7

ಕುವೆಂಪು ಸಾಹಿತ್ಯದಲ್ಲಿ ಪ್ರಜಾಪ್ರಭುತ್ವ ದೃಷ್ಟಿ

Published:
Updated:

ದಾವಣಗೆರೆ: ಭಾತರದಂಥ ದೇಶಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಯೇ ಸೂಕ್ತ ಎಂದು 1935ರಲ್ಲೇ ಕುವೆಂಪು ಹೇಳಿದ್ದರು. ಅವರ ಸಾಹಿತ್ಯದಲ್ಲಿ ಪ್ರಜಾಪ್ರಭುತ್ವದ ಪೂರ್ಣದೃಷ್ಟಿ ಅಡಗಿದೆ ಎಂದು ಜನಪದ ತಜ್ಞ ಡಾ.ಎಂ.ಜಿ.ಈಶ್ವರಪ್ಪ ಹೇಳಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯ್ತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಪಾಲಿಕೆ ಸಂಯುಕ್ತವಾಗಿ ರಾಷ್ಟ್ರಕವಿ ಕುವೆಂಪು ಅವರ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ ವಿಶ್ವಮಾನವ ದಿನಾಚರಣೆಯಲ್ಲಿ ಅವರು ಉಪನ್ಯಾಸ ನೀಡಿದರು.

ಕೋಗಿಲೆ ಮತ್ತು ಸೋವಿಯತ್‌ ರಷ್ಯಾ ಕವನ ಸಂಕಲನದಲ್ಲೂ ಭಾರತಕ್ಕೆ ಪ್ರಜಾಪ್ರಭುತ್ವವೇ ಸೂಕ್ತ ಎಂದು ಪ್ರತಿಪಾದಿಸಿದ್ದಾರೆ. ರಷ್ಯಾದಲ್ಲಿ ಕೋಗಿಲೆ ಇಷ್ಟೇ ಹಾಡಬೇಕು, ಕವಿ ಹೀಗೇ ಬರೆಯಬೇಕು, ಸಂಗೀತಗಾರ ಹೀಗೇ ಆಲಾಪನೆ ಮಾಡಬೇಕು ಎಂದು ನಿಯಂತ್ರಿಸಲು ಸಾಧ್ಯವೇ? ಎಂದು ವ್ಯಂಗ್ಯ ಮಾಡಿದ್ದಾರೆ. ಕಾವ್ಯಗಳ ಮೂಲಕ ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ ಎಂಬ ಪಂಚಮಂತ್ರಗಳ ಮೂಲಕ ವಿಶ್ವಮಾನವ ಸಂದೇಶಗಳನ್ನು ಸಾರಿದ್ದಾರೆ ಎಂದರು.

ಕುವೆಂಪು ಕನ್ನಡದ ಜ್ಞಾನ ದೇವತೆ, ಕುವೆಂಪು ದೇಶ–ವಿದೇಶ ಸುತ್ತಿದವರಲ್ಲ. ಆದರೂ ಪ್ರಪಂಚದ ಸಾಹಿತ್ಯವನ್ನು ಒಂದೆಡೆ ಹಿಡಿದಿಟ್ಟುಕೊಟ್ಟಿದ್ದಾರೆ. ಅವರು ಕನ್ನಡದ ಬಗ್ಗೆ ಕಳಕಳಿ ಹೊಂದಿದ್ದ ಮನುಷ್ಯ. ವಿಶ್ವಮಾನವ ಕವಿ ಕುವೆಂಪು ಅವರದ್ದು ದಣಿವರಿಯದ ಲೇಖನಿ. ಎರಡು ಮಹಾಕಾವ್ಯ, ಒಂದು ಖಂಡಕಾವ್ಯ, ಹಲವು ಕಾದಂಬರಿ, ಕಥೆ, ಪ್ರಬಂಧ, ಲೇಖನ, ಕಾವ್ಯ ಸಂಕಲನಗಳನ್ನು ಕನ್ನಡಿಗರಿಗೆ ಕೊಟ್ಟಿದ್ದಾರೆ. ಅವರ ಸಾಹಿತ್ಯ ಓದಲು ವರ್ಷಗಳೇ ಬೇಕು ಎಂದು ಹೇಳಿದರು.

‘ಮೌಢ್ಯತೆಯ ಮಾರಿಯ ಹೊರ ಎಳೆಯ ಬನ್ನಿ, ವಿಜ್ಞಾನದ ದೀವಿಗೆಯ ಹಿಡಯೋಣ ಬನ್ನಿ’ ಎಂದು ಕರೆಕೊಟ್ಟ ಕುವೆಂಪು, ಧರ್ಮಗಳನ್ನು ಮೀರಿದ ಮನುಜಮತ ಸೃಷ್ಟಿಗೆ ಪ್ರಯತ್ನಿಸಿದ್ದರು. ಅವರು ಕನ್ನಡ ಸಾಹಿತ್ಯದ ಯುಗಪ್ರವರ್ತಕ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಮಂಜುಳಾ ಟಿ.ವಿ.ರಾಜು , ‘ಸಾಹಿತ್ಯದ ಮೂಲಕ ವಿಸ್ಮಯ ಮೂಡಿಸುವ ಕವಿ ಕುವೆಂಪು. ಮೇಲು–ಕೀಳು ಎಂಬ ವರ್ಗಗಳನ್ನು ನಿವಾರಿಸಲು ಕುವೆಂಪು ಆಶಯ ಹೊಂದಿದ್ದರು. ‘ಬೆರಳ್‌ಗೆ ಕೊರಳ್‌’, ‘ಶೂದ್ರ ತಪಸ್ವಿ’ ನಾಟಕಗಳಲ್ಲಿ ವರ್ಗ ತಾರತಮ್ಯ ವಿರೋಧಿಸುವ ಉದ್ದೇಶವಿದೆ ಎಂದು ಹೇಳಿದರು.

ಅಧ್ಯಾತ್ಮ, ಧಾರ್ಮಿಕ ಭಾವನೆ, ನದಿ, ಪ್ರಕೃತಿ, ಪ್ರಾಣಿ–ಪಕ್ಷಿಸಂಕುಲ, ಕೃಷಿ, ರೈತನ ಶ್ರಮ... ಹೀಗೆ ಹಲವು ಅಂಶಗಳು ಕುವೆಂಪು ಅವರ ಸಾಹಿತ್ಯದ ಪ್ರೇರಣೆಗಳಾಗಿವೆ. ಶ್ರೇಷ್ಠ ಕವಿಯ ಸಾಹಿತ್ಯ ಎಲ್ಲರೂ ಓದಬೇಕು. ಇತ್ತೀಚೆಗೆ ಇಂಗ್ಲಿಷ್‌ ವ್ಯಾಮೋಹ ಹೆಚ್ಚಾಗಿ, ಇಂಗ್ಲಿಷ್‌ ಮಾಧ್ಯಮದಲ್ಲೇ ಮಕ್ಕಳು ಓದುತ್ತಾರೆ. ಹೀಗಾಗಿ ಕನ್ನಡವನ್ನು ಓದಲೂ ಮಕ್ಕಳು ಕಷ್ಟಪಡುತ್ತಿದ್ದಾರೆ. ಕನ್ನಡ ಓದುವ, ಬರೆಯುವ ಅಭ್ಯಾಸಗಳು ಹೆಚ್ಚಾಗಬೇಕು ಎಂದರು.

ಮಾಯಕೊಂಡ ಶಾಸಕ ಕೆ.ಶಿವಮೂರ್ತಿ ಮಾತನಾಡಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ್ ಬೆಕ್ಕೇರಿ ಇದ್ದರು. ಗುರು ಪಂಚಾಕ್ಷರ ಸಂಗೀತ ವಿದ್ಯಾಲಯದ ಕಲಾವಿದರು ಸಂಗೀತ, ಚಿರಂತನ ಹಾಗೂ ನೂಪುರ ಕಲಾವಿದರು ನೃತ್ಯ ಕಾರ್ಯಕ್ರಮ ನಡೆಸಿಕೊಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry