ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋರಿಯ ಮೊರೆ

Last Updated 30 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಮೂಗು ಮುಚ್ಚಿಕೊಂಡು ದಾಂಟುತ್ತ
ಶಪಿಸಬೇಡಿ ಎನ್ನ, ನನ್ನದೇನು ತಪ್ಪು ಸ್ವಾಮಿ?
ನಾನಂತು ಸ್ವಯಂಭುವಲ್ಲ!
ನಿರಾಕಾರನಾಗಿದ್ದವನು ಸ್ವಾಮಿ.

ನಿಮ್ಮ ಮನೆ ಮುಂದೆ, ರಸ್ತೆಯ ಇಬ್ಬದಿಲಿ
ಎನಗೆ ಆಕಾರ ನೀಡಿದಿರಿ ನೀವು.
ಅದಕ್ಕೆಂದು ಸುಮ್ಮನಿದ್ದೀನಿ
ನನ್ನ ತುಂಬಿ ಹರಿಯುತ್ತಿದ್ದರು ನಿಮ್ಮ ಕೀವು.
ಆ ಮನೆ ಈ ಮನೆ, ಹಿಮ್ಮನೆ ಮುಮ್ಮನೆ
ಎಡಮನೆ ಬಲಮನೆ, ಮೇಲ್ಮನೆ ಕೆಳಮನೆ
ನಿಮ್ಮನೆಗಳ, ನಿಮ್ಮ ತನುಗಳ ಹೊಲಸು
ತುಂಬಿ ನಾತಗೊಂಡಿದೆ ನನ್ನ ಮನೆ.

ಒಂದೊಂದು ಕಡೆ ಒಂದೊಂದು ರೀತಿ,
ಗಟಾರು ಚರಂಡಿ ಮೋರಿ ಎಂದು.
ಎಂತಾದರು ಕರೆಯಿರಿ ಚಿಂತೆಯಿಲ್ಲ
ಆದರೆ ಶಪಿಸಬೇಡಿ ಹೊಲಸು ಮೋರಿ ಎಂದು.
ಅನುದಿನ, ಅನುಕ್ಷಣ ಶುಭ್ರವಾಗಿರಬೇಕೆನ್ನುವೆ.
ಏನು ಮಾಡಲಿ; ನೀವೆ ಹರಿಸುವಿರಿ ಕೊಳಕು ನೀರು.
ಆದರೂ ಒಮ್ಮೊಮ್ಮೆ ಹಾಕುವಿರಿ
ಬಲವಂತದಿ ಒಂದು ಕೊಡ ಶುಭ್ರನೀರು.

ಸಾಕಾದೀತೆ; ನೀವೆ ಹೇಳಿ ಆ ಒಂದು ಕೊಡ ನೀರು?
ದಶದಶಮಾನಗಳಿಂದ ಜಿಡ್ಡುಗಟ್ಟಿದೆ ಈ ದೇಹ.
ಹಾಗಾಗಿ, ವಾರಕೊಮ್ಮೆ ತೆಗೆದ್ಹಾಕಿ ತೊಳೆಯಿರಿ,
ನನ್ನಲ್ಲಿನ ಕಲ್ಲು, ಪ್ಲಾಸ್ಟಿಕ್, ಚಿಪ್ಪುಗಳವಶೇಷವ.
ಇಲ್ಲವಾದರೆ, ನನ್ನ ಉದರದಲಿ ಲಕ್ಷೋಪಾದಿಯಲಿ
ಜನಿಸುವರು ಸೊಳ್ಳೆಗಳೆಂಬ ರಕ್ಕಸರು.
ಅವರು ದಯೆ ಧರ್ಮ ದಾಕ್ಷಿಣ್ಯವಿಲ್ಲದೆ
ಹಗಲು- ಇರುಳೆನ್ನದೆ ನೆತ್ತರು ಹೀರುವ ಪಿಪಾಸುಗಳು.

ಅಮ್ಮಯ್ಯ ದಮ್ಮಯ್ಯ ಇನ್ನೊಮ್ಮೆ ಬಿನ್ನವಿಸುವೆ.
ನನ್ನ ಶಪಿಸಬೇಡಿ,ನನ್ನದೇನು ತಪ್ಪಿಲ್ಲ.
ನಿಮ್ಮಂತೆ ನಾನು, ನಿಮ್ಮ ಪ್ರತಿಬಿಂಬ ನಾನು
ನಿಮ್ಮನೆಯೊಳಗಿನ ಸಂಸ್ಕೃತಿಗೆ ಮುನ್ನುಡಿಯಲ್ಲವೆ ನಾನು..?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT