7

ಮಾಜಿ ಸೈನಿಕರು ಬಿಜೆಪಿ ಪ್ರಕೋಷ್ಠಕ್ಕೆ ಸೇರಿ

Published:
Updated:

ಮಡಿಕೇರಿ: ಸಂಘಟನೆಗಳಿಗೆ ರಾಜಕೀಯ ಶಕ್ತಿ ತುಂಬಿದಲ್ಲಿ ಮಾತ್ರ ಹೆಚ್ಚು ಪರಿಣಾಮಕಾರಿಯಾಗಿ ಬೆಳೆಯಲು ಸಾಧ್ಯ. ಆ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲ ಮಾಜಿ ಸೈನಿಕರು ಬಿಜೆಪಿ ಸೈನಿಕ ಪ್ರಕೋಷ್ಠಕ್ಕೆ ಸೇರಿಕೊಳ್ಳಬೇಕು ಎಂದು ಶಾಸಕ ಕೆ.ಜಿ.ಬೋಪಯ್ಯ ಮನವಿ ಮಾಡಿದರು. ನಗರದ ಬಾಲಭವನದಲ್ಲಿ ಶುಕ್ರವಾರ ಬಿಜೆಪಿ ಸೈನಿಕ ಪ್ರಕೋಷ್ಠದ ವತಿಯಿಂದ ‘ಸೈನಿಕರ ಮನೆ ಮನೆಗೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಇಂದು ಪ್ರತಿಯೊಬ್ಬರೂ ಸಂಘಟನೆಯೊಂದಿಗೆ ಬೆಳೆಯುವುದು ಅನಿವಾರ್ಯವಾಗಿದೆ. ಜಿಲ್ಲೆಯಲ್ಲಿ ಸಾಕಷ್ಟು ಮಾಜಿ ಸೈನಿಕರು ಹಾಗೂ ಅವರ ಕುಟುಂಬಸ್ಥರು ನೆಲೆಸಿದ್ದಾರೆ. ಅವರಿಗೆ ಸರ್ಕಾರದಿಂದ ಕೊಡುವ ಸವಲತ್ತುಗಳ ಬಗ್ಗೆ ತಿಳಿಹೇಳುವುದರ ಜತೆಗೆ ಜೀವನ ನಿರ್ವಹಣೆಗೆ ಬೇಕಾದ ಭದ್ರತೆಯ ವಿವರಣೆ ಕೊಡುವುದಕ್ಕಾಗಿ ಸೈನಿಕ ಪ್ರಕೋಷ್ಠದ ಸದಸ್ಯರು ಸೈನಿಕರ ಮನೆಗಳಿಗೆ ತೆರಳಬೇಕು ಎಂದು ಕರೆ ನೀಡಿದರು.

ಸೈನಿಕರ ಸಮಸ್ಯೆಗಳನ್ನು ಆಲಿಸಿ: ಮಾಜಿ ಸೈನಿಕರ ಸಮಸ್ಯೆಗಳನ್ನು ಆಲಿಸುವುದರೊಂದಿಗೆ, ಪ್ರಕೋಷ್ಠಕ್ಕೆ ಸೇರ ಬಯಸುವ ಸೈನಿಕರಿಂದ ಮಾರ್ಗದರ್ಶನ ಪಡೆಯಬೇಕು. ‘ಒನ್ ರ‍್ಯಾಂಕ್‌ ಒನ್ ಪೆನ್ಶನ್‌’ ಸೌಲಭ್ಯಗಳ ಬಗ್ಗೆ ತಿಳಿಸಲು ಪ್ರಕೋಷ್ಠ ಕೆಲಸ ಮಾಡಬೇಕು. ಮಾಜಿ ಸೈನಿಕರಿಗೆ ಸರ್ಕಾರಿ ಭೂಮಿ ಕೊಡುವ ವ್ಯವಸ್ಥೆ ಆಗಬೇಕು. ಜತೆಗೆ ಆಸ್ಪತ್ರೆ, ಕ್ಯಾಂಟೀನ್, ನಿವೇಶನ ಸೌಲಭ್ಯ ಒದಗಿಸಬೇಕು ಎಂದು ಸಲಹೆ ಮಾಡಿದರು.

4 ಸಾವಿರ ಹಕ್ಕು ಪತ್ರ ರದ್ದು: ಜಿಲ್ಲೆಯಲ್ಲಿ ಕಾಂಗ್ರೆಸ್‌ ಸರ್ಕಾರದ ಅಧಿಕಾರದ ಅವಧಿಯಲ್ಲಿ 4,000 ಹಕ್ಕುಪತ್ರ ರದ್ದಾಗಿರುವುದು ನೋವಿನ ಸಂಗತಿ. ಇದರಿಂದ ಭೂಮಿ ಆಕಾಂಕ್ಷಿಗಳಿಗೆ ತೀವ್ರ ನಿರಾಸೆ ಉಂಟಾಗಿದೆ ಎಂದು ಬೋಪಯ್ಯ ಹೇಳಿದರು.

ವಿಧಾನ ಪರಿಷತ್‌ ಸದಸ್ಯ ಸುನೀಲ್ ಸುಬ್ರಮಣಿ ಮಾತನಾಡಿ, ಜಿಲ್ಲೆಯಲ್ಲಿ ಸೈನಿಕರ ಕಲ್ಯಾಣ ಇಲಾಖೆ ಸೇರಿದಂತೆ ಮಾಜಿ ಸೈನಿಕರ ಸಂಘಗಳು ಕಾರ್ಯ ನಿರ್ವಹಿಸುತ್ತಿವೆ. ಆದರೂ, ಸೌಲಭ್ಯಗಳ ಬಗೆಗಿನ ಮಾಹಿತಿ ಕೊರತೆ ಸೈನಿಕರಲ್ಲಿ ಎದ್ದು ಕಾಣುತ್ತಿದೆ. ವಿಶೇಷವಾಗಿ ಗ್ರಾಮೀಣ ಭಾಗದ ಕಡೆಗೆ ಪ್ರಕೋಷ್ಟದ ಕಾರ್ಯಕರ್ತರು ಗಮನ ಹರಿಸಿ ಕೇಂದ್ರ ಸರ್ಕಾರದಿಂದ ಸೈನಿಕರಿಗೆ ಸಿಗುವ ಸೌಲಭ್ಯಗಳ ಬಗ್ಗೆ ತಿಳಿಸಬೇಕು ಎಂದು ಹೇಳಿದರು.

ಶಾಸಕ ಅಪ್ಪಚ್ಚು ರಂಜನ್‌ ಮಾತನಾಡಿದರು. ಬಿಜೆಪಿ ಸೈನಿಕ ಪ್ರಕೋಷ್ಠದ ಜಿಲ್ಲಾ ಸಂಚಾಲಕ ಒ.ಎಸ್. ಚಿಂಗಪ್ಪ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ.ಹರೀಶ್, ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್‌, ರಾಜ್ಯ ಕಾರ್ಯದರ್ಶಿ ಮನುಮುತ್ತಪ್ಪ ಹಾಜರಿದ್ದರು.

* * 

ಪಕ್ಷ ಜಿಲ್ಲೆಯಲ್ಲಿ ಬಲಶಾಲಿಯಾಗಿ ಬೆಳೆಯುತ್ತಿದೆ. ವಕೀಲ, ವೈದ್ಯಕೀಯ, ಶಿಕ್ಷಕ, ಸಾಹಿತ್ಯ ಪ್ರಕೋಷ್ಟಗಳ ಸಾಲಿಗೆ ಇಂದು ಸೈನಿಕ ಪ್ರಕೋಷ್ಟ ಸೇರಿಕೊಂಡಿದೆ

ಬಿ.ಬಿ. ಭಾರತೀಶ್

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry