7
X

'ಪ್ರಜಾವಾಣಿ'ಯ ಜಾಲತಾಣವನ್ನು ಹೆಚ್ಚು ಓದುಗ ಸ್ನೇಹಿಯಾಗಿಸುವ ಉದ್ದೇಶದಿಂದ ಹೊಸ ವಿನ್ಯಾಸವನ್ನು ರೂಪಿಸಲಾಗಿದೆ.
ಈ ವಿನ್ಯಾಸದ ಕುರಿತ ನಿಮ್ಮ ಅಭಿಪ್ರಾಯಗಳನ್ನು ಇಲ್ಲಿರುವ ಲಿಂಕ್ ಕ್ಲಿಕ್ಕಿಸುವ ಮೂಲಕ ನಮಗೆ ತಿಳಿಸಬಹುದು

webfeedback@prajavani.co.in

ಠಾಕೂರ್‌ಗೆ ಬಯಸದೆ ಬಂದ ಭಾಗ್ಯ

Published:
Updated:
ಠಾಕೂರ್‌ಗೆ ಬಯಸದೆ ಬಂದ ಭಾಗ್ಯ

ಅಂದು ಡಿಸೆಂಬರ್‌ 18. ಹಿಮಾಚಲ ಪ್ರದೇಶದ ಜನರ 40 ದಿನಗಳ ಕಾಯುವಿಕೆಗೆ ತೆರೆ ಬೀಳಲಿದ್ದ ದಿನ. ನವೆಂಬರ್‌ 9ರಂದು ನಡೆದಿದ್ದ ಚುನಾವಣೆಯ ಮತ ಎಣಿಕೆ ಕಾರ್ಯ ಆರಂಭ ಆಗುತ್ತಿದ್ದಂತೆ, ಹಿಮಾಲಯದ ತಪ್ಪಲಲ್ಲಿರುವ ಈ ರಾಜ್ಯದಲ್ಲಿ ನಿರೀಕ್ಷೆಯಂತೆಯೇ ಐದು ವರ್ಷಗಳ ಬಳಿಕ ಭಾರತೀಯ ಜನತಾ ಪಕ್ಷ ಮರಳಿ ಅಧಿಕಾರಕ್ಕೆ ಬರುವ ಮುನ್ಸೂಚನೆಗಳು ದೊರೆಯತೊಡಗಿದ್ದವು.

ಶಿಮ್ಲಾದಲ್ಲಿರುವ ಮುಖ್ಯಮಂತ್ರಿ ಅಭ್ಯರ್ಥಿ ಪ್ರೇಮಕುಮಾರ್‌ ಧುಮಾಲ್‌ ಅವರ ಮನೆಯ ಬಳಿ ನೂರಾರು ಜನ ಬೆಂಬಲಿಗರು ಜಮೆಯಾಗಿ ಜಯಕಾರ ಕೂಗುತ್ತಿದ್ದರು. ಒಟ್ಟು 68 ಕ್ಷೇತ್ರಗಳಲ್ಲಿ 50ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದ ಬಿಜೆಪಿಗೆ ‘ಗೆಲುವು ನಿಶ್ಚಿತ’ ಎಂಬುದು ಖಾತರಿಯಾಗಿತ್ತು.

ಮಧ್ಯಾಹ್ನ 1 ಗಂಟೆಯ ವೇಳೆಗೆ ಸುಜಾನ್‌ಪುರ ಕ್ಷೇತ್ರದ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಧುಮಾಲ್‌ ಅವರ ಮನೆಯ ಅಂಗಳದಲ್ಲಿ ನೆರೆದಿದ್ದ ಬೆಂಬಲಿಗರ ಗುಂಪು ಸಣ್ಣಗೆ ಕರಗತೊಡಗಿತು. ಕಾಂಗ್ರೆಸ್‌ನ ರಾಜಿಂದರ್‌ ರಾಣಾ (ನಿನ್ನೆ, ಮೊನ್ನೆಯವರೆಗೆ ಧುಮಾಲ್‌ ಅವರ ಕಟ್ಟಾ ಬೆಂಬಲಿಗರಾಗಿದ್ದವರು) ವಿರುದ್ಧ ಸೋಲನುಭವಿಸಿದ್ದ ಧುಮಾಲ್‌ ಅವರಿಗೆ ಅದೃಷ್ಟ ಕೈಕೊಟ್ಟಿತ್ತು. ಕೆಲವೇ ಕ್ಷಣಗಳ ಹಿಂದೆ ಸಂಭ್ರಮದಲ್ಲಿ ಮಿಂದಿದ್ದ ಮನೆ ಖಾಲಿಯಾಗಿ, ಬಿಕೋ ಎನ್ನತೊಡಗಿತ್ತು. ಅಧಿಕಾರದ ಚುಕ್ಕಾಣಿ ಹಿಡಿಯಬೇಕಿದ್ದ ಮುಂಚೂಣಿ ನಾಯಕನಿಗೆ ತನ್ನ ಪಕ್ಷ ಅಧಿಕಾರಕ್ಕೆ ಬರಲಿದೆ ಎಂಬುದನ್ನೂ ಸಂಭ್ರಮಿಸಲಾರದಂತಹ ಸ್ಥಿತಿ!

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿದ್ದ ಸತ್ಪಾಲ್‌ ಸತ್ತಿ ಅವರೂ ಊನಾ ಕ್ಷೇತ್ರದಲ್ಲಿ ಪರಾಜಿತರಾಗಿದ್ದರಿಂದ, ಬಿಜೆಪಿ ವರಿಷ್ಠರು ಉತ್ತರ ಪ್ರದೇಶದಂತೆಯೇ ಅನಿವಾರ್ಯವಾಗಿ ಮತ್ತೆ ಅಚ್ಚರಿಯ ಆಯ್ಕೆಗೆ ಮುಂದಾದರು. ‘ಸೋತವರಿಗೆ ಮಣೆ ಹಾಕಲಿಕ್ಕಿಲ್ಲ’ ಎಂಬ ಜನರ ನಂಬಿಕೆ ಹುಸಿಯಾಗಲಿಲ್ಲ. ಕೇಂದ್ರದ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಹಾಗೂ ಈ ಹಿಂದೆ ಎರಡು ಬಾರಿ ಮುಖ್ಯಮಂತ್ರಿಯಾಗಿದ್ದ ಹಿರಿಯ ಮುಖಂಡ ಶಾಂತಕುಮಾರ್‌ ಅವರ ಹೆಸರುಗಳು ಮುಂಚೂಣಿಯಲ್ಲಿ ಇದ್ದವಾದರೂ ಅವರಿಗೆ ಅವಕಾಶ ದೊರೆಯಲಿಲ್ಲ.

‘ಒಬ್ಬರಿಗೆ ಕೈಕೊಟ್ಟ ಅದೃಷ್ಟ ಇನ್ನೊಬ್ಬರಿಗೆ ವರವಾಗಿ ಒಲಿದುಬರುತ್ತದೆ’ ಎಂಬ ಮಾತು ಸತ್ಯವಾಯಿತು. ಐದನೇ ಬಾರಿಗೆ ಜಯಿಸಿದ್ದ ಜಯರಾಮ್‌ ಠಾಕೂರ್‌, ಹಿಮಾಚಲದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ಸ್ಥಾನ ಅಲಂಕರಿಸಿದ ರಾಜ್ಯದ ಅತ್ಯಂತ ಕಿರಿಯ (52 ವರ್ಷ) ಎಂಬ ಹೆಗ್ಗಳಿಕೆಗೂ ಪಾತ್ರರಾದರು.

1965ರ ಜೂನ್‌ 6ರಂದು ಮಂಡಿ ಜಿಲ್ಲೆಯ ಥುನಾಗ್‌ ತಾಲ್ಲೂಕಿನ ಟಾಂಡಿ ಗ್ರಾಮದ ರಜಪೂತ ಕುಟುಂಬದ ಕೃಷಿಕ ಜೇಥುರಾಮ್‌ ಅವರ ಐವರು ಮಕ್ಕಳಲ್ಲಿ ನಾಲ್ಕನೇಯವರಾದ ಜಯರಾಮ್‌ ಠಾಕೂರ್‌, ಹುಟ್ಟೂರಿನಲ್ಲೇ ಪ್ರಾಥಮಿಕ ಶಿಕ್ಷಣ ಪೂರೈಸಿದವರು. 1981ರಲ್ಲಿ ಸ್ವಗ್ರಾಮದ ಪಕ್ಕದ ಬಾಗ್ಸಿಯಾದ್‌ ಪಟ್ಟಣದಲ್ಲಿ ಮಾಧ್ಯಮಿಕ ಶಿಕ್ಷಣ ಪೂರೈಸಿದ ಬಳಿಕ, ಬಡತನದ ಕಾರಣ ಎರಡು ವರ್ಷ ಕಾಲೇಜು ಶಿಕ್ಷಣ ಪಡೆಯದೇ ತಮ್ಮ ತಂದೆಗೆ ಕೃಷಿ ಕೆಲಸದಲ್ಲಿ ಸಹಾಯಕರಾಗಿ ದುಡಿದಿದ್ದರು.

ಆನಂತರ ಜಿಲ್ಲಾ ಕೇಂದ್ರವಾದ ಮಂಡಿಯಲ್ಲಿನ ವಲ್ಲಭ ಸರ್ಕಾರಿ ಪದವಿ ಕಾಲೇಜಿನಲ್ಲಿ ಬಿ.ಎ. ಪದವಿಗಾಗಿ ಓದುವಾಗಲೇ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ)ನ ಸಕ್ರಿಯ ಸದಸ್ಯರಾಗಿ ಗುರುತಿಸಿಕೊಂಡಿದ್ದ ಇವರು, ಚಂಡೀಗಡದ ಪಂಜಾಬ್‌ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ ಪಡೆದರು.

ಪದವಿ ಶಿಕ್ಷಣ ಪಡೆಯುವಾಗಲೇ (1986) ಎಬಿವಿಪಿಯ ರಾಜ್ಯ ಕಾರ್ಯದರ್ಶಿಯಾಗಿ ನೇಮಕಗೊಂಡಿದ್ದ ಠಾಕೂರ್‌, 1990ರಲ್ಲಿ ಬಿಜೆಪಿಯ ಯುವ ಸಂಘಟನೆಯಾದ ಭಾರತೀಯ ಜನತಾ ಯುವ ಮೋರ್ಚಾದ ಮೂಲಕ ರಾಜಕೀಯ ಪ್ರವೇಶಿಸಿದವರು.

1993ರಲ್ಲಿ ತಮ್ಮ 28ನೇ ವಯಸ್ಸಿಗೆ ಛಚಿಯೋಟ್‌ ಕ್ಷೇತ್ರದಿಂದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ, ಕೇವಲ 800 ಮತಗಳಿಂದ ಸೋಲನುಭವಿಸಿದರೂ ಪಕ್ಷದ ವರಿಷ್ಠರ ಮೆಚ್ಚುಗೆಗೆ ಪಾತ್ರರಾಗಿದ್ದರು.

1998ರಲ್ಲಿ ಮತ್ತೆ ಅದೇ ಕ್ಷೇತ್ರದಿಂದ ಸ್ಪರ್ಧಿಸಿ ಮೊದಲ ಬಾರಿಗೆ ವಿಧಾನ ಸಭೆ ಪ್ರವೇಶಿಸಿದರು. ಇವರ ಪ್ರಾಮಾಣಿಕತೆಗೆ ಮನ್ನಣೆ ನೀಡಿದ ಜನತೆ, 2003ರಲ್ಲಿ ನಡೆದ ಚುನಾವಣೆಯಲ್ಲಿ ಮತ್ತೆ ಬೆಂಬಲಿಸಿದ್ದರು. 2006ರಲ್ಲಿ ರಾಜ್ಯ ಬಿಜೆಪಿಯ ಅಧ್ಯಕ್ಷ ಸ್ಥಾನದ ಜವಾಬ್ದಾರಿ ಒಲಿದು ಬಂದಾಗ ಪಕ್ಷವನ್ನು ಅಧಿಕಾರದತ್ತ ಕೊಂಡೊಯ್ಯಲು ಶ್ರಮಿಸಿದ್ದರು. ಅಂತೆಯೇ 2007ರಲ್ಲಿ ನಡೆದಿದ್ದ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬರುವಂತಾಯಿತು. ಕ್ಷೇತ್ರಪುನರ್‌ ವಿಂಗಡಣೆಯಿಂದಾಗಿ ಛಚಿಯೋಟ್‌ ಕ್ಷೇತ್ರ ಸೆರಾಜ್‌ ಕ್ಷೇತ್ರವಾಗಿ ಬದಲಾಗಿದ್ದು, ಅಲ್ಲಿಂದಲೂ ಸತತ ಮೂರನೇ ಬಾರಿಗೆ ಗೆಲ್ಲುವ ಮೂಲಕ ಮುಖ್ಯಮಂತ್ರಿ ಸ್ಥಾನಕ್ಕೇರಿದ್ದಾರೆ.

2009ರಿಂದ 2012ರವರೆಗೆ ಪ್ರೇಮಕುಮಾರ್‌ ಧುಮಾಲ್‌ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಸಚಿವರಾಗಿ ಕಾರ್ಯ ನಿರ್ವಹಿಸಿದ ಅನುಭವವೂ ಇವರದ್ದಾಗಿದೆ.

‘ನನ್ನ ಯಶಸ್ಸಿನ ಹಿಂದೆ ಪತ್ನಿಯ ಪಾಲು ಸಾಕಷ್ಟಿದೆ’ ಎಂದು ಸದಾ ಹೇಳುವ ಠಾಕೂರ್‌ ಅವರ ವೈಯಕ್ತಿಕ ಜೀವನ ಕರ್ನಾಟಕದೊಂದಿಗೆ ಬೆಸೆದುಕೊಂಡಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಇವರ ಪತ್ನಿ ಡಾ. ಸಾಧನಾ ರಾವ್‌ ಶಿವಮೊಗ್ಗ ಮೂಲದ ಕನ್ನಡ ಕುಟುಂಬದವರು. ಇವರ ತಂದೆ– ತಾಯಿ ಉದ್ಯೋಗ ನಿಮಿತ್ತ ಬೆಂಗಳೂರಿನಿಂದ ರಾಜಸ್ಥಾನದ ಜೈಪುರಕ್ಕೆ ಹೋಗಿ ನೆಲೆಸಿದ್ದಾರೆ. 90ರ ದಶಕದ ಆರಂಭದಲ್ಲಿ ಜೈಪುರದ ಎಸ್‌ಎಂಎಸ್‌ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ ಸಾಧನಾ ಸಹ ಎಬಿವಿಪಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದವರು.

‘ವಿದ್ಯಾರ್ಥಿ ಪರಿಷತ್‌ನ ಜಮ್ಮು ಮತ್ತು ಕಾಶ್ಮೀರದ ವಿಭಾಗ ಮುಖ್ಯಸ್ಥರಾಗಿದ್ದ ದಿನಗಳಲ್ಲಿ ಪರಿಚಯವಾದ ಸಾಧನಾ, ನನ್ನನ್ನು ಮೆಚ್ಚಿಕೊಂಡು ಪ್ರೇಮ ನಿವೇದನೆ ಮಾಡಿದಾಗ ಬ್ರಹ್ಮಚಾರಿಯಾಗೇ ಉಳಿಯಬೇಕು ಎಂಬ ನಿರ್ಧಾರ ಬದಲಿಸಿದೆ’ ಎಂದು ಸ್ವತಃ ಠಾಕೂರ್‌ ಹೇಳಿಕೊಂಡಿದ್ದಾರೆ. ಈ ದಂಪತಿಯ ಇಬ್ಬರೂ ಹೆಣ್ಣುಮಕ್ಕಳು ವೈದ್ಯಕೀಯ ಪದವಿ ಕಲಿಯುತ್ತಿದ್ದಾರೆ.

ಭಾರತೀಯ ಸೇನೆಯಲ್ಲಿ ಕೆಲಸ ಮಾಡುವ ಕನ್ನಡಿಗರಿಗೆ ದೂರದ ಹಿಮಾಚಲ ಪ್ರದೇಶದಲ್ಲಿ ಕನ್ನಡದ ವಾತಾವರಣವನ್ನು ಪರಿಚಯಿಸಲು ನೆರವಾಗಲೆಂದೇ ಶ್ರಮಿಸುತ್ತಿರುವ ಡಾ. ಸಾಧನಾ, ಸಾಮಾಜಿಕ ಕಾರ್ಯದಲ್ಲೂ ತಮ್ಮನ್ನು ಗುರುತಿಸಿಕೊಂಡಿರುವುದು ವಿಶೇಷ.

ಹಿಮಾಚಲ ಅನೇಕ ಜ್ವಲಂತ ಸಮಸ್ಯೆಗಳಿಗೆ ಸಾಕ್ಷಿಯಾಗಿದೆ. ಹಾಗಾಗಿ ಠಾಕೂರ್‌ ಅವರಿಗೆ ಲಭಿಸಿರುವ ಮುಖ್ಯಮಂತ್ರಿ ಪಟ್ಟ ಹೂವಿನ ಹಾಸಿಗೆಯಂತೂ ಅಲ್ಲ. ವಿವಿಧ ಬ್ಯಾಂಕ್‌ಗಳಿಂದ ₹ 50,000 ಕೋಟಿ ಸಾಲವನ್ನು ಪಡೆದು ಅಭಿವೃದ್ಧಿಯ ಹೆಸರಿನಲ್ಲಿ ವ್ಯಯಿಸಲಾಗಿದ್ದರೂ, ರಸ್ತೆಗಳು ಸಂಚಾರಕ್ಕೆ ಯೋಗ್ಯವಾಗಿಲ್ಲ ಎಂಬುದು ನೆಚ್ಚಿನ ಪ್ರವಾಸೋದ್ಯಮದ ಪೂರಕ ಬೆಳವಣಿಗೆಗೆ ತೊಡರುಗಾಲಾಗಿದೆ. ನೈಸರ್ಗಿಕ ಶ್ರೀಮಂತಿಕೆಯಿಂದಾಗಿ ದೇಶ ವಿದೇಶಗಳ ಪ್ರವಾಸಿಗರನ್ನು ಆಕರ್ಷಿಸುವ ಶಿಮ್ಲಾ, ಮನಾಲಿ ಮತ್ತಿತರ ನಗರಗಳಲ್ಲಿ ಮೂಲಸೌಕರ್ಯಗಳ ಕೊರತೆ ಇರುವುದೂ ತಲಾ ಆದಾಯ ಹೆಚ್ಚಳಕ್ಕೆ ಇರುವ ಮೊದಲ ಅಡೆತಡೆಯಾಗಿದೆ. ಶಿಕ್ಷಣ, ಆರೋಗ್ಯ ಕ್ಷೇತ್ರಗಳೂ ನಿರ್ಲಕ್ಷ್ಯಕ್ಕೆ ಒಳಗಾಗಿರುವುದು ರಾಜ್ಯದ ಸಾಮಾಜಿಕ ಬೆಳವಣಿಗೆಗೆ ಮಾರಕವಾಗಿದೆ. ವಿದ್ಯಾವಂತ ಯುವಕರಿಗೆ ಉದ್ಯೋಗ ಒದಗಿಸುವುದೂ ಹೊಸ ಸರ್ಕಾರಕ್ಕಿರುವ ಮತ್ತೊಂದು ಸವಾಲು.

ಕಡಿಮೆ ಬಂಡವಾಳ ಹೂಡಿ, ದೊಡ್ಡ ಪ್ರಮಾಣದಲ್ಲಿ ಉದ್ಯೋಗ ಒದಗಿಸಲು ಸಾಧ್ಯವಾಗುವ ಕೈಗಾರಿಕೆ ಸ್ಥಾಪನೆಯಂತಹ ಮಾದರಿ ನೀತಿಯನ್ನು ಜಾರಿಗೊಳಿಸುವ ಅಗತ್ಯವನ್ನು ಠಾಕೂರ್‌ ಪ್ರತಿಪಾದಿಸುತ್ತಾರೆ. ‘ಪರಿಸರ ರಕ್ಷಣೆಗೆ ಸಂಬಂಧಿಸಿದ ಕಾನೂನುಗಳ ಉಲ್ಲಂಘನೆಯಾಗುತ್ತಿದ್ದರೂ ಪೊಲೀಸ್‌ ವ್ಯವಸ್ಥೆ ಮೂಕ ಪ್ರೇಕ್ಷಕನಂತಾಗಿದೆ. ಪೊಲೀಸ್‌ ವ್ಯವಸ್ಥೆ ಕುರಿತು ಜನರಲ್ಲಿ ನಂಬಿಕೆ ಮೂಡುವಂತಹ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ’ ಎಂದು ತಮ್ಮ ಸಹೋದ್ಯೋಗಿಗಳಿಗೆ ಹೇಳಿದ್ದಾರೆ.

ನಿಸರ್ಗ ಸೌಂದರ್ಯ ಮತ್ತು ಸಂಪನ್ಮೂಲಗಳಿಂದ ಕೂಡಿರುವ ರಾಜ್ಯದಲ್ಲಿ ನಗರೀಕರಣ ಶಾಪವಾಗಿ ಪರಿಣಮಿಸಿದ್ದು, ನಿಸರ್ಗದ ಶೋಷಣೆ ಅವ್ಯಾಹತವಾಗಿ ನಡೆಯುತ್ತಿದೆ. ಇದುವರೆಗೆ ಆಡಳಿತ ನಡೆಸಿರುವ ಬಿಜೆಪಿ ಮತ್ತು ಕಾಂಗ್ರೆಸ್ ಸರ್ಕಾರಗಳು ನಗರೀಕರಣದ ಪ್ರಚಂಡ ಬೆಳವಣಿಗೆಯನ್ನು ತಡೆಯುವಲ್ಲಿ ವಿಫಲವಾಗಿರುವುದೂ ಅಭಿವೃದ್ಧಿಯಿಂದ ಹಿಂದೆ ಉಳಿಯುವುದಕ್ಕೆ ಪ್ರಮುಖ ಕಾರಣ ಎಂಬುದನ್ನೂ ಅವರು ಮನಗಂಡಿದ್ದಾರೆ.

ಡಿಸೆಂಬರ್‌ 27ರಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿರುವ ಠಾಕೂರ್‌, ಹತ್ತಾರು ಹಿರಿಯರನ್ನು ಪಕ್ಕಕ್ಕಿರಿಸಿ, ಯುವ ಪಡೆಗೇ ತಮ್ಮ ಸಂಪುಟದಲ್ಲಿ ಸ್ಥಾನ ನೀಡಿದ್ದಾರೆ. ಪ್ರೇಮಕುಮಾರ್‌ ಧುಮಾಲ್‌ ಹಾಗೂ ಅವರ ಪುತ್ರ ಅನುರಾಗ್‌ ಠಾಕೂರ್‌ ಮಾತ್ರವಲ್ಲದೆ, ಪಕ್ಷದಲ್ಲಿನ ಇತರ ಬಣಗಳೂ ಠಾಕೂರ್‌ ಆಯ್ಕೆಯನ್ನು ಮೇಲ್ನೋಟಕ್ಕೆ ಒಪ್ಪಿಕೊಂಡಿದ್ದರೂ ಒಳಗೊಳಗೇ ಕುದಿಯುತ್ತಿವೆ.

ವೀರಭದ್ರಸಿಂಗ್‌ ನೇತೃತ್ವದ ಕಾಂಗ್ರೆಸ್ ಸರ್ಕಾರ ಆಡಳಿತ ನಡೆಸಿದ ಅವಧಿಯಲ್ಲಿ ತಮ್ಮ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರನ್ನು ನಿಗಮ– ಮಂಡಳಿಗಳಿಗೆ ನೇಮಿಸಿರುವುದನ್ನು ಬಿಜೆಪಿ ಟೀಕಿಸುತ್ತಲೇ ಬಂದಿದೆ. ವಿಚಿತ್ರವೆಂದರೆ, ತಮಗೆ ನಿಗಮ ಮತ್ತು ಮಂಡಳಿಗಳ ಅಧ್ಯಕ್ಷ ಸ್ಥಾನ ಸಿಗಬಹುದು ಎಂಬ ನಿರೀಕ್ಷೆ ಸಚಿವ ಸ್ಥಾನ ಮರೀಚಿಕೆಯಾಗಿರುವ ಬಿಜೆಪಿಯ ಅನೇಕ ಮುಖಂಡರಲ್ಲಿ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry