6

ವಿವಿಧ ದೇವಾಲಯಗಳಲ್ಲಿ ವೈಕುಂಠ ಏಕಾದಶಿ ವಿಶೇಷ ಪೂಜೆ

Published:
Updated:
ವಿವಿಧ ದೇವಾಲಯಗಳಲ್ಲಿ ವೈಕುಂಠ ಏಕಾದಶಿ ವಿಶೇಷ ಪೂಜೆ

ಆನೇಕಲ್‌ : ತಾಲ್ಲೂಕಿನ ಎಲ್ಲಾ ವೈಷ್ಣವ ದೇವಾಲಯಗಳಲ್ಲಿ ವೈಕುಂಠ ಏಕಾದಶಿ ಶುಕ್ರವಾರ ಶ್ರದ್ಧಾ ಭಕ್ತಿಗಳಿಂದ ನೆರವೇರಿತು. ತಾಲ್ಲೂಕಿ ಎಲ್ಲಾ ದೇಗುಲಗಳಲ್ಲಿ ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು. ವೈಕುಂಠ ದ್ವಾರದ ಮೂಲಕ ಪ್ರವೇಶ ಮಾಡಿ ಉತ್ಸವಮೂರ್ತಿಗೆ ನಮಿಸುತ್ತಿದ್ದರು.

ಪಟ್ಟಣದ ಅಧಿದೈವ ತಿಮ್ಮರಾಯಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಬೆಳಗ್ಗೆ 5ಗಂಟೆಗೆ ಅಭಿಷೇಕ, ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು.

ಸುಪ್ರಭಾತ ಸೇವೆ ನಡೆಸಲಾಯಿತು. ಬೆಳಗ್ಗೆ 6ರಿಂದಲೇ ಭಕ್ತರು ದೇವರ ದರ್ಶನಕ್ಕಾಗಿ ಬಂದಿದ್ದರು. ಉತ್ಸವ ಮೂರ್ತಿಯ ಪ್ರಾಕಾರೋತ್ಸವ ನಡೆಸಿ ವೈಕುಂಠ ದ್ವಾರ ಸಿದ್ಧಪಡಿಸಲಾಗಿತ್ತು.

ವೈಕುಂಠ ಏಕಾದಶಿಯ ಪ್ರಯುಕ್ತ ತಿಮ್ಮರಾಯಸ್ವಾಮಿ ದೇವಾಲಯಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ನೀರಿನ ಕಾರಂಜಿ, ಬಣ್ಣ ಬಣ್ಣದ ದೀಪಗಳ ಬೆಳಕಿನಲ್ಲಿ ಸಂಜೆ ದೇವಾಲಯ ಆಕರ್ಷಣೀಯವಾಗಿತ್ತು.

ಪಟ್ಟಣದ ಕಲ್ಯಾಣ ಮಂಟಪ ರಸ್ತೆಯ ವೇಣುಗೋಪಾಲಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಸ್ವಾಮಿಗೆ ಅಭಿಷೇಕ, ವಿಶೇಷ ಪೂಜೆ, ಅಲಂಕಾರ ಏರ್ಪಡಿಸಲಾಗಿತ್ತು.

ತಾಲ್ಲೂಕಿನ ರಾಮಕೃಷ್ಣಾಪುರದ ಪ್ರಸನ್ನ ವೆಂಕಟೇಶ್ವರಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಸಂಭ್ರಮ ಸಡಗರಗಳಿಂದ ನಡೆಯಿತು. ಸ್ವಾಮಿಗೆ ವಿಶೇಷ ಪೂಜೆ, ಅಲಂಕಾರ ಏರ್ಪಡಿಸಲಾಗಿತ್ತು.

ಸಹಸ್ರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ಸ್ವಾಮಿಯ ದರ್ಶನ ಪಡೆದರು. ಭಕ್ತರು ವೈಕುಂಠದ್ವಾರ ಪ್ರವೇಶ ಮಾಡಿ ಸ್ವಾಮಿಗೆ ನಮಿಸುವ ಮೂಲಕ ಭಕ್ತಿ ಪ್ರದರ್ಶಿಸಿದರು.

ಆನೇಕಲ್ ಚಂದಾಪುರ ರಸ್ತೆಯಿಂದ ರಾಮಕೃಷ್ಣಾಪುರದವರೆಗೆ ಒಂದು ಕಿ.ಮೀ.ಗೂ ಹೆಚ್ಚು ದೂರ ಜನಜಂಗುಳಿ ಸೇರಿತ್ತು. ಪೊಲೀಸರು ರಾಮಕೃಷ್ಣಾಪುರ ಗೇಟ್ ಬಳಿಯೇ ವಾಹನಗಳನ್ನು ತಡೆದಿದ್ದರಿಂದ ಭಕ್ತರು ಒಂದು ಕಿ.ಮೀ.ಗೂ ಹೆಚ್ಚು ದೂರ ನಡೆದು ದೇವರ ದರ್ಶನಕ್ಕೆ ತೆರಳಿದರು.

ದೇವಾಲಯದ ಬಳಿ ಕಟಕಟೆಗಳನ್ನು ನಿರ್ಮಿಸಿ ಭಕ್ತರ ದರ್ಶನ ಸುಗಮವಾಗಲು ವ್ಯವಸ್ಥೆ ಮಾಡಲಾಗಿತ್ತು. ಸುಮಾರು 60ಸಾವಿರಕ್ಕೂ ಹೆಚ್ಚು ಭಕ್ತರು ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಬೆಳಗ್ಗೆ 4.30ರಿಂದಲೇ ಭಕ್ತರು ದರ್ಶನಕ್ಕೆ ಬಂದಿದ್ದರು ಎಂದು ದೇವಾಲಯ ಸಮಿತಿಯ ನರಸಿಂಹಯ್ಯ ತಿಳಿಸಿದರು.

ಪಟ್ಟಣದ ಕೋಟೆ ವೆಂಕಟರಮಣ ಸ್ವಾಮಿ ದೇವಾಲಯ, ಶ್ರೀರಾಮ ದೇವಾಲಯ, ತಾಲ್ಲೂಕಿನ ಮುಗಳೂರು ಬೇಟೆ ವೆಂಕಟೇಶ್ವರ ಸ್ವಾಮಿ ದೇವಾಲಯ, ಬನ್ನೇರುಘಟ್ಟ ಚಂಪಕಧಾಮಸ್ವಾಮಿ ದೇವಾಲಯ, ಹಾರಗದ್ದೆ ಚನ್ನಕೇಶವ ಸ್ವಾಮಿ ದೇವಾಲಯ, ಕಿತ್ತಗಾನಹಳ್ಳಿ ಶ್ರೀನಿವಾಸ ಸ್ವಾಮಿ, ಮರಸೂರು ವೆಂಕಟೇಶ್ವರ ಸ್ವಾಮಿ ದೇವಾಲಯಗಳಲ್ಲಿ ವೈಕುಂಠ ಏಕಾದಶಿ ಪ್ರಯುಕ್ತ ಸ್ವಾಮಿಗೆ ವಿಶೇಷ ಪೂಜೆ, ಅಲಂಕಾರ ಏರ್ಪಡಿಸಲಾಗಿತ್ತು. ವೈಕುಂಠ ಪ್ರವೇಶದ್ವಾರದ ಮೂಲದ ಭಕ್ತರು ಸಾಗಿ ಗೋವಿಂದ ಗೋವಿಂದ ಎಂದು ಕೂಗುವ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry