ಕೆಂಪೇಗೌಡರು ಎಲ್ಲರ ಸ್ವಾಭಿಮಾನದ ಸಂಕೇತ

7

ಕೆಂಪೇಗೌಡರು ಎಲ್ಲರ ಸ್ವಾಭಿಮಾನದ ಸಂಕೇತ

Published:
Updated:

ಕಡೂರು: ಸಾಮಾಜಿಕ ನ್ಯಾಯ ಕಲ್ಪನೆಗೆ ನಾಂದಿ ಹಾಡಿದ್ದು ನಾಡಪ್ರಭು ಕೆಂಪೇಗೌಡರು ಎಂದು ಕೆ.ಎ.ಎಸ್ ಅಧಿಕಾರಿ ಮಾರುತಿಗೌಡ ತಿಳಿಸಿದರು. ಕಡೂರಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿ ಮಾತನಾಡಿದರು.

ಹರಪ್ಪ ಮತ್ತು ಮೊಹೆಂಜೋದಾರೊ ನಗರವನ್ನು ಬಿಟ್ಟರೆ ಯೋಜನಾಬದ್ಧವಾಗಿ ನಿರ್ಮಿಸಿದ ನಗರ ಎಂಬ ಖ್ಯಾತಿ ಪಡೆದ ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರು. ಗ್ರಾಮಗಳಿಗೆ ತೆರಳಿ ಅಲ್ಲಿನ ಸಮಸ್ಯೆಗಳನ್ನು ಬಗೆಹರಿಸುವ ಪದ್ಧತಿ ಆರಂಭವಾಗಿದ್ದು ಕೆಂಪೇಗೌಡರಿಂದಲೇ. ತಾಳಿಕೋಟೆ ಕದನದ ನಂತರ ವಿಜಯನಗರ ಸಾಮ್ರಾಜ್ಯ ಪತನಗೊಂಡಾಗ ಅಲ್ಲಿದ್ದ ಕೆಂಪೇಗೌಡರ ಸೈನ್ಯ ನೆಲೆಸಿದ್ದು ಕಡೂರಿನ ಸಖರಾಯಪಟ್ಟಣದಲ್ಲಿ. ಆಗ ವಿಜಯನಗರದ ದೊರೆ ಶ್ರೀರಂಗರಾಯ ಸಖರಾಯಪಟ್ಟಣದಲ್ಲಿ ನೆಲೆಸಿದ್ದರು ಎಂದರೆ ಕೆಂಪೇಗೌಡರ ಸೈನ್ಯದ ಮೇಲಿನ ನಂಬಿಕೆ ಎಷ್ಟಿತ್ತು ಎಂಬುದನ್ನು ಸಖರಾಯಪಟ್ಟಣದಲ್ಲಿರುವ ತಾಮ್ರ ಶಾಸನ ಮತ್ತು ಇನ್ನೊಂದು ಕಲ್ಲಿನ ಶಾಸನ ವರ್ಣಿಸುತ್ತದೆ. ಕೆಂಪೇಗೌಡರ ದೂರದೃಷ್ಟಿಯ ನಿರ್ಮಾಣಗಳು ಅವರನ್ನು ನಾಡಪ್ರಭು ಎಂಬ ಸ್ಥಾನಕ್ಕೇರಿಸುತ್ತವೆ ಎಂದರು.

ಶಾಸಕ ವೈ.ಎಸ್.ವಿ. ದತ್ತ ಮಾತನಾಡಿ, ‘ಒಂದು ಸಮುದಾಯಕ್ಕೆ ಸೀಮಿತವಾಗದೆ ಎಲ್ಲರ ಸ್ವಾಭಿಮಾನದ ಸಂಕೇತ ಕೆಂಪೇಗೌಡರು. ಕನಸು ಕಟ್ಟುವವರು ಮಾತ್ರ ಅದ್ಭುತ ನಾಯಕರಾಗುತ್ತಾರೆ. ಅಂತಹ ಒಂದು ಕನಸು ಕೆಂಪೇಗೌಡರಿಗೆ ಬಿದ್ದ ಫಲವಾಗಿ ಬೆಂಗಳೂರು ರೂಪುಗೊಂಡಿತು ಎಂಬ ದಂತ ಕಥೆಯಿದೆ. ಅದೇನೆ ಇದ್ದರೂ ಬೆಂಗಳೂರು ಯೋಜನಾಬದ್ಧವಾಗಿ, ವಿವಿಧ ಸಮುದಾಯ ಮತ್ತು ಉದ್ಯೋಗಗಳಿಗೆ ಅನುಗುಣವಾಗಿ ಒಂದೊಂದು ಪ್ರದೇಶವನ್ನು ದೂರದೃಷ್ಟಿಯಿಂದ ವ್ಯವಸ್ಥೆಗೊಳಿಸಿದ ನಗರವಾಗಿ ರೂಪುಗೊಂಡಿತು. ಸಾಮಾಜಿಕ ನ್ಯಾಯದ ಅತ್ಯುತ್ತಮ ಉದಾಹರಣೆಯಾಗಿ ಬೆಂಗಳೂರು ಇಂದು ವಿಶ್ವವಿಖ್ಯಾತಿ ಪಡೆದಿದೆ. ಕೆಂಪೇಗೌಡರ ಆದರ್ಶವನ್ನು ಇಂದಿನ ರಾಜಕಾರಣಿಗಳು ಅನುಸರಿಸಿದರೆ ಬಹುಶಃ ಉತ್ತಮ ಆಡಳಿತ ಹೊರಹೊಮ್ಮಬಹುದು’ ಎಂದು ಅಭಿಪ್ರಾಯಪಟ್ಟರು.

ಸಮಾಜದ ರಾಜ್ಯ ಉಪಾಧ್ಯಕ್ಷ ಜಿಗಣೇಹಳ್ಳಿ ನೀಲಕಂಠಪ್ಪ ಮಾತನಾಡಿ, ‘ನಾಡಪ್ರಭು ಕೆಂಪೇಗೌಡರ ಜಯಂತಿಯನ್ನು ಈ ಹಿಂದೆ ಜಿಗಣೇಹಳ್ಳಿಯಲ್ಲಿ ರಾಜ್ಯ ಮಟ್ಟದ ಕಾರ್ಯಕ್ರಮವಾಗಿ ಆಚರಿಸಲಾಗಿತ್ತು. ಪ್ರಸ್ತುತ ಸರ್ಕಾರವೇ ಅವರ ಜಯಂತಿ ಆಚರಣೆಗೆ ಮುಂದಾಗಿರುವುದು ಅವರಿಗೆ ಸಂದ ಗೌರವವಾಗಿದೆ’ ಎಂದರು.

ತಹಶೀಲ್ದಾರ್ ಎಂ. ಭಾಗ್ಯ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ರೇಣುಕಾ ಉಮೇಶ್, ಸದಸ್ಯರಾದ ದಾಸಯ್ಯನಗುತ್ತಿ ಚಂದ್ರಪ್ಪ, ಜಿಗಣೇಹಳ್ಳಿ ಮಂಜು, ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕ ಎಸ್.ಡಿ. ಸೋನಾಲ್ ಧರ್ಮೇಗೌಡ, ತಾಲ್ಲೂಕು ಅಧ್ಯಕ್ಷ ಹೊ.ರಾ. ಕೃಷ್ಣಕುಮಾರ್, ಒಕ್ಕಲಿಗ ಮುಖಂಡರಾದ ರುದ್ರೇಗೌಡ, ಎಸ್.ಆರ್. ಯೋಗೀಶ್‌ಗೌಡ, ಪುರಸಭಾ ಸದಸ್ಯೆ ಅನಿತಾರಾಜ್‌ಕುಮಾರ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry