ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖರ್ಚಿನ ಸುಖ?

Last Updated 30 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಖರ್ಚಿನ ಸುಖ. ರಿಟೇಲ್‌ ಥೆರಪಿ. ಹೆಚ್ಚು ಕೊಳ್ಳಿರಿ, ಇನ್ನಷ್ಟು ಉಳಿಸಿರಿ. ಹೊಸ ಹಬ್ಬಗಳನ್ನುಊಹಿಸಿ, ಆಚರಿಸಿ. ಮದರ್ಸ್‌ ಡೇ, ಬ್ರದರ್ಸ್‌ ಡೇ, ಗುಡ್ ಗವರ್ನೆನ್ಸ್‌ ಡೇ... ಖರ್ಚಿಗೆ ಕಾರಣಗಳನ್ನು ಹುಡುಕಿ. ಷಾಪ್‌ ಟಿಲ್ ಯು ಡ್ರಾಪ್. ನಾಳಿನ ಸುಖವನ್ನು ಇಂದೇ ಅನುಭವಿಸಿ. ರಜೆಯ ಮೇಲೆ ಇಂದು ಹೋಗಿ, ರೊಕ್ಕಾ ನಾಳೆ ಕಟ್ಟಿ. ಅರ್ಲಿ ಸ್ಯಾಲರಿ ಡಾಟ್‌ಕಾಂ. ಲಿವ್ ಲೈಫ್ ಕಿಂಗ್ ಸೈಜ್. ನಾಳೆಯೆಂಬುದಿಲ್ಲ.

2017 ಎನ್ನುವ ವರುಷಕ್ಕೆ ತೆರೆ ಬೀಳುತ್ತಿರುವಂತೆ ನಮ್ಮ ಅಖಂಡ ಹಿಂದೂಸ್ಥಾನದಲ್ಲಿ ಸಾಂಟಾಕ್ಲಾಸನ ತಾಂಡವ. ಎಲ್ಲೆಲ್ಲೂ ನಕಲಿ ಕ್ರಿಸ್ಮಸ್ ಮರ, ನಕಲಿ ಹಿಮ, ನಕಲಿ ನಕ್ಷತ್ರಗಳು, ಎಲ್.ಈ.ಡಿ. ಬೆಳಕು (ಅದರಲ್ಲೂ ವಿದ್ಯುತ್ತಿನ ಉಳಿತಾಯ), ಅಸಲೀ ಕೇಕಿನ ಮಾರಾಟ. ಯಾವ ಹಬ್ಬಕ್ಕೂ ಆಗದಷ್ಟು ತಯಾರಿ. ಡಿಸೆಂಬರ್ 31ರ ರಾತ್ರೆಯ ಹಬ್ಬವೇ ಬೇರೆ. ಹೊಸವರ್ಷವನ್ನು ಸ್ವಾಗತಿಸಲು ಸನ್ನದ್ಧರಾಗಿ. ಹೊಸ ವರ್ಷದ ಠರಾವುಗಳನ್ನುಮಾಡಿಕೊಳ್ಳಿ. ಸಿಗರೇಟು ಸೇದುವುದನ್ನು ಬಿಡಿ. ಚಟದಿಂದ ದೂರವಾಗಿ. ಸನ್ನಿ ಲಿಯೋನಳನ್ನು ಬೆಂಗಳೂರಿಗೆ ಇಳಿಸಿ. ಅದು ಗಂಗಾವತರಣದಷ್ಟು ಗಹನ ಪ್ರಶ್ನೆಯಾಗಲಿ. ಇಂದಿನ ಭಗೀರಥನನ್ನು ಹುಡುಕಿ. ಆಕೆಯನ್ನು ವಿಮಾನದಿಂದ ಧರೆಗಿಳಿಸಿ. ಆದಿತ್ಯನಾಥರು ರಾಮನವಮಿಗೆ ರಾಮಸೀತೆಯರನ್ನೇ ಇಳಿಸಿದರು. ಇನ್ನು ಸನ್ನಿ ಯಾವ ಗಿಡದ ತೊಪ್ಪಲು. ಆಕೆಗೆ ರಕ್ಷಣೆಯನ್ನು ಒದಗಿಸಿ. ಈ ಒಂದು ಕ್ಷಣ ಎಲ್ಲ ಕಷ್ಟಗಳನ್ನೂ ಮರೆತು ಖುಷಿಯಾಗಿರಿ. ನಾಳೆಯನ್ನು ಇಂದೇ ಉದ್ರಿ ಪಡೆಯಿರಿ. ನಂತರ ವಾಸ್ತವ ತಟ್ಟಿದಾಗ ನೋಡಿಕೊಳ್ಳೋಣ. ಬಂದಾಗ ಎದುರಿಸೋಣ. ಸದ್ಯಕ್ಕೆ ಖುಷಿಯಿಂದಿರಿ.

ಖರ್ಚಿಗೊಂದು ಚಿಕಿತ್ಸಕ ಗುಣವಿದೆ. ಅದು ಒಂದು ಮತ್ತಿದ್ದಂತೆ. ಮತ್ತೆಂಬುದು ಕ್ಷಣ ಕಾಲದ ಮದ್ದೂ ಸರಿ. ಸಮಸ್ಯೆಯನ್ನು ಪರಿಹರಿಸದಿದ್ದರೂ, ಅದನ್ನು ಕ್ಷಣ ಕಾಲದವರೆಗೆ ಮರೆಯುವಂತಾದರೂ ಮಾಡುತ್ತದೆ. ಹೀಗಾಗಿಯೇ ಥೆರಪಿ. ತಿಂಡಿ ಮಾರಾಟ ಮಾಡುವ ಸ್ಥಳಗಳಲ್ಲಿ ತಿಂಡಿಯ ಚಿತ್ರಗಳು, ಫುಡ್‌ ಡೆಕೊರೇಶನ್ ಆಹ್ವಾನಿಸುತ್ತದೆ. ತಿಂಡಿ ಸೇವಿಸುವುದಕ್ಕೆ ಹಸಿವು ಕಾರಣವಾಬೇಕಿಲ್ಲ. ರುಚಿಯನ್ನುದ್ದೀಪಿಸಲು ಅಪೆಟೈಸರ್ ನೀಡು. ಆಹಾರವನ್ನ ಸಿಂಗಾರ ಮಾಡು. ಯಮ್. ನೋಡಲು ಯಮ್. ನೋ ವನ್ ಕ್ಯಾನ್ ಈಟ್ ಜಸ್ಟ್‌ ಒನ್. ಅದಕ್ಕೆ ಪ್ರೇರಕ ಉದರವಲ್ಲ. ಜಿಹ್ವ. ಎಸ್ಕಿಮೋಗೆ ಫ್ರಿಜ್ಜನ್ನು ಮಾರಾಟ ಮಾಡು. ದೋಸೆಯಿಲ್ಲದವನಿಗೆ ಪಿಜ್ಜಾ ನೀಡು. ಊಟ ಮುಗಿಸಿದವನಿಗೆ ಡೆಜರ್ಟ್ ನೀಡು. ಹೀಗೆ ಖರ್ಚು ಕೈಗೊಳ್ಳುತ್ತಾ ಇಲ್ಲದ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳೋಣ.

ಖರ್ಚಿನಲ್ಲಿ ಪರಮಸುಖವಿದೆ. ಪ್ರತಿ ಖರ್ಚಿಗೂ ಜಿ.ಎಸ್.ಟಿ. ಸರಕಾರದ ಬೊಕ್ಕಸಕ್ಕೆ ಹೆಚ್ಚಿನ ತೆರಿಗೆ. ಹೆಚ್ಚು ಖರ್ಚು. ಹೆಚ್ಚು ಉತ್ಪಾದನೆ. ಹೆಚ್ಚು ಬೆಳವಣಿಗೆ. ಇನ್ನೂ ಹೆಚ್ಚು ತೆರಿಗೆಯ ವಸೂಲಿ. ಹೆಚ್ಚು ಪ್ರಗತಿ. ತೆರಿಗೆಯ ದರವನ್ನು ಕಡಿಮೆ ಮಾಡಿದರೆ, ಇನ್ನಷ್ಟು ಖಾಕ್ರಾ ಖರೀದಿಸಬಹುದು. ಖರ್ಚು ಮಾಡಲು ಇನ್ನಷ್ಟು ದುಡ್ಡು. ಕಡಿತದ ಮಾರಾಟ. ಕಡಿಮೆ ದುಡ್ಡಿಗೆ ಹೆಚ್ಚು ಸುಖ. ಇನ್ನಷ್ಟು ಪ್ರಗತಿ. ಇಂದಿನ ಸುಖಕ್ಕೆ ನಾಳಿನ ಚಿಂತೆಯನ್ನು ಒಡ್ಡಿ ಬೇಜಾರು ಮಾಡಬೇಡಿ. ಜೀವಿಸಲು ಬಿಡಿ. ಹೆಚ್ಚು ಖರ್ಚು ಮಾಡಬೇಕೆಂದರೆ ಹೆಚ್ಚು ಸಂಪಾದಿಸಬೇಕು. ಹೆಚ್ಚು ಸಂಪಾದನೆಗೆ ಕೆಲಸ ಮಾಡಬೇಕು. ವರ್ಕ್ಹಾರ್ಡ್. ಪಾರ್ಟಿ ಹಾರ್ಡರ್.

ಕಂತು ಕಟ್ಟುವ ಕಾಲ ಬಂದಾಗ ಏನು ಮಾಡಬೇಕು. ದ್ವಿಚಕ್ರಕ್ಕೆ ಲಕ್ಷ. ಚತುಷ್ಚಕ್ರಕ್ಕೆ ಹತ್ತು. ಮತ್ತು ಜೀವನದ ಇತರ ಮಮಕಾರಗಳು ಬೇರೆ. ಮನೆ, ಮಡದಿ, ಮಾರುತಿ, ಮದಿರೆಯ ಮಾಯಾಲೋಕ. ಎಲ್ಲಕ್ಕೂ ಎಲ್ಲಿಂದಲಾದರೂ ಹೊಂದಿಸಲೇಬೇಕು. ಎಜುಕೇಶನ್ನಿಗೇ ಇ.ಎಂ.ಐ ಕಟ್ಟಿದ ಜನಾಂಗ ನಾವು. ಆದ್ದರಿಂದ ಉಧಾರ್ ಕೀ ಜಿಂದಗಿ ಹೊಸದೇನೂ ಅಲ್ಲ. ಬಡ್ಡಿಗೆ ಚಕ್ರಬಡ್ಡಿ. ನಾಳೆಗಿಂತ ಇಂದು ಖುಷಿ. ಟೂ ಬಿ.ಎಚ್.ಕೆ ಇಂದೇ ಕೊಳ್ಳು. ಭವಿಷ್ಯವನ್ನು ಬಾಡಿಗೆಗಿಡು. ಇಂದಿಗಿಂತ ನಾಳೆ ತುಟ್ಟಿ. ಅದಕ್ಕೂ ಬಡ್ಡಿ. ಆದರೆ ಆ ಕಷ್ಟಕಾಲ ಬಂದಾಗ ನೋಡಿಕೊಳ್ಳೋಣ. ಈ ಬಾರಿ ಸಿಗರೇಟು ಸೇದುವುದು ಬಿಟ್ಟಾಗಿದೆ. ಮುಂದಿನ ಬಾರಿ ಪಾರ್ಟಿ ಬಿಟ್ಟರಾಯಿತು. ಹೆಚ್ಚು ಕೆಲಸ ಮಾಡಿದರಾಯ್ತು.

ನಾಲ್ಕು ವರ್ಷ ಚಿಲ್ಲರೆ ಕಾಸನ್ನು ಕುಡಿಕೆಯಲ್ಲಿ ಹಾಕಿ ಸರಕಾರಿ ಎಲ್.ಟಿ.ಸಿ ಪಡೆದು ರೈಲು ಹತ್ತುತ್ತಿದ್ದ ಖುಷಿಯಿಂದ ಸಿಂಪ್ಲಿಫ್ಲೈಗೆ ಪ್ರಗತಿಸಿದ್ದೇವೆ. ಒಂದು ರೂಪಾಯಿ ಬಾಡಿಗೆಗೆ ಹಾರಿಸಿದ ವಿಮಾನ ಸಂಸ್ಥೆ ದಿವಾಳಿಯಾಯ್ತು. ಹೋಗಲಿ ಬಿಡಿ. ಅದರ ನಷ್ಟ ಅದಕ್ಕೆ, ನಮ್ಮ ಯಾನ ನಮಗೆ.

ಖರ್ಚು, ಚಟ, ಪಾಪ. ಉಳಿತಾಯ, ಮರ್ಯಾದೆ, ಸಮೃದ್ಧಿ. ಇಂದಿನ ಸಂಪಾದನೆ ನಾಳೆಗೆ. ಅಥವಾ ನಾಡಿದ್ದಕ್ಕೆ. ಖರ್ಚು ಮಾಡುವುದಕ್ಕೆ ಸಾಧ್ಯವಾಗುವುದಕ್ಕಿಂತ ಹೆಚ್ಚು ಸಂಪಾದನೆ ಮಾಡುವುದೇ ಉತ್ತಮ. ಲರ್ನ್‌ ಟು ಅರ್ನ್ ಇನಫ್‌ ಟು ಲಿವ್ ಇನ್ ಸ್ಚೈಲ್. ಹಾಸಿಗೆಯಿದ್ದಷ್ಟೇ ಕಾಲು ಚಾಚು. ಅಥವಾ ಕಾಲಿಗಿಂತ ಉದ್ದದ ಹಾಸಿಗೆಯನ್ನುಂಟು ಮಾಡು. ದಿನವೆಲ್ಲಾ ರೇಸ್ ಓಡು. ಸಂಜೆಯ ವೇಳೆಗೆ ಹಾಸಿಗೆ ತಯಾರಿರುತ್ತದೆ. ಜೋರಾಗಿ ಓಡಿದಷ್ಟೂ ಹಾಸಿಗೆಯ ಉದ್ದವೂ ಹೆಚ್ಚಾಗುತ್ತದೆ. ದುಡ್ಡೇ ದೊಡ್ಡಪ್ಪ.

ನಾಳೆಗಿಂತ ಇಂದೇ ಉತ್ತಮ ಆಗಿದ್ದ ಕಾಲವಿತ್ತೇ. ಟುಡೇ ಈಸ್‌ ಬೆಟರ್ ದ್ಯಾನ್ ಟುಮಾರೋ ಇದ್ದಿದ್ದಿರಬಹುದು. ಆದರೆ ಈಗ ಆ ನಾಳೆ ನಮ್ಮೆದುರಿಗೆ ಇಂದಾಗಿ ನಿಂತಿದೆ. ಹಿಂದೆ ಜೀವಿಸಿದ್ದಾಯಿತು. ಖರ್ಚು ಮಾಡಿದ್ದಾಯಿತು. ಆದರೆ ನಾಳೆಯಾಗಿದ್ದ ಇಂದಿನ ಕಿಸ್ತು ಕಟ್ಟಲು ಕಾಸು? ಕೆಲಸ ಮಾಡಬೇಕು. ಹೆಚ್ಚು ದುಡಿಯಬೇಕು. ದುಡಿಯಲು ತಯಾರು. ಆದರೆ ಕೆಲಸವೆಲ್ಲಿ, ನೌಕರಿಯೆಲ್ಲಿ, ಸಂಬಳ ಕೊಡುವುದಕ್ಕೆ ಯಾರಿದ್ದಾರೆ. ಬೆಂಚಿನ ಮೇಲೆ ನಿಂತು ವಿದ್ಯಾರ್ಜನೆ ಮಾಡಿ ಬೆಳೆದ ಜನಾಂಗ ಬೆಂಚಿನ ಮೇಲೆ ಕೂತಿದೆ. ಬೆಂಚ್ಡ್‌- ಇದೊಂದು ಹೊಸ ಕ್ರಿಯಾಪದ. ದುಡ್ಡಿನ ಮಾಯಾಲೋಕದ ಜಗತ್ತಿಗೆ ಲಕ್ವ ಬಡಿದರೆ. ಕೆಲಸಕ್ಕೆ ಅವಕಾಶವೇ ಇಲ್ಲವಾದರೆ. ಬೇರೋಜ್ಗಾರಿಯಾದರೆ...

ಖರ್ಚು ಮಾಡಿ ಆರ್ಥಿಕ ಉದ್ದೀಪನ ನೀಡುವ ಸರದಿ ಸರಕಾರದ್ದು. ಅದಕ್ಕೆ ತೆರಿಗೆ ಬೇಕು. ತೆರಿಗೆ ಹೇರಬೇಕೆಂದರೆ ಜನರು ಗಳಿಸಬೇಕು– ಖರ್ಚು ಮಾಡಬೇಕು. ಗಳಿಕೆಯ ಮೇಲೆ ಆದಾಯ ತೆರಿಗೆ. ಖರ್ಚಿನ ಮೇಲೆ ಜಿ.ಎಸ್.ಟಿ. ಗಳಿಕೆಯಿಲ್ಲದೇ ಕೆಲಕಾಲ ಖರ್ಚು ಮಾಡಿದ್ದಾಯಿತು. ಇನ್ನು ಕೆಲಕಾಲ ಖರ್ಚಿಲ್ಲದೇ ಗಳಿಕೆಯಾಗಬೇಕು. ಆಗ ಸಮತೋಲನವುಂಟಾಗುತ್ತದೆ.

ಆದರೆ ಗಳಿಸುವ ಅವಕಾಶವೇ ಇಲ್ಲವಾದರೆ... ಹೂಡಲು ಮೂಲಧನವಿಲ್ಲ. ಮಾಲು ಕೊಳ್ಳಲು ನೋಟಿಲ್ಲ. ಮಾಲಿಲ್ಲದೇ ಮಾರಾಟವಿಲ್ಲ. ಮಾರಾಟವಿಲ್ಲದೇ ಲಾಭವಿಲ್ಲ. ಲಾಭವಿಲ್ಲದೇ ಆದಾಯವಿಲ್ಲ. ಆದಾಯವಿಲ್ಲದೇ ಖರ್ಚಿಲ್ಲ. ಹಸಿದ ಹೊಟ್ಟೆಗೆ ಆಹಾರ ಬೇಕು. ಅದು ಉದರದ ಕರೆ. ಜಿಹ್ವದ್ದಲ್ಲ. ಆಹಾರಕ್ಕೆ ಅಲಂಕಾರ ಬೇಡ. ಬರೇ ಆಹಾರ. ಊಟ. ಔತಣವಲ್ಲ. ಅಪೆಟೈಸರ್ ಇಲ್ಲದ, ಡೆಸರ್ಟ್ ಇಲ್ಲದ ಮೇನ್‌ ಕೋರ್ಸ್. ಇಂದಿರಾ ಕ್ಯಾಂಟೀನಿನ ಮೊಸರನ್ನ. ದರ್ಶಿನಿಯಲ್ಲ–ಇಂದಿರಾ‘ಪ್ರಿಯ’ದರ್ಶಿನಿ.

ನಿನ್ನೆ- ಇಂದು- ನಾಳೆಗಳ ಸಮತೌಲ್ಯ ಅರ್ಥ ಮಾಡಿಕೊಳ್ಳುವುದು ಹೇಗೆ? ಸಾಧಿಸುವುದು ಹೇಗೆ? ನಾಳೆಯೆಂದರೆ ನಾಳೆಯಾ– ಅಥವಾ ಮುಂದಿನ ತಲೆಮಾರಾ, ಅಥವಾ ಮುಂದಿನ ತಲೆಮಾರುಗಳಾ... ನಮ್ಮ ಖರ್ಚು ನಮ್ಮ ಆದಾಯದಿಂದಲೋ ಅಥವಾ ನಮ್ಮ ಮಕ್ಕಳ ಭವಿಷ್ಯದಿಂದಲೋ. ಪಾರ್ಟಿ ಹಾರ್ಡಿನ ಬಿಲ್ಲು ಕಟ್ಟುತ್ತಿರುವವರು ಯಾರು. ವಿಸ್ಕಿಗೆ ಮಿನರಲ್ ವಾಟರ್ ಸೇರಿಸುತ್ತಿರುವಾಗ ಆ ನೀರು ಮತ್ತು ಬಾಟಲಿಯ ಮೂಲ- ಭೂಗರ್ಭದಲ್ಲಿ ಎಷ್ಟು ಕಿಲೋ ಮೀಟರ್‌ ದೂರದಲ್ಲಿದೆ. ಎಷ್ಟು ದಿನ ಆ ಸಂಪನ್ಮೂಲ ಅಲ್ಲೇ ಇರುತ್ತೆ... ಇದ್ದಿಲಗಣಿಗಳನ್ನು ಅತಿ ಹೆಚ್ಚು ಕೂಗಿದವನಿಗೆ ಹರಾಜು ಹಾಕಿ ಇಂದಿನ ಆದಾಯವನ್ನು ಕಾಪಾಡಿದ ಸರಕಾರ, ನೋಷನಲ್‌ ಲಾಸನ್ನು ಮೀರಿ ನ್ಯಾಯಾಂಗ ಮನ್ನಣೆ ಮಾಡಿದ ಸರಕಾರ, ಭ್ರಷ್ಟವಲ್ಲದ ಸರಕಾರದ ಆದಾಯವೇ ಇಂಧನವಾದಾಗ, ಅಥವಾ ಇಂಧನವೇ ಆದಾಯವಾದಾಗ ಏನಾಗಬಹುದು. ಅದೇ ಹರಾಜಿನ ಗಣಿಯ ಇದ್ದಿಲು ಥರ್ಮಲ್‌ ಪ್ಲಾಂಟಿಗೆ ಹೋಗಿ ವಿದ್ಯುತ್ತಾಗಿದೆ. ಆ ಥರ್ಮಲ್‌ ಪ್ಲಾಂಟಿನ ಹೊಗೆಯೇ ಉಸಿರು ಕಟ್ಟಿಸುವಂತೆ ದೆಹಲಿಯನ್ನಾಕ್ರಮಿಸಿದೆ. ಆದರೆ ಅದೇ ಇಂಧನದಿಂದ ಚಾಲೂ ಆಗಿರುವ ಏರ್ ಪ್ಯೂರಿಫೈಯರ್– ಶ್ರೀಮಂತರಿಗೆ ಉಸಿರಾಡಲು ಗಾಳಿ ನೀಡುತ್ತಿದೆ... ಈ ಉಸಿರುಗಟ್ಟಿಸುವ ವಾತಾವರಣವನ್ನು ಸೃಷ್ಟಿಸಿದ್ದು ನಮ್ಮ ಹಿಂದಿನ ತಲೆಮಾರಾ... ಅಲ್ಲವಾ... ಅಲ್ಲವಾದರೆ, ಈ ಖರ್ಚು ನಮ್ಮನ್ನೇ ಇಷ್ಟು ಬೇಗ ಆವರಿಸಿಬಿಟ್ಟಿತಾ.

ಉಸಿರುಗಟ್ಟಿಸುವಷ್ಟು ಆವರಿಸಿತಾ... ಸಮಸ್ಯೆಗಳು ಮುಂದಿನ ತಲೆಮಾರಿಗೆ ವರ್ಗಾಯಿಸಲಾಗದಷ್ಟು ಹತ್ತಿರದಲ್ಲಿದ್ದೇವಾ? ಆಬ್ಜೆಕ್ಟ್ಸ್ ಇನ್ ದ ಮಿರರ್ ಆರ್ ಕ್ಲೋಸರ್ ದ್ಯಾನ್ ದೆಯ್‌ಅಪಿಯರ್... ಖರ್ಚು ಮಾಡಿದ್ದರ ಗಿಲ್ಟ್ ನಮ್ಮನ್ನು ತಟ್ಟುವುದು ಯಾವಾಗ. ಯಾರು ಖರ್ಚು ಮಾಡಿದ್ದಕ್ಕೆ ಯಾರು ಗಿಲ್ಟಿಯಾಗಬೇಕು.

ಹೊಸ ವರ್ಷ ಬರುತ್ತಿದೆ. ನಾವು ಓಡುವುದಕ್ಕಿಂತ ವೇಗವಾಗಿ ಕಾಲ ನಮ್ಮನ್ನು ಹಿಂಬಾಲಿಸುತ್ತಿದೆ. ಬಾಬಾ ರಾಮದೇವರ ಅನುಲೋಮ್‌- ವಿಲೋಮ್ ಪ್ರಾಣಾಯಾಮ ಮಾಡಬಹುದಾಗಿದ್ದ ಕಾಲದಲ್ಲಿ – ದೀರ್ಘ ಉಸಿರಾಟ ಸಾಧ್ಯವಿದ್ದಾಗ ಉಸಿರು ಹೋಗುವಷ್ಟು ಜೋರಾಗಿ ಪಾರ್ಟಿ ಮಾಡಿದೆವು. ನಂತರ ಅದರ ಕಿಸ್ತನ್ನು ಕಟ್ಟಲೆಂದು ಓಡಲು ಪ್ರಾರಂಭಿಸಿದೆವು. ಓಡುತ್ತಾ ಓಡುತ್ತಾ ಸುಸ್ತಾದಾಗ, ದೀರ್ಘ ಉಸಿರೆಳೆದುಕೊಳ್ಳಬೇಕೆಂದು ಪ್ರಯತ್ನಿಸಿದಾಗ ದೆಹಲಿ ತಲುಪಿಬಿಟ್ಟಿದ್ದೆವು!

ಪೊಲ್ಯೂಷನ್‌ನನ ಉಸಿರೆಳೆದುಕೊಳ್ಳುವುದೂ, ಕಕ್ಕುವುದೂ. ಯಾವುದೂ ದಕ್ಕುವುದಿಲ್ಲ. ದೆಹಲಿ ದೂರವಿಲ್ಲ. ನಾವಲ್ಲಿಗೆ ಓಡುವುದೂ ಬೇಕಿಲ್ಲ. ದೆಹಲಿ ಇಲ್ಲಿಯೇ ಇದೆ. ಅಹಂ ಬ್ರಹ್ಮಾಸ್ಮಿ. ನನ್ನಲ್ಲೇ ದೆಹಲಿಯಿದೆ. ಕಾರ್ಬನ್ ಟ್ರೇಡಿಂಗ್ ನಡೆಸಿ ಸಂಪಾದಿಸಿದ ಹಣ, ಪ್ಯಾರಿಸ್ಸಿನಲ್ಲಿ ಒಪ್ಪಂದ ಮಾಡಿಕೊಂಡ ಎಮಿಷನ್, ಪ್ರಗತಿಶೀಲರು ಉಗುಳುವ ಹೊಗೆಗೆ ನಾವೇನೂ ಕಡಿಮೆಯಿಲ್ಲ ಎಂದು ಪೈಪೋಟಿ ನಡೆಸಿದ್ದೆಲ್ಲಾ ಪ್ರತಿಷ್ಠೆಯನ್ನು ಕೊಡುತ್ತದೆಯೇ ಹೊರತು ಶುದ್ಧ ವಾಯುವನ್ನಲ್ಲ. ಎಷ್ಟು ಬಾಟಲಿ ಕೊಂಡು ಕುಡಿಯುತ್ತೀರ... ಎಷ್ಟು ವರ್ಷಕ್ಕಾಗುವಷ್ಟು ನೀರು ಇಂತಹ ಬಾಟಲಿಗಳಲ್ಲಿವೆ. ಎಷ್ಟು ಜನರ ದಾಹವನ್ನದು ತಣಿಸಬಹುದು...

ಊರಿಗೆ ಬಂದವಳು ನೀರಿಗೆ ಬಾರದಿರುತ್ತಾಳೆಯೇ. ನೀರೆಯನ್ನಾಹ್ವಾನಿಸುವ ನೀರಿದೆಯೇ... ಆಡು ಮುಟ್ಟದ ಸೊಪ್ಪಿಲ್ಲ. ಆಡು ಮುಟ್ಟಲು ಸೊಪ್ಪೇ ಇಲ್ಲ. ಗಾದೆ ಮಾತುಗಳೂ ಬದಲಾಗಬಹುದು. ಮಿತ್ರೋಂ, ದೇಶವು ಕಷ್ಟಕಾಲದಲ್ಲಿದೆ. ಐವತ್ತು ದಿನಗಳ ಕಾಲಾವಕಾಶ ಕೊಡಿ. ಎಲ್ಲವನ್ನೂ ಸರಿ ಮಾಡುತ್ತೇವೆ. ಬಾಗಿಲ ಮೇಲೆ ನಾಳೆ ಬಾ... ಅರ್ಥಾತ್ ಬಾರದಿರು. ಹೀಗಾದರೆ ಹೊಸವರ್ಷ, ಹೊಸ ಹರ್ಷ, ಹೊಸತು ಹೊಸತು ಹೇಗೆ.

ಎಲ್ಲರ ಅವಶ್ಯಕತೆಗಳನ್ನು ಪೂರೈಸುವಷ್ಟು ಸಂಪನ್ಮೂಲ ಈ ಭೂತಾಯಿಯಲ್ಲಿದೆ. ಆದರೆ ಎಲ್ಲರ ಅತ್ಯಾಸೆಯನ್ನು ಪೂರೈಸುವಷ್ಟಲ್ಲ. ಗಾಂಧಿ ಮಹಾತ್ಮನಾಗಿದ್ದ ಕಾಲವದು. ಆದರೆ ಇಂದು ಗಾಂಧಿ ರಾಹುಲನಾಗಿದ್ದಾನೆ. ವಿಹ್ವಲನಾಗಿದ್ದಾನೆ... ಹಮೆ ಚಾಹಿಯೇ ಆಜಾದಿ, ಭೂಕ್ಮರಿಸೇ ಆಜಾದಿ. ಗರೀಬೀಸೇ ಆಜಾದಿ. ಈ ಸ್ವಾತಂತ್ರ್ಯವನ್ನು ಸಾಧಿಸುವುದಕ್ಕೆ ಹೊರಟ ದೇಶದ್ರೋಹಿಗಳನ್ನು ಹದ್ದುಬಸ್ತಿನಲ್ಲಿಡಿ. ಅವರ ಬಡತನವನ್ನು ಜೈಲಿನಲ್ಲಿ ಕೂಡಿಹಾಕಿ. ಅದು ಕಾಣುವುದಿಲ್ಲ. ಬಚ್ಚಿಡಿ. ಬಂಧಿಸಿಡಿ.

ಗಾಂಧಿಯ ತುಂಡು ಬಟ್ಟೆ, ಸರಳ ಜೀವನ, ಮತ್ತು ಭೌತಿಕ ಸುಖದ ಬಗೆಗಿದ್ದ ಅಲ್ಪ ತೃಪ್ತಿ... ಇದು ಖರ್ಚಿನ ಪರಿಭಾಷೆಯ ಮಾತಲ್ಲ. ರಿಟೇಲ್‌ ಥೆರಪಿಯಲ್ಲ. ಥೆರಪ್ಯೂಟಿಕ್. ಪಾಪ ಭಾವನೆಯಿಲ್ಲದೇ, ನಾಳೆಗೆ ಹೊರೆಯನ್ನು ಹೊರದೇ, ಇಂದು ಇರುವ ಪರಿಯನ್ನು ಕಂಡುಕೊಂಡರೆ. ಆದಾಯವನ್ನೇ ಪರಿಮಿತಿಗೊಳಿಸಿ, ಆದಾಯದ ಹಾಸಿಗೆಯಿದ್ದಷ್ಟೇ ಖರ್ಚಿನ ಕಾಲು ಚಾಚಿ. ಗಣಿ ಹರಾಜಾಗದೇ, ಏರ್‌ ಫ್ಯೂರಿಫೈಯರ್ ಉಪಯೋಗಿಸದೇ ಉಸಿರಾಡುವ ದಿನವನ್ನು ಸ್ವಾಗತಿಸೋದು ಯಾವಾಗ. ಗ್ಲೋಬಲ್‌ ವಾರ್ಮಿಂಗಿಗೆ ಏರ್ ಕಂಡೀಷನರ್ ಹುಡುಕುವ ಕೆಲಸವನ್ನು ಕೈಬಿಟ್ಟು ವಾರ್ನಿಂಗನ್ನು ನೋಡೋದು ಮುಖ್ಯ. ಈ ಯಕ್ಷಪ್ರಶ್ನೆಯು ಯೋಯೋ ಹನಿಸಿಂಗ್ ಸಂಗೀತದ ದಾಂಧಲೆಯ ಶಬ್ದ ಮಾಲಿನ್ಯದ ನಡುವೆ ಕೇಳಿಸುವುದಿಲ್ಲ. ಹಾಸಿಗೆಯಿಂದ ಚಾಪೆಗೆ. ಉದ್ದ ಚಾಪೆಯಿಂದ ಗಿಡ್ಡ ಚಾಪೆಗೆ. ಕಾಲು ಚಾಚದೇ ಮಡಚಿ ಮಲಗುವುದಕ್ಕೆ ಸಾಧ್ಯವೆ. ಹೌ ಡು ವಿ ಲರ್ನ್‌  ಟು ಅರ್ನ್‌ ಜಸ್ಟ್ ಇನಫ್‌ ಟು ಲಿವ್...(ನಾಟ್ ಇನ್ ಸ್ಟೈಲ್)...

ಹೊಸ ವರ್ಷ ಬರುತ್ತಿದ್ದಂತೆ ಅನ್ವೇಷಣೆ ಮಾಡಬೇಕಾದ್ದು ಒಂದೇ ವಿಚಾರವನ್ನು. ಖರ್ಚು- ಆಮಿಷಗಳ ನಡುವಿನ ಸತ್ಯಶೋಧನೆಗೆ ಎಡೆ ಮಾಡುತ್ತದೆ. ಆ ವಿಚಾರವನ್ನು ಈ ಎರಡು ಪದಗಳು ಗ್ರಹಿಸಬಹುದು.

ತೃಪ್ತಿ. ಸಂತೃಪ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT