ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಲಗೇರಿ ಬಂದ್ ಸಂಪೂರ್ಣ ಯಶಸ್ವಿ

Last Updated 30 ಡಿಸೆಂಬರ್ 2017, 6:10 IST
ಅಕ್ಷರ ಗಾತ್ರ

ಗೋಲಗೇರಿ (ಸಿಂದಗಿ): ವಿಜಯಪುರದ ದಲಿತ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ ಹತ್ಯೆ ಮಾಡಿದ ಘಟನೆಯನ್ನು ಖಂಡಿಸಿ ಸಿಂದಗಿ ತಾಲ್ಲೂಕಿನ ಗೋಲಗೇರಿ ಪಟ್ಟಣದಲ್ಲಿ ಶುಕ್ರವಾರ ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಕರೆ ನೀಡಿದ್ದ ‘ಗೋಲಗೇರಿ ಬಂದ್’ ಸಂಪೂರ್ಣ ಯಶಸ್ವಿಯಾಯಿತು.

ವ್ಯಾಪಾರಸ್ಥರು ಸ್ವಯಂ ಪ್ರೇರಣೆಯಿಂದ ಅಂಗಡಿಗಳನ್ನು ಮುಚ್ಚಿ ಬೆಂಬಲ ವ್ಯಕ್ತಪಡಿಸಿದರು. ಶಾಲಾ, ಕಾಲೇಜು ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಅಲ್ಲದೇ ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ದಲಿತ, ಮುಸ್ಲಿಂ, ಕನ್ನಡಪರ ಸಂಘಟನೆಗಳ ಪ್ರಮುಖರು ಕೂಡ ಭಾಗವಹಿಸಿದ್ದರು.

ಶ್ರೀಶೈಲ ಜಾಲವಾದಿ, ಹುಯೋಗಿ ತಳ್ಳೊಳ್ಳಿ ಅವರು ಕ್ರಾಂತಿಗೀತೆ ಹಾಡುವ ಮೂಲಕ ಪ್ರತಿಭಟನಾ ಮೆರವವಣಿಗೆಗೆ ಚಾಲನೆ ನೀಡಲಾಯಿತು. ಮೆರವಣಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಾಗಿ ಬಂದಿತು. ನಂತರ ರಾಜ್ಯ ಹೆದ್ದಾರಿಯಲ್ಲಿ ಮೂರು ಗಂಟೆಗಳ ಕಾಲ ರಸ್ತೆ ತಡೆ, ಧರಣಿ ಸತ್ಯಾಗ್ರಹ ನಡೆಸಲಾಯಿತು.

‘ಇಂಥ ಪ್ರಕರಣಗಗಳಿಗೆ ಸಂಬಂಧಿಸಿದಂತೆ ವಿಶೇಷ ನ್ಯಾಯಾಲಯ ಸ್ಥಾಪಿಸಿ, ಆರೋಪಿಗಳಿಗೆ ಉಗ್ರ ಶಿಕ್ಷೆ ವಿಧಿಸುವಂತಾಗಬೇಕು’ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಪ್ರತಿಭಟನಾ ಸಭೆಯಲ್ಲಿ ಯಂಕಂಚಿ ಗ್ರಾಮದ ಹಿರೇಮಠದ ಅಭಿನವ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಯನ್ನೊಳಗೊಂಡು ಸಂತೋಷ ಪಾಟೀಲ ಡಂಬಳ, ತಾಲ್ಲೂಕು ಪಂಚಾಯಿತಿ ಸದಸ್ಯ ಶ್ರೀಶೈಲ ಚಳ್ಳಗಿ ಮಾತನಾಡಿದರು.

ಮೃತ ವಿದ್ಯಾರ್ಥಿನಿ ಕುಟುಂಬಕ್ಕೆ 10 ಎಕರೆ ಕೃಷಿ ಭೂಮಿ ಮಂಜೂರು ಮಾಡಿ, ₹ 50ಲಕ್ಷ ಪರಿಹಾರ ಸರ್ಕಾರ ನೀಡಬೇಕು ಎಂದು ಒತ್ತಾಯಿಸಿದರು. ವಿಜುಗೌಡ ಬಿರಾದಾರ, ಮುನ್ನಾ ಖೇಡ, ಮೋದಿನ ಶಾಬಾದಿ, ಪರುಶರಾಮ ಕಾಂಬಳೆ, ಶರಣಪ್ಪ ಸಾಸಾಬಾಳ ಹಾಗೂ ಇತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು. ಕಂದಾಯ ಇಲಾಖೆ ಅಧಿಕಾರಿಗೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT