7

ಏನೇ ತಿಪ್ಪರಲಾಗ ಹಾಕಿದರೂ ಮುಖ್ಯಮಂತ್ರಿಯಾಗುವುದಿಲ್ಲ

Published:
Updated:
ಏನೇ ತಿಪ್ಪರಲಾಗ ಹಾಕಿದರೂ ಮುಖ್ಯಮಂತ್ರಿಯಾಗುವುದಿಲ್ಲ

ಚಿಕ್ಕಬಳ್ಳಾಪುರ: ‘ಎಚ್‌.ಡಿ.ಕುಮಾರಸ್ವಾಮಿ, ಬಿ.ಎಸ್.ಯಡಿಯೂರಪ್ಪ ಎಷ್ಟೇ ತಿಪ್ಪರಲಾಗ ಹಾಕಿದರೂ, ಅವರಪ್ಪನಾಣೆ ಅವರು ಮುಖ್ಯಮಂತ್ರಿ ಆಗುವುದಿಲ್ಲ. ಜನ ಅವರನ್ನು ನಂಬುವುದಿಲ್ಲ. ಮತ್ತೆ ಅವರಿಗೆ ಅಧಿಕಾರ ಕೊಡುವುದಿಲ್ಲ. ಹೀಗಾಗಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪುನಃ ನಾವೇ ಅಧಿಕಾರಕ್ಕೆ ಬರುತ್ತೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.

ಬಾಗೇಪಲ್ಲಿಯಲ್ಲಿ ಶುಕ್ರವಾರ ನಡೆದ ‘ಸಾಧನಾ ಸಂಭ್ರಮ’ ಕಾರ್ಯಕ್ರಮದಲ್ಲಿ ₹ 146 ಕೋಟಿ ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಕುಮಾರಸ್ವಾಮಿ ಅವರಿಗೆ ಅನುಭವದ ಕೊರತೆಯೋ ಅಥವಾ ರಾಜಕಾರಣಕ್ಕಾಗಿ ಮಾತನಾಡುತ್ತಾರೋ ನನಗಂತೂ ಗೊತ್ತಿಲ್ಲ. ಎತ್ತಿನಹೊಳೆ ಯೋಜನೆ ದುಡ್ಡು ಹೊಡೆಯುವ ಯೋಜನೆ ಎಂದು ಹೇಳಿದ್ದಾರೆ. ನಿಮ್ಮನ್ನು ಕಂಡರೆ ಹೊಟ್ಟೆಕಿಚ್ಚೋ ಏನೋ ನನಗೆ ಗೊತ್ತಿಲ್ಲ. ನಾನು ಮುಖ್ಯಮಂತ್ರಿಯಾದರೆ ಎತ್ತಿನಹೊಳೆ ಯೋಜನೆ ನಿಲ್ಲಿಸುತ್ತೇನೆ ಎಂದು ಪದೇ ಪದೇ ಹೇಳುತ್ತಾರೆ. ಅವರಿಗೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು. ಕಾಂಗ್ರೆಸ್‌ಗೆ ಆರ್ಶೀವಾದ ಮಾಡಬೇಕು’ ಎಂದು ಸಭೀಕರನ್ನು ಉದ್ದೇಶಿಸಿ ಹೇಳಿದರು.

‘ಯಾರೇ ಬಂದರೂ ಎತ್ತಿನಹೊಳೆ ಯೋಜನೆ ನಿಲ್ಲಿಸಲು ಸಾಧ್ಯವಿಲ್ಲ. ನನಗೆ ಆ ಬಗ್ಗೆ ಸಂಪೂರ್ಣ ವಿಶ್ವಾಸವಿದೆ. ಈ ಯೋಜನೆ ವಿರೋಧಿಸುವವರು ನಿಮ್ಮ ವಿರೋಧಿಗಳು ಎನ್ನುವುದು ಕೋಲಾರ, ಚಿಕ್ಕಬಳ್ಳಾಪುರ ಭಾಗದ ಜನರು ಅರ್ಥ ಮಾಡಿಕೊಳ್ಳಬೇಕು. ಕುಮಾರಸ್ವಾಮಿ ಅವರು ಅಭಿವೃದ್ಧಿಪರ ಯೋಚಿಸಬೇಕು. ಈ ಯೋಜನೆಯನ್ನು ರಾಜಕಾರಣಕ್ಕಾಗಿ ವಿರೋಧಿಸಬಾರದು’ ಎಂದು ತಿಳಿಸಿದರು.

‘ಬರದಿಂದ ತತ್ತರಿಸಿರುವ ಜಿಲ್ಲೆಯಲ್ಲಿ ಅಂತರ್ಜಲ ಸಾವಿರಾರು ಅಡಿ ಆಳಕ್ಕೆ ಕುಸಿದಿದೆ. ಬೆಂಗಳೂರಿನ ತ್ಯಾಜ್ಯ ನೀರು ಸಂಸ್ಕರಿಸಿ ಈ ಜಿಲ್ಲೆಯ ಕೆರೆಗಳನ್ನು ತುಂಬಿ ಅಂತರ್ಜಲ ಹೆಚ್ಚಿಸಲು ಉದ್ದೇಶಿಸಿದರೆ, ಆ ನೀರಿನಿಂದ ಕ್ಯಾನ್ಸರ್‌ ಬರುತ್ತದೆ ಎಂದು ಜೆಡಿಎಸ್‌ನವರು ಅಪಪ್ರಚಾರ ಮಾಡುತ್ತಿದ್ದಾರೆ. ಇದನ್ನು ಜನ ನಂಬಬಾರದು’ ಎಂದು ಮನವಿ ಮಾಡಿದರು.

‘ಅಧಿಕಾರದಲ್ಲಿದ್ದಾಗ ಸಾಲ ಮನ್ನಾ ಮಾಡಲು ಆಗದ ಯಡಿಯೂರಪ್ಪ ಇವತ್ತು ವಿರೋಧ ಪಕ್ಷದಲ್ಲಿದ್ದುಕೊಂಡು ಸಾಲ ಮನ್ನಾ ಮಾಡಿ ಎಂದು ವೀರಾವೇಷದಲ್ಲಿ ಮಾತನಾಡುತ್ತಾರೆ. ನಿಮಗೆ ಎಷ್ಟು ನಾಲಿಗೆ ಇವೆ? ಈ ಬಿಜೆಪಿಯವರಿಗೆ ಎರಡಕ್ಕಿಂತ ಹೆಚ್ಚೇ ನಾಲಿಗೆ ಇವೆ. ಇವರಿಗೆ ಒಳಗೊಂದು ಹೊರಗೊಂದು ಎರಡೆರಡು ಮುಖಗಳಿವೆ’ ಎಂದು ಕುಟುಕಿದರು.

‘ಮಹಾದಾಯಿ ನೀರು, ರೈತರ ಸಾಲಮನ್ನಾ ವಿಚಾರವಾಗಿ ಕೇಂದ್ರಕ್ಕೆ ಸರ್ವಪಕ್ಷ ನಿಯೋಗ ಕರೆದುಕೊಂಡು ಹೋದಾಗ ಪ್ರಧಾನಿ ಮೋದಿ ಎದುರು ತುಟಿ ಬಿಚ್ಚದ ಯಡಿಯೂರಪ್ಪ, ಕುಮಾರಸ್ವಾಮಿ ಅವರಿಗೆ ಇವತ್ತು ರೈತರ ಬಗ್ಗೆ ಮಾತನಾಡಲು ನೈತಿಕತೆ ಇದೆಯಾ? ಇಲ್ಲಾ. ಕುಮಾರಸ್ವಾಮಿ ಹಳ್ಳಿಗಳಲ್ಲಿ ವಾಸ್ತವ್ಯ ಮಾಡಿದ್ದು ಬಿಟ್ಟು ಬೇರೆ ಏನೂ ಮಾಡಲಿಲ್ಲ. ರಾತ್ರಿ 2 ಗಂಟೆಗೆ ಹಳ್ಳಿಗೆ ಹೋಗಿ ಮಲಗುವುದು, ಬೆಳಿಗ್ಗೆ ಎದ್ದು ಹೊರಡುವುದು ಮಾಡಿದ್ದೇ ಬಂತು. ಇದೊಂದು ಆರ್ಥಿಕ ಕಾರ್ಯಕ್ರಮವೇನು’ ಎಂದು ಪ್ರಶ್ನಿಸಿದರು.

‘ಯಡಿಯೂರಪ್ಪ ರಾಜ್ಯದಲ್ಲಿ ಪಕ್ಷದ ಅಧ್ಯಕ್ಷರಾಗುತ್ತಿದ್ದಂತೆ ಹೋದ ಕಡೆಯಲ್ಲ ಮಿಷನ್ 150 ಡಂಗುರ ಹೊಡೆಯುತ್ತಿದ್ದರು. ನಂಜನಗೂಡು, ಗುಂಡ್ಲುಪೇಟೆ ಉಪ ಚುನಾವಣೆಯಲ್ಲಿ ನಾವು ಗೆಲ್ಲುತ್ತಿದ್ದಂತೆ ಅದು ಠುಸ್‌ ಆಗಿ ಮಿಷನ್‌ 50ಕ್ಕೆ ಬಂದಿದೆ. ಯಡಿಯೂರಪ್ಪ ಅವರು ತಮ್ಮ ಕನಸು ಭಗ್ನವಾಗಿದ ಕಾರಣ ಹತಾಶೆಯಿಂದ ಬಾಯಿಗೆ ಬಂದಂತೆ ಏಕವಚನದಲ್ಲಿ ಮಾತನಾಡುತ್ತಿದ್ದಾರೆ’ ಎಂದು ಹೇಳಿದರು.

‘ಯಡಿಯೂರಪ್ಪ ಅವರಷ್ಟು ಕ್ರಿಮಿನಲ್ ಆಗಿ ಯೋಚಿಸುವವರು, ಕೆಟ್ಟದಾಗಿ ಮಾತನಾಡುವವರು ರಾಜ್ಯದ ಇತಿಹಾಸದಲ್ಲಿಯೇ ಬಂದಿಲ್ಲ. ರಾಜಕಾರಣಿಗಳಿಗೆ ಒಂದು ರಾಜಕೀಯ ಸಂಸ್ಕೃತಿ ಇರಬೇಕು. ಸಾಂವಿಧಾನಿಕ ಭಾಷೆ ಗೊತ್ತಿರಬೇಕು. ಅಂತಹವರು ಮಾತ್ರ ಸಾರ್ವಜನಿಕ ಜೀವನದಲ್ಲಿ ಇರಲು ಯೋಗ್ಯರೇ ಹೊರತು ಇಂತಹವರು ನಾಲಾಯಕ್‌’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಲಿತರನ್ನು ಮುಖ್ಯಮಂತ್ರಿ ಮಾಡಲಿ ನೋಡೋಣ?

‘ಕುಮಾರಸ್ವಾಮಿ ಅವರ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಅದೊಂದು ಕುಟುಂಬದ ರಾಜಕಾರಣ ಮಾಡುತ್ತಿರುವ ಪಕ್ಷ. ಅವರು ಮುಖ್ಯಮಂತ್ರಿಯಾದರೆ ದಲಿತರನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡುತ್ತೇನೆ ಎಂದು ಹೇಳಿದ್ದಾರೆ. ಇನ್ನೊಂದೆಡೆ ದೇವೇಗೌಡರು ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ನೋಡುವುದು ನನ್ನ ಕೊನೆ ಆಸೆ ಎಂದು ಹೇಳುತ್ತಾರೆ. ಆದರೆ ಅವರ ಕೊನೆ ಆಸೆ ದಲಿತರನ್ನು, ಅಲ್ಪಸಂಖ್ಯಾತರನ್ನು ಮುಖ್ಯಮಂತ್ರಿಯನ್ನಾಗಿ ಮಾಡುತ್ತೇನೆ ಎನ್ನುವುದು ಇರಬೇಕಿತ್ತು’ ಎಂದು ಸಿದ್ದರಾಮಯ್ಯ ಹೇಳಿದರು.

‘ನಾವು ಅಧಿಕಾರಕ್ಕೆ ಬಂದರೆ ದಲಿತರನ್ನು ಮುಖ್ಯಮಂತ್ರಿಯನ್ನಾಗಿ ಮಾಡುತ್ತೇವೆ ಎಂದು ಕುಮಾರಸ್ವಾಮಿ ಅವರು ಈಗಲಾದರೂ ಹೇಳಲಿ ನೋಡೋಣ? ಹೇಳುವುದಿಲ್ಲ. ಕುಮಾರಸ್ವಾಮಿಯೇ ಮುಖ್ಯಮಂತ್ರಿ ಆಗಬೇಕು. ಕುಟುಂಬದವರನ್ನು ಬಿಟ್ಟು ಅವರು ಬೇರೆ ಯಾರನ್ನೂ ಒಪ್ಪಿಕೊಳ್ಳಲು ಸಿದ್ಧರಿಲ್ಲ. ನಾನು ಅವರ ಜತೆಗೆ ಇದ್ದವನಲ್ಲಾ ಅವರ ಮನಸ್ಥಿತಿ ಏನು ಎಂದು ನನಗೆ ಗೊತ್ತಿದೆ. ಅವರು ಕುಟುಂಬದವರನ್ನು ಬಿಟ್ಟು ಬೇರೆಯವರನ್ನು ರಾಜಕೀಯವಾಗಿ ಬೆಳೆಯಲು ಬಿಡುವುದಿಲ್ಲ. ನಂಬರ್‌ ಒನ್ ಸ್ಥಾನ ಅವರಿಗೇ ಇರಬೇಕು’ ಎಂದು ತಿಳಿಸಿದರು.

ನ್ಯಾಯಮಂಡಳಿಯಲ್ಲಿ ಬಿಜೆಪಿ ಪ್ರಮಾಣಪತ್ರ ಸಲ್ಲಿಸಲಿ

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ‘ಬಿಜೆಪಿಯವರಿಗೆ ಮಹಾದಾಯಿ ವಿಚಾರದಲ್ಲಿ ಅಷ್ಟು ಕಾಳಜಿ ಇದ್ದರೆ ನೇರವಾಗಿ ನ್ಯಾಯಮಂಡಳಿಯಲ್ಲಿ ನಾವು ನೀರು ಕೊಡುತ್ತೇವೆ ಎಂದು ಪ್ರಮಾಣಪತ್ರ ಸಲ್ಲಿಸಲಿ' ಎಂದು ಸವಾಲು ಹಾಕಿದರು.

‘ಜಗದೀಶ್ ಶೆಟ್ಟರ್ ಅವರಿಗೆ ಕಾನೂನು ಜ್ಞಾನ ಇದೆಯಾ? ಒಂದು ರಾಜ್ಯದ ಮುಖ್ಯಮಂತ್ರಿಗೆ ಇನ್ನೊಂದು ರಾಜ್ಯದ ಮುಖ್ಯಮಂತ್ರಿ ಪತ್ರ ಬರೆಯಬೇಕು. ಯಡಿಯೂರಪ್ಪ ಏನಾಗಿದ್ದಾರೆ? ಅವರು ಒಂದು ಪಕ್ಷದ ಅಧ್ಯಕ್ಷರಷ್ಟೆ. ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಅವರಿಗೆ ಸೌಜನ್ಯವಿಲ್ಲ. ಹೆತ್ತವರಿಗೆ ಹೆಗ್ಗಣ ಎನ್ನುವಂತೆ ಅವರಿಗೆ ಅವರ ಪಕ್ಷದವರನ್ನು ಕಂಡರೆ ಪ್ರೀತಿ. ನಾವು ನೀರಿಗಾಗಿ ಅವರೊಂದಿಗೆ ಹೋರಾಟ ಮಾಡುತ್ತಿರುವುದರಿಂದ ಅದಕ್ಕೆ ಅವರು ಆ ರೀತಿ ಹೇಳಿದ್ದಾರೆ’ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

* *

ನಮ್ಮ ಕಾರ್ಯಕರ್ತರಿಗೆ ಯಡಿಯೂರಪ್ಪ, ಕುಮಾರಸ್ವಾಮಿ ರೀತಿ ಸುಳ್ಳು ಹೇಳಬೇಡಿ. ನಾವು ಮಾಡಿರುವುದನ್ನು ಮಾತ್ರ ಜನರಿಗೆ ಹೇಳುವ ಕೆಲಸ ಮಾಡಿ ಎಂದಿರುವೆ.

ಸಿದ್ದರಾಮಯ್ಯ, ಮುಖ್ಯಮಂತ್ರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry