ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೀಕೆ–ಟಿಪ್ಪಣಿ ರಾಜಕಾರಣ ಅಗತ್ಯವಿಲ್ಲ

Last Updated 30 ಡಿಸೆಂಬರ್ 2017, 9:01 IST
ಅಕ್ಷರ ಗಾತ್ರ

ಹಾವೇರಿ: ‘ಹಿಂದಿನ ಸಾಧನೆ ಹಾಗೂ ಮುಂದಿನ ಯೋಜನೆಗಳ ಮೂಲಕ ಚುನಾವಣೆ ಎದುರಿಸುತ್ತೇವೆಯೇ ಹೊರತು, ಪ್ರತಿನಿತ್ಯ ಟೀಕೆ ಟಿಪ್ಪಣಿಯ ರಾಜಕಾರಣ ಮಾಡುವುದಿಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜೆಡಿಎಸ್‌ಗೆ 2004 ಮತ್ತು 2008ಕ್ಕಿಂತ ಈಗ ಉತ್ತಮ ವಾತಾವರಣ ಇದೆ. ಕಳೆದ ಬಾರಿ ಕೆಜೆಪಿಯಿಂದ ಸ್ವಲ್ಪ ಮತಗಳ ನಷ್ಟ ಉಂಟಾಗಿತ್ತು. ಈ ಬಾರಿ ನಮ್ಮ ಮತ ಪ್ರಮಾಣವು ಶೇ 10ರಿಂದ 12 ಹೆಚ್ಚಲಿದೆ. ಎರಡೂ ರಾಷ್ಟ್ರೀಯ ಪಕ್ಷಗಳಿಂದ ಬೇಸತ್ತ ಜನರು ಇತ್ತ ಬರುತ್ತಿದ್ದಾರೆ’ ಎಂದರು.

‘ಸದ್ಯ ಯಾರಿಗೂ ಬಹುಮತ ಬಾರದ ಪರಿಸ್ಥಿತಿ ಇದೆ. ನಾವು ಕಿಂಗ್ ಆಗಲು ಹೊರಟಿದ್ದೇವೆ. ಅನಿವಾರ್ಯತೆ ಎದುರಾದರೆ ‘ಕಿಂಗ್ ಮೇಕರ್’ ಕೂಡಾ ಆಗುತ್ತೇವೆ’ ಎಂದ ಅವರು, ‘ ಜನತಾ ಪರಿವಾರ ಒಂದುಗೂಡಿಸಲು ಅಂದು ಪ್ರಯತ್ನಿಸಿದ್ದೆವು. ಅದರ ಪ್ರತಿಫಲ ಈಗ ಸಿಗುತ್ತಿದೆ’ ಎಂದರು.
‘ಬೇರೆ ಪಕ್ಷಕ್ಕೆ ಹೋದ ಶಾಸಕರು ಜೆಡಿಎಸ್‌ಗೆ ವಾಪಾಸ್ ಬಾರದೇ ಇರಬಹುದು, ಆದರೆ, ಹಳೇ ಮಂದಿ ನಮ್ಮ ಜೊತೆ ಬರುತ್ತಾರೆ’ ಎಂದರು.

ಚುನಾವಣೆಯಲ್ಲಿ ವ್ಯಕ್ತಿ, ಧ್ಯೇಯೋದ್ದೇಶ, ಜಾತಿ, ಹಣ ಎಲ್ಲವೂ ಮುಖ್ಯ ಎಂಬುದು ಕಡು ಸತ್ಯ. ಆದರೆ, ಜನತೆ ಬುದ್ಧಿವಂತರು. ಸ್ಪಷ್ಟ ನಿರ್ಧಾರ ನೀಡುತ್ತಾರೆ’ ಎಂದ ಅವರು, ‘ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಿಲ್ಲ. ಅದು, ಪ್ರಾದೇಶಿಕ ಪಕ್ಷದ ನೆಲೆಗೆ ಬಂದಿರುವುದನ್ನು ಸಿದ್ದರಾಮಯ್ಯ ಒಪ್ಪಿಕೊಳ್ಳುತ್ತಾರೆ’ ಎಂದರು.

‘ಕುಣಿಯಲು ಬಾರದವ ನೆಲ ಸರಿ ಇಲ್ಲ’ ಎಂದು ಹೇಳಿದಂತೆ, ಯಡಿಯೂರಪ್ಪ ಮಹದಾಯಿ ವಿಚಾರದಲ್ಲಿ ನಾಟಕ ಮಾಡುತ್ತಿದ್ದಾರೆ. ಯಡಿಯೂರಪ್ಪ ವಚನ ಭ್ರಷ್ಟರಾಗಿದ್ದಾರೆ. ಬಿಜೆಪಿ –ಕಾಂಗ್ರೆಸ್‌ ಕೆಸರೆರಚಾಟ ಮಾಡುತ್ತಿದೆ ಎಂದರು.

ರಾಜಕಾರಣಿಗಳಿಗೆ ಕನಿಷ್ಠ ‘ಕಾಮನ್‌ ಸೆನ್ಸ್‌’ ಇರಬೇಕು. ಶೇ 90ರಷ್ಟಾದರೂ ಮಾತಿಗೆ ಬದ್ಧರಾಗಬೇಕು. ‘ಹೋಲ್‌ ಸೇಲ್’ ಆಗಿ ತಮ್ಮನ್ನು ತಾವೇ ಮಾರಾಟ ಮಾಡಿಕೊಳ್ಳಬಾರದು ಎಂದು ವಾಗ್ದಾಳಿ ನಡೆಸಿದರು.

ಪ್ರತಿನಿತ್ಯ ಗಲಾಟೆ ಸೃಷ್ಟಿಸುವುದು, ಸಣ್ಣ ಸಮುದಾಯಗಳನ್ನು ವಿರೋಧಿಸಿ ಓಟು ಪಡೆಯುವುದು ಸದುದ್ದೇಶವಲ್ಲ. ಜನ ಬುದ್ಧಿವಂತರು ಸೂಕ್ತ ಉತ್ತರ ನೀಡುತ್ತಾರೆ ಎಂದರು. ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಬೇವಿನಮರದ, ಮುಖಂಡರಾದ ಡಾ. ಸಂಜಯ ಡಾಂಗೆ, ಶ್ರೀಪಾದ ಸಾವುಕಾರ, ಸಿದ್ದಪ್ಪ ಯಾದವ್ ಇದ್ದರು.

ಸಂಕ್ರಾಂತಿ ಬಳಿಕ ಕುಮಾರಸ್ವಾಮಿ ಜಿಲ್ಲೆಗೆ

‘ಅಶೋಕ ಬೇವಿನಮರದ (ಸವಣೂರ–ಶಿಗ್ಗಾವಿ), ಡಾ. ಸಂಜಯ ಡಾಂಗೆ (ಹಾವೇರಿ), ಶ್ರೀಪಾದ ಸಾವುಕಾರ (ರಾಣೆಬೆನ್ನೂರು) ಅವರನ್ನು ಜೆಡಿಎಸ್ ಅಭ್ಯರ್ಥಿಗಳು ಎಂದು ನಿರ್ಧರಿಸಲಾಗಿದೆ. ಇದಕ್ಕೆ ಪಕ್ಷದ ಕೋರ್ ಸಮಿತಿ ಒಪ್ಪಿಗೆ ಸಿಗಬೇಕಾಗಿದೆ’ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಹೇಳಿದರು.
ಕುಮಾರಸ್ವಾಮಿ:
ಮಕರ ಸಂಕ್ರಾಂತಿಯ ಬಳಿಕ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರ ಸ್ವಾಮಿ ಬೆಳಗಾವಿ ವಿಭಾಗದಲ್ಲಿ ಪ್ರವಾಸ ಮಾಡುತ್ತಾರೆ. ಆಗ ಒಂದೂವರೆ ದಿನ ಜಿಲ್ಲೆಯ ಆರು ಕ್ಷೇತ್ರಗಳಿಗೂ ಭೇಟಿ ನೀಡುತ್ತಾರೆ ಎಂದು ಹೊರಟ್ಟಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT