ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತನಿಖೆಗೆ ಸಮಿತಿ ರಚಿಸಲು ತೀರ್ಮಾನ

Last Updated 30 ಡಿಸೆಂಬರ್ 2017, 7:19 IST
ಅಕ್ಷರ ಗಾತ್ರ

ಚಾಮರಾಜನಗರ: ಚಾಮರಾಜನಗರ ತಾಲ್ಲೂಕಿನ ಬಿಸಲವಾಡಿಯಲ್ಲಿನ ಸಮಾಜಕಲ್ಯಾಣ ಇಲಾಖೆ ಹಾಸ್ಟೆಲ್‌ನ ಇಬ್ಬರು ವಿದ್ಯಾರ್ಥಿಗಳ ಅನುಮಾನಾಸ್ಪದ ಸಾವಿಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಕೆ. ಬೊಮ್ಮಯ್ಯ ನೇತೃತ್ವದಲ್ಲಿ ಸಮಿತಿ ರಚಿಸಲು ಜಿಲ್ಲಾ ಪಂಚಾಯಿತಿ ತೀರ್ಮಾನಿಸಿದೆ.

ನಗರದಲ್ಲಿ ಶುಕ್ರವಾರ ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ವಿದ್ಯಾರ್ಥಿಗಳ ಸಾವಿನ ಪ್ರಕರಣಗಳ ಕುರಿತು ಬಿಜೆಪಿ ಸದಸ್ಯ ಸಿ.ಎನ್. ಬಾಲರಾಜ್‌ ಮತ್ತು ಕಾಂಗ್ರೆಸ್‌ನ ಕೆರೆಹಳ್ಳಿ ನವೀನ್‌ ಪ್ರಸ್ತಾಪಿಸಿದರು.

ಒಬ್ಬ ವಿದ್ಯಾರ್ಥಿ ಮನೆಗೆ ತೆರಳಿದ್ದಾಗ ಕೆರೆಯಲ್ಲಿ ಈಜಲು ಹೋಗಿ ಮುಳುಗಿ ಮೃತಪಟ್ಟಿದ್ದಾನೆ. ಇನ್ನೊಬ್ಬ ಶಾಲೆಯ ಉಳಿದ ವಿದ್ಯಾರ್ಥಿಗಳು ಪ್ರವಾಸಕ್ಕೆ ತೆರಳಿದ್ದಾಗ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಎರಡೂ ಪ್ರಕರಣಗಳು ಹಾಸ್ಟೆಲ್‌ನಲ್ಲಿ ನಡೆದಿಲ್ಲ. ಈ ಬಗ್ಗೆ ಖುದ್ದಾಗಿ ತೆರಳಿ, ವಿದ್ಯಾರ್ಥಿಗಳ ಪೋಷಕರು, ವಾರ್ಡನ್‌ ಮತ್ತು ವಿದ್ಯಾರ್ಥಿಗಳನ್ನು ವಿಚಾರಿಸಲಾಗಿದೆ. ಹಾಸ್ಟೆಲ್‌ನಲ್ಲಿ ಯಾವ ಸಮಸ್ಯೆಯೂ ಇರಲಿಲ್ಲ. ಈಗಾಗಲೇ ವಾರ್ಡನ್‌ ಅವರನ್ನು ಬದಲಿಸಲಾಗಿದೆ ಎಂದು ಸಮಾಜ ಕಲ್ಯಾಣಾಧಿಕಾರಿ ಕೆ.ಎಚ್‌.ಸತೀಶ್‌ ತಿಳಿಸಿದರು.

ಇದರಿಂದ ತೃಪ್ತರಾಗದ ಸದಸ್ಯರು ಸತೀಶ್‌ ಕಾರ್ಯವೈಖರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ‘ಬೊಮ್ಮಯ್ಯ ನೇತೃತ್ವದಲ್ಲಿ ಐವರು ಸದಸ್ಯರ ಸಮಿತಿ ರಚಿಸಿ ತನಿಖೆ ನಡೆಸೋಣ. ಇದರಲ್ಲಿ ವಿರೋಧ ಪಕ್ಷದ ಸದಸ್ಯರೂ ಇರಲಿದ್ದಾರೆ’ ಎಂದು ಹೇಳಿದ ಅಧ್ಯಕ್ಷ ಎಂ. ರಾಮಚಂದ್ರ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

56 ಹಾಸ್ಟೆಲ್‌, 8 ಕಾಯಂ ವಾರ್ಡನ್‌!: ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗಳ ನಿರ್ವಹಣೆ ಸಮರ್ಪಕವಾಗಿ ನಡೆಯುತ್ತಿಲ್ಲ. ವಿದ್ಯಾರ್ಥಿಗಳು ಹಾಸ್ಟೆಲ್‌ಗಿಂತ ಮನೆಯಲ್ಲಿಯೇ ಹೆಚ್ಚು ಕಾಲಕಳೆಯುತ್ತಿದ್ದಾರೆ ಎಂಬ ಆರೋಪ ಕೇಳಿಬಂತು.

ವಿದ್ಯಾರ್ಥಿಗಳ ಹಾಜರಾತಿ ತಿಳಿದು ಕೊಳ್ಳಲು ಅಳವಡಿಸಿರುವ ಬಯೊಮೆಟ್ರಿಕ್‌ನಿಂದ ಪ್ರಯೋಜನ ವಾಗುತ್ತಿಲ್ಲ. ಸಂಜೆ ಮನೆಗೆ ತೆರಳುವ ವಿದ್ಯಾರ್ಥಿಗಳು ಮಧ್ಯಾಹ್ನ ಊಟದ ವೇಳೆಗೆ ಬಯೊಮೆಟ್ರಿಕ್‌ನಲ್ಲಿ ಹಾಜರಾತಿ ಹಾಕುತ್ತಾರೆ ಎಂದು ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ. ಹರೀಶ್‌ಕುಮಾರ್‌ ಹೇಳಿದರು.

ವಾರ್ಡನ್‌ಗಳ ಕೊರತೆಯಿಂದ ಹಾಸ್ಟೆಲ್‌ ನಿರ್ವಹಣೆ ಸಮಸ್ಯೆಯಾಗಿದೆ. 56 ಹಾಸ್ಟೆಲ್‌ಗಳಿಗೆ ಕೇವಲ 8 ಕಾಯಂ ವಾರ್ಡನ್‌ಗಳಿದ್ದಾರೆ. 15 ಮಂದಿ ದಿನಗೂಲಿ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೆಲವರಿಗೆ ಹೆಚ್ಚುವರಿ ಹೊಣೆಗಾರಿಕೆ ನೀಡಲಾಗಿದೆ ಎಂದು ಸತೀಶ್‌ ಮಾಹಿತಿ ನೀಡಿದರು.

ಹಿಂದಿನ ಸಮಾಜಕಲ್ಯಾಣಾಧಿಕಾರಿ ರಾಜೇಶ್‌ ವಿರುದ್ಧ ಹಣ ದುರ್ಬಳಕೆ ಆರೋಪ ಮಾಡಿ ಎರಡು ವರ್ಷಗಳಾಗುತ್ತಾ ಬಂದಿದೆ. ಇನ್ನೂ ಕ್ರಮಕೈಗೊಂಡಿಲ್ಲ. ಈ ಅಧಿಕಾರಿಯೂ ಅವರೊಂದಿಗೆ ಶಾಮೀಲಾಗಿದ್ದಾರೆ ಎನಿಸುತ್ತದೆ. ಪ್ರಕರಣವನ್ನು ಕೈಬಿಡುವುದು ಲೇಸು ಎಂದು ಸದಸ್ಯ ಮಹೇಶ್‌ ಅಸಮಾಧಾನದಿಂದ ಹೇಳಿದರು. ಎಲ್ಲೆಮಾಳದಲ್ಲಿ ಬಿಸಿಎಂ ಹಾಸ್ಟೆಲ್ ಅಗತ್ಯವಿದ್ದು, ಮಂಜೂರು ಮಾಡುವಂತೆ ಸದಸ್ಯೆ ಮಂಜುಳಾ ಮನವಿ ಮಾಡಿದರು.

ಮಾತೃಪೂರ್ಣಕ್ಕೆ ಹಿನ್ನಡೆ: ಮಾತೃಪೂರ್ಣ ಯೋಜನೆಗೆ ಜನರಿಂದ ಸರಿಯಾದ ಸ್ಪಂದನೆ ಸಿಗುತ್ತಿಲ್ಲ ಎಂಬ ವಿಚಾರ ಚರ್ಚೆಗೆ ಒಳಗಾಯಿತು. ಕೆಲವು ಅಂಗನವಾಡಿಗಳಿಗೆ ತಾಯಂದಿರು ಊಟಕ್ಕೆ ಬರುತ್ತಿಲ್ಲ. ಆರಂಭದಲ್ಲಿ ಇಂತಹ ಅಡೆತಡೆ ಸಹಜ. ಅದನ್ನು ನಿವಾರಿಸಲು ಯೋಜನೆ ರೂಪಿಸಬೇಕೆಂಬ ಅಭಿಪ್ರಾಯ ವ್ಯಕ್ತವಾಯಿತು. 32 ಶಾಲೆಗಳಲ್ಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ 450 ಮಕ್ಕಳು ಪ್ರಸಕ್ತ ಸಾಲಿನಲ್ಲಿ ಶೈಕ್ಷಣಿಕ ಪ್ರವಾಸ ಕೈಗೊಂಡಿದ್ದಾರೆ ಎಂದು ಶಿಕ್ಷಣ ಇಲಾಖೆ ಅಧಿಕಾರಿ ಮಾಹಿತಿ ನೀಡಿದರು.

ಅಧಿಕಾರಿಗಳ ವಿರುದ್ಧ ಆಕ್ರೋಶ–ಧರಣಿ

ಅಧಿಕಾರಿಗಳು ತಮ್ಮ ಸೂಚನೆಗಳನ್ನು ಪಾಲಿಸದೆ ಬೇಜವಾಬ್ದಾರಿತನ ತೋರುತ್ತಿದ್ದಾರೆ. ಸಭೆಯ ನಡಾವಳಿಯನ್ನು ಎರಡು ದಿನ ಮುಂಚಿತವಾಗಿ ಕಳುಹಿಸಬೇಕಿತ್ತು. ಸಭೆ ಆರಂಭವಾಗುವಾಗ ನೀಡಿದ್ದಾರೆ. ಕೆಲವು ಅಧಿಕಾರಿಗಳ ವಿರುದ್ಧ ದೂರು ನೀಡಿದ್ದರೂ ಕ್ರಮಕೈಗೊಂಡಿಲ್ಲ ಎಂದು ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಯಾವ ಸಮಸ್ಯೆಗೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಸಾಮಾನ್ಯಸಭೆಯನ್ನು ನಿಯಮಕ್ಕೆ ಅನುಗುಣವಾಗಿ ಕರೆಯುತ್ತಿಲ್ಲ. ಪಂಚಾಯತ್‌ರಾಜ್‌ ವ್ಯವ್ಥೆಗೆ ಅಪಚಾರ ಎಸಗಲಾಗುತ್ತಿದೆ ಎಂದು ಆರೋಪಿಸಿ ಆರ್‌. ಬಾಲರಾಜ್‌, ಸಿ.ಎನ್‌. ಬಾಲರಾಜ್‌, ನಾಗರಾಜು, ಇಸರತ್‌ಬಾನು ನೇತೃತ್ವದಲ್ಲಿ ಕೆಲಕಾಲ ಧರಣಿ ನಡೆಸಿದರು.

ಅಧಿಕಾರಿಗಳ ವಿರುದ್ಧ ಕ್ರಮತೆಗೆದುಕೊಳ್ಳಲು ಕಾಲಮಿತಿ ನಿಗದಿಪಡಿಸಿ ಎಂದು ಆಗ್ರಹಿಸಿದರು. ಆರೋಪಿತ ಅಧಿಕಾರಿಗಳ ವಿರುದ್ಧ ಶೀಘ್ರ ಕ್ರಮತೆಗೆದುಕೊಳ್ಳುವ ಭರವಸೆ ನೀಡಿದ ಬಳಿಕ ಧರಣಿ ಹಿಂದೆಗೆದುಕೊಂಡು ಸ್ಥಾನಗಳಿಗೆ ಮರಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT