ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನೂರು ತಾಲ್ಲೂಕು ಉದಯಕ್ಕೆ ಕ್ಷಣಗಣನೆ

Last Updated 30 ಡಿಸೆಂಬರ್ 2017, 7:21 IST
ಅಕ್ಷರ ಗಾತ್ರ

ಹನೂರು: ಹನೂರು ಭಾಗದ ಜನರಿಗೆ ಹೊಸ ವರ್ಷದ ಮೊದಲ ದಿನ ನಿಜವಾದ ಅರ್ಥದಲ್ಲಿ ಹೊಸ ಸಂವತ್ಸರಕ್ಕೆ ನಾಂದಿ ಹಾಡುತ್ತಿದೆ. ವಿಶಾಲ ಕೊಳ್ಳೇಗಾಲ ತಾಲ್ಲೂಕಿನ ಭಾಗವಾಗಿದ್ದ ಹನೂರು, ಜ. 1ರಿಂದ ಪ್ರತ್ಯೇಕ ತಾಲ್ಲೂಕು ಕೇಂದ್ರವಾಗಿ ಅಸ್ತಿತ್ವಕ್ಕೆ ಬರುತ್ತಿದೆ. ಈ ಸಂಬಂಧ ಸರ್ಕಾರ ಡಿ. 21ರಂದು ಹೊರಡಿಸಿದ್ದ ಅಧಿಕೃತ ಅಧಿಸೂಚನೆ ಜಾರಿಯಾಗುತ್ತಿದೆ.

10ರಂದು ಜಿಲ್ಲೆಗೆ ಭೇಟಿ ನೀಡಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ತಾಲ್ಲೂಕು ಘೋಷಣೆ ಮಾಡಲಿದ್ದಾರೆ. ತಾಲ್ಲೂಕಿನ ಪ್ರಸ್ತಾವಿತ ಭೌಗೋಳಿಕ ರಚನೆ ಕುರಿತು ಇನ್ನೂ ಚರ್ಚೆ ನಡೆಯುತ್ತಿದೆ. ಅದರ ಅಂತಿಮ ನಕಾಶೆ ಸಿದ್ಧವಾದ ಬಳಿಕ ಪರಿಪೂರ್ಣ ಚಿತ್ರಣ ದೊರಕಲಿದೆ.

ಏಕೀಕರಣಕ್ಕೂ ಮುನ್ನ ಹನೂರು ಪ್ರದೇಶ 1956ರವರೆಗೆ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಗೆ ಒಳಪಟ್ಟಿತ್ತು. ರಾಜ್ಯ ಪುನರ್‌ ವಿಂಗಡಣೆಯಾಗಿ 1956ರಲ್ಲಿ ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂದ ಬಳಿಕ ಇದು ಕನ್ನಡ ನಾಡಿಗೆ ಸೇರಿಕೊಂಡಿತು.

‘ಹನೂರು ವಿಧಾನಸಭಾ ಕ್ಷೇತ್ರ’ ಎಂದು ಕರೆಯುವುದಕ್ಕೆ ಮೊದಲು ಇದನ್ನು ಪಾಳ್ಯಂ ವಿಧಾನಸಭಾ ಕ್ಷೇತ್ರವೆಂದು ಕರೆಯಲಾಗುತ್ತಿತ್ತು. 1957 ರಿಂದ 1967ರವರೆಗೆ ಪಾಳ್ಯಂ ವಿಧಾನಸಭಾ ಕ್ಷೇತ್ರದ ಹೆಸರಿನಲ್ಲಿಯೇ ಎರಡು ಸಾರ್ವತ್ರಿಕ ಚುನಾವಣೆಗಳು ಜರುಗಿವೆ.

ಮೂರು ಆಯೋಗ: ಹೊಸ ರಾಜ್ಯ ಅಸ್ತಿತ್ವ ಬಂದ ಬಳಿಕ ಈವರೆಗೆ ಜಿಲ್ಲೆ ಮತ್ತು ತಾಲ್ಲೂಕು ಪುನರ್‌ ವಿಂಗಡಣೆಗಾಗಿ ಎ. ವಾಸುದೇವರಾವ್ ಆಯೋಗ, ಟಿ.ಎ. ಹುಂಡೇಕರ್ ಸಮಿತಿ ಹಾಗೂ ಪಿ.ಸಿ. ಗದ್ದಿಗೌಂಡರ್ ಸಮಿತಿಗಳು ಕಾರ್ಯನಿರ್ವಹಿಸಿವೆ.

ವಾಸುದೇವರಾವ್ ಆಯೋಗವು ಹನೂರು ಹೋಬಳಿ, ರಾಮಾಪುರ ಹೋಬಳಿ ಹಾಗೂ ಲೊಕ್ಕನಹಳ್ಳಿ ಹೋಬಳಿಗಳನ್ನೊಳಗೊಂಡ ಹನೂರು ತಾಲ್ಲೂಕಿನ ರಚನೆಗೆ ಶಿಫಾರಸು ಮಾಡಿತ್ತು.

ಹುಂಡೇಕರ್ ಸಮಿತಿ ಹನೂರು ಕೇಂದ್ರಕ್ಕಿಂತಲೂ ರಾಮಾಪುರವನ್ನು ತಾಲ್ಲೂಕು ಕೇಂದ್ರವನ್ನಾಗಿಸುವುದು ಉತ್ತಮ ಎಂಬ ಸಲಹೆ ನೀಡಿತ್ತು. ಗದ್ದಿಗೌಂಡರ್‌ ಸಮಿತಿ ಕೂಡ ರಾಮಾಪುರ ತಾಲ್ಲೂಕಿನ ಘೋಷಣೆಗೆ ಒಲವು ತೋರಿ ಶಿಫಾರಸು ಮಾಡಿತ್ತು.

ಪಟ್ಟಣದಲ್ಲಿ ಈಗಿರುವ ಕಚೇರಿಗಳು: ವಿಶೇಷ ತಹಶೀಲ್ದಾರ್ ಕಚೇರಿ, ನಾಡಕಚೇರಿ, ಅರಣ್ಯ ಇಲಾಖೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕಾರ್ಯಾಲಯ, ವಲಯ ಅರಣ್ಯಾ ಧಿಕಾರಿಗಳ ಕಚೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಉಪನೋಂದಣಾಧಿಕಾರಿ ಕಾರ್ಯಾ ಲಯ, ಪ್ರಾಥಮಿಕ ಆರೋಗ್ಯ ಕೇಂದ್ರ, ಪಟ್ಟಣ ಪಂಚಾಯಿತಿ ಕಚೇರಿ, ಪೊಲೀಸ್ ಇನ್‌ಸ್ಪೆಕ್ಟರ್ ಕಚೇರಿ, ಸೆಸ್ಕ್‌ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕಚೇರಿ, ಅಗ್ನಿಶಾಮಕ ಠಾಣೆ, ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್‌ ಇಂಡಿಯಾ ಸೇರಿದಂತೆ 12 ಇಲಾಖಾ ಕಚೇರಿಗಳು ಪ್ರಸ್ತುತ ಕಾರ್ಯ ನಿರ್ವಹಿಸುತ್ತಿವೆ.

ಸೃಜಿಸಬೇಕಾದ ಕಚೇರಿಗಳು:
ಉಪ ಖಜಾನೆ, ಬಾಲವಿಕಾಸ ಯೋಜನಾಧಿಕಾರಿ ಕಚೇರಿ, ಅಬಕಾರಿ, ಪೊಲೀಸ್‌ ಉಪನಿರೀಕ್ಷಕರು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಕಚೇರಿ, ಸಮಾಜ ಕಲ್ಯಾಣ ಇಲಾಖೆ, ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ, ತೋಟಗಾರಿಕೆ, ಭೂಸೇನಾ ನಿಗಮ, ವಾಣಿಜ್ಯ ಇಲಾಖೆ, ಕಾರ್ಮಿಕ ಇಲಾಖೆ, ಆಹಾರ ಇಲಾಖೆ, ಭೂ ಮಾಪನ ಇಲಾಖೆ, ಸಾಂಖ್ಯಿಕ ಇಲಾಖೆ, ಜಿಲ್ಲಾ ಪಂಚಾಯತ್ ಎಂಜಿನಿಯರಿಂಗ್ ಉಪ ವಿಭಾಗ, ಹೀಗೆ 16 ಇಲಾಖೆಗಳ ಕಚೇರಿಗಳ ಸ್ಥಾಪನೆ ಅಗತ್ಯವಿದೆ.

ಶಿಕ್ಷಣ ಸಂಸ್ಥೆಗಳು: ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಏಕಲವ್ಯ ವಸತಿ ಶಾಲೆ ಸೇರಿದಂತೆ ಎರಡು ಖಾಸಗಿ ಪದವಿ ಪೂರ್ವ ಕಾಲೇಜುಗಳು ಕೇಂದ್ರ ಸ್ಥಾನದಲ್ಲಿವೆ. ಹನೂರು ಶೈಕ್ಷಣಿಕ ವಲಯವು ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ಎರಡು ಬಾರಿ ಜಿಲ್ಲೆಗೆ ಪ್ರಥಮ ಸ್ಥಾನಗಳಿಸಿದೆ. ಅಲ್ಲದೆ, 2016-–17ನೇ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ರಾಜ್ಯಕ್ಕೆ 8ನೇ ಸ್ಥಾನ ಪಡೆಯುವ ಮೂಲಕ ಗಮನ ಸಳೆದಿದೆ.

ಹನೂರು: ಕರ್ನಾಟಕ ಹಾಗೂ ತಮಿಳುನಾಡಿನ ಗಡಿ ಭಾಗದಲ್ಲಿರುವ ಹನೂರು, ಪ್ರವಾಸಿಗರನ್ನೂ ತನ್ನತ್ತ ಸೆಳೆದುಕೊಳ್ಳುತ್ತಿದೆ. ರಾಜ್ಯದ ಎರಡು ಪ್ರಮುಖ ವನ್ಯಜೀವಿಧಾಮಗಳು, ಸುಪ್ರಸಿದ್ಧ ಪ್ರವಾಸಿ ತಾಣಗಳು, ಪುಣ್ಯಕ್ಷೇತ್ರ ಮೊದಲಾದವುಗಳನ್ನು ಒಡಲಲ್ಲಿರಿಸಿಕೊಂಡಿದೆ.

ಧರ್ಮಪುರಿ, ಈರೋಡ್ ಮತ್ತು ಸೇಲಂ ಜಿಲ್ಲೆ, ಸತ್ಯಮಂಗಲ ತಾಲ್ಲೂಕು, ಮೆಟ್ಟೂರು, ಹಂದಿಯೂರು, ಬಣ್ಣಾರಿ ಮುಂತಾದ ತಮಿಳುನಾಡಿನ ಪ್ರದೇಶಗಳ ಜೊತೆ ರಸ್ತೆ ಸಂಪರ್ಕ ಹೊಂದಿದ್ದು, ಪ್ರವಾಸೋದ್ಯಮ, ವ್ಯಾಪಾರ ವಾಣಿಜ್ಯ, ಭಾಷೆ ಹಾಗೂ ಸಂಸ್ಕೃತಿ ದೃಷ್ಟಿಯಿಂದ ಹನೂರು ತಾಲ್ಲೂಕು ಮಹತ್ವದ ಪಾತ್ರ ವಹಿಸುತ್ತದೆ.

ವನ್ಯಜೀವಿಗಳ ಬೀಡು: ರಾಜ್ಯದಲ್ಲೇ ಹೆಚ್ಚು ವಿಸ್ತೀರ್ಣ ಹೊಂದಿರುವ ವನ್ಯಜೀವಿಧಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕಾವೇರಿ ವನ್ಯಜೀವಿಧಾಮ, 1,027 ಚದರ ಕಿಲೊ ಮೀಟರ್ ವಿಸ್ತೀರ್ಣ ಹೊಂದಿದೆ.

ಕಾವೇರಿ ವನ್ಯಜೀಧಾಮ 1987ರಲ್ಲಿ ಘೋಷಣೆಯಾಯಿತು. ಇದು 7 ವನ್ಯಜೀವಿ ವಲಯಗಳನ್ನು ಒಳಗೊಂಡಿದೆ. ಅಪರೂಪದ ಮತ್ತು ಅಮೂಲ್ಯ ಪ್ರಾಣಿ ಹಾಗೂ ಪಕ್ಷಿಗಳಿಗೆ ಆಶ್ರಯ ತಾಣವಾಗುವ ಮೂಲಕ ದೇಶದ ಗಮನ ಸೆಳೆದಿದೆ. ಇದಕ್ಕೆ ಹೊಂದಿಕೊಂಡಂತಿರುವ ಮಲೆಮಹದೇಶ್ವರ ವನ್ಯಜೀವಿಧಾಮ 906 ಚದರ ಕಿಲೊಮೀಟರ್ ವಿಸ್ತೀರ್ಣವಿದೆ. ಇದು 2013ರಲ್ಲಿ ವನ್ಯಜೀವಿಧಾಮವಾಗಿ ಘೋಷಿತವಾಯಿತು. ಬಹುತೇಕ ಕುರುಚಲು ಗಿಡಗಳಿಂದ ಆವೃತವಾಗಿರುವ ಈ ಎರಡು ವನ್ಯಜೀವಿಧಾಮಗಳಲ್ಲಿ ಆನೆ, ಹುಲಿ, ಜಿಂಕೆ, ಕಾಡೆಮ್ಮೆ, ಚಿರತೆ, ಅಪರೂಪದ ಬೂದು ಅಳಿಲು, ಹನಿ ಬ್ಯಾಡ್ಜರ್‌ ಮುಂತಾದ ಪ್ರಾಣಿಗಳಿವೆ.

ಕಣ್ಮನ ಸಳೆಯುವ ಜಲಪಾತ: ದಕ್ಷಿಣ ಭಾರತದ ನಯಾಗರವೆಂದೇ ಪ್ರಸಿದ್ಧಿ ಪಡೆದಿರುವ ಹೊಗೆನಕಲ್ ಜಲಪಾತ ನೂತನ ತಾಲ್ಲೂಕಿನ ವ್ಯಾಪ್ತಿಗೆ ಒಳಪಡಲಿದೆ. ಹನೂರು ಕೇಂದ್ರಸ್ಥಾನದಿಂದ ದಟ್ಟಾರಣ್ಯದೊಳಗೆ 90 ಕಿ.ಮೀ ದೂರದಲ್ಲಿರುವ ಜಲಪಾತ ಕರ್ನಾಟಕ ಹಾಗೂ ತಮಿಳುನಾಡಿನ ವಿವಾದದ ಕೇಂದ್ರ ಬಿಂದುವೂ ಹೌದು. ಇಲ್ಲಿ ಕಾವೇರಿ ತನ್ನ ವಯ್ಯಾರದ ಮೂಲಕ ಪ್ರವಾಸಿಗರ ಮನತಣಿಸುತ್ತಾಳೆ.

ಮಿನಿ ಟಿಬೆಟ್: 5 ದಶಕಗಳ ಹಿಂದೆ ಟಿಬೆಟ್‌ನಿಂದ ನಿರಾಶ್ರಿತರಾಗಿ ಬಂದ ಟಿಬೆಟಿಯನ್ನರಿಗೆ ಒಡೆಯರಪಾಳ್ಯ ಬಳಿ 30 ಸಾವಿರ ಹೆಕ್ಟೇರ್ ಭೂ ಪ್ರದೇಶದಲ್ಲಿ ಪುನರ್‌ವಸತಿ ಕಲ್ಪಿಸಿಕೊಡಲಾಗಿದೆ.

ಬಿಳಿಗಿರಿರಂಗನಾಥಸ್ವಾಮಿ ಹುಲಿ ರಕ್ಷಿತಾರಣ್ಯಕ್ಕೆ ಅಂಟಿಕೊಂಡಂತಿರುವ ಈ ಪ್ರದೇಶದ ಜನರ ವಿಶಿಷ್ಟ ಸಂಸ್ಕೃತಿ ಆಚರಣೆ, ಸಂಪ್ರದಾಯಗಳು ಎಲ್ಲರ ಗಮನ ಸೆಳೆಯುತ್ತವೆ. ಇಲ್ಲಿರುವ ಬೌದ್ಧ ಮಂದಿರಗಳು ಪ್ರವಾಸಿ ತಾಣವಾಗಿ ಪರಿಣಮಿಸಿವೆ. ಜಿಲ್ಲೆಯ ಏಕೈಕ ಸಿ.ಬಿ.ಎಸ್.ಸಿ ಪಠ್ಯಕ್ರಮದ ಶಾಲೆಯನ್ನು ತೆರೆಯುವ ಮೂಲಕ ಗಮನ ಸೆಳೆದಿದೆ. ವಾರಾಂತ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಾರೆ.

ಮಲೆಮಹದೇಶ್ವರ ಬೆಟ್ಟ: ದಕ್ಷಿಣ ಭಾರತದ ಹಲವು ಸಮುದಾಯಗಳ ಆರಾಧ್ಯದೈವ, ಉತ್ತರದಿಂದ ಬಂದು ಕತ್ತಲರಾಜ್ಯವನ್ನು ಬೆಳಗಿದ ಪವಾಡಪುರುಷ ಹೀಗೆ ನಾನಾ ಬಿರುದುಗಳಿಂದ ಪ್ರಖ್ಯಾತಿ ಗಳಿಸಿರುವ ಮಾದೇಶ್ವರ ಸ್ವಾಮಿ ನೆಲೆಸಿದ್ದಾರೆ ಎನ್ನಲಾಗುವ ಮಹದೇಶ್ವರ ಬೆಟ್ಟ ಹನೂರು ತಾಲ್ಲೂಕು ತೆಕ್ಕೆಗೆ ಒಳಪಡಲಿದೆ.

2011ರಲ್ಲೇ ಐ.ಎಸ್.ಒ ಮಾನ್ಯತೆ ಪಡೆಯುವ ಮೂಲಕ ರಾಜ್ಯದಲ್ಲೇ ಐ.ಎಸ್.ಒ ಮಾನ್ಯತೆ ಪಡೆದ ಮೊದಲ ದೇವಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಮಹದೇಶ್ವರ ದೇವಾಲಯ, ರಾಜ್ಯದಲ್ಲಿ ಹೆಚ್ಚು ವಾರ್ಷಿಕ ಆದಾಯ ತರುವ ದೇವಾಲಯಗಳ ಪೈಕಿ ಎರಡನೇ ಸ್ಥಾನ ಪಡೆದಿದೆ. ವರ್ಷದಲ್ಲಿ ನಡೆಯುವ ನಾಲ್ಕು ಅತ್ಯಂತ ಪ್ರಮುಖ ಜಾತ್ರೆಗಳಿಗೆ ಜಿಲ್ಲೆ, ಹೊರಜಿಲ್ಲೆ ಹಾಗೂ ತಮಿಳುನಾಡಿನಿಂದ ಲಕ್ಷಾಂತರ ಸಂಖ್ಯೆಯಲ್ಲಿ ಇಲ್ಲಿಗೆ ಭಕ್ತರು ಆಗಮಿಸುತ್ತಾರೆ.

ಮೂರೂವರೆ ದಶಕಗಳ ಬೇಡಿಕೆ

ಹನೂರು ತಾಲ್ಲೂಕು ಕೇಂದ್ರ ರಚಿಸಬೇಕು ಎಂಬ ಕೂಗು ಮೂರೂವರೆ ದಶಕಗಳಿಂದಲೂ ಕೇಳಿ ಬಂದಿತ್ತು. ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಶಾಸಕರಾದ ದಿ. ಜಿ. ರಾಜೂಗೌಡ ಮತ್ತು ದಿ. ಎಚ್‌. ನಾಗಪ್ಪ ಈ ಪ್ರಯತ್ನದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕ್ಷೇತ್ರಕ್ಕೆ 2002ರಲ್ಲಿ ವಿಶೇಷ ತಹಶೀಲ್ದಾರ್ ಕಚೇರಿ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ತರುವಲ್ಲಿ ಆಗಿನ ಶಾಸಕ ಜಿ. ರಾಜೂಗೌಡ ಶ್ರಮಿಸಿದ್ದರು.

ಕೇಂದ್ರವನ್ನು ಗ್ರಾಮ ಪಂಚಾಯಿತಿಯಿಂದ ಪಟ್ಟಣ ಪಂಚಾಯಿತಿ ದರ್ಜೆಗೆ ಏರಿಸಿದರು. ಈ ಮೂಲಕ 15 ವರ್ಷಗಳ ಹಿಂದೆಯೇ ಹನೂರು ತಾಲ್ಲೂಕು ಕೇಂದ್ರ ರಚನೆಗೆ ಒತ್ತಾಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT