6

ಮತ್ತೆ ನೆನಪಾದವು ಡೈರಿಗಳು!

Published:
Updated:
ಮತ್ತೆ ನೆನಪಾದವು ಡೈರಿಗಳು!

ಸ್ಮಾರ್ಟ್‌ಫೋನ್‌, ಟ್ಯಾಬ್ಲೆಟ್, ಲ್ಯಾಪ್‌ಟಾಪ್‌ಗಳನ್ನು ತೆರೆದಾಗ ಅವುಗಳ ಯಾವುದೋ ಒಂದು ಮೂಲೆಯಲ್ಲಿ ಕಾಣಿಸಿಕೊಳ್ಳುತ್ತವೆ ಡಿಜಿಟಲ್ ಡೈರಿ ಹಾಗೂ ಕ್ಯಾಲೆಂಡರ್‌ ಆ್ಯಪ್‌ಗಳು. ಡಿಜಿಟಲ್ ಯುಗದ ಆರಂಭದ ದಿನಗಳಲ್ಲಿ ‘ಸಾಫ್ಟ್‌ವೇರ್‌’ ಎಂದು ಕರೆಸಿಕೊಳ್ಳುತ್ತಿದ್ದ ಇವು ಸ್ಮಾರ್ಟ್‌ಫೋನ್‌ ಬಳಕೆ ಹೆಚ್ಚಿದಂತೆಲ್ಲ ‘ಆ್ಯಪ್‌’ ಎಂಬ ಹೆಸರು ಪಡೆದವು.

ಹೆಸರು ಏನೇ ಇರಲಿ; ಗ್ಯಾಜೆಟ್‌ ಬಳಕೆದಾರರಿಗೆ ಇವು ತಮ್ಮದೇ ಆದ ರೀತಿಯಲ್ಲಿ ಅನುಕೂಲಗಳನ್ನು ಕಲ್ಪಿಸಿಕೊಟ್ಟಿವೆ. ಯಾವ ದಿನ ಯಾವ ಕೆಲಸ ಮಾಡಬೇಕು, ಎಲ್ಲಿಗೆ ಹೋಗಬೇಕು, ಯಾರನ್ನು ಭೇಟಿ ಮಾಡಬೇಕು ಎನ್ನುವುದು ಸೇರಿದಂತೆ ಹತ್ತು ಹಲವು ಸಂಗತಿಗಳನ್ನು ಇವುಗಳಲ್ಲಿ ಬರೆದಿಟ್ಟುಕೊಳ್ಳಬಹುದು. ಆ ಕೆಲಸ ಮಾಡಬೇಕಾದ ಸಮಯ ಹತ್ತಿರವಾಗುತ್ತಿದ್ದಂತೆಯೇ, ಈ ಆ್ಯಪ್‌ಗಳೇ ನಮಗೆ ನೆನಪಿನ ಸಂದೇಶ ರವಾನಿಸುತ್ತವೆ. ಇಂಟರ್ನೆಟ್‌ ದೈತ್ಯ ಗೂಗಲ್‌ನಿಂದ ಆರಂಭಿಸಿ ಹಲವು ಕಂಪೆನಿಗಳು ಡಿಜಿಟಲ್ ಡೈರಿ ಮತ್ತು ಕ್ಯಾಲೆಂಡರ್‌ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸಿವೆ.

ಹೀಗಿರುವ ಡಿಜಿಟಲ್ ಯುಗದಲ್ಲಿ ಕಾಗದದ ಡೈರಿಗಳು ಹಾಗೂ ಕ್ಯಾಲೆಂಡರ್‌ಗಳನ್ನು ಜನ ಎಷ್ಟರಮಟ್ಟಿಗೆ ಪ್ರೀತಿಸುತ್ತಿದ್ದಾರೆ? ಹೊಸ ವರ್ಷವೇನೋ ಹೊಸ್ತಿಲಲ್ಲೇ ಇದೆ, ಈ ಹೊತ್ತಿನಲ್ಲಿ ಕಾಗದದ ಡೈರಿ ಹಾಗೂ ಕ್ಯಾಲೆಂಡರ್‌ಗಳು ಎಷ್ಟು ಜನರಿಗೆ ಆಪ್ತವಾಗುತ್ತಿವೆ? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಹೊರಟರೆ...

ಇಂತಹ ವಸ್ತುಗಳನ್ನು ಮಾರಾಟ ಮಾಡುವ ಹೆಸರುವಾಸಿ ವ್ಯಾಪಾರಿಗಳ ಭೇಟಿ ಮಾಡಬೇಕು. ಅಂಗಡಿಗಳಲ್ಲಿ ಇವುಗಳ ಮಾರಾಟ ಎಷ್ಟಿದೆ ಎಂಬುದನ್ನು ತಿಳಿದು, ಜನ ಅವುಗಳನ್ನು ಈಗ ಎಷ್ಟು ಇಷ್ಟಪಡುತ್ತಿದ್ದಾರೆ ಎಂದು ಅಂದಾಜಿಸಬಹುದು.

ಬೆಂಗಳೂರಿನ ಎಂ.ಜಿ. ರಸ್ತೆಗೆ ಆತುಕೊಂಡೇ ಇರುವ ಚರ್ಚ್‌ ಸ್ಟ್ರೀಟ್‌ ಎಂದಾಕ್ಷಣ ನೆನಪಿಗೆ ಬರುವುದು ರುಚಿಯಾದ ಬಿಯರ್ ಮತ್ತು ಆ ರಸ್ತೆಯಲ್ಲಿ ಓಡಾಡಿಕೊಂಡಿರುವ ಲಲನೆಯರು! ಇಂತಹ ಚರ್ಚ್‌ ಸ್ಟ್ರೀಟ್‌ ಪುಸ್ತಕಗಳ ಅಂಗಡಿಗಳಿಗೂ ನೆಲೆ ಕೊಟ್ಟಿದೆ. ‘ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ದಿನಚರಿ ಪುಸ್ತಕಗಳ (ಕಾಗದದ ಡೈರಿ) ಮಾರಾಟದಲ್ಲಿ ಶೇಕಡ 25ರಷ್ಟು ಕುಸಿತ ದಾಖಲಾಗಿದೆ’ ಎನ್ನುತ್ತಾರೆ ಚರ್ಚ್‌ ಸ್ಟ್ರೀಟ್‌ನ ಬ್ಲಾಸಮ್ ಪುಸ್ತಕ ಅಂಗಡಿಯ ಪ್ರತಿನಿಧಿ ಮಾಯಿಗೌಡ. ‘ಹೊಸ ವರ್ಷದ ಆರಂಭದ ಒಂದೆರಡು ವಾರಗಳಲ್ಲಿ ಕೂಡ ಮಾರಾಟ ನಡೆದು, ಕುಸಿತದ ಪ್ರಮಾಣ ತಗ್ಗುವ ಸಾಧ್ಯತೆಯೂ ಇದೆ’ ಎಂದು ಅವರು ಹೇಳುತ್ತಾರೆ.

ಹೊಸ ತಲೆಮಾರಿನವರ ಗ್ಯಾಜೆಟ್ ಮೋಹ ಎಷ್ಟೇ ಗಾಢವಾಗಿರಬಹುದು. ಕಾಗದದ ಡೈರಿಗಳನ್ನು ಖರೀದಿಸಿ, ಅವುಗಳಲ್ಲಿ ತಮ್ಮ ದಿನಚರಿ ಬರೆದು, ವರ್ಷಗಳ ಕಾಲ ಅವುಗಳನ್ನು ಕಾಪಿಟ್ಟುಕೊಳ್ಳುವವರು ಇಂದಿಗೂ ಇದ್ದಾರೆ. ‘ಹೊಸಬರು ಕಾಗದದ ಡೈರಿಗಳನ್ನು ಖರೀದಿಸುವುದು ನಮ್ಮಲ್ಲಿ ಇಲ್ಲವೇ ಇಲ್ಲ ಎನ್ನಬಹುದು. ಆದರೆ ಹಿಂದಿನ ತಲೆಮಾರಿನವರು ಇಂದಿಗೂ ನಮ್ಮಲ್ಲಿಗೆ ಬಂದು ತಮಗಿಷ್ಟದ ಡೈರಿಗಳನ್ನು ಖರೀದಿಸುತ್ತಾರೆ. ಅವರೇ ಡೈರಿಗಳಿಗೆ ಈಗ ಉಳಿದಿರುವ ಗ್ರಾಹಕರು’ ಎನ್ನುವುದು ಎಂ.ಜಿ. ರಸ್ತೆಯ ಹಿಗ್ಗಿನ್ ಬಾಥಮ್ಸ್ ಪುಸ್ತಕ ಮಳಿಗೆ ನಿರ್ವಾಹಕ ಸಿ. ಆನಂದ ಹೇಳುವ ಮಾತು.

ಕಾಗದದ ಡೈರಿಗಳನ್ನು ಕೊಳ್ಳುವವರ ಸಂಖ್ಯೆ ಕಳೆದ ನಾಲ್ಕೈದು ವರ್ಷಗಳ ಅವಧಿಯಲ್ಲಿ ಶೇಕಡ 30ರಷ್ಟು ಕಡಿಮೆ ಆಗಿದೆ ಎನ್ನುತ್ತಾರೆ ಸಪ್ನ ಬುಕ್‌ ಹೌಸ್‌ನ ವ್ಯವಸ್ಥಾಪಕ ದೊಡ್ಡೇಗೌಡ. ಇಂಥ ವಸ್ತುಗಳನ್ನು ಖರೀದಿ ಮಾಡುವವರಲ್ಲಿ ಹಳಬರೇ ಹೆಚ್ಚು ಎನ್ನುವುದು ಅವರ ಮಾತು ಕೂಡ ಹೌದು.

ಕಾಗದದ ಡೈರಿಗಳ ವಿಚಾರದಲ್ಲಿ ಇಷ್ಟೆಲ್ಲ ಓದಿದ ನಂತರ ಒಂದು ಕಾಲಘಟ್ಟ ಮುಗಿದೇಹೋಯಿತು ಅಂದುಕೊಳ್ಳಬೇಕಿಲ್ಲ. ತಂತ್ರಜ್ಞಾನದ ವಿಚಾರದಲ್ಲಿ ಐರೋಪ್ಯ ರಾಷ್ಟ್ರಗಳು ಮತ್ತು ಅಮೆರಿಕ ನಮಗಿಂತ ಹಲವು ವರ್ಷಗಳಷ್ಟು ಮುಂದಿವೆ ಎನ್ನುವುದು ಪ್ರಚಲಿತ ನಂಬಿಕೆ. ಈ ಮಾತನ್ನು ಒಪ್ಪಿಕೊಂಡು, ಯುರೋಪಿನ ಪತ್ರಿಕೆಗಳತ್ತ ಒಮ್ಮೆ ಕಣ್ಣು ಹಾಯಿಸಿದರೆ, ಲಂಡನ್ನಿನಂತಹ ನಗರಗಳಲ್ಲಿ ಕಾಗದದ ಡೈರಿ ಮಾರಾಟ ಹೆಚ್ಚುತ್ತಿರುವ ಕುರಿತ ವರದಿಗಳು ಕಾಣಿಸುತ್ತವೆ.

‘ಕಾಗದದ ಡೈರಿಗಳ ಮಾರಾಟದಲ್ಲಿ ಹೆಚ್ಚಳ ಆಗಿದೆ’ ಎನ್ನುವ ವರದಿಯನ್ನು ಲಂಡನ್ನಿನ ಪ್ರತಿಷ್ಠಿತ ‘ಫೈನಾನ್ಶಿಯಲ್ ಟೈಮ್ಸ್’ ಪತ್ರಿಕೆ ಪ್ರಕಟಿಸಿತ್ತು. ಅಂದರೆ, ಡಿಜಿಟಲ್‌ ಡೈರಿಗಳನ್ನು ಕೈಗೆತ್ತಿಕೊಂಡ ಅಲ್ಲಿನ ಜನ, ಮತ್ತೆ ಕಾಗದದ ಡೈರಿಗಳನ್ನೇ ಪ್ರೀತಿಯಿಂದ ಆಲಂಗಿಸಲು ಆರಂಭಿಸಿದರು ಎಂದು ಭಾವಿಸಬಹುದೇ?

ತಂತ್ರಜ್ಞಾನದ ವಿಚಾರದಲ್ಲಿ ನಾವು ಐರೋಪ್ಯರನ್ನು ಅಥವಾ ಅಮೆರಿಕನ್ನರನ್ನು ಅನುಕರಿಸುತ್ತೇವೆ ಎಂದು ಭಾವಿಸುವುದಾದರೆ, ನಾವೂ ಒಂದು ಹಂತದಲ್ಲಿ ಡಿಜಿಟಲ್‌ ಡೈರಿಗಳತ್ತಲೋ, ಡಿಜಿಟಲ್ ಕ್ಯಾಲೆಂಡರ್‌ಗಳತ್ತಲೋ ಮುಖ ಮಾಡಿ, ಕೆಲವು ಕಾಲ ಅವುಗಳ ಸಖ್ಯದಲ್ಲಿದ್ದು, ನಂತರ ಕಾಗದದ ಕಡೆ ಮತ್ತೆ ಹೆಜ್ಜೆಯಿಡುತ್ತೇವೆ ಎಂದು ಅಂದುಕೊಳ್ಳಬಹುದೆ?

***

‘ಕಾಗದ ಪ್ರೀತಿ ಕಮ್ಮಿ ಆಗಿಲ್ಲ’

ಡಿಜಿಟಲ್‌ ಮಂತ್ರ ಪಠಣ ಎಷ್ಟೇ ಜೋರಾಗಿ ನಡೆಯುತ್ತಿದ್ದರೂ ಕಾಗದದ ಮೇಲಿನ ಪ್ರೀತಿ ಕಡಿಮೆ ಆಗಿಲ್ಲ ಎನ್ನುವವರು ಎಲ್ಲ ತಲೆಮಾರುಗಳಲ್ಲೂ ಇದ್ದಾರೆ. ‘ನನ್ನ ಪರ್ಸ್‌ನಲ್ಲಿ ಒಂದು ಪುಟ್ಟ ಡೈರಿ ಇಟ್ಟುಕೊಂಡಿರುತ್ತೇನೆ. ಹಾಗೆಯೇ ತಿಥಿ, ವಾರ, ನಕ್ಷತ್ರಗಳನ್ನು ನೋಡಿಕೊಳ್ಳಲು ನನಗೆ ಸ್ಥಳೀಯವಾಗಿ ಮುದ್ರಿಸಿದ ಕ್ಯಾಲೆಂಡರ್‌ ಬೇಕೇ ಬೇಕು. ಕಾಗದದ ಡೈರಿ, ಕ್ಯಾಲೆಂಡರ್‌ಗಳು ಕ್ರ್ಯಾಶ್‌ ಆಗುವುದಿಲ್ಲ, ಇವಕ್ಕೆ ಬ್ಯಾಟರಿ ಚಾರ್ಜ್‌ ಮಾಡಬೇಕಾದ ಅಗತ್ಯವೂ ಇಲ್ಲ’ ಎನ್ನುತ್ತಾರೆ ಬೆಂಗಳೂರಿನ ಪುಸ್ತಕ ವ್ಯಾಪಾರಿ ಕೃಷ್ಣ.

‘ಡಿಜಿಟಲ್‌ ಮಾಧ್ಯಮ ಅದೆಷ್ಟೇ ಬೆಳೆದಿದ್ದರೂ ಮುದ್ರಿತ ಪುಸ್ತಕಗಳ ಮಾರಾಟವನ್ನು ಕುಗ್ಗಿಸಲು ಅದಕ್ಕೆ ಆಗಿಲ್ಲ ಎಂಬುದನ್ನೂ ವರದಿಯಲ್ಲಿ ಸೇರಿಸಿಬಿಡಿ’ ಎಂದರು ಕೃಷ್ಣ.

‘ಇಂಕ್‌ ಪೆನ್‌ಗೆ ಶಾಯಿ ಭರ್ತಿ ಮಾಡಿಕೊಂಡು, ದಪ್ಪ ದಪ್ಪ ಹಾಳೆಗಳ ಡೈರಿ ಮೇಲೆ ನಮ್ಮ ಕೆಲಸಗಳ ಬಗ್ಗೆ, ಆಲೋಚನೆಗಳ ಬಗ್ಗೆ ಬರೆಯುವ ಮಜವನ್ನು ಡಿಜಿಟಲ್ ಡೈರಿಗಳು ಯಾವತ್ತೂ ನೀಡಲಾರವು’ ಎನ್ನುವುದು ಸಾಫ್ಟ್‌ವೇರ್‌ ಎಂಜಿನಿಯರ್‌ ಆಗಿ ಅಮೆರಿಕದಲ್ಲಿ ಕೆಲಸ ಮಾಡುತ್ತಿರುವ ರಾಧಿಕಾ ನಾರಾಯಣ್ ಅವರ ಅಭಿಪ್ರಾಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry