ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗದಗ: ಹಸಿಗಡಲೆ ಮಾರಾಟ ಬಲು ಜೋರು

Last Updated 30 ಡಿಸೆಂಬರ್ 2017, 8:44 IST
ಅಕ್ಷರ ಗಾತ್ರ

ಗದಗ: ಗದಗ–ಬೆಟಗೇರಿ ಅವಳಿ ನಗರದ ಮಾರುಕಟ್ಟೆಗಳಿಗೆ ಹಸಿ ಕಡಲೆ ಲಗ್ಗೆ ಇಟ್ಟಿದೆ. ಇಲ್ಲಿನ ಪ್ರಮುಖ ವೃತ್ತಗಳಲ್ಲಿ ತಳ್ಳು ಗಾಡಿಯಲ್ಲಿ ಹಸಿ ಕಡಲೆ ಮಾರಾಟ ಭರಾಟೆ ಜೋರಾಗಿದೆ. ಸಂಜೆಯ ಹೊತ್ತಿಗೆ ನಗರದ ಪಂಚರಹೊಂಡ, ಬಸವೇಶ್ವರ ವೃತ್ತ, ಕೆ.ಸಿ.ರಾಣಿ, ಸ್ಟೇಷನ್‌ ರಸ್ತೆ, ಟಾಂಗಾಕೂಟ, ಮಹಾತ್ಮ ಗಾಂಧಿ ವೃತ್ತ, ಹೆಸ್ಕಾಂ ಕಚೇರಿ, ಮುಳಗುಂದ ನಾಕಾ, ಜನತಾ ಬಜಾರ, ಹಾತಲಗೇರಿನಾಕಾ ಸೇರಿದಂತೆ ಜನದಟ್ಟಣೆ ಇರುವ ಪ್ರದೇಶಗಳಲ್ಲಿ ಹಸಿ ಕಡಲೆ ವ್ಯಾಪಾರಿಗಳನ್ನು ಕಾಣಬಹುದು.

ದೈನಂದಿನ ಕೆಲಸ ಮುಗಿಸಿ ಸಂಜೆ ಮನೆಗೆ ಹೊರಟವರು, ವಾಯು ವಿಹಾರಕ್ಕೆ ಬಂದವರು, ಪಾದಚಾರಿಗಳು, ವಿದ್ಯಾರ್ಥಿಗಳು ಒಂದಿಷ್ಟು ಹಸಿ ಕಡಲೆ ಖರೀದಿಸಿ, ತಿನ್ನುತ್ತಾ, ಹರಟೆ ಹೊಡೆಯುತ್ತಾ ಸಾಗುವ ದೃಶ್ಯ ಕಂಡು ಬರುತ್ತದೆ.

ಜಿಲ್ಲೆಯ ಹೆಚ್ಚಿನ ರೈತರು ತಾವು ಬೆಳೆದ ಹಸಿ ಕಡಲೆಯನ್ನು ಮಾರುಕಟ್ಟೆಗೆ ತರುವುದು ಕಡಿಮೆ. ಒಣಗಿದ ನಂತರ ಮಾರಾಟ ಮಾಡುತ್ತಾರೆ. ಈ ಬಾರಿ ತಾಲ್ಲೂಕಿನ ನಾಗಾವಿ, ಬೆಳದಡಿ, ಕಳಸಾಪುರ ಹಾಗೂ ಧಾರವಾಡದ ಅಳ್ನಾವರ, ಕಲಘಟಗಿ ಹಾಗೂ ಕೊಪ್ಪಳದಿಂದ ಗದುಗಿನ ಮಾರುಕಟ್ಟೆಗೆ ಬಂದಿದೆ.

ಹಸಿ ಕಡಲೆ ವ್ಯಾಪಾರ ತಳ್ಳುಗಾಡಿ ವ್ಯಾಪಾರಿಗಳಿಗೆ ಸಂಪಾದನೆ ಮಾರ್ಗವಾಗಿದೆ. ಬೆಟಗೇರಿ ಬಸ್‌ನಿಲ್ದಾಣ, ತೆಂಗಿನಕಾಯಿ ಬಜಾರ, ಹೆಲ್ತ್‌ಕ್ಯಾಂಪ್‌ ಹಾಗೂ ಬಸವೇಶ್ವರ ವೃತ್ತ, ಕೆ.ಎಚ್.ಪಾಟೀಲ ವೃತ್ತ, ಹಳೆ ಬಸ್‌ನಿಲ್ದಾಣ ಹತ್ತಿರ ಮಾರಾಟ ಮಾಡುತ್ತಿರುವ ಗಾಡಿಗಳಲ್ಲಿ ಜನರು ಹೆಚ್ಚಾಗಿ ಕಡಲೆ ಖರೀದಿಸುತ್ತಿದ್ದಾರೆ. ಒಂದೊಂದು ರಸ್ತೆಯಲ್ಲಿ ಎರಡರಿಂದ ಮೂರು ತಳ್ಳು ಗಾಡಿಯಲ್ಲಿ ಕಡಲೆ ವ್ಯಾಪಾರ ನಡೆಯುತ್ತಿದೆ. ಕಡಲೆ ಬೆಲೆ ಏರಿದರೂ ಹಣ ನೀಡಿ ಕೊಳ್ಳುವವರ ಸಂಖ್ಯೆ ಕಡಿಮೆಯಾಗಿಲ್ಲ.

‘ಧಾರವಾಡದ ಅಳ್ನಾವರ, ಕಲಘಟಗಿ ಹಾಗೂ ಕೊಪ್ಪಳ ಹಾಗೂ ಗದುಗಿನ ಸುತ್ತಲಿನ ಗ್ರಾಮಗಳಿಂದ ಕಡಲೆಯನ್ನು ತಂದು ಮಾರಾಟ ಮಾಡುತ್ತಿದ್ದೇವೆ. ವ್ಯಾಪಾರ ಚೆನ್ನಾಗಿದೆ. 20 ಕೆ.ಜಿಯ ಹಸಿ ಕಡಲೆ ಹೊರೆಗೆ ₹ 400ರಿಂದ ₹ 500 ಹಣ ನೀಡಿ ತರುತ್ತೇವೆ. ಹಸಿ ಕಡಲೆ ಒಂದು ಕಟ್ಟು ₹ 15, ಕೆ.ಜಿ.ಗೆ ₹ 40ರಿಂದ 50 ಮಾರಾಟ ಮಾಡುತ್ತಿದ್ದೇವೆ. ಹುರಿದ ಕಡಲೆ ಕೆ.ಜಿ.ಗೆ ₹ 65 ರಿಂದ ₹ 80ರವರೆಗೆ ಬಿಕರಿಯಾಗುತ್ತಿದೆ. ದಿನಕ್ಕೆ ₹ 600ರಿಂದ ₹ 700 ರವರೆಗೆ ವ್ಯಾಪಾರವಾದರೆ, ಎಲ್ಲ ಖರ್ಚು ತೆಗೆದು ಸುಮಾರು ₹ 200 ರಿಂದ ₹ 300ರವರೆಗೆ ಉಳಿಯುತ್ತದೆ’ ಎನ್ನುತ್ತಾರೆ ಕಡಲೆ ವ್ಯಾಪಾರಿ ಕಾಸೀಂಸಾಬ್‌ ಮಕಾನದಾರ್.

* * 

ಈ ಬಾರಿ ಉತ್ತಮ ಮಳೆ ಆಗಿದ್ದರಿಂದ ನಿರೀಕ್ಷೆಗೂ ಮೀರಿ ಹಸಿ ಕಡಲೆ ಮಾರುಕಟ್ಟೆಗೆ ಬಂದಿದೆ. ಕಳೆದ ವರ್ಷಕ್ಕೆ ಹೊಲಿಸಿದರೆ, ಈ ಬಾರಿ 20 ಕೆ.ಜಿ. ಕಡಲೆ ಹೊರೆಗೆ₹ 50ರಿಂದ ₹ 100 ಕಡಿಮೆಯಾಗಿದೆ
ಮೈನುಸಾಬ್
ಕಡಲೆ ವ್ಯಾಪಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT