ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಟಕ ಬೆಂಗ್ಳೂರು: 2017 ರಂಗಭೂಮಿ ಸಂಭ್ರಮ

Last Updated 30 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಆಧುನಿಕ ರಂಗಭೂಮಿಯ ಬೆಳವಣಿಗೆಯಲ್ಲಿ ಹವ್ಯಾಸಿ ರಂಗತಂಡಗಳ ಪಾತ್ರ ಬಹಳ ಹಿರಿದು. 60ರ ದಶಕದಿಂದ ಆರಂಭವಾದ ಹವ್ಯಾಸಿ ರಂಗ ಚಳವಳಿಗೆ ಬೆಂಗಳೂರಿನ ಹವ್ಯಾಸಿ ರಂಗತಂಡಗಳು ಅಪಾರ ಕೊಡುಗೆ ನೀಡಿವೆ. ನಾಟಕಗಳ ಆಯ್ಕೆ, ಸಿದ್ಧತೆ, ಪ್ರದರ್ಶನ, ಪೂರಕ ತಾಂತ್ರಿಕತೆ ಎಲ್ಲವುಗಳಲ್ಲೂ ವೃತ್ತಿಪರತೆಯನ್ನು ಮೈಗೂಡಿಸಿಕೊಂಡು ಹೊಸ ಹೊಸ ಪ್ರಯೋಗಗಳಿಗೆ ನಿರಂತರವಾಗಿ ತೆರೆದುಕೊಳ್ಳುವ ಬೆಂಗಳೂರಿನ ರಂಗ ತಂಡಗಳು, ಒಟ್ಟು ಕನ್ನಡ ರಂಗಭೂಮಿಯ ಬೆಳವಣಿಗೆಯಲ್ಲಿ ತಮ್ಮದೇ ಆದ ಕೊಡುಗೆ ನೀಡಿವೆ.

ಪ್ರಯೋಗಶೀಲತೆಯ ಜೊತೆಗೆ ವೃತ್ತಿಪರತೆಯನ್ನು ಮೈಗೂಡಿಸಿಕೊಳ್ಳುವ ನಿಟ್ಟಿನಲ್ಲಿ ಇಲ್ಲಿನ ಹವ್ಯಾಸಿ ರಂಗತಂಡಗಳ ಶ್ರಮ ಗಮನಾರ್ಹ. ಕನ್ನಡ ರಂಗಭೂಮಿ ಎಂದೂ ನಿಂತ ನೀರಾಗದಂತೆ ಹೊಸ ನಾಟಕಗಳು, ರಂಗ ತಂಡಗಳು, ನಟರು, ತಂತ್ರಜ್ಞರು, ನಿರ್ದೇಶಕರು, ಕಾಲಕಾಲಕ್ಕೆ ರೂಪುಗೊಳ್ಳುತ್ತಾ, ಹಿಂದಣ ಅನಂತಗಳನ್ನು ಮುಂದಣ ಅನಂತಗಳನ್ನು ವರ್ತಮಾನದಲ್ಲಿ ಸಾಕ್ಷಾತ್ಕರಿಸುವ ನಿಟ್ಟಿನಲ್ಲಿ ನಿರಂತರ ಪ್ರಯೋಗಶೀಲತೆಯಲ್ಲಿ ತೊಡಗಿಸಿಕೊಂಡಿರುವುದು, ಭಾರತೀಯ ರಂಗಭೂಮಿ ಸಂದರ್ಭದ ವಿಶಿಷ್ಟ ದಾಖಲೆಯಾಗಿದೆ.

‘ನಾಟಕ ಬೆಂಗ್ಳೂರು- ರಂಗಭೂಮಿ ಸಂಭ್ರಮ’ ಒಂಭತ್ತು ವರ್ಷಗಳ ಹಿಂದೆ ಪ್ರಾರಂಭವಾದ ಒಂದು ವಿಭಿನ್ನವಾದ, ಬಹು ಮುಖ್ಯವಾದ ಒಂದು ರಂಗ ಚಳವಳಿ. ಹೊಸ ಪ್ರಯೋಗಗಳೊಟ್ಟಿಗೆ, ಹೊಸ ಪ್ರೇಕ್ಷಕರನ್ನು ಒಳಗೊಳ್ಳುವ, ಇಂದಿನ ತುರ್ತಿಗೆ ಸ್ಪಂದಿಸುವ ನಾಟಕೋತ್ಸವವಾಗಿ ರೂಪುಗೊಳ್ಳುತ್ತಾ ಯಶಸ್ವಿಯಾಗಿ ಸಾಗುತ್ತಿದೆ. 2008ರಲ್ಲಿ ರವೀಂದ್ರ ಕಲಾಕ್ಷೇತ್ರದ ಕ್ಯಾಂಟೀನ್ ಬಳಿ, ಸಂಜೆಗತ್ತಲಲ್ಲಿ ಒಂದಷ್ಟು ರಂಗ ಗೆಳೆಯರ ಹರಟೆಯ ನಡುವೆ ಮೊಳೆತ ನಾಟಕ ಬೆಂಗ್ಳೂರು- ನಾಟಕೋತ್ಸವದ ಚಿಂತನೆ, ಇಂದು ಕನ್ನಡ ರಂಗಭೂಮಿಗೊಂದು ಪ್ರೇರಕ ಶಕ್ತಿಯಾಗಿದೆ.

ಹಳತು- ಹೊಸತಾದ ರಂಗತಂಡಗಳು ಕಲೆತು, ಸಹಕಾರಿ ತತ್ವದ ಆಧಾರದಲ್ಲಿ ವರ್ಷಕ್ಕೊಂದು ಹೊಸ ಪ್ರಯೋಗ ನೀಡುವ, ವರ್ಷವಿಡೀ ನಾಟಕ ಪ್ರದರ್ಶನ ನೀಡುವ, ಬಡಾವಣೆಗಳತ್ತ- ರಂಗಪಯಣ ಬೆಳೆಸಿ, ಪ್ರೇಕ್ಷಕರ ಬಳಿಗೆ ನಾಟಕಗಳು ಹೋಗಬೇಕೆನ್ನುವ ಆಶಯ ಹೊತ್ತು ಈ ಉತ್ಸವ ಪ್ರಾರಂಭಗೊಂಡು 2008ರಿಂದ ಪ್ರತಿವರ್ಷ ನಡೆಯುತ್ತಿದೆ.

ನಾಟಕ ಬೆಂಗ್ಳೂರು-2017 ರಂಗಭೂಮಿ ಸಂಭ್ರಮ ದಶಮಾನೋತ್ಸವ ಸಂಭ್ರಮವಾಗಿದ್ದು ಜನವರಿ 1 ರಿಂದ 23ರವರೆಗೆ 18 ರಂಗತಂಡಗಳು ವಿಭಿನ್ನ ರಂಗಪ್ರಯೋಗಗಳನ್ನು ಮಾಡಲಿವೆ.

ಈ ಬಾರಿಯ ನಾಟಕೋತ್ಸವ ಮಲ್ಲತ್ತಹಳ್ಳಿಯ ಕಲಾಗ್ರಾಮ ಸಾಂಸ್ಕೃತಿಕ ಸಮುಚ್ಚಯ ರಂಗಮಂದಿರದಲ್ಲಿ ನಡೆಯುತ್ತಿದೆ. ಈ ದಶಮಾನೋತ್ಸವದ ಸಂಭ್ರಮದ ಉದ್ಘಾಟನೆಯನ್ನು ಖ್ಯಾತ ರಂಗನಿರ್ದೇಶಕ, ಕೈಮಗ್ಗ ಚಳವಳಿಯ ನೇತಾರ ಪ್ರಸನ್ನ ಅವರು ನೆರವೇರಿಸುತ್ತಿದ್ದಾರೆ. ಕುವೆಂಪು ಭಾಷಾ ಭಾರತಿ ಅಧ್ಯಕ್ಷರಾದ ಡಾ. ಕೆ. ಮರುಳಸಿದ್ದಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.

ಈ ನಾಟಕೋತ್ಸವದಲ್ಲಿ ಕನ್ನಡ ರಂಗಭೂಮಿಯ ಮುಖ್ಯ ನಾಟಕಕಾರರಾದ ಸಂಸ, ಪಿ. ಲಂಕೇಶ್, ಬಿ.ವಿ. ವೈಕುಂಠರಾಜು, ಪ್ರೊ.ಬಿ.ಸಿ. ಪ್ರಸನ್ನ ಸೇರಿದಂತೆ ಬಿ. ಸುರೇಶ, ಡಾ.ನಟರಾಜ ಹುಳಿಯಾರ್, ಡಾ.ಎಲ್. ಹನುಮಂತಯ್ಯ ಅವರ ನಾಟಕಗಳು ಇವೆ. ಹಿರಿಯರಾದ ಎಲ್. ಗುಂಡಪ್ಪ, ಕೆ.ಎಸ್. ವಿಜಯಲಕ್ಷ್ಮಿ ಹಾಗೂ ಸುರೇಶ್‌ ಆನಗಳ್ಳಿ, ಕೆ.ಆರ್. ಓಂಕಾರ್, ಜಗದೀಶ್‌ ಮಲ್ನಾಡ್ ಅವರ ಅನುವಾದಗಳು, ಪೂರ್ಣಚಂದ್ರ ತೇಜಸ್ವಿ, ವಸುಧೇಂದ್ರ ಅವರ ಕಥೆಗಳ ರೂಪಾಂತರಗಳು, ಉದಯೋನ್ಮುಖ ನಾಟಕಕಾರರಾದ ಜಯರಾಮ ರಾಯಪುರ, ಪ್ರವೀಣ್ ಸೂಡ, ಜಯಲಕ್ಷ್ಮಿ ಪಾಟೀಲ ಅವರ ನಾಟಕಗಳು ಪ್ರದರ್ಶಿತವಾಗುತ್ತಿವೆ.

ವೈವಿಧ್ಯಮಮಯ ವಸ್ತುವಿಷಯ ಹಾಗೂ ವಿಭಿನ್ನ ನಿರ್ದೇಶಕರ ಕ್ರಿಯಾಶೀಲ ನಿರ್ದೇಶನದಲ್ಲಿ ಸುಮಾರು 500ಕ್ಕೂ ಹೆಚ್ಚು ಕಲಾವಿದರು. 150ಕ್ಕೂ ಹೆಚ್ಚು ತಂತ್ರಜ್ಞರು ಈ ಉತ್ಸವದ ಭಾಗವಾಗಿದ್ದಾರೆ.

ದಾಕ್ಷಾಯಿಣಿ ಭಟ್, ಅರ್ಚನ ಶ್ಯಾಂ, ಸಿತಾರ ನೀನಾಸಂ, ಮೂವರು ನಿರ್ದೇಶಕಿಯರು, ಹಿರಿಯ ನಿರ್ದೇಶಕರಾದ ಡಿ.ಟಿ. ಚನ್ನಕೇಶವಮೂರ್ತಿ, ಸುರೇಶ ಆನಗಳ್ಳಿ, ರವೀಂದ್ರ ಪೂಜಾರಿ, ಡಾ.ಬಿ.ವಿ. ರಾಜಾರಾಂ, ಡಾ. ನಾಗೇಶ್ ಬೆಟ್ಟಕೋಟೆ, ನಟರಾಜ ಹೊನ್ನವಳ್ಳಿ, ಕೆ.ಎಸ್.ಡಿ.ಎಲ್. ಚಂದ್ರು ಜೊತೆಗೆ ಯುವ ನಿರ್ದೇಶಕರಾದ ಋತ್ವಿಕ್‌ಸಿಂಹ, ಎಂ. ಸುರೇಶ್, ರಾಜಗುರು ಹೊಸಕೋಟೆ, ಅ.ನ.ರಾವ್‌ಜಾಧವ್, ಬಿ.ವಿ. ವಿನಯ್, ಡಾ. ಎಸ್.ವಿ. ಕಶ್ಯಪ್, ಶಂಕರ್‌ಗಣೇಶ್ ಅವರು ನಾಟಕಗಳನ್ನು ಸಿದ್ಧಪಡಿಸಿದ್ದಾರೆ.

ಸಿಜಿಕೆ ಅವರು ನಿರ್ದೇಶಿಸಿದ್ದ ಅಂಬೇಡ್ಕರ್ ನಾಟಕ ವೆಂಕಟರಾಜು ಅವರ ಮರು ನಿರ್ದೇಶನದಲ್ಲಿ ಪ್ರದರ್ಶಿತವಾಗುತ್ತಿದೆ. ನಾಟಕ ಬೆಂಗ್ಳೂರು-2017 ರಂಗಭೂಮಿ ಸಂಭ್ರಮ, ರಂಗ ರಸಿಕರಿಗೆ 18 ದಿನಗಳ ಕಾಲ ವಿಭಿನ್ನ ರಂಗನಾಟಕಗಳ ಮೂಲಕ ರಂಜಿಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT