಪುರ: ಕೇಂದ್ರ ಸರ್ಕಾರ ರಸಗೊಬ್ಬರಗಳ ಮಾರಾಟದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ, ರೈತ ಫಲಾನುಭವಿಗೆ ರಸಗೊಬ್ಬರ ತಲುಪುವುದನ್ನು ಖಾತ್ರಿಪಡಿಸಿಕೊಳ್ಳಲು, ನೇರ ನೆರವು ವರ್ಗಾವಣೆ (ಡೈರೆಕ್ಟ್‌ ಬೆನಿಫಿಟ್ ಟ್ರಾನ್ಸ್‌ಫರ್ ಡಿ.ಬಿ.ಟಿ) ಯೋಜನೆಯನ್ನು ದೇಶದಾದ್ಯಂತ ಜಾರಿಗೊಳಿಸುತ್ತಿದ್ದು, ರಾಜ್ಯದಲ್ಲಿ ಜ 1ರಿಂದ ಈ ಯೋಜನೆ ಅನುಷ್ಠಾನಗೊಳ್ಳುತ್ತಿದೆ.

ಈ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ವಿಜಯಪುರ ಜಿಲ್ಲೆಯಲ್ಲಿ ಈಗಾಗಲೇ 304 ಚಿಲ್ಲರೆ ಮಾರಾಟಗಾರರಿಗೆ (ಪಾಯಿಂಟ್‌ ಆಫ್ ಸೇಲ್ - ಪಿ.ಓ.ಎಸ್) ಉಪಕರಣ ವಿತರಿಸಲಾಗಿದೆ ಎಂದು ಜಿಲ್ಲಾ ಕೃಷಿ ಇಲಾಖೆ ತಿಳಿಸಿದೆ.

ಚಿಲ್ಲರೆ ಮಾರಾಟಗಾರರು ತಮ್ಮಲ್ಲಿರುವ ಸಹಾಯ ಧನ ನೀಡಲ್ಪಡುವ ರಸಗೊಬ್ಬರಗಳನ್ನು ಈ ಉಪಕರಣದ ಮೂಲಕವೇ ಕಡ್ಡಾಯವಾಗಿ ಮಾರಾಟ ಮಾಡಬೇಕು ಎಂದು ಸೂಚಿಸಲಾಗಿದೆ. ಒಂದು ವೇಳೆ ಪಿ.ಓ.ಎಸ್ ಬಳಸದೆ ಮಾರಾಟ ಮಾಡಿದರೆ, ಅಂತಹ ಮಾರಾಟಗಾರರ ರಸಗೊಬ್ಬರ ಮಾರಾಟ ಪರವಾನಗಿಯನ್ನು ಯಾವುದೇ ನೋಟೀಸ್ ನೀಡದೇ ರದ್ದುಗೊಳಿಸಲಾಗುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಇಲಾಖೆ ಎಚ್ಚರಿಸಿದೆ.

ಚಿಲ್ಲರೆ ರಸಗೊಬ್ಬರ ಮಾರಾಟಗಾರರು ಕಡ್ಡಾಯವಾಗಿ ಎಂ.ಎಫ್.ಎಂ.ಎಸ್, ಐಡಿ ಪಡೆದು, ಪಿ.ಓ.ಎಸ್ ಉಪಕರಣದಲ್ಲಿ ಹಾಲಿ ಇರುವ ದಾಸ್ತಾನನ್ನು ಕೃಷಿ ಇಲಾಖೆಯಿಂದ ದಾಖಲಿಸಿ, ಕಡ್ಡಾಯವಾಗಿ ಪಿ.ಓ.ಎಸ್ ಉಪಕರಣದ ಮುಖಾಂತರವೇ ರಸಗೊಬ್ಬರ ವಿತರಿಸಲು ಎಚ್ಚರಿಕೆ ನೀಡಲಾಗಿದೆ. ಇಲ್ಲದಿದ್ದರೆ ರಸಗೊಬ್ಬರ ನಿಯಂತ್ರಣ ಕಾಯ್ದೆಯನ್ವಯ ಕಾನೂನಿನ ಕ್ರಮ ಜರುಗಿಸಲಾಗುವುದು ಎಂದಿದ್ದಾರೆ.

ರಸಗೊಬ್ಬರಗಳ ಒಟ್ಟು ಬೆಲೆ ನೀಡಿ ಖರೀದಿಸಲು ರೈತರಿಗೆ ದುಬಾರಿಯಾಗುತ್ತದೆ ಎಂಬ ಕಾರಣದಿಂದ ರೈತರು ಸಬ್ಸಿಡಿ ದರದಲ್ಲಿಯೇ ಮಾರಾಟ ಬೆಲೆ (ಎಂ.ಆರ್.ಪಿ) ಪಾವತಿಸಿ ಖರೀದಿಸಲು ಅನುವು ಮಾಡಿಕೊಡಲಾಗಿದೆ. ಪಿ.ಓ.ಎಸ್ ಯಂತ್ರದಲ್ಲಿ ದಾಖಲಾದ ರಸಗೊಬ್ಬರದ ಚಿಲ್ಲರೆ ಮಾರಾಟದ ಅಂಕಿ ಅಂಶ ಆಧರಿಸಿ, ಕಂಪೆನಿಗಳಿಗೆ ಸಬ್ಸಿಡಿ ವರ್ಗಾಯಿಸಲಾಗುತ್ತದೆ. ರಸಗೊಬ್ಬರಗಳನ್ನು ಪಿ.ಓ.ಎಸ್ ಉಪಕರಣದ ಮುಖಾಂತರ ಖರೀದಿಸಲು ರೈತರು ಕಡ್ಡಾಯವಾಗಿ ತಮ್ಮ ಆಧಾರ್ ಸಂಖ್ಯೆ ನೀಡಬೇಕು ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಡಾ.ಬಿ.ಮಂಜುನಾಥ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry