ಯಹೂದಿಗಳ ಹಬ್ಬದ ಮಾಯಾ ಬೆಳಕು

7

ಯಹೂದಿಗಳ ಹಬ್ಬದ ಮಾಯಾ ಬೆಳಕು

Published:
Updated:
ಯಹೂದಿಗಳ ಹಬ್ಬದ ಮಾಯಾ ಬೆಳಕು

ಹನುಕ್ಕಾ ಎಂದರೇನು?

ಅದು ಯಹೂದಿ ಹಬ್ಬ. ಕ್ರಿ.ಪೂ. 2ನೇ ಶತಮಾನದಲ್ಲಿ ಜೆರುಸಲೇಂನಲ್ಲಿ ಪವಿತ್ರ ದೇವಾಲಯದ ಪುನರ್ ಅರ್ಪಣೆ ನಡೆದ ಸಂದರ್ಭದ ಸ್ಮರಣೆಯಿಂದ ಈ ಹಬ್ಬ ಆಚರಿಸುತ್ತಾರೆ. ದೀಪಗಳ ಹಬ್ಬ ಎಂದೇ ಅದು ಹೆಸರಾಗಿದೆ.

ಎಂಟು ದಿನಗಳ ಹಬ್ಬವಿದು. ಕಿಸ್ಲೆವ್‌ನ ಹಿಬ್ರೂ ಮಾಸದ 25ನೇ ದಿನ ಹಬ್ಬ ಪ್ರಾರಂಭಗೊಳ್ಳುತ್ತದೆ. ಸಾಮಾನ್ಯವಾಗಿ ಡಿಸೆಂಬರ್ ತಿಂಗಳಲ್ಲಿ ಈ ಹಬ್ಬ ನಡೆಯುವುದು. ಈ ವರ್ಷ 12ರಿಂದ 20ನೇ ತಾರೀಖಿನ ಅವಧಿಯಲ್ಲಿ ನಡೆಯಿತು.

ಹನುಕ್ಕಾ ಹಿಂದಿನ ಕಥೆ ಏನು?

ಕ್ರಿ.ಪೂ. 167ರಲ್ಲಿ ಸಿರಿಯಾದ ರಾಜ ನಾಲ್ಕನೇ ಆಂಟಿಯೋಕಸ್ ಜುಡಿಯಾ ಮೇಲೆ ದಂಡೆತ್ತಿಹೋದ. ಯಹೂದಿಗಳಿಗೆ ಪವಿತ್ರವಾಗಿದ್ದ ಜೆರುಸಲೇಂನ ದೇವಾಲಯವನ್ನು ಅಶುಚಿಗೊಳಿಸಿದ. ಮೆಕ್ಯಾಬೀ ಹಾಗೂ ಅವನ ನಾಲ್ವರು ಸಹೋದರರು ಕ್ರುದ್ಧರಾಗಿ ಆಂಟಿಯೋಕಸ್‌ನನ್ನು ಜುಡಿಯಾದಿಂದ ಹಿಮ್ಮೆಟ್ಟಿಸಿದರು.

ಯಹೂದಿಗಳು ದೇವಸ್ಥಾನವನ್ನು ದೀಪ ಹಚ್ಚುವ ಮೂಲಕ ಶುದ್ಧೀಕರಿಸಲು ಮುಂದಾದರು. ಒಂದು ದಿನ ಮಾತ್ರ ಉರಿಯುವಷ್ಟು ಆಲಿವ್ ಎಣ್ಣೆ ಹಾಕಿ, ದೀಪ ಹಚ್ಚಿದರು. ಅಚ್ಚರಿಯೆಂಬಂತೆ ಅಷ್ಟೇ ಎಣ್ಣೆಯಲ್ಲಿ ದೀಪ ಎಂಟು ದಿನ ಉರಿಯಿತು. ಅಷ್ಟು ಅವಧಿಯಲ್ಲಿ ಮತ್ತಷ್ಟು ಎಣ್ಣೆ ಸಂಗ್ರಹಿಸಬಹುದಿತ್ತು. ಅತಿ ಕಡಿಮೆ ಎಣ್ಣೆಯಲ್ಲಿ ದೀರ್ಘಾವಧಿ ದೀಪ ಬೆಳಗಿದ ಈ ಸಂದರ್ಭವನ್ನು ಹನುಕ್ಕಾ ಎಂದು ಆಚರಿಸುತ್ತಾರೆ.

ಹಬ್ಬದ ಆಚರಣೆಗಳೇನು?

‘ಮೆನೋರಾ’ ಎಂಬ ಏಕದೀಪವನ್ನು ಬೆಳಗುತ್ತಾರೆ. ಅದಕ್ಕೆ ಒಂಬತ್ತು ಕೈಗಳಿರುತ್ತವೆ. ಪ್ರತಿ ರಾತ್ರಿಗೆ ಒಂದೊಂದರಂತೆ ಅವುಗಳ ಮೇಲೆ ದೀಪ ಹಚ್ಚುತ್ತಾರೆ. ಕೊನೆಯಲ್ಲಿ ಹಚ್ಚುವ ದೀಪವನ್ನು ‘ಶಂಶಾ’ ಎನ್ನುತ್ತಾರೆ. ಎಡದಿಂದ ಬಲಕ್ಕೆ ಹಾಗೂ ಮೇಲಿನ ಕೈನಿಂದ ಕೆಳಕ್ಕೆ ದೀಪ ಹಚ್ಚುವುದು ರೂಢಿ.

ದೀಪಗಳನ್ನು ಹಚ್ಚುವಾಗ ಹನುಕ್ಕಾ ಗೀತೆಗಳನ್ನು ಹಾಡುವುದು ವಾಡಿಕೆ. ಚಾಕೊಲೇಟ್ ನಾಣ್ಯಗಳನ್ನು ಮಕ್ಕಳಿಗೆ ಉಡುಗೊರೆಯಾಗಿ ನೀಡುತ್ತಾರೆ. ಆಲಿವ್ ಎಣ್ಣೆಯಲ್ಲಿ ಮಾಡಿದ ಸಾಂಪ್ರದಾಯಿಕ ತಿನಿಸುಗಳನ್ನು ಕೊಡುತ್ತಾರೆ. ಆಲೂಗಡ್ಡೆಯ ತಿನಿಸು, ಡೋನಟ್‌ಗಳು ಇವುಗಳಲ್ಲಿ ಹೆಚ್ಚು ಜನಪ್ರಿಯ.

ಡ್ರೀಡೆಲ್ ಎಂದರೇನು?

ಹನುಕ್ಕಾ ಸಂದರ್ಭದಲ್ಲಿ ಮಕ್ಕಳು ಆಡುವ ನಾಲ್ಕು ಮುಖಗಳ ತಿರುಗಣಿ. ಪ್ರತಿ ಮುಖದ ಮೇಲೂ ಹೀಬ್ರೂ ಪತ್ರ ಮುದ್ರಿಸಿರುತ್ತಾರೆ. ಅಲ್ಲಿ ನಡೆದ ಪವಾಡವನ್ನು ಹೇಳುವಂಥ ಪತ್ರ ಅದು. ಪ್ರತಿ ಮಗುವೂ ಡ್ರೀಡೆಲ್ ತಿರುಗಿಸಬೇಕು. ಅದು ನಿಲ್ಲುವ ಮುಖವನ್ನು ಆಧರಿಸಿ ಚಾಕೊಲೇಟನ್ನು ಉಡುಗೊರೆಯಾಗಿ ಪಡೆಯುತ್ತದೆ ಇಲ್ಲವೇ ಕೊಡುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry