ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನರ ದುಡ್ಡಲ್ಲಿ ಬಿಟ್ಟಿ ಪ್ರಚಾರ; ವ್ಯಂಗ್ಯ

Last Updated 30 ಡಿಸೆಂಬರ್ 2017, 6:13 IST
ಅಕ್ಷರ ಗಾತ್ರ

ವಿಜಯಪುರ: ‘ಬಿಜೆಪಿಯ ನವ ಕರ್ನಾಟಕ ಪರಿವರ್ತನೆ ಯಾತ್ರೆಯ ಯಶಸ್ಸಿಗೆ ದಂಗಾದ, ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರ, ಜನರ ತೆರಿಗೆ ಹಣದಲ್ಲಿ ‘ನವ ಕರ್ನಾಟಕ ಸಿದ್ದ ಸರ್ಕಾರ ಯಾತ್ರೆ’ ನಡೆಸುವ ಮೂಲಕ ಬಿಟ್ಟಿ ಪ್ರಚಾರ ಪಡೆಯುತ್ತಿದೆ’ ಎಂದು ಮುಧೋಳ ಶಾಸಕ ಗೋವಿಂದ ಕಾರಜೋಳ ಆರೋಪಿಸಿದರು.

ನಗರದ ರಾಜರಾಜೇಶ್ವರಿ ಮಂಗಲ ಕಾರ್ಯಾಲಯದಲ್ಲಿ ಶುಕ್ರವಾರ ನಡೆದ ಬಿಜೆಪಿ ನಗರ ಮಂಡಲ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ‘ಕೆರೆ ತುಂಬುವ ಯೋಜನೆ ನಮ್ಮದು. ಕಾಂಗ್ರೆಸ್ ಸರ್ಕಾರದ್ದಲ್ಲ. ಈ ಕುರಿತು ತಮ್ಮ ಬಳಿ ದಾಖಲೆಗಳಿವೆ. ಇದರ ಜತೆಗೆ ಬಿಜೆಪಿ ಸರ್ಕಾರದಲ್ಲಿ ಜಾರಿಗೆ ತಂದಿರುವ ಬಹುತೇಕ ಯೋಜನೆಗಳನ್ನು ಮುಂದುವರಿಸಿರುವುದೇ ಕಾಂಗ್ರೆಸ್‌ ನೇತೃತ್ವದ ರಾಜ್ಯ ಸರ್ಕಾರದ ಸಾಧನೆ’ ಎಂದು ವ್ಯಂಗ್ಯವಾಡಿದರು.

ನಗರ ಮಂಡಳ ಅಧ್ಯಕ್ಷ ಶಿವರುದ್ರ ಬಾಗಲಕೋಟ ಮಾತನಾಡಿ ‘ಚುನಾವಣೆ ಸಮೀಪಿಸುತ್ತಿರುವುದರಿಂದ ಕಾರ್ಯಕರ್ತರು ಹೆಚ್ಚಿನ ಪರಿಶ್ರಮ ವಹಿಸಿ ಬೂತ್‌ ಮಟ್ಟದಿಂದ ಪಕ್ಷವನ್ನು ಬಲಪಡಿಸಬೇಕು. ಮತಗಟ್ಟೆ ಸಶಕ್ತೀಕರಣ ಅಭಿಯಾನ ಕೆಲವೊಂದು ಬೂತ್‌ಗಳಲ್ಲಿ ಆಮೆಗತಿಯಲ್ಲಿ ಸಾಗಿದ್ದು ಪಕ್ಷದ ಕಾರ್ಯಕರ್ತರು, ಮುಖಂಡರು ಕಾರ್ಯ ಪ್ರವೃತ್ತರಾಗಿ ಅಭಿಯಾನ ಪೂರ್ಣಗೊಳಿಸಬೇಕು’ ಎಂದರು.

‘ನಗರ ಶಾಸಕರು ತಮ್ಮ ಆಡಳಿತದ ಅವಧಿಯಲ್ಲಿ ನಗರಕ್ಕೆ ನೀಡಿದ ಕೊಡುಗೆ ಏನು? ಅಭಿವೃದ್ಧಿಗಾಗಿ ಎಷ್ಟು ಹಣವನ್ನು ರಾಜ್ಯ ಸರ್ಕಾರದಿಂದ ತಂದಿದ್ದೀರಿ? ಎಂಬುದನ್ನು ಬಹಿರಂಗ ಪಡಿಸಬೇಕು. ದ್ರಾಕ್ಷಿ ಬೆಳೆಗಾರರಿಗೆ ಸರ್ಕಾರ ನಿರ್ಮಿಸಿದ ಆನ್‌ಲೈನ್‌ ವಹಿವಾಟು ಕೇಂದ್ರ, ಶೈತ್ಯಾಗಾರ ಉದ್ಘಾಟನೆಗೊಂಡು ವರ್ಷಗಳು ಉರುಳಿದರೂ, ಬೆಳೆಗಾರರ ಬಳಕೆಗೆ ನೀಡದಿರಲು ಕಾರಣ ಏನು ಎಂಬುದನ್ನು ಶಾಸಕ ಬಾಗವಾನ ತಿಳಿಸಬೇಕು’ ಎಂದು ಗುಡುಗಿದರು.

ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾತನಾಡಿ ‘ಗೋವಿಂದ ಕಾರಜೋಳ ಸಣ್ಣ ನೀರಾವರಿ ಸಚಿವರಾಗಿದ್ದಾಗ ಬೇಗಂ ತಾಲಾಬ್ ಅಭಿವೃದ್ಧಿಗೆ ವಿಶೇಷವಾಗಿ ಐದು ಕೋಟಿ ರೂಪಾಯಿ ಅನುದಾನ ನೀಡಿದ್ದರು. ಆದರೆ ಸಚಿವ ಎಂ.ಬಿ.ಪಾಟೀಲ ತಮ್ಮ ಸರ್ಕಾರ ಕೊಟ್ಟಿರುವುದಾಗಿ ಸುಳ್ಳು ಹೇಳುತ್ತಿದ್ದಾರೆ’ ಎಂದು ಆರೋಪಿಸಿದರು.

ಮುಖಂಡರಾದ ರವಿಕಾಂತ ಬಗಲಿ, ಮಲ್ಲಮ್ಮ ಜೋಗೂರ, ಅಶೋಕ ಅಲ್ಲಾಪುರ, ರಜನಿ ಸಂಬಣ್ಣಿ, ಪರಶುರಾಮ ರಜಪೂತ, ಅಪ್ಪು ಸಜ್ಜನ, ಆನಂದ ಧುಮಾಳೆ, ರಾಹುಲ ಜಾಧವ, ಅಲ್ತಾಪ ಇಟಗಿ, ಪ್ರಕಾಶ ಮಿರ್ಜಿ, ಉಮೇಶ ವಂದಾಲ, ರಾಜಶೇಖರ ಮಗಿಮಠ, ರವೀಂದ್ರ ಲೋಣಿ, ಭೀಮಾಶಂಕರ ಹದನೂರ, ಹಣಮಂತಗೌಡ ಬಿರಾದಾರ, ಸುರೇಶ ಬಿರಾದಾರ ಉಪಸ್ಥಿತರಿದ್ದರು.

ವೈಯಕ್ತಿಕ ಬಿಡಿ; ಒಟ್ಟಾಗಿರಿ

‘ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದು ಒಳ್ಳೆಯ ಬೆಳವಣಿಗೆ. ಆದರೆ ನನಗೆ ಟಿಕೆಟ್‌ ಖಾತ್ರಿಯಾಗಿದೆ ಎಂದು ಮತದಾರರಲ್ಲಿ ಗೊಂದಲ ಮೂಡಿಸುವುದು ತರವಲ್ಲ’ ಎಂದು ಸಭೆಯಲ್ಲಿ ಗೋವಿಂದ ಕಾರಜೋಳ ಆಕಾಂಕ್ಷಿಗಳಿಗೆ ಬಿಸಿ ಮುಟ್ಟಿಸಿದರು.

‘ಎಲ್ಲರೂ ಒಟ್ಟಾಗಿರಿ. ಸಂಘಟನೆ ಬಲಪಡಿಸಿಕೊಳ್ಳಿ. ವೈಯಕ್ತಿಕವಾಗಿ ಮಾತ್ರ ಅಭ್ಯರ್ಥಿ ಎಂದು ಬಿಂಬಿಸಿಕೊಂಡು ಜನರ ಬಳಿಗೆ ತೆರಳಬೇಡಿ’ ಎಂದು ತಾಕೀತು ಮಾಡಿದರು.

‘ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವೈಯಕ್ತಿಕವಾಗಿ ಬಿಜೆಪಿ ಅಭ್ಯರ್ಥಿ ನಾನೇ ಎಂದು ಬಿಂಬಿಸಿಕೊಂಡು ಪ್ರಚಾರ ನಡೆಸುವವರ ವಿರುದ್ಧ ರಾಜ್ಯ ವರಿಷ್ಠರಿಗೆ ನಗರ ಮಂಡಲದ ವತಿಯಿಂದ ದೂರು ನೀಡಲಾಗುವುದು’ ಎಂದು ಅಧ್ಯಕ್ಷ ಶಿವರುದ್ರ ಬಾಗಲಕೋಟ ಇದೇ ಸಂದರ್ಭ ತಿಳಿಸಿದರು.

* *

ನಗರದ ಮಾಸ್ಟರ್‌ಪ್ಲಾನ್‌, ನಿರಂತರ ನೀರಿನ ಯೋಜನೆಗೆ ಅನುದಾನ ಬಿಡುಗಡೆ ಮಾಡಿದ್ದು ಬಿಜೆಪಿ ನೇತೃತ್ವದ ಸರ್ಕಾರ. ಸಚಿವ ಎಂ.ಬಿ.ಪಾಟೀಲ ಸುಳ್ಳು ಹೇಳುತ್ತಿದ್ದಾರೆ
ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮಾಜಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT