7

ಹೋರಾಟದ ಕಾವು: ಬೆಳೆಗಾರರ ನೋವು

Published:
Updated:
ಹೋರಾಟದ ಕಾವು: ಬೆಳೆಗಾರರ ನೋವು

ಮಡಿಕೇರಿ: 2017– ಕೊಡಗು ಜಿಲ್ಲೆಯು ಹಲವು ಘಟನೆಗಳಿಗೆ ಸಾಕ್ಷಿಯಾದ ವರ್ಷ. ಕೆಲವು ಕ್ಷೇತ್ರಕ್ಕೆ ನೋವು ತಂದರೆ, ಮತ್ತೆ ಕೆಲವು ಕ್ಷೇತ್ರಕ್ಕೆ ನಿರಾಸೆಯಂತೂ ಆಗದ ವರ್ಷ.

ವರ್ಷದ ಆರಂಭದಲ್ಲಿಯೇ ಕುಶಾಲನಗರದಲ್ಲಿ 11ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸುವ ಮೂಲಕ ಹಲವು ಕನ್ನಡ ಹಬ್ಬಕ್ಕೆ ಮುನ್ನುಡಿ ಬರೆಯಲಾಯಿತು. ಇನ್ನು ಮಾಜಿ ಸೈನಿಕರು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬೀದಿಗೆ ಇಳಿದಿದ್ದರು. ಪರಿಸರ ಸಂಘಟನೆಗಳು ಕಾವೇರಿ ನದಿ ಹಾಗೂ ಪರಿಸರ ಉಳಿಸಲು ಚಳವಳಿ ನಡೆಸಿದರು. ಮತ್ತೊಂದೆಡೆ ದಿಡ್ಡಳ್ಳಿ ನಿರಾಶ್ರಿತರ ನೋವು ನಾಲ್ಕೈದು ತಿಂಗಳು ಹಾಗೆಯೇ ಇತ್ತು. ಕೊನೆಗೆ ಪರ್ಯಾಯ ಸ್ಥಳಕ್ಕೆ ತೆರಳುವ ಮೂಲಕ ಸುಖಾಂತ್ಯ ಕಂಡಿತು.

ಹುಲಿ ಹಾಗೂ ಕಾಡಾನೆಗಳ ಸರಣಿ ಸಾವಿನಂತಹ ಕಹಿ ಘಟನೆಗಳು ನಡೆದವು. ಕಾಳುಮೆಣಸು ಕಲಬೆರಕೆ ಪ್ರಕರಣ ಬೆಳಕಿಗೆ ಬಂತು. ಕಾಳುಮೆಣಸು ದರ ಕುಸಿಯಿತು; ಆಕ್ರೋಶಗೊಂಡ ಕಾಫಿ ಬೆಳೆಗಾರರು ಪ್ರತಿಭಟನೆಯ ಹಾದಿ ತುಳಿದರು. ಡಿವೈಎಸ್‌ಪಿ ಎಂ.ಕೆ. ಗಣಪತಿ ಸಾವು ಪ್ರಕರಣವು ಈ ವರ್ಷವೂ ತಾರ್ಕಿಕ ಅಂತ್ಯ ಕಾಣಲಿಲ್ಲ. ಮಡಿಕೇರಿಯ ಲಾಡ್ಜ್‌ನಲ್ಲಿ ಬುಲೆಟ್‌ ಸಿಗುವ ಮೂಲಕ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿತು.

ಕಾವೇರಿ ಹಾಗೂ ಪೊನ್ನಂಪೇಟೆ ತಾಲ್ಲೂಕು ರಚನೆಗೆ ಆಗ್ರಹಿಸಿ ಚಳವಳಿ, ಪ್ರತಿಭಟನೆಗೆ ಗಡಿಭಾಗದ ಹೋಬಳಿಗಳು ಸಾಕ್ಷಿಯಾದವು. ಕಾಡಾನೆ– ಮಾನವ ಸಂಘರ್ಷವೂ ಇತ್ತು. ರಕ್ಷಿತ್ ಶೆಟ್ಟಿ– ರಶ್ಮಿಕಾ ಮಂದಣ್ಣ ಅವರ ನಿಶ್ಚಿತಾರ್ಥ ನಡೆದರೆ, ನಟಿ ಸಿಂಧು, ಬ್ಯಾಡ್ಮಿಂಟನ್‌ ಆಟಗಾರ್ತಿ ಅಶ್ವಿನಿ ಪೊನ್ನಪ್ಪ ಅವರ ವಿವಾಹ ನಡೆಯಿತು.

ಕಾಂಗ್ರೆಸ್‌ ಹಾಗೂ ಬಿಜೆಪಿಗೆ ನೂತನ ಸಾರಥಿಗಳ ನೇಮಕ ಮಾಡಿದ್ದು ರಾಜಕೀಯ ಸಂಚಲನಕ್ಕೆ ಕಾರಣವಾಯಿತು. ಜಿಲ್ಲಾಧಿಕಾರಿ ಬದಲಾದರು; ಸಿಇಒ ವರ್ಗವಾದರೂ ಅವರ ಸ್ಥಾನಕ್ಕೆ ಯಾರೂ ಬರಲಿಲ್ಲ. ಜಿಲ್ಲೆಯಲ್ಲಿ ನಡೆದ ಪ್ರಮುಖ ವಿದ್ಯಮಾನಗಳ ವಿವರ ಈ ಕೆಳಕಂಡಂತೆ ಇದೆ.

ಜನವರಿ: ಮಾಜಿ ಸೈನಿಕರ ಆಕ್ರೋಶಕ್ಕೆ ವೇದಿಕೆ

8: ವಿರಾಜಪೇಟೆ ತಾಲ್ಲೂಕು ಗೋಣಿಕೊಪ್ಪಲು ಸಮೀಪದ ಕಾಲ್ಸ್‌ ಶಾಲೆಗೆ ಕೇಂದ್ರ ಯುವಜನ ಹಾಗೂ ಕ್ರೀಡಾ ಸಚಿವ ವಿಜಯ್‌ ಗೋಯಲ್‌ ಭೇಟಿ, ಅಥ್ಲೆಟಿಕ್‌ ಸೆಂಟರ್‌ ಉದ್ಘಾಟನೆ.

10: ಕೊಡಗಿನ ಹೆಬ್ಬಾಗಿಲು ಕುಶಾಲನಗರದಲ್ಲಿ 11ನೇ ಕನ್ನಡ ಸಾಹಿತ್ಯ ಸಮ್ಮೇಳನವು ಅದ್ಧೂರಿಯಿಂದ ನೆರವೇರಿತು. ಸಮ್ಮೇಳನಕ್ಕೆ ಸಾವಿರಾರು ಸಾಹಿತ್ಯ ಪ್ರೇಮಿಗಳು ಸಾಕ್ಷಿಯಾಗಿದ್ದು ವಿಶೇಷ.

16: ನಗರಸಭೆ ಸ್ಥಾಯಿ ಸಮಿತಿ ಚುನಾವಣೆ: ಬಿಜೆಪಿಗೆ ಗೆಲುವು. ಅದೇ ದಿವಸ ಶಾಸಕ ಆರ್‌. ಅಶೋಕ್‌ ನೇತೃತ್ವದಲ್ಲಿ ಬಿಜೆಪಿ ಬರ ಪರಿಶೀಲನಾ ತಂಡವು ಜಿಲ್ಲೆಗೆ ಭೇಟಿ ನೀಡಿತ್ತು.

18: ನಗರಸಭೆ ಸ್ಥಾಯಿ ಸಮಿತಿ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲಿನ ಹಿನ್ನೆಲೆಯಲ್ಲಿ ಗದ್ದಲ, ಆಸನ ಪ್ರಹಸನ ನಡೆದಿತ್ತು. ಸದಸ್ಯರಾದ ವೀಣಾಕ್ಷಿ, ಶ್ರೀಮತಿ ಬಂಗೇರಾ ವಿರುದ್ಧ ಆಕ್ರೋಶ ಸ್ಫೋಟಗೊಂಡಿತ್ತು.

20: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಡಿಕೇರಿಯಲ್ಲಿ ಮಾಜಿ ಸೈನಿಕರ ಸಂಘದ ನೇತೃತ್ವದಲ್ಲಿ ಬೃಹತ್‌ ಪ್ರತಿಭಟನೆ ನಡೆಯಿತು.

22: ನಿಟ್ಟೂರಿನ ಲಕ್ಷ್ಮಣ ತೀರ್ಥಹೊಳೆಯ ಕೆರೆಯಲ್ಲಿ ಮುಳ್ಳುಹಂದಿಯ ಮುಳ್ಳು ಚುಚ್ಚಿ ಹುಲಿಯೊಂದು ಸಾವನ್ನಪ್ಪಿತ್ತು.

26: ನಾಗರಹೊಳೆ ವ್ಯಾಪ್ತಿಯಲ್ಲಿ ಕಾಳ್ಗಿಚ್ಚು ಕಾಣಿಸಿಕೊಂಡಿದ್ದು, ನೂರಾರು ಎಕರೆ ಅರಣ್ಯ ನಾಶವಾಯಿತು.

28: ಫೀಲ್ಡ್‌ ಮಾರ್ಷಲ್‌ ಕೆ.ಎಂ. ಕಾರ್ಯಪ್ಪ ಅವರ 118ನೇ ಜನ್ಮದಿನಾಚರಣೆ; ಸೇನಾಧಿಕಾರಿ ಎಸ್‌.ವಿ. ಭೋಕರೆ ಭಾಗಿ.

29: ಗೋಣಿಕೊಪ್ಪಲು ವ್ಯಾಪ್ತಿಯಲ್ಲಿ ಹೆಣ್ಣು ಹುಲಿಯೊಂದು ಸಾವನ್ನಪ್ಪಿದ್ದು ಪರಿಸರ ಪ್ರಿಯರ ಆತಂಕಕ್ಕೆ ಕಾರಣವಾಗಿತ್ತು.

30: ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಚುಮ್ಮಿ ದೇವಯ್ಯ ಅಧಿಕಾರ ಸ್ವೀಕರಿಸಿದರು.

ಫೆಬ್ರುವರಿ; ನಾಲ್ಕು ಸಾಕಾನೆ ರವಾನೆ

12: ದಿಡ್ಡಳ್ಳಿ ಹೋರಾಟದ ಸ್ಥಳಕ್ಕೆ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ ಭೇಟಿ ನೀಡಿ ನಿರಾಶ್ರಿತರಿಗೆ ಶಕ್ತಿ ತುಂಬಿದರು.

18: ನಗರಸಭೆಯಲ್ಲಿ ಬಜೆಟ್ ಮಂಡನೆ

20: ಉತ್ತರಾಖಂಡ್‌ಗೆ ಮತ್ತಿಗೋಡು ಶಿಬಿರದಿಂದ ನಾಲ್ಕು ಸಾಕಾನೆ ಕಳುಹಿಸಲಾಯಿತು.

ಮಾರ್ಚ್‌: ಫಲಪುಷ್ಪ ಪ್ರದರ್ಶನ ಅವ್ಯವಹಾರ ಬೆಳಕಿಗೆ

1: ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಯ ವೇಳೆ ವಿಪ್‌ ಉಲ್ಲಂಘನೆ: ಸದಸ್ಯರಾದ ಶ್ರೀಮತಿ ಬಂಗೇರಾ ಹಾಗೂ ವೀಣಾಕ್ಷಿ ಅವರ ಸದಸ್ಯತ್ವ ಅನರ್ಹಗೊಳಿಸಿ ಜಿಲ್ಲಾಧಿಕಾರಿ ನ್ಯಾಯಾಲಯ ಆದೇಶ.

3: ಜಿಲ್ಲೆಯ 40 ಹಳ್ಳಿಗಳನ್ನು ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿಗೆ ಸೇರಿಸಿ ಕೇಂದ್ರ ಸರ್ಕಾರವು ಕರಡು ಅಧಿಸೂಚನೆ ಹೊರಡಿಸಿತು. ಜಿಲ್ಲೆಯಲ್ಲಿ ಭಾರೀ ವಿರೋಧ ವ್ಯಕ್ತವಾಯಿತು.

8: ಮನು ಮುತ್ತಪ್ಪ ಅವರನ್ನು ಮಧ್ಯಂತರದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಹುದ್ದೆಯಿಂದ ತೆಗೆದು ಬಿ.ಬಿ. ಭಾರತೀಶ್‌ ಅವರನ್ನು ನೇಮಕ ಮಾಡಲಾಯಿತು.

8: ರಾಜಾಸೀಟ್‌ನಲ್ಲಿ ಫಲಪುಷ್ಪ ಪ್ರದರ್ಶನದ ಹೆಸರಿನಲ್ಲಿ ಅವ್ಯವಹಾರ ಬೆಳಕಿಗೆ ಬಂತು.

15: ರಾಜ್ಯ ಬಜೆಟ್‌ ಮಂಡನೆಯಾದ ದಿವಸ. ಕುಶಾಲನಗರ ಹಾಗೂ ಪೊನ್ನಂಪೇಟೆಯನ್ನು ತಾಲ್ಲೂಕು ಕೇಂದ್ರವಾಗಿ ಘೋಷಣೆಯಾಗಲಿದೆ ಎಂದು ಭಾವಿಸಲಾಗಿತ್ತು. ಆದರೆ, ಎರಡು ಹೆಸರೂ ಪ್ರಸ್ತಾಪವಾಗಲಿಲ್ಲ.

17: ಮಡಿಕೇರಿಯಲ್ಲಿ ಕಾಡಿನ ಮಕ್ಕಳ ರೇಡಿಯೊ ಹಬ್ಬದ ಸಂಭ್ರಮ

ಏಪ್ರಿಲ್‌: ದಿಡ್ಡಳ್ಳಿ ಪ್ರಕರಣ ಸುಖಾಂತ್ಯ

4: ಡಿವೈಎಸ್‌ಪಿ ಆತ್ಮಹತ್ಯೆ ಪ್ರಕರಣ: ಖಾಸಗಿ ದೂರಿಗೆ ಮರುಜೀವ, ಸಿಐಡಿ ರಿಪೋರ್ಟ್‌ಗೆ ಆಕ್ಷೇಪಣೆ ಸಲ್ಲಿಸಲು ಕುಟುಂಬದ ನಾಲ್ವರಿಗೆ ಮಡಿಕೇರಿ ಜೆಎಂಎಫ್‌ಸಿ ನ್ಯಾಯಾಲಯ ಅವಕಾಶ.

7: ದಿಡ್ಡಳ್ಳಿಗೆ ಗುಜರಾತಿನ ಸಾಮಾಜಿಕ ಹೋರಾಟಗಾರ ಜಿಗ್ನೇಶ್‌ ಮೇವಾನಿ ಭೇಟಿ ನೀಡಿ, ನಿರಾಶ್ರಿತ ಆದಿವಾಸಿಗಳ ಹೋರಾಟಕ್ಕೆ ಬೆಂಬಲ.

9: ಕಾಡಾನೆ ದಾಳಿಗೆ ಸುಂಟಿಕೊಪ್ಪ ಸಮೀಪದ ಹೊಸಕೋಟೆಯಲ್ಲಿ ಮಹಿಳೆ ಬಲಿ.

12: ದಿಡ್ಡಳ್ಳಿ ಗುಡಿಸಲೊಂದರ ಮೇಲೆ ಗುಂಡಿನ ದಾಳಿ ನಡೆದಿತ್ತು. ದಾಳಿಯಿಂದ ನಿರಾಶ್ರಿತರು ಆತಂಕಗೊಂಡಿದ್ದರು.

17: ನಾಪೋಕ್ಲು ಮೈದಾನದಲ್ಲಿ 21ನೇ ಕೊಡವ ಕುಟುಂಬಗಳ ಹಾಕಿ ನಮ್ಮೆ ಆರಂಭ.

21: ಮಡಿಕೇರಿಯ ಜನರಲ್‌ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಪೈಕೇರ ಕ್ರಿಕೆಟ್‌ ಜಂಬರಕ್ಕೆ ಚಾಲನೆ.

22: ವಿರಾಜಪೇಟೆ ತಾಲ್ಲೂಕಿನ ಅಮ್ಮತ್ತಿಯಲ್ಲಿ ನಡೆದ ರೇಸ್‌ನಲ್ಲಿ ಪಾಲ್ಗೊಂಡಿದ್ದ ಮಾಲೀಕಯ್ಯ ಗುತ್ತೇದಾರ್‌ ಪುತ್ರ ರಿತೇಶ್‌ ಗುತ್ತೇದಾರ್‌ ಚಲಾಯಿಸುತ್ತಿದ್ದ ಕಾರು ಪಲ್ಟಿಯಾಗಿತ್ತು. ಅಪಾಯದಿಂದ ಪಾರಾಗಿದ್ದರು.

24: ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ಭಾಗಮಂಡಲದ ಚೇರಂಗಾಲದಲ್ಲಿ ಗುಂಡಿನ ದಾಳಿ ನಡೆದು ಅಮರಾವತಿ ಎಂಬ ಮಹಿಳೆ ಮೃತಪಟ್ಟಿದ್ದರು.

26: ಆದಾಯ ತೆರಿಗೆಯ ಇಲಾಖೆಯ ಅಧಿಕಾರಿಗಳು ದಿಬ್ಬಣದ ಸೋಗಿನಲ್ಲಿ ಕುಶಾಲನಗರದ ಎಸ್‌ಎಲ್‌ಎನ್‌ ಗ್ರೂಪ್‌ ಮೇಲೆ ದಾಳಿ ನಡೆಸಿದ್ದರು. ಎರಡು ದಿನ ಕಾರ್ಯಾಚರಣೆ ನಡೆದಿತ್ತು.

28: ಐದು ತಿಂಗಳ ಕಾಲ ಜಿಲ್ಲೆಯಲ್ಲಿ ನಡೆದ ದಿಡ್ಡಳ್ಳಿ ಬಿಕ್ಕಟ್ಟು ಕೊನೆಗೂ ಇತ್ಯರ್ಥವಾಯಿತು. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದಿದ್ದ ಸಭೆಯಲ್ಲಿ ನಿರಾಶ್ರಿತರ ಒಂದು ಗುಂಪಿನವರು ಪರ್ಯಾಯ ಸ್ಥಳಕ್ಕೆ ತೆರಳಲು ಒಪ್ಪಿಗೆ ನೀಡುವ ಮೂಲಕ ಪ್ರಕರಣ ಸುಖಾಂತ್ಯ ಕಂಡಿತು.

ಮೇ: ಕ್ರೀಡಾ ಹಬ್ಬಗಳಿಗೆ ತೆರೆ

1: ಕುಶಾಲನಗರದ ಸಂತ ಸೆಬಾಸ್ಟಿಯನ್ನರ ದೇವಾಲಯ ಲೋಕಾರ್ಪಣೆ.

3: ತೆರವು ಸ್ಥಳದಲ್ಲೇ ಗುಡಿಸಲು ನಿರ್ಮಾಣ ಮಾಡಿದ್ದ ಕಾರಣಕ್ಕೆ ದಿಡ್ಡಳ್ಳಿಯಲ್ಲಿ ಸಂಘರ್ಷದ ವಾತಾವರಣ ನಿರ್ಮಾಣವಾಗಿತ್ತು. ಮತ್ತೊಂದೆಡೆ ಕ್ರಿಕೆಟ್‌ ಸ್ಟೇಡಿಯಂ ನಿರ್ಮಾಣದ ವಿರುದ್ಧ ಪಾಲೇಮಾಡು ನಿವಾಸಿಗಳು ಬೃಹತ್‌ ಪ್ರತಿಭಟನೆ ನಡೆಸಿದರು.

4: ದಿಡ್ಡಳ್ಳಿಯಲ್ಲೇ ಆಶ್ರಯ ಕಲ್ಪಿಸಬೇಕು ಎಂದು ಹೋರಾಟಗಾರ್ತಿ ಮುತ್ತಮ್ಮ ಮರವೇರಿ ಪ್ರತಿಭಟನೆ ನಡೆಸಿದರು.

7: ಪೈಕೇರ ಕಪ್‌ಗೆ ತೆರೆ; ತಳೂರು ತಂಡಕ್ಕೆ ಪ್ರಶಸ್ತಿ.

11: ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪ್ರೊ.ಎಸ್‌.ಜಿ. ಸಿದ್ದರಾಮಯ್ಯ ಭೇಟಿ, ಅಧಿಕಾರಿಗಳೊಂದಿಗೆ ಸಭೆ. ಪಿಯುಸಿ ಫಲಿತಾಂಶ ಪ್ರಕಟವಾದ ದಿನ. ಜಿಲ್ಲೆಯು ಯಥಾಸ್ಥಿತಿ ಕಾಪಾಡಿಕೊಂಡಿತು (ರಾಜ್ಯದಲ್ಲಿ 3ನೇ ಸ್ಥಾನ).

12: ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟವಾದ ದಿನ. ಜಿಲ್ಲೆಯು 9 ಸ್ಥಾನ ಮೇಲೇರುವ ಮೂಲಕ ಮೆಚ್ಚುಗೆಗೆ ಪಾತ್ರವಾಯಿತು.

12: ಗೋಣಿಕೊಪ್ಪಲಿನಲ್ಲಿ ಕಾಡಾನೆ ಸಾವು.

14: ಬಿದ್ದಾಟಂಡ ಹಾಕಿ ಉತ್ಸವಕ್ಕೆ ತೆರೆ; ಚೇಂದಂಡ ತಂಡಕ್ಕೆ ಚಾಂಪಿಯನ್‌ ಪಟ್ಟ

18: ಕೊಡಗು ಜಿಲ್ಲೆಯಲ್ಲಿ ಆನೆ ಗಣತಿ ಆರಂಭಗೊಂಡಿತು. ಮೊದಲ ದಿನವೇ ಗಣತಿದಾರರಿಗೆ ನೂರಕ್ಕೂ ಹೆಚ್ಚು ಕಾಡಾನೆಗಳು ಕಣ್ಣಿಗೆ ಬಿದ್ದಿದ್ದವು.

20: ತೋಟಗಾರಿಕೆ ಬೆಳೆಗಳ ರಾಷ್ಟ್ರೀಯ ಸಮ್ಮೇಳನ ಆರಂಭ, ಬೆಳೆಗಳ ವಿಸ್ತೃತ ಚರ್ಚೆ.

20: ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷೆ ಡಾ.ಆರತಿ ಕೃಷ್ಣ ಅವರು ಮಡಿಕೇರಿಗೆ ಭೇಟಿ, ಅಧಿಕಾರಿಗಳೊಂದಿಗೆ ಚರ್ಚೆ.

24: ಕಾಂಗ್ರೆಸ್‌ ಅಧ್ಯಕ್ಷರ ನೇಮಕಾತಿಯಲ್ಲಿ ಗೊಂದಲ, ಹಂಗಾಮಿ ಅಧ್ಯಕ್ಷರಾಗಿದ್ದ ಟಿ.ಪಿ.ರಮೇಶ್‌ ಅವರಿಗೆ ಹೈಕಮಾಂಡ್‌ ಬುಲಾವ್‌.

ಜೂನ್‌: ಪರ್ಜನ್ಯ ಹೋಮದ ವಿವಾದ

1: ಸುಪ್ರೀಂ ಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಕೊಡಗಿನ 166 ಮದ್ಯದಂಗಡಿಗಳಿಗೆ ಬೀಗ ಬಿತ್ತು.

2: ಕೊಡಗಿನ ಪರಿಸರ ರಕ್ಷಣೆಗೆ ಆಗ್ರಹಿಸಿ ವಿವಿಧ ಸಂಘಟನೆಗಳು ಮಡಿಕೇರಿಯಲ್ಲಿ ಬೃಹತ್‌ ಪ್ರತಿಭಟನೆ ನಡೆಸಿದವು.

4: ಸಾಮರಸ್ಯ ಸಂಕೇತಕ್ಕೆ ಸಾಕ್ಷಿಯಾದ ಸೋಮವಾರಪೇಟೆ ತಾಲ್ಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನ.

4: ಉತ್ತಮ ಮುಂಗಾರು ಮಳೆಗಾಗಿ ತಲಕಾವೇರಿಯಲ್ಲಿ ಸಚಿವ ಎಂ.ಬಿ. ಪಾಟೀಲ್‌ ಪರ್ಜನ್ಯ ಹೋಮ ನಡೆಸಿದ್ದು ವಿವಾದಕ್ಕೆ ಕಾರಣವಾಯಿತು.

17: ಮಡಿಕೇರಿ ತಾಲ್ಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನ.

27: ವಿದ್ಯುತ್‌ ಸ್ಪರ್ಶ: 4 ಕಾಡಾನೆಗಳ ಸಾವು, ಪರಿಸರ ಪ್ರೇಮಿಗಳ ಆತಂಕ: ಸೆಸ್ಕ್‌ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಖಂಡನೆ.

ಜುಲೈ: ರಾಜಕೀಯ ಸಂಚಲನ

1: ಕಾಂಗ್ರೆಸ್‌ ಜಿಲ್ಲಾ ಅಧ್ಯಕ್ಷರಾಗಿ ಶಿವು ಮಾದಪ್ಪ ನೇಮಕ, ಆಕಾಂಕ್ಷಿಗಳಿಗೆ ನಿರಾಸೆ.

12: ಮಡಿಕೇರಿ ನಗರಸಭೆಯ ಎಲ್‌ಇಡಿ ಟಿ.ವಿ.ಯಲ್ಲಿ ಅಶ್ಲೀಲ ದೃಶ್ಯವೊಂದು ಪ್ರಸಾರ ವಾಗಿದೆ ಎನ್ನುವ ಆರೋಪ ಕೇಳಿಬಂದಿತ್ತು.

15: ಲಕ್ಷ್ಮಣತೀರ್ಥ ನದಿ ಉಳಿಸಲು ಆರ್ಟ್‌ ಆಫ್‌ ಲಿವಿಂಗ್‌ ಸಹಭಾಗಿತ್ವದಲ್ಲಿ ಯೋಜನೆ ಸಿದ್ಧಗೊಳಿಸಿದ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ

19: ಭಾರೀ ಮಳೆ ಸುರಿದ ಪರಿಣಾಮ ಭಾಗಮಂಡಲ ಸಂಪೂರ್ಣ ಜಲಾವೃತಗೊಂಡಿತು.

20: ಕೊಡಗು ಜಿಲ್ಲೆಯಾದ್ಯಂತ ವರುಣ ಅಬ್ಬರಿಸಿದ ಪರಿಣಾಮವಾಗಿ ಕೊಣನೂರು– ಮಾಕುಟ್ಟ ಅಂತರರಾಜ್ಯ ಹೆದ್ದಾರಿ ಕುಸಿದು ಒಂದು ತಿಂಗಳು ರಸ್ತೆ ಸಂಚಾರ ಬಂದ್‌ ಆಗಿತ್ತು.

23: ಕುಶಾಲನಗರ ಸಮೀಪದ ಹಾರಂಗಿ ಜಲಾಶಯವು ಭರ್ತಿಯಾಗುವ ಮೂಲಕ ನದಿಗೆ ನೀರು ಹರಿಸಲಾಯಿತು. ಅದು ರೈತರ ಮೊಗದಲ್ಲಿ ಸಂತಸಕ್ಕೆ ಕಾರಣವಾಯಿತು.

ಆಗಸ್ಟ್‌: ರಾಜೀನಾಮೆ ಪ್ರಹಸನ

11: ಅರೆಭಾಷೆ ಸಂಸ್ಕೃತಿ ಹಾಗೂ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ ಪ್ರದಾನ ಸಮಾರಂಭ.

18: ಸ್ವಾತಂತ್ರ್ಯ ದಿನಾಚರಣೆ ವೇದಿಕೆಯ ಮೇಲೆ ವಿಧಾನ ಪರಿಷತ್ ಸದಸ್ಯೆಯೊಬ್ಬರ ಕೈಯನ್ನು ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಟಿ.ಪಿರಮೇಶ್‌ ಮುಟ್ಟಿದ ದೃಶ್ಯ ವೈರಲ್‌ ಆಗಿತ್ತು.

22: ಟಿ.ಪಿ. ರಮೇಶ್ ರಾಜೀನಾಮೆ; ಅದು ಇನ್ನೂ ಅಂಗೀಕಾರವಾಗಿಲ್ಲ.

30: ಕಕ್ಕಬ್ಬೆ ಸಮೀಪದ ದೇಗುಲದ ದ್ವಾರಕ್ಕೆ ದನದ ಕಾಲು ನೇತು ಹಾಕಿದ ಪ್ರಕರಣವು ಬೆಳಕಿಗೆ ಬಂದಿತು. ಇದು ಜಿಲ್ಲೆಯಲ್ಲಿ ಪ್ರತಿಭಟನೆಗೆ ಕಾರಣವಾಯಿತು.

ಸೆಪ್ಟೆಂಬರ್‌: ಗಣಪತಿ ಪ್ರಕರಣದ ಸಂಚಲನ

1: ಜಿಲ್ಲೆಯ ವಿವಿಧೆಡೆ ಕೈಲ್‌ ಪೊಳ್ದ್ ಸಂಭ್ರಮ

4: ಡಿವೈಎಸ್‌ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಿದ ಹಿನ್ನೆಲೆಯಲ್ಲಿ ಕೊಡಗಿನಲ್ಲೂ ಮತ್ತೆ ಸಂಚಲನಕ್ಕೆ ಕಾರಣವಾಯ್ತು.

8: ತಮಿಳುನಾಡಿನ 18 ಬಂಡಾಯ ಶಾಸಕರು ಕೊಡಗಿಗೆ ಆಗಮನ.

21: ಮಡಿಕೇರಿ ದಸರಾಕ್ಕೆ ವೈಭವದ ಚಾಲನೆ.

22: ಮಡಿಕೇರಿ ಜನೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ.

30: ದಸರಾ ಶೋಭಾಯಾತ್ರೆಯ ವೈಭವ.

ಅಕ್ಟೋಬರ್‌: ಕಾಳುಮೆಣಸು ಕಲಬೆರಕೆ ಪ್ರಕರಣದ ಪ್ರತಿಭಟನೆ

1: ಕಾಳುಮೆಣಸು ಕಲಬೆರಕೆ ಪ್ರಕರಣವು ಬೆಳಕಿಗೆ ಬಂತು. ಅದರ ವಿರುದ್ಧ ಹೋರಾಟದ ಕಾವು ಜಿಲ್ಲೆಯಲ್ಲಿ ಜೋರಾಯಿತು.

4: ಶೋಭಾಯಾತ್ರೆಯಂದು ಕೊಲೆ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಲು ಯಶಸ್ವಿಯಾದರು.

ನವೆಂಬರ್‌: ಟಿಪ್ಪು ಜಯಂತಿ ವಿವಾದ

1: ಪೊನ್ನಂಪೇಟೆ ತಾಲ್ಲೂಕು ರಚನೆಗೆ ಆಗ್ರಹಿಸಿ ಪ್ರತಿಭಟನೆ ಆರಂಭ

4: ಗೋಣಿಕೊಪ್ಪಲು ಕಾವೇರಿ ಕಾಲೇಜು ಆವರಣದಲ್ಲಿ ನಿರ್ಮಿಸಿದ್ದ ಫೀಲ್ಡ್‌ ಮಾರ್ಷಲ್‌ ಕೆ.ಎಂ. ಕಾರ್ಯಪ್ಪ ಹಾಗೂ ಜನರಲ್‌ ಕೆ.ಎಸ್‌. ತಿಮಯ್ಯ ಅವರ ಪ್ರತಿಮೆಯನ್ನು ಭೂಸೇನಾ ಮುಖ್ಯಸ್ಥ ಬಿಪಿನ್‌ ರಾವತ್‌ ಉದ್ಘಾಟಿಸಿದರು. ಇದೇ ವೇಳೆ ಕಾರ್ಯಪ್ಪ ಭಾರತರತ್ನಕ್ಕೆ ಹೆಸರು ಶಿಫಾರಸು ಮಾಡುತ್ತೇನೆ ಎಂದು ಭರವಸೆ ನೀಡಿದರು.

10: ಪೊಲೀಸ್‌ ಬಂದೋಬಸ್ತ್‌ನಲ್ಲಿ ಮತ್ತೊಂದು ಟಿಪ್ಪು ಜಯಂತಿ ಮುಕ್ತಾಯವಾಯಿತು. ಹಲವು ಬಿಜೆಪಿ ಕಾರ್ಯಕರ್ತರ ಬಂಧನವೂ ನಡೆಯಿತು.

18: ‘ಕಿಗ್ಗಟ್ಟುನಾಡು’ ಪೊನ್ನಂಪೇಟೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ

ಡಿಸೆಂಬರ್‌: ತೀವ್ರಗೊಂಡ ಹೋರಾಟ, ಬಂದ್‌

4: ಜಿಲ್ಲೆಯಲ್ಲಿ ‘ಹುತ್ತರಿ’ ಹಬ್ಬದ ಸಂಭ್ರಮ

9: ಕಾವೇರಿ ತಾಲ್ಲೂಕಿಗೆ ಆಗ್ರಹಿಸಿ ‘ಕುಶಾಲನಗರ ಬಂದ್‌’

21: ಕುಶಾಲನಗರದಲ್ಲಿ ಜಿಲ್ಲಾಮಟ್ಟದ ಶೈಕ್ಷಣಿಕ ಸಮ್ಮೇಳನವು ಅತ್ಯಂತ ವೈಭವಯುತವಾಗಿ ನಡೆಯಿತು.

23: ಪೊನ್ನಂಪೇಟೆಯಲ್ಲಿ ನ್ಯಾಯಾಲಯ ಸಂಕೀರ್ಣದ ಉದ್ಘಾಟನೆ

26: ರಾಜಾಸೀಟ್‌ಗೆ ಹೊಂದಿಕೊಂಡಂತಿರುವ ಬೆಟ್ಟದಲ್ಲಿ ಬೆಂಕಿ ಅವಘಡ ಸಂಭವಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry