7

ಗೌಡರ ಪ್ರೀತಿಯ ಸೈಕಲ್ ಕಥೆ

Published:
Updated:
ಗೌಡರ ಪ್ರೀತಿಯ ಸೈಕಲ್ ಕಥೆ

ಯಶಸ್ವಿ ಚಿತ್ರ ‘ರಾಮಾ ರಾಮಾ ರೇ’ದಲ್ಲಿ ನಟಿಸಿದ್ದ ಬಿಂಬಶ್ರೀ ಮತ್ತೆ ತೆರೆಯ ಮೇಲೆ ಬರುತ್ತಿದ್ದಾರೆ. ಈ ಬಾರಿ ಅವರು ನಟಿಸುತ್ತಿರುವ ಚಿತ್ರದ ಹೆಸರು ‘ಗೌಡ್ರು ಸೈಕಲ್’. ನಟ ಶಶಿಕಾಂತ್ ಈ ಸಿನಿಮಾದ ನಾಯಕ. ಇದು ಶಶಿಕಾಂತ್ ಅವರಿಗೆ ಎರಡನೆಯ ಸಿನಿಮಾ.

‘ಗೌಡ್ರು ಸೈಕಲ್’ ಚಿತ್ರದ ಚಿತ್ರೀಕರಣ ಮಂಡ್ಯ ಸುತ್ತಮುತ್ತ ಅದ್ದೂರಿಯಾಗಿ ನಡೆಯುತ್ತಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಅಂದಹಾಗೆ, ಶಶಿಕಾಂತ್ ಅವರು ಈ ಮೊದಲು ‘ರಣರಣಕ’ ಎಂಬ ಸಿನಿಮಾದಲ್ಲಿ ಅಭಿನಯಿಸಿದ್ದರು.

‘ರಾಮಾ ರಾಮಾ ರೇ’ ಚಿತ್ರದಲ್ಲಿ ಅಭಿನಯಿಸಿದ ನಂತರ ಬಿಂಬಶ್ರೀ ಅವರಿಗೆ ಹಲವು ಕಡೆಗಳಿಂದ ಅವಕಾಶಗಳು ಬಂದಿದ್ದವಂತೆ. ಆದರೆ ಅವರು ಒಳ್ಳೆಯ ಕಥೆಗಾಗಿ ಕಾದಿದ್ದರು. ‘ಗೌಡ್ರು ಸೈಕಲ್’ ಸಿನಿಮಾದ ಕಥೆಯನ್ನು ಗಮನಿಸಿದ ಬಿಂಬಶ್ರೀ, ಈ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ ಎಂಬುದು ಚಿತ್ರತಂಡದ ಅಂಬೋಣ.

ಈ ಸಿನಿಮಾದಲ್ಲಿ ಒಂದು ಸೈಕಲ್ ಪ್ರಮುಖ ಪಾತ್ರವಹಿಸಿದೆಯಂತೆ. ಹಾಗೆಯೇ, ಇದು ಬಿಂಬಶ್ರೀ ಅವರು ಇಷ್ಟು ದಿನಗಳಿಂದ ಕಾಯುತ್ತಿದ್ದ ರೀತಿಯ ಕಥೆಯೂ ಹೌದಂತೆ. ಪ್ರಶಾಂತ್ ಎಳ್ಳಂಪಳ್ಳಿ ಅವರು ಕಥೆ, ಚಿತ್ರಕಥೆ ಬರೆದು ಈ ಸಿನಿಮಾದ ನಿರ್ದೇಶನದ ಹೊಣೆ ಹೊತ್ತುಕೊಂಡಿದ್ದಾರೆ.

ಕೃಷ್ಣಮೂರ್ತಿ ಕವತ್ತಾರ್ ಸೇರಿದಂತೆ ಹಲವು ಜನ ಹಿರಿಯ ನಟರು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜೊತೆಯಲ್ಲೇ ಹೊಸ ಮುಖಗಳೂ ಕಾಣಿಸಲಿವೆ.

‘ಗೌಡರೊಬ್ಬರು ತಮ್ಮ ಸೈಕಲ್‌ ಬಗ್ಗೆ ಹೊಂದಿರುವ ಪ್ರೀತಿಯ ಕಥೆ ಸಿನಿಮಾದಲ್ಲಿದೆ. ಸೈಕಲ್ ಜೊತೆಗಿನ ಅವರ ಸಂಬಂಧ ಏನು ಎಂಬ ಕಥೆಯನ್ನು ಸಿನಿಮಾ ಹಾಸ್ಯದ ಮೂಲಕವೇ ಹೇಳುತ್ತದೆ. ಹಳೆಯದಾಯಿತು ಎಂಬ ಕಾರಣಕ್ಕೆ ವಸ್ತುಗಳನ್ನು ಮತ್ತು ವಯಸ್ಸಾಯಿತು ಎಂಬ ಕಾರಣಕ್ಕೆ ಮನುಷ್ಯರನ್ನು ನಿರ್ಲಕ್ಷಿಸಬಾರದು ಎನ್ನುವುದೇ ಈ ಸಿನಿಮಾದ ಸಂದೇಶ’ ಎನ್ನುತ್ತಾರೆ ನಟ ಶಶಿಕಾಂತ್.

ಈ ಚಿತ್ರವು ಹಳ್ಳಿ ಸೊಗಡಿನ ಕಥೆ ಹೊಂದಿದೆ. ಟಾಕಿ ಭಾಗ ಶೇಕಡ 90ರಷ್ಟು ಪೂರ್ಣಗೊಂಡಿದೆ. 2018ರ ಏಪ್ರಿಲ್‌ ಕೊನೆಯಲ್ಲಿ ಸಿನಿಮಾ ಬಿಡುಗಡೆ ಮಾಡಬೇಕು ಎಂಬುದು ತಂಡದ ಉದ್ದೇಶ. ಚಿತ್ರಕ್ಕೆ ಸಂಗೀತ ಸಾಯಿ ಸರ್ವೇಶ್ ಅವರದ್ದು. ಸವಿತಾ ಚೌಟ ಅವರು ನಿರ್ಮಾಪಕರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry