ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೀಮೆ, ಕೃಷ್ಣೆ ಒಡಲಲ್ಲಿ ‘ವಡಗೇರಾ’ ತಾಲ್ಲೂಕು

Last Updated 30 ಡಿಸೆಂಬರ್ 2017, 6:19 IST
ಅಕ್ಷರ ಗಾತ್ರ

ಶಹಾಪುರ: ರಾಜ್ಯದಲ್ಲಿಯೇ ಹೊಸ ತಾಲ್ಲೂಕು ರಚನೆಯಲ್ಲಿ ಗೊಂದಲ, ವಿರೋಧ ಹಾಗೂ ಪ್ರತಿಭಟನೆ ಇಲ್ಲದೆ ಭೀಮಾ ಹಾಗೂ ಕೃಷ್ಣಾ ನದಿಯ ಸಂಗಮದ ನಡುವೆ ಅಸ್ತಿತ್ವಕ್ಕೆ ಬರಲಿರುವ ನೂತನ ತಾಲ್ಲೂಕು ‘ವಡಗೇರಾ’ ಎಂಬ ಅಗ್ಗಳಿಕೆಗೆ ಪಾತ್ರವಾಗಲಿದೆ.

ಹಯ್ಯಾಳ ಹೋಬಳಿ 32 ಹಳ್ಳಿಗಳು ಐದು ವರ್ಷಗಳ ಹಿಂದೆ ವಡಗೇರಾ ವ್ಯಾಪ್ತಿಯಲ್ಲಿ ಸೇರ್ಪಡೆ ಮಾಡಿದ್ದರಿಂದ ಜನರು ಮಾನಸಿಕವಾಗಿ ವಡಗೇರಾ ನೂತನ ತಾಲ್ಲೂಕಿನಲ್ಲಿ ಸೇರ್ಪಡೆಗೊಂಡಿದ್ದಾರೆ.

ನಿಜಾಮರ ಕಾಲದಿಂದಲೂ ಉಪ ವಿಭಾಗ ಕೇಂದ್ರವಾಗಿತ್ತು. ಶಹಾಪುರ ತಾಲ್ಲೂಕಿನಿಂದ 75 ಕಿಲೋ ಮೀಟರ್, ಯಾದಗಿರಿ 30 ಕಿಲೋ ಮೀಟರ್ ದೂರ ಹೊಂದಿದೆ. ಜನರು ವಹಿವಾಟಿಗಾಗಿ ಹೆಚ್ಚಾಗಿ ಯಾದಗಿರಿಯನ್ನು ಇಂದಿಗೂ ನೆಚ್ಚಿಕೊಂಡಿದ್ದಾರೆ. ಅಲ್ಲದೆ, ವಡಗೇರಾ ಹಾಗೂ ಹಯ್ಯಾಳ ಶಹಾಪುರ ತಾಲ್ಲೂಕಿನ ವ್ಯಾಪ್ತಿಯಲ್ಲಿ ಒಳಪಟ್ಟಿದ್ದರೂ, ಮತಕ್ಷೇತ್ರ ಮಾತ್ರ ಯಾದಗಿರಿ ವ್ಯಾಪ್ತಿಗೆ ಬರುತ್ತದೆ. ಇದರಿಂದ ಕ್ಷೇತ್ರದ ಅಭಿವೃದ್ಧಿಗೂ ಹಿನ್ನೆಡೆಯಾಗಿತ್ತು ಎಂಬುವುದು ಅಲ್ಲಿನ ಜನರ ಕೊರಗಾಗಿದೆ.

‘ಹಳ್ಳಿ ವಿಂಗಡಣೆ ಮತ್ತು ತಾಲ್ಲೂಕು ಪುನರ್ ರಚನೆಯಲ್ಲಿ ಈ ಹಿಂದೆ ನೇಮಿಸಿದ ಟಿ.ಎಂ. ಹುಂಡೇಕರ್, ಪಿ.ಸಿ. ಗದ್ದಿಗೌಡರ್ ಮತ್ತು ಪ್ರಕಾಶ ನೇತೃತ್ವದ ತಾಲ್ಲೂಕು ಪುನರ್ ರಚನಾ ಸಮಿತಿಗಳು ಸಹ ವಡಗೇರಾ ತಾಲ್ಲೂಕು ರಚನೆಗೆ ಶಿಫಾರಸು ಮಾಡಿವೆ. ನಮ್ಮಲ್ಲಿ ಅಷ್ಟೊಂದು ಹೋರಾಟದ ಕಿಚ್ಚು ಇರಲಿಲ್ಲ. ಒಂದೆರಡು ಬಾರಿ ಆಯೋಗಗಳ ಮುಂದೆ ಮನವಿಯನ್ನು ಸಲ್ಲಿಸಿದ್ದೇವೆ. ಸರ್ಕಾರವು ಸಹ ಪಾರದರ್ಶಕವಾಗಿ ನಡೆದುಕೊಂಡು ತಾಲ್ಲೂಕು ರಚನೆ ಮಾಡಿದೆ’ ಎನ್ನುತ್ತಾರೆ ಭಾಷುಮಿಯಾ ವಡಗೇರಾ.

‘ಈಗಾಗಲೇ ನೂತನ ಪೊಲೀಸ್ ಠಾಣೆ, ಸರ್ಕಾರಿ ಆಸ್ಪತ್ರೆ, ವಿದ್ಯುತ್ ಪ್ರಸರಣ ಕೇಂದ್ರದ ಕಟ್ಟಡ ನಿರ್ಮಿಸಿದ್ದರಿಂದ ಸುಸಜ್ಜಿತ ರೀತಿಯಲ್ಲಿವೆ. ನಮಗೆ ಬೇಕಾಗಿರುವುದು ತಹಶೀಲ್ದಾರ್‌, ಉಪ ನೋಂದಣಿ, ನ್ಯಾಯಾಲಯ, ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯ, ಉಪ ಖಜಾನೆ ಹಾಗೂ ಇನ್ನಿತರ ತಾಲ್ಲೂಕಿನ ಕಟ್ಟಡಗಳನ್ನು ನಿರ್ಮಿಸಬೇಕು. ತಾತ್ಕಾಲಿಕವಾಗಿ ಕಾರ್ಯಾರಂಭ ಮಾಡಲು ಕೃಷ್ಣಾ ಭಾಗ್ಯಜಲ ನಿಗಮದ ಕಟ್ಟಡಗಳು ಖಾಲಿ ಇವೆ. ಅಲ್ಲಿ ಕೆಲಸ ನಿರ್ವಹಿಸಲು ಯಾವುದೇ ಅಡ್ಡಿಯಾಗದು. ಅಲ್ಲದೆ ಕುಡಿಯುವ ನೀರನ್ನು ಕೇವಲ 8 ಕಿ.ಮೀ ದೂರದಲ್ಲಿನ ತುಮಕೂರ ಬಳಿಯ ಕೃಷ್ಣಾ ನದಿಯಿಂದ ಸೆಳೆದುಕೊಳ್ಳಲು ಸಾಧ್ಯವಿದೆ’ ಎನ್ನುತ್ತಾರೆ ಅವರು.

ಸಂಗಮ: ‘ನೂತನ ತಾಲ್ಲೂಕು ವಡಗೇರಾ ರಾಜ್ಯದಲ್ಲಿಯೇ ವಿಶೇಷತೆಯನ್ನು ಕಾಣುತ್ತೇವೆ. ಭೀಮಾ ಹಾಗೂ ಕೃಷ್ಣಾ ನದಿಯ ಮಧ್ಯದಲ್ಲಿಯೇ ಸಿಲುಕಿಕೊಂಡಿದೆ. ಒಂದೆಡೆ ಭೀಮಾ ನದಿಯ ತಟದಲ್ಲಿ 15 ಹಾಗೂ ಕೃಷ್ಣಾ ನದಿ ತಟದಲ್ಲಿ 20 ಹಳ್ಳಿಗಳು ಬರುತ್ತವೆ. ಭೀಮಾ ನದಿಗೆ ಅಡ್ಡಲಾಗಿ ಈಗಾಗಲೇ ಕಂದಳ್ಳಿ ಹಾಗೂ ಜೋಳದಡಗಿ ಬ್ರೀಡ್ಜ್ ಕಂ ಬ್ಯಾರೇಜ್ ನಿರ್ಮಾಣಗೊಂಡಿವೆ.

ಅದರಂತೆ ಕೃಷ್ಣಾ ನದಿಗೆ ಅಡ್ಡಲಾಗಿ ಗೂಗಲ್ ಬ್ರೀಡ್ಜ್ ಕಂ ಬ್ಯಾರೇಜ್ ಮತ್ತು ನೂತನವಾಗಿ ನಿರ್ಮಿಸುತ್ತಿರುವ ಗುಂಡ್ಲೂರ ಬಳಿ ಬ್ಯಾರೇಜ್ ಹೆಚ್ಚು ಅನುಕೂಲವಾಗಲಿದೆ. ಸರ್ಕಾರ ಸಮಪರ್ಕವಾಗಿ ಯೋಜನೆಯನ್ನು ಸಿದ್ಧಪಡಿಸಿ ಅನುಷ್ಠಾನಗೊಳಿಸಿದರೆ ಸಂಪೂರ್ಣವಾಗಿ ನೀರಾವರಿ ಕ್ಷೇತ್ರವಾಗಿ ಅಭಿವೃದ್ಧಿ ಹೊಂದಲು ಸಾಧ್ಯ. ಇದರಲ್ಲಿ ಸ್ಥಳೀಯ ನಾಯಕರ ಇಚ್ಛಾಶಕ್ತಿಯ ಹೆಚ್ಚಿನ ಪಾತ್ರವಿದೆ’ ಎನ್ನುತ್ತಾರೆ ರೈತ ಮುಖಂಡ ಭಾಸ್ಕರರಾವ ಮುಡಬೂಳ.

ಮೆಲ್ಲನೆ ಉಸಿರು: ‘ಹಯ್ಯಾಳ ಹೋಬಳಿ ವ್ಯಾಪ್ತಿಯಲ್ಲಿ ಬರುವ ತಾಲ್ಲೂಕಿನ ಮುನಮುಟಗಿ, ಮರಕಲ್, ಕೊಳ್ಳೂರ, ಬಿರನೂರ ಹಳ್ಳಿಗಳ ಜನತೆಗೆ ಮೆಲ್ಲನೆ ವಿರೋಧದ ಮಾತುಗಳು ಕೇಳಿ ಬರುತ್ತಿವೆ. ಆಕ್ಷೇಪಣೆಗಳನ್ನು ಈಗಾಗಲೇ ಸಲ್ಲಿಸಿದ್ದಾರೆ.

ಮುನಮುಟಗಿ ಗ್ರಾಮ ಶಹಾಪುರಕ್ಕೆ 15 ಕಿ.ಮೀ ದೂರ ಆಗುತ್ತದೆ. ವಡಗೇರಾದಲ್ಲಿ ಸೇರ್ಪಡೆಗೊಂಡರೆ 45 ಕಿಲೋ ಮೀಟರ್ ದೂರ ನಾವು ತೆರಳಬೇಕಾಗುತ್ತದೆ. ತಾಲ್ಲೂಕು ರಚನೆಗೆ ಸಾರ್ವಜನಿಕರ ಹಿತಕ್ಕೆ ಆಗಬೇಕು ವಿನಾ ಮಾರಕ ಆಗಬಾರದು. ಇದಕ್ಕೆ ನಮ್ಮದು ಸಂಪೂರ್ಣ ವಿರೋಧವಿದೆ’ ಎನ್ನುತ್ತಾರೆ ಮುನಮುಟಗಿ ಗ್ರಾಮದ ವಿರೂಪಣ್ಣಗೌಡ ಪಾಟೀಲ.

ರೈತರಿಗೆ ಅನುಕೂಲ

ಭೀಮಾ, ಕೃಷ್ಣಾ ನದಿಯ ಸಂಗಮದಲ್ಲಿ ವಡಗೇರಾ ಇದೆ. ಸಮೃದ್ಧಿಯಾಗಿ ನೀರು ಪಡೆದುಕೊಳ್ಳಲು ಅವಕಾಶವಿದೆ. ಆದರೆ, ಈಗಾಗಲೇ ಭೀಮಾ ಹಾಗೂ ಕೃಷ್ಣಾ ನದಿ ಪಾತ್ರದಲ್ಲಿ ಆಂಧ್ರವಲಸಿಗರು ಫಲವತ್ತಾದ ಜಮೀನು ಖರೀದಿಸಿ ನೀರಾವರಿ ಸೌಲಭ್ಯ ಪಡೆದಿದ್ದಾರೆ. ನೆರೆ ರಾಜ್ಯದ ಬಗ್ಗೆ ಎಚ್ಚರಿಕೆಯೂ ಅಗತ್ಯವಾಗಿದೆ ಎಂದು ರೈತ ಮುಖಂಡ ಭಾಸ್ಕರರಾವ ಮುಡಬೂಳ ಹೇಳುತ್ತಾರೆ.

ತಾಲ್ಲೂಕು ವ್ಯಾಪ್ತಿಗೆ ಒಳಪಡುವ ಗ್ರಾಮಗಳು

ವಡಗೇರಾ ತಾಲ್ಲೂಕು ಕೇಂದ್ರ: ಒರಟೂರ, ಹಾಲಗೇರಾ, ಗೋಡಿಹಾಳ, ಕುಮಕನೂರ, ಅರ್ಜುಣಗಿ, ಕೊನಹಳ್ಳಿ, ಕಂದಹಳ್ಳಿ, ಬಿಳಾರ, ಗೊಂದೆನೂರ, ಚೆನ್ನೂರ (ಜೆ), ಕೊಂಕಲ್, ತುಮಕೂರ, ಹಿರೇ ವಡಗೇರಾ, ಅಬಿಶಾಳ, ರೊಟ್ನಡಗಿ, ಕದರಾಪುರ, ಬುದನಾಳ, ಮಾಚನೂರ, ಬೆಂಡಬೆಂಬಳಿ, ಬೇನಕನಹಳ್ಳಿ (ಕೆ), ಶಿವಪುರ, ಸಂಗಮ, ಗೂಂಡ್ಲೂರ, ಅಗ್ನಿಹಾಳ, ಸೂಗೂರ, ಉಳ್ಳೆಸೂಗೂರ, ಕುರಿಹಾಳ.

ಹಯ್ಯಾಳ ಹೋಬಳಿ: ಬೋಳಾರಿ, ಗುಂಡಗುರ್ತಿ, ಹುಂಡೆಕಲ್, ಟೋಕಾಪುರ, ತಡಿಬಿಡಿ, ಕ್ಯಾತನಾಳ, ಕಾಡಂಗೇರಾ, ಶಂಕರಬಂಡ, ಟಿ.ವಡಗೇರಾ, ಅಗಸ್ತಿಹಾಳ, ಖಾನಾಪುರ, ಅನವಾರ, ಹಯ್ಯಾಳ (ಕೆ), ಹಂಚಿನಾಳ, ಐಕೂರ, ಹಯ್ಯಾಳ (ಬಿ), ಬಸವಂತಪುರ, ಬೊಮ್ಮನಹಳ್ಳಿ, ಮುನಮುಟಗಿ, ಯಕ್ಷಿಂತಿ, ಮದರಕಲ್, ನಂದಿಹಳ್ಳಿ, ಬಿರನೂರ, ಸಾವೂರ, ಕಾಟಮನಹಳ್ಳಿ, ಪರಸಾಪುರ, ಮರಕಲ್, ಕೊಳ್ಳೂರ, ಟೊಣ್ಣೂರ, ಡಿ.ಚಂದ್ರಾಳ, ಗೌಡೂರ, ಅನಕಸೂಗೂರ.

ಹೋರಾಟಕ್ಕೆ ಸಿಕ್ಕ ಫಲ

ತಾಲ್ಲೂಕು ಕೇಂದ್ರ ರಚನೆಗೆ ಇಡೀ ಹೋಬಳಿ ವ್ಯಾಪ್ತಿಯ ಮುಖಂಡರ ಹೋರಾಟಕ್ಕೆ ಸಿಕ್ಕ ಫಲ ಎನ್ನಬಹುದು. ಶಹಾಪುರ ತಾಲ್ಲೂಕು ಕೇಂದ್ರ ಕಚೇರಿಗಳಿಗೆ ಜನರು ಹೋಗಿಬರಲು ಕಷ್ಟ ಅನುಭವಿಸುತ್ತಿದ್ದರು. ಸಂಗಮ ಭಾಗದ ಬೆಂಡೆಬೆಂಬಳಿಯಂತಹ ಗ್ರಾಮ ತಾಲ್ಲೂಕು ಕೇಂದ್ರದಿಂದ 70 ಕಿಲೋ ಮೀಟರ್ ದೂರ ಇದೆ. ಹಾಗಾಗಿ, ತಾಲ್ಲೂಕು ಕೇಂದ್ರ ರಚಿಸುವಂತೆ ನಿರಂತರ ಹೋರಾಟ ನಡೆಸಿದ್ದೇವೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿದ್ದಣ್ಣ ಕಾಡಂನೋರ್‌ ಹೇಳುತ್ತಾರೆ.

ಶಾಸಕರ ಪಾತ್ರ ಹೆಚ್ಚಿದೆ

ಶಾಸಕ ಡಾ.ಎ.ಬಿ.ಮಾಲಕರಡ್ಡಿ ಅವರ ಪಾತ್ರ ಹೆಚ್ಚಿದೆ. ವಡಗೇರಾ ತಾಲ್ಲೂಕು ರಚಿಸಿಯೇ ತೀರುತ್ತೇನೆ ಎಂದು ಅವರು ವಿಶ್ವಾಸ ಮೂಡಿಸಿ ಜನರಿಗೆ ಭರವಸೆ ನೀಡಿದ್ದರು. ಅದರ ಜತೆಗೆ ಸಾಮಾಜಿಕ ಹೋರಾಟಗಾರ ಬಸವರಾಜಪ್ಪ ಸಾಹುಕಾರ ಅವರ ಹೋರಾಟವನ್ನು ಇಲ್ಲಿನ ಜನರು ಮರೆಯಲು ಸಾಧ್ಯವಿಲ್ಲ ಎಂದು ಪಟ್ಟಣದ ಮಕ್ಕಳ ವೈದ್ಯ ಸುಭಾಷ ಸಾಹುಕಾರ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT