6

ಬಿಬಿಎಂಪಿ ವ್ಯಾಪ್ತಿ ‘ಸ್ವಚ್ಛ ಭಾರತ್‌’ ಅನುದಾನ ದುರುಪಯೋಗ: ಬಿ.ಎಸ್‌.ಯಡಿಯೂರಪ್ಪ ಆರೋಪ

Published:
Updated:
ಬಿಬಿಎಂಪಿ ವ್ಯಾಪ್ತಿ ‘ಸ್ವಚ್ಛ ಭಾರತ್‌’ ಅನುದಾನ ದುರುಪಯೋಗ: ಬಿ.ಎಸ್‌.ಯಡಿಯೂರಪ್ಪ ಆರೋಪ

ಚಿಕ್ಕಮಗಳೂರು: ‘ಕೇಂದ್ರ ಸರ್ಕಾರವು ಸ್ವಚ್ಛ ಭಾರತ್‌ ಅಭಿಯಾನದಡಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ವ್ಯಾಪ್ತಿಗೆ ₹ 108.55 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಸಮುದಾಯ, ವೈಯುಕ್ತಿಕ ಶೌಚಾಲಯ, ವಿದ್ಯುತ್‌, ಜೈವಿಕ ಅನಿಲ ಘಟಕಗಳಿಗೆ ಬಳಸಬೇಕಿದ್ದ ಈ ಹಣವನ್ನು ರಾಜ್ಯ ಸರ್ಕಾರವು ರಸ್ತೆ, ಪಾದಚಾರಿ ನಿರ್ಮಾಣ, ಗೋಡೆಗೆ ಬಣ್ಣ ಬಳಿಯಲು ವ್ಯಯಿಸಿ ದುರ್ಬಳಕೆ ಮಾಡಿಕೊಂಡಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಆರೋಪಿಸಿದರು.

ನಗರದ ಡಿಎಸಿಜಿ ಪಾಲಿಟೆಕ್ನಿಕ್‌ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಬಿಜೆಪಿ ನವಕರ್ನಾಟಕ ಪರಿವರ್ತನಾ ಯಾತ್ರೆಯ ಸಮಾರಂಭದಲ್ಲಿ ಅವರು ಮಾತನಾಡಿದರು. ‘ಕೇಂದ್ರ ಸರ್ಕಾರವು ಸ್ವಚ್ಛ ಭಾರತ ಅಭಿಯಾನದಡಿ ರಾಜ್ಯಕ್ಕೆ ₹ 790 ಕೋಟಿ ಅನುದಾನ ಬಿಡುಗಡೆ ಮಾಡಿತ್ತು. ಈ ಹಣವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ನಮ್ಮ ಕಾರ್ಯಕರ್ತರೊಬ್ಬರು ಲೋಕಾಯುಕ್ತ, ಭ್ರಷ್ಟಾಚಾರ ಎಸಿಬಿ, ಸಿಬಿಐಗೆ ದೂರು ನೀಡಿದ್ದಾರೆ’ ಎಂದು ಹೇಳಿದರು.

‘ಬೆಂಗಳೂರಿನಲ್ಲಿ ತರಾತುರಿಯಲ್ಲಿ ಸಿಡಿಪಿ ಅಧಿಸೂಚನೆ ಹೊರಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಿದ್ಧತೆ ನಡೆಸಿದ್ದಾರೆ. ಆ ಮೂಲಕ ಬಿಲ್ಡರ್ಸ್‌ಗೆ ಅನುಕೂಲ ಮಾಡಿ ಚುನಾವಣೆಗೆ ದುಡ್ಡು ಮಾಡಲು ಹೊರಟ್ಟಿದ್ದಾರೆ’ ಎಂದು ಆರೋಪಿಸಿದರು.

‘ಮಲಪ್ರಭಾ, ಘಟಪ್ರಭಾ ನಾಲೆ ನವೀಕರಣಕ್ಕೆ ₹ 600 ಕೋಟಿಗೆ ಟೆಂಡರ್‌ ಆಹ್ವಾನಿಸಲು ನಾಲ್ಕು ತಿಂಗಳ ಹಿಂದೆ ಸಿದ್ಧತೆ ನಡೆದಿತ್ತು. ಟೆಂಡರ್‌ ಮೊತ್ತವನ್ನು ₹ 1,100 ಕೋಟಿಗೆ ಏರಿಸಿ, ಒಳಒಪ್ಪಂದ ಮಾಡಿಕೊಂಡು ಗುತ್ತಿಗೆದಾರ ಡಿ.ಬಿ.ಉಪ್ಪಾರ ಅವರಿಗೆ ಟೆಂಡರ್‌ ನೀಡಲಾಗಿದೆ. ಇದಕ್ಕೆ ಸಿದ್ದರಾಮಯ್ಯ ಅವರು ಸ್ಪಷ್ಟೀಕರಣ ನೀಡಬೇಕು. ಈ ಬಗ್ಗೆ ಸಮಗ್ರ ತನಿಖೆ ಆಗಬೇಕು’ ಎಂದು ಒತ್ತಾಯಿಸಿದರು.

‘ಬಿಬಿಎಂಪಿಯಲ್ಲಿ ಕಾರ್ನರ್‌ ನಿವೇಶನಗಳನ್ನು ಒತ್ತೆ ಇಟ್ಟು ₹ 975 ಕೋಟಿ ಸಾಲ ಪಡೆದಿದ್ದಾರೆ. ಮೈಸೂರು ಮಿನರಲ್ಸ್‌ ಲಿಮಿಟೆಡ್‌ನವರು ಬ್ಯಾಂಕಿನಲ್ಲಿ ಠೇವಣಿ ಇಟ್ಟಿದ್ದ ₹ 1,400 ಕೋಟಿಯನ್ನು ರೈತರ ಸಾಲಮನ್ನಾ ಹೊಂದಾಣಿಕೆಗೆ ಬೇಕು ಎಂದು ಒತ್ತಾಯದಿಂದ ಪಡೆದಿದ್ದಾರೆ’ ಎಂದು ದೂಷಿಸಿದರು.

‘ಅಚ್ಛೆ ದಿನ್‌ ಯಾವಾಗ ಬರುತ್ತೆ ಎಂದು ಎಲ್ಲ ಕಡೆ ಸಿದ್ದರಾಮಯ್ಯ ಕೇಳುತ್ತಾರೆ. ಗುಜರಾತ್‌, ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್‌ ಮುಳುಗಿದೆ. ಇನ್ನು ಕಾಂಗ್ರೆಸ್‌ ಸರ್ಕಾರ ಇರುವುದು ಕರ್ನಾಟಕದಲ್ಲಿ ಮಾತ್ರ. ಇಲ್ಲಿಂದ ಕಾಂಗ್ರೆಸ್‌ಗೆ ಮನೆಗೆ ಕಳುಹಿಸಿದಾಗ ಅಚ್ಛೆ ದಿನ್‌ ಬರುತ್ತದೆ. ಅಲ್ಲಿವರೆಗೆ ಕಾಯಿರಿ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry