7

ಹೆಗಡೆ ವಿರುದ್ಧ ಮುಂದುವರಿದ ಪ್ರತಿಭಟನೆ

Published:
Updated:

ಬಳ್ಳಾರಿ: ನಗರದ ಜಿಲ್ಲಾಧಿಕಾರಿ ಕಚೇರಿಯು ಶುಕ್ರವಾರ ಧರಣಿ, ಮನವಿ, ಸರಣಿ ಪ್ರತಿಭಟನೆಗಳಿಗೆ ಸಾಕ್ಷಿಯಾಯಿತು. ಸಂವಿಧಾನ ಬದಲಾವಣೆ ಕುರಿತು ಹೇಳಿಕೆ ನೀಡಿರುವ ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿ ಬಂಧಿಸಬೇಕು.

ವಿಜಯಪುರ ದಲಿತ ಬಾಲಕಿ ಮೇಲೆ ಅತ್ಯಾಚಾರ ಎಸೆಗಿ ಕೊಲೆಗೈದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ\ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದ (ಅಂಬೇಡ್ಕರ ವಾದ) ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಶುಕ್ರವಾರ ಧರಣಿ ನಡೆಸಿದರು.

‘ಸಂವಿಧಾನ ಬದಲಾವಣೆ ಮಾಡುವುದಕ್ಕಾಗಿಯೇ ನಾವು ಬಂದಿದ್ದೇವೆ ಎಂದು ಹೇಳುವ ಮೂಲಕ ಕೇಂದ್ರ ಸಚಿವರು ಉದ್ಧಟತನ ಪ್ರದರ್ಶಿಸಿದ್ದಾರೆ. ಅಲ್ಲದೇ ಜಾತ್ಯತೀತರ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡುಮೇಲು ಮಾಡಲು ಹೊಂಚು ಹಾಕುತ್ತಿರುವ ಸಚಿವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಜಿಲ್ಲಾ ಪ್ರಧಾನ ಸಂಚಾಲಕ ಎಚ್‌.ಹುಸೇನಪ್ಪ ಒತ್ತಾಯಿಸಿದರು.

‘ಬಾಲಕಿ ಮೇಲೆ ಅತ್ಯಾಚಾರ ಎಸೆಗಿದ ಪ್ರಕರಣದ ಪ್ರಮುಖ ಆರೋಪಿಗಳನ್ನೂ ಬಂಧಿಸಬೇಕು. ಪೋಕ್ಸೋ ಕಾಯ್ದೆಗೆ ತಿದ್ದುಪಡಿ ತಂದು ಅತ್ಯಾಚಾರಿಗಳನ್ನು ಗಲ್ಲಿಗೇರಿಸಬೇಕು’ ಎಂದು ಆಗ್ರಹಿಸಿದರು. ಮುಖಂಡರಾದ ದುರುಗಪ್ಪ ತಳವಾರ, ಪಿ.ತಾಯಪ್ಪ, ಎ.ಕೆ.ಗಂಗಾಧರ, ಚಿಕ್ಕ ಲಿಂಗಪ್ಪಗಾದಿ, ಕೆ.ಮೆಹಬೂಬ, ಎಸ್‌.ಕೆಂಚಪ್ಪ ಭಾಗವಹಿಸಿದ್ದರು. ಕರ್ನಾಟಕ ದಲಿತ ಸಂಘರ್ಷ ಸಮಿತಿ

ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಜಿಲ್ಲಾ ಸಮಿತಿ(ಎನ್‌.ವೆಂಕಟೇಶ ಬಣ) ಪದಾಧಿಕಾರಿಗಳು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸಿ, ಮನವಿ ಸಲ್ಲಿಸಿದರು. ಜಿಲ್ಲಾ ಸಮಿತಿಯ ಅಧ್ಯಕ್ಷ ಮಹೇಶ್ ಕುರುವಳ್ಳಿ, ಮುಖಂಡರಾದ ಎಚ್‌.ಮಲ್ಲೇಶ್, ರೇಣುಕುಮಾರ, ಕೆ.ವೆಂಕಟೇಶ ಇದ್ದರು.

ರಾಜ್ಯ ಛಲವಾದಿ ಮಹಾಸಭಾ

ಹುಬ್ಬಳ್ಳಿಯ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಂಬೇಡ್ಕರ್‌ ಹೆಸರು ನಾಮಕರಣ ಮಾಡಬೇಕು ಎಂದು ಒತ್ತಾಯಿಸಿ ರಾಜ್ಯ ಛಲವಾದಿ ಮಹಾಸಭಾ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.

‘ಈಗಾಗಲೇ ಸಂಗೋಳ್ಳಿ ರಾಯಣ್ಣ ಅವರ ಹೆಸರನ್ನು ರೈಲ್ವೆ ನಿಲ್ದಾಣ ಹಾಗೂ ಕೆಂಪೇಗೌಡ ಅವರ ಹೆಸರನ್ನು ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಡಲಾಗಿದೆ. ಅದರಂತೆ ಅಂಬೇಡ್ಕರ್‌ ಹೆಸರನ್ನು ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಇಡಬೇಕು’ ಎಂದು ಮಹಾಸಭಾದ ಜಿಲ್ಲಾ ಘಟಕ ಉಪಾಧ್ಯಕ್ಷ ಸಿ.ಈಶ್ವರ್‌ ರಾವ್ ಆಗ್ರಹಿಸಿದರು. ಮುಖಂಡರಾದ ಸಿ.ಜಯಣ್ಣ, ಟಿ.ಸುಕಪ್ಪ, ಎಂ.ಹಂಪಯ್ಯ, ನಾಗಲಕೇರಿ ಗೋವಿಂದ, ಶಂಕರ್‌ ನಂದಿಹಾಳ್‌ ಸಿ.ಹನುಮೇಶ, ಟಿ.ಶೇಷಪ್ಪ ಇದ್ದರು.

ರಾಜ್ಯ ಗ್ರಾಮ ಪಂಚಾಯಿತಿ ನೌಕರ ಸಂಘ

ನೌಕರರಿಗೆ ಇ.ಎಫ್‌.ಎಂ.ಎಸ್‌.ವೇತನ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ರಾಜ್ಯ ಗ್ರಾಮ ಪಂಚಾಯಿತಿ ನೌಕರ ಸಂಘದ ಜಿಲ್ಲಾ ಸಮಿತಿಯ ಕಾರ್ಯಕರ್ತರು ನಗರದ ಜಿಲ್ಲಾಧಿಕಾರಿ ಕಚೇರಿಯಿಂದ ಜಿಲ್ಲಾ ಪಂಚಾಯಿತಿ ಕಚೇರಿವರೆಗ ಶುಕ್ರವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.

‘20 ಮತ್ತು 15 ತಿಂಗಳಿಂದ ಸಿಬ್ಬಂದಿ ವೇತನ ನೀಡಿಲ್ಲ. ಇದರಿಂದ ಆರ್ಥಿಕ ಸಂಕಷ್ಟ ಅನುಭವಿಸುವಂತಾಗಿದೆ. ಕೂಡಲೇ ಅವರ ವೇತನವನ್ನು ಜಾರಿ ಮಾಡಬೇಕು. ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆ ಹೊಂದಿರುವವರಿಗೆ ಬಡ್ತಿ ಸೌಲಭ್ಯ ನೀಡಬೇಕು. ಸಿಬ್ಬಂದಿ ಮೇಲೆ ವಿನಾಕಾರಣ ಒತ್ತಡ ಹೇರಲಾಗುತ್ತಿದ್ದು, ಅದನ್ನು ತಡೆಯಬೇಕು' ಎಂದು ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್‌.ರಾಜಶೇಖರ ಗೌಡ ಆಗ್ರಹಿಸಿದರು. ಮುಖಂಡರಾದ ಆರ್.ಎಸ್.ಬಸವರಾಜ, ಎಂ.ರಾಜಾಸಾಬ್, ಸುಬ್ಬಾರೆಡ್ಡಿ, ಮಲ್ಲಿಕಾರ್ಜುನ, ರಮೇಶ, ನಾಗಭೂಷಣ ರೆಡ್ಡಿ, ನಾಗರಾತ್ನಮ್ಮ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry