7

ಇತಿಹಾಸ ಗಟ್ಟಿಗೊಳಿಸುವ ಕಾರ್ಯ ನಡೆಯಲಿ: ದೇಶಪಾಂಡೆ

Published:
Updated:
ಇತಿಹಾಸ ಗಟ್ಟಿಗೊಳಿಸುವ ಕಾರ್ಯ ನಡೆಯಲಿ: ದೇಶಪಾಂಡೆ

ಬೀದರ್‌: ಕಾದಂಬರಿ, ಕಥಾ ಸಂಕಲನ, ಕವನ ಸಂಕಲನ, ನಾಟಕ, ಚರಿತ್ರೆ ಸೇರಿದಂತೆ 53 ಕೃತಿಗಳನ್ನು ಬರೆಯುವ ಮೂಲಕ ಜಿಲ್ಲೆಯಲ್ಲಿ ಸಾಹಿತ್ಯ ಲೋಕದಲ್ಲಿ ತಮ್ಮದೇಯಾದ ಛಾಪು ಮೂಡಿಸಿರುವ ಹಾಗೂ ವಿವಿಧ ಸಾಹಿತ್ಯಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿರುವ ಆರವತ್ತೈದರ ಹರೆಯದ ಮಾಣಿರಾವ್ ದೇಶಪಾಂಡೆ ಅವರಿಗೆ ಈಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವ ದೊರೆತಿದೆ. ಸದ್ದಿಲ್ಲದೇ ಕನ್ನಡದ ಸೇವೆ ಮಾಡುತ್ತಿರುವ ಅವರಿಗೆ ಸರ್ವಾಧ್ಯಕ್ಷತೆಯ ಸ್ಥಾನ ಅಲಂಕರಿಸುವ ಅವಕಾಶ ಬಂದೊದಗಿದೆ. ಅವರು ಪ್ರಜಾವಾಣಿಯೊಂದಿಗೆ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

* ಸಮ್ಮೇಳನದ ಸರ್ವಾಧ್ಯಕ್ಷತೆಯ ಸ್ಥಾನಕ್ಕೆ ಆಯ್ಕೆ ಮಾಡಲು ವಿಳಂಬ ಆಯಿತು ಅನಿಸುವುದಿಲ್ಲವೇ ?

ಈ ಮುಂಚೆ ಕನ್ನಡ ಸಾಹಿತ್ಯ ಸಮ್ಮೇಳನಗಳಿಗೆ ಆಯ್ಕೆಯಾದವರು ಹಿರಿಯ ವಯಸ್ಸಿನವರು ಮೇಲಾಗಿ ಈ ಗಡಿನಾಡಿನಲ್ಲಿ ಕನ್ನಡ ಕಟ್ಟಿದವರು. ಈ ನಾಡಿನಲ್ಲಿ ಪರಭಾಷೆಗಳ ಒತ್ತಡದ ನಿಮಿತ್ತ ಆ ವೇಳೆಯಲ್ಲಿ ಕನ್ನಡ ಕಟ್ಟುವಲ್ಲಿ ನಮ್ಮ ಕನ್ನಡಿಗರು ತನು-ಮನ-ಧನದಿಂದ ನಾಡು-ನುಡಿಯ ಸೇವೆಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ಅವರಿಗೂ ಈ ಸರ್ವಾಧ್ಯಕ್ಷತೆಯ ಪಟ್ಟ ಸಲ್ಲಬೇಕಾಗಿದ್ದು ಜರೂರಿಯಾಗಿತ್ತು. ಹೀಗಾಗಿ ನನಗೆ ಸರ್ವಾಧ್ಯಕ್ಷ ಸ್ಥಾನಕ್ಕೆ ವಿಳಂಬವಾಗಿ ಆಯ್ಕೆ ಮಾಡಿದ್ದಾರೆ ಎಂದೆನಿಸುವುದಿಲ್ಲ.

* ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕಗಳು ರಾಜಕೀಯ ಮುಖಂಡರ ಕೈಗೊಂಬೆಗಳಾಗುತ್ತಿವೆ ಎಂದು ಅನಿಸುವುದಿಲ್ಲವೇ ?

ಸಾಹಿತ್ಯ ಮುಂದುವರಿಯಲು ನಾಡು-ನುಡಿ ಎರಡೂ ಬೇಕು. ಕನ್ನಡ ಕಾರ್ಯಕ್ರಮಗಳಿಗೆ ರಾಜಕೀಯ ನಾಯಕರು ಬೇಕು. ಆದರೆ ರಾಜಕೀಯ ಮುಖಂಡರ ಕೈವಾಡವಾಗಬಾರದು. ಈ ದಿಸೆಯಲ್ಲಿ ಅವಲೋಕಿಸಿದಾಗ ಈ ನಾಡಿನಲಿ ಕನ್ನಡ ಬೆಳೆಯಲು ರಾಜಕೀಯ ಮುಖಂಡರ ಹಸ್ತಕ್ಷೇಪ ಇಲ್ಲ ಎನಿಸಿದೆ.

* ಜಿಲ್ಲಾ ಘಟಕ ದಾಖಲೆಯಾಗಿ ಉಳಿಯುವಂತಹ ಗಟ್ಟಿ ಕೆಲಸ ಮಾಡುತ್ತಿದೆಯೇ?

ಜಿಲ್ಲೆಯಲ್ಲಿ ಹಲವು ವರ್ಷ ಗಳಿಂದ ಸಾಹಿತ್ಯ ಪರಿಷತ್ತಿನ ಕಾರ್ಯ ಕಲಾಪಗಳನ್ನು ವೀಕ್ಷಿಸುತ್ತ ಬಂದಿರುವೆ. ವರ್ಷದಿಂದ ವರ್ಷಕ್ಕೆ ಈ ಜಿಲ್ಲಾ ಘಟಕ ಉತ್ತಮ ಕಾರ್ಯಗಳು ಮಾಡುತ್ತಿದೆ. ಗ್ರಾಮ ಮಟ್ಟಗಳಲ್ಲೂ ಸಮ್ಮೇಳನಗಳು ನಡೆಯುತ್ತಿವೆ. ಜಿಲ್ಲೆಯ ಇತಿಹಾಸ ಪರಂಪರೆಗೆ ಸಂಬಂಧಿಸಿದಂತೆ ಇನ್ನೂ ಅನೇಕ ಕಾರ್ಯಗಳು ನಡೆಯಬೇಕಾಗಿದೆ.

* ಗಡಿನಾಡಿನಲ್ಲಿ ಅತಂತ್ರ ಸ್ಥಿತಿಯಲ್ಲಿರುವ ಕನ್ನಡದ ಅಭಿವೃದ್ಧಿ ಹೇಗೆ ಸಾಧ್ಯ ?

ಮಹಾರಾಷ್ಟ್ರ ಮತ್ತು ತೆಲಂಗಾಣಕ್ಕೆ ಹೊಂದಿಕೊಂಡಿರುವ ಹಳ್ಳಿಗಳಲ್ಲಿ ಕನ್ನಡ ಕಟ್ಟುವ ಕೆಲಸ ಮಾಡಬೇಗಾಗಿದೆ.

ಗಡಿಯಲ್ಲಿ ಕನ್ನಡ ಶಾಲೆಗಲು ಉಳಿದರೆ ಕನ್ನಡ ಉಳಿಯಲಿದೆ. ಸರ್ಕಾರ ಹಳ್ಳಿಗಳಲ್ಲಿ ವಾಚನಾಲಯವನ್ನಾದರೂ ಆರಂಭಿಸಿ ಪ್ರೋತ್ಸಾಹ ನೀಡಬೇಕು.

* ಜಿಲ್ಲೆಯ ಸೂಫಿ ಸಾಹಿತ್ಯ ಹೊಸ ತಲೆಮಾರಿನಿಂದ ದೂರ ಸರಿಯುತ್ತಿದೆಯೇ ?

ಹಿರಿಯ ತಲೆಮಾರಿನವರು ಶರಣ ಸಾಹಿತ್ಯಕ್ಕೆ ಹೆಚ್ಚು ಒತ್ತು ಕೊಟ್ಟಿರುವ ಕಾರಣ ತರುಣ ಬರಹಗಾರರ ಮೇಲೆ ಶರಣರ ಸಾಹಿತ್ಯದ ಪ್ರಭಾವ ಬೀರಿದೆ. ಧಾರ್ಮಿಕ ಸಾಮರಸ್ಯದ ಸೂಫಿ ಸಾಹಿತ್ಯ ಎಲ್ಲೋ ಒಂದು ಕಡೆ ದೂರ ಸರಿಯುತ್ತಿರುವುದು ಸತ್ಯ.

ಗಡಿಯಲ್ಲಿರುವ ಕನ್ನಡ ಶಾಲೆಗಳ ಸ್ಥಿತಿ ದಯನೀಯವಾಗಿದೆ. ಕನ್ನಡ ಶಾಲೆಗಳ ಸುಧಾರಣೆಗೆ ನಿಮ್ಮ ಸಲಹೆ ಏನು ?

ಗಡಿನಾಡು ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸತೊಡಗಿದೆ. ಮೂಲ ಸೌಕರ್ಯ, ಶಿಕ್ಷಕರ ಕೊರತೆ ಹಾಗೂ ಇಂಗ್ಲಿಷ್‌ ವ್ಯಾಮೋಹದಿಂದ ಕನ್ನಡ ಶಾಲೆಗಳು ಸೊರಗಿವೆ. ಸರ್ಕಾರಿ ಶಾಲೆಗಳಿಗೆ ಎಲ್ಲ ರೀತಿಯ ಸೌಲಭ್ಯ ಒದಗಿಸಬೇಕಿದೆ. ಗಡಿನಾಡ ಶಾಲೆಗಳಿಗಾಗಿಯೇ ಸರ್ಕಾರ ವಿಶೇಷ ಅನುದಾನ ಒದಗಿಸುವುದು ಒಳ್ಳೆಯದು.

* ಕನ್ನಡ ಬಾರದವರನ್ನು ವಿಧಾನ ಸಭೆ, ಪಂಚಾಯತ್ ರಾಜ್ ಸಂಸ್ಥೆಗಳಿಗೆ ಆಯ್ಕೆ ಮಾಡುವ ಮತದಾರರಿಗೆ ಏನು ಹೇಳಬಯಸುತ್ತೀರಿ ?

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತಕ್ಕೆ ಇರುವ ಮೌಲ್ಯದ ಬಗೆಗೆ ಪ್ರತಿಯೊಬ್ಬರು ಅರಿತುಕೊಳ್ಳಬೇಕು. ಅಲ್ಲದೇ ಮತದಾರರು ಜಾತಿ ಮತ್ತು ಅನ್ಯ ಭಾಷೆಗಳ ಆಧಾರದ ಮೇಲೆ ಮತ ಚಲಾಯಿಸುವುದು ನಿಲ್ಲಬೇಕು. ಕನ್ನಡಿಗರನ್ನೇ ಆಯ್ಕೆ ಮಾಡಲು ಮತದಾರರು ಸಹಕರಿಸಬೇಕು.

* ಜಿಲ್ಲೆಯಲ್ಲಿ ಶಿಕ್ಷಣದ ಗುಣಮಟ್ಟ ಕುಸಿಯುತ್ತಲೇ ಇದೆ. ಇದರ ಸುಧಾರಣೆ ಹೇಗೆ ?

ಹೌದು ಅಕ್ಷರಶಃ ಸತ್ಯ. ಇದಕ್ಕೆ ಎರಡು ಕಾರಣಗಳುಂಟು. ಈ ಸಮಾಜದಲ್ಲಿ ಶಿಕ್ಷಣ ಸಂಸ್ಥೆಗಳು ಶಿಕ್ಷಣ ವ್ಯಾಪಾರ ಕೇಂದ್ರಗಳನ್ನಾಗಿ ಮಾಡಿಕೊಂಡಿವೆ. ಬಡ ಪ್ರತಿಭಾವಂತ ಮಕ್ಕಳು ಡೊನೇಶನ್ ಕೊಡಲಾಗದೇ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಮಠ ಮಾನ್ಯ ಶಿಕ್ಷಣ ಸಂಸ್ಥೆಗಳೂ ಸಹ ದತ್ತಿ ಪಡೆಯುತ್ತಿರುವುದರಿಂದಾಗಿ ನಿಜವಾದ ಪ್ರತಿಭಾವಂತ ಮಕ್ಕಳಿಗೆ ಶಿಕ್ಷಣ ಮರೀಚಿಕೆಯಾಗುತ್ತಿದೆ.

ಡೊನೇಶನ್ ಹಾವಳಿ ನಿಲ್ಲಬೇಕು. ಶಿಕ್ಷಕರು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿ ಮಕ್ಕಳ ಶಿಕ್ಷಣಕ್ಕೆ ಒತ್ತು ಕೊಡಬೇಕು. ಅಂದಾಗ ಮಾತ್ರ ಸುಧಾರಣೆ ಸಾಧ್ಯವಿದೆ.ಕನ್ನಡ ಭವನದ ಹೆಸರಲ್ಲಿ ರಾಜಕೀಯ ಮುಂದುವರಿದಿದೆ ಇದಕ್ಕೆ ತಮ್ಮ ಪ್ರತಿಕ್ರಿಯೆ ಏನು? ಕನ್ನಡ ಭವನ ಕಟ್ಟಲು ನಿವೇಶನ ದೊರೆತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಕಟ್ಟಡದ ಶಂಕು ಸ್ಥಾಪನೆ ಯನ್ನೂ ನೆರವೇರಿಸಿದ್ದಾರೆ. ಆದಷ್ಟು ಬೇಗ ಭವನ ನಿರ್ಮಾಣಗೊಳ್ಳಬೇಕು ಎನ್ನುವುದು ನನ್ನ ಆಶಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry