ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಡುಗಾಟಿಕೆಯಿಂದಾದ ಕೊಲೆ

Last Updated 30 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಬಾಲಾಪರಾಧಿಗಳಿಗೆ ಸಂಬಂಧಿಸಿದ ಸಂಹಿತೆ ಮತ್ತು ಅಧಿನಿಯಮಗಳು, ನಿಯಮ ಮತ್ತು ಕಟ್ಟುಕಟ್ಟಳೆಗಳು ಹತ್ತಾರು. ಇವುಗಳಲ್ಲಿ ಕಂಡುಬರುವ ಪ್ರಕ್ರಿಯೆಗಳಲ್ಲಿ ಕಾನೂನು ರಚನಾಕಾರರ ದೂರದೃಷ್ಟಿ, ಪ್ರಾಪಂಚಿಕ ಜ್ಞಾನ ಮತ್ತು ಅನುಭವ ಆಶ್ಚರ್ಯೋಪಾದಿಯಲ್ಲಿ ಮೇಳೈಸುತ್ತವೆ. ಇವುಗಳನ್ನು ಗಮನಿಸಿಕೊಳ್ಳುವುದೇ ಒಂದು ಶಿಕ್ಷಣ.

ನಾನು ಹೇಳಹೊರಟಿರುವ ಘಟನೆ ನಡೆದದ್ದು 1983ರ ಜನವರಿ 30ರಂದು. ಆಗ ನನ್ನ ಆತ್ಮೀಯ ಗೆಳೆಯ, ಬೆಂಗಳೂರಿನ ಶ್ರೀರಾಂಪುರದ ವಾಸಿ ವಕೀಲ ಬಾಲಕೃಷ್ಣನ್ ಬದುಕಿದ್ದ. ಅವನು ಶ್ರೀರಾಂಪುರದ ಅತಿ ಬಡವರಿಗೆಲ್ಲ ಬೇಕಾದವನಾಗಿದ್ದ. ಒಂದು ದಿನ ವೀರಬಾಹು ಮತ್ತು ಅವನ ಹೆಂಡತಿ ರುದ್ರಾಣಮ್ಮ ಅವನನ್ನು ಕಂಡು ತಮ್ಮ ಗಂಡು ಮಕ್ಕಳಾದ ಕುನ್ನಯ್ಯ ಮತ್ತು ಅಚ್ಚಯ್ಯ ಕ್ರಿಮಿನಲ್ ಪ್ರಕರಣವೊಂದರಲ್ಲಿ ದಸ್ತಗಿರಿಯಾಗಿರುವ ವಿಚಾರ ತಿಳಿಸಿ ನನ್ನೊಂದಿಗೆ ಮಾತನಾಡಲು ಬಂದರು.

ಘಟನೆಗೆ ನಾಲ್ಕು ತಿಂಗಳ ಹಿಂದೆ, ಬಾಬುಸಾ ಪಾಳ್ಯದಲ್ಲಿ ಗುತ್ತಿಗೆದಾರ ರುದ್ರಪತಿಯವರು ನಿರ್ಮಿಸುತ್ತಿದ್ದ ಬಹುಮಹಡಿ ಕಟ್ಟಡದಲ್ಲಿ ಕೂಲಿ ಕೆಲಸಕ್ಕೆಂದು ವೀರಬಾಹು ತನ್ನ ಸಂಸಾರದೊಂದಿಗೆ ಹೋಗಿ ಸೇರಿಕೊಂಡರು. ಅಲ್ಲಿ ಕೆಲಸ ಮಾಡುತ್ತಿದ್ದವರಿಗೆಲ್ಲ ವಾಸ್ತವ್ಯಕ್ಕೆ ಪಕ್ಕದ ಖಾಲಿ ಜಾಗದಲ್ಲಿ ಗುತ್ತಿಗೆದಾರರು ತಾತ್ಕಾಲಿಕ ಏರ್ಪಾಟು ಮಾಡಿದ್ದರು. ವೀರಬಾಹುವಿನ ಮಕ್ಕಳು ಶಾಲೆಗೆ ಹೋಗುತ್ತಿರಲಿಲ್ಲ. ವಯಸ್ಸಿಗೆ ಮೀರಿದ ಮೈಕಟ್ಟನ್ನು ಹೊಂದಿದ್ದರು. ಅಲ್ಲದೆ ಒರಟುತನ ಮೈಗೂಡಿಸಿಕೊಂಡಿದ್ದರು. ಅಲ್ಲಿ ಕೆಲಸ ಮಾಡುತ್ತಿದ್ದ ಇತರ ಕೆಲಸಗಾರರ ಮಕ್ಕಳೊಂದಿಗೆ ಆಟವಾಡುತ್ತಾ ಕಾಲ ಕಳೆಯುತ್ತಿದ್ದರು. ಮಕ್ಕಳು ತಮಗೆ ಬೇಕಾದಂತೆ ಆಟವಾಡಲು ಸ್ವತಂತ್ರರಿದ್ದರಾದರೂ ಯಾವುದೇ ಅವಘಡಕ್ಕೆ ಅವಕಾಶಕೊಡದಂತೆ ನಡೆದುಕೊಳ್ಳಬೇಕೆಂದು ರುದ್ರಪತಿಯವರು ಆಗಾಗ್ಗೆ ಎಚ್ಚರಿಸುತ್ತಿದ್ದರು.

ಆ ದಿನ ಕಟ್ಟಡದ ಕೆಲಸಗಾರರಿಗೆ ರಜಾ ದಿನವಾಗಿದ್ದು. ಸಾಯಂಕಾಲ ನಾಲ್ಕೂವರೆ ವೇಳೆಗೆ ಮುಂದಿನ ವಾರಕ್ಕಾಗಿ ದವಸ-ಧಾನ್ಯ ತರಲು ಮಕ್ಕಳನ್ನು ಅಲ್ಲಿಯೇ ಬಿಟ್ಟು ಹೋಗಿದ್ದರು. ಮಕ್ಕಳು ನಿರ್ಮಾಣ ಹಂತದಲ್ಲಿದ್ದ ಬಹು ಅಂತಸ್ತಿನ ಕಟ್ಟಡದಲ್ಲಿ ತಮಗೆ ಬೇಕಾದಂತೆ ಆಟವಾಡಿಕೊಳ್ಳುತ್ತಿದ್ದರು. ಸಾಯಂಕಾಲ ಐದೂವರೆ ಸಮಯದಲ್ಲಿ ವಯಸ್ಕರ ಗುಂಪೊಂದು ಅವರಿದ್ದ ಕಟ್ಟಡದ ಮುಖವಾಗಿ, ‘ಹಿಡಿಯಿರಿ! ಬಿಡಬೇಡಿ! ಸಾಯಿಸಿರಿ’ ಎಂದು ಕೂಗುತ್ತ ಒಬ್ಬ ವ್ಯಕ್ತಿಯನ್ನು ಅಟ್ಟಿಸಿಕೊಂಡು ಬಂತು. ಆ ವ್ಯಕ್ತಿ ಅವರಿಂದ ತಪ್ಪಿಸಿಕೊಳ್ಳಲು ಮಕ್ಕಳು ಆಟವಾಡುತ್ತಿದ್ದ ಕಟ್ಟಡಕ್ಕೆ ನುಗ್ಗಿದ. ಅಲ್ಲಿದ್ದ ಮಕ್ಕಳ ಮುಂದೆಯೇ ಮೇಲಕ್ಕೆ ಓಡಿದ. ಅವನನ್ನು ಹಿಂದೆ ಬಿದ್ದಿದ್ದವರು ‘ಹಿಡಿಯಿರಿ! ಅವನನ್ನ ಮುಗಿಸಿ ಬಿಡೋಣ. ಇಂಥಾ ನನ್ಮಕ್ಳು ಇರ್ಬಾರ್ದು, ಇವನ್ಗೆ ಗತಿ ಕಾಣಿಸ್ಲೇ ಬೇಕು’ ಎಂದೆಲ್ಲಾ ಮಕ್ಕಳ ಮುಂದೆಯೂ ಕೂಗುತ್ತಾ ಅವನನ್ನ ಬೆನ್ನತ್ತಿ ಹೋದರು. ಆ ಮಕ್ಕಳು ದಂಗಾದರು. ಕ್ಷಣಕಾಲ ಅವರಿಗೆ ದಿಕ್ಕು ತೋಚದಂತಾಯಿತು. ಇದೆಲ್ಲ ಏನಿರಬಹುದೆಂದು ಆ ಮಕ್ಕಳು ಗ್ರಹಿಸಿಕೊಳ್ಳುವುದರೊಳಗೆ ಅಟ್ಟಿಸಿಕೊಂಡು ಹೋಗಿದ್ದವರು, ‘ಅವನು ಸತ್ತ, ಬೇಗ ಓಡಿ; ಯಾರ ಕೈಗೂ ಸಿಕ್ಕೋದು ಬೇಡ’ ಎಂದು ಕೂಗಾಡುತ್ತಾ ದಡದಡನೆ ಮೆಟ್ಟಿಲುಗಳನ್ನು ಇಳಿದು ಓಡಿಹೋದರು. ಕೆಲಸಗಾರರ ಮಕ್ಕಳು ಒಟ್ಟುಗೂಡಿ ಮೇಲೆ ಹೋಗಿ ನೋಡಿದಾಗ 4ನೇ ಮಹಡಿಯಲ್ಲಿ ಒಬ್ಬ ವ್ಯಕ್ತಿಗೆ ಕೈಕಾಲು, ಎದೆಯಭಾಗದಲ್ಲಿ ರಕ್ತಗಾಯಗಳಾಗಿ ಬಿದ್ದಿದ್ದ. ಆ ಮಕ್ಕಳಲ್ಲಿ ಕೆಲವರು ‘ಅವನು ಸತ್ತಿದ್ದಾನೆ, ಯಾರೂ ಹತ್ತಿರ ಹೋಗಿ ಹೆಣವನ್ನು ಮುಟ್ಟೋದು ಬೇಡ’ ಎಂದು ತಮ್ಮತಮ್ಮಲ್ಲೇ ಮಾತನಾಡಿಕೊಳ್ಳುತ್ತಿದ್ದಾಗ ವೀರಬಾಹುವಿನ ಹಿರಿಯ ಮಗ ಜಂಭದಿಂದ, ‘ಸತ್ತಿದ್ದರೇನು, ನಾನು ಮುಟ್ಟಲು ಹೆದರೋದಿಲ್ಲ, ನಾನು ಏನು ಮಾಡ್ತೇನೆ ನೋಡಿ’ ಎನ್ನುತ್ತಾ ಬಿದ್ದಿದ್ದ ಆ ವ್ಯಕ್ತಿಯ ಕುತ್ತಿಗೆಯ ಮೇಲೆ ತನ್ನ ಒಂದು ಕಾಲನ್ನಿಟ್ಟು ಜೋರಾಗಿ ತುಳಿದನು. ಅವನ ತಮ್ಮ ಅಚ್ಚಯ್ಯನು ತನ್ನ ಅಣ್ಣ ತುಳಿದ ನಂತರ ‘ನಂಗೂ ಹೆದ್ರಿಕೆ ಆಗಲ್ಲ, ನಾನೂ ತುಳೀತೀನಿ ನೋಡಿ’ ಎಂದು ಇತ್ತಿಂದತ್ತ ಮತ್ತು ಅತ್ತಿಂದಿತ್ತ ತಲೆದಿಂಬು ತುಳಿದಂತೆ ಕುತ್ತಿಗೆಯನ್ನು ತುಳಿದನು. ಅವರ ಸಹಪಾಠಿಗಳು ಅಣ್ಣತಮ್ಮಂದಿರ ಅಟಾಟೋಪವನ್ನು ಭಯದಿಂದಲೇ ಗಮನಿಸಿಕೊಂಡರು. ಅಷ್ಟರಲ್ಲಿ ಹೊರಗಿನ ಜನರು ಬಂದು ಹೆಣದ ಸುತ್ತುವರೆದು ನಿಂತರು. ಕೆಲವರು ಹೆಣವನ್ನು ಆಪಾದಮಸ್ತಕ ಪರೀಕ್ಷಿಸಿಕೊಂಡು, ‘ಇದು ರೌಡಿಶೀಟರ್ ಜಿಂಕೆರಾಮನದು’ ಎಂದು ಗುರುತು ಹಚ್ಚಿದರು.

ಸುದ್ದಿ ಪಡೆದ ಸ್ಥಳೀಯ ಪೊಲೀಸರು ಬಂದು ಅಲ್ಲಿದ್ದ ಜನರನ್ನು ಸಾವಿಗೆ ಕಾರಣವೇನೆಂದು ವಿಚಾರಿಸಿದರು. ಅವರಲ್ಲಿ ಒಂದಿಬ್ಬರು ಅಲ್ಲಿಂದ ಸ್ವಲ್ಪ ದೂರದಲ್ಲಿ ಕಾಣುತ್ತಿದ್ದ ಆಟದ ಮೈದಾನದ ಕಡೆ ಪೊಲೀಸರಿಗೆ ಕೈತೋರಿಸುತ್ತಾ, ‘ಅಲ್ಲಿ ಮರಗಳ ಕೆಳಗೆ ನಡೆದುಹೋಗುತ್ತಿದ್ದ ಒಬ್ಬ ಹುಡುಗಿಯನ್ನು ಜಿಂಕೆರಾಮನು ಅತ್ಯಾಚಾರ ಮಾಡಲು ಪ್ರಯತ್ನಿಸಿದಾಗ ಆ ಹುಡುಗಿಯು ಪ್ರತಿಭಟಿಸುತ್ತ ಸಹಾಯಕ್ಕಾಗಿ ಜೋರಾಗಿ ಕೂಗಿಕೊಂಡಳು. ಅಲ್ಲೇ ಕ್ರಿಕೆಟ್ ಆಡುತ್ತಿದ್ದ ಹುಡುಗರು, ಕೂಡಲೇ ಅವರಿದ್ದ ಕಡೆ ಬ್ಯಾಟ್‌ಗಳನ್ನು ಹಿಡಿದು ಬಂದಾಗ ಜಿಂಕೆರಾಮನು ಅವರಿಗೆ ಸಿಗದಂತೆ ಅಲ್ಲಿಂದ ಕಾಲು ಕಿತ್ತ. ಹುಡುಗರು, ‘ಹಿಡಿಯಿರಿ, ಬಿಡಬೇಡಿ’ ಎನ್ನುತ್ತಾ ಅವನ ಬೆನ್ನತ್ತಿದ್ದರು. ಜಿಂಕೆರಾಮನು ದಿಕ್ಕು ತೋಚದೆ ಈ ಕಟ್ಟಡದೊಳಕ್ಕೆ ನುಗ್ಗಿದ. ಬೆನ್ನತ್ತಿದ್ದವರೂ ಒಳನುಗ್ಗಿದರು. ನಾವುಗಳು ಅವರನ್ನು ಹುಡುಕುತ್ತಾ ನಾಲ್ಕನೇ ಮಹಡಿಗೆ ಬಂದಾಗ ಈ ಮಕ್ಕಳು ‘ಕ್ರಿಕೆಟ್ ಹುಡುಗರು ಇವನನ್ನು ಹೊಡೆದು ಸಾಯಿಸಿ ಓಡಿಹೋದರೆಂದು ತಿಳಿಸಿದರು’ ಎಂದು ಪೊಲೀಸರಿಗೆ ವಿವರಿಸಿದರು.

ಪೊಲೀಸರು ತಮಗೆ ದೊರೆತ ಮಾಹಿತಿಯನುಸಾರ ಕೊಲೆಯಾದ ವಿಚಾರವಾಗಿ ಫಿರ್ಯಾದನ್ನು ಪಡೆದು ಒಂದು ಪ್ರಕರಣವನ್ನು ಅಪರಿಚಿತ ಆರೋಪಿಗಳ ವಿರುದ್ಧ ದಾಖಲಿಸಿಕೊಂಡರು. ಜಿಂಕೆರಾಮನ ಶವವನ್ನು ಪರೀಕ್ಷೆ ಮಾಡಿದ ವೈದ್ಯರು, ಅವನ ಸಾವು ಕುತ್ತಿಗೆಯ ಮೂಳೆಮುರಿದು ಉಸಿರುಗಟ್ಟಿ ಉಂಟಾಗಿರುವುದೆಂದೂ, ಬೇರೆ ಭಾಗದಲ್ಲಿ ಕಂಡು ಬಂದ ಇತರೆ ರಕ್ತಗಾಯಗಳು ಸಾವಿಗೆ ಕಾರಣವಲ್ಲವೆಂದೂ ಅಭಿಪ್ರಾಯಪಟ್ಟರು. ಸಾವನ್ನು ಕುರಿತು ವೈದ್ಯರು ಕೊಟ್ಟ ಅಭಿಪ್ರಾಯವನ್ನು ಆಧರಿಸಿ ತನಿಖೆ ಮುಂದುವರೆಸಿದಾಗ ಜಿಂಕೆರಾಮನನ್ನು ಬೆನ್ನತ್ತಿ ಹೊಡೆದ ಕ್ರಿಕೆಟ್ ಹುಡುಗರು ಸಿಕ್ಕಿಬಿದ್ದರು. ಕೃತ್ಯಕ್ಕೆ ಬಳಸಿದ ಬ್ಯಾಟ್‌ಗಳನ್ನು ವಶಪಡಿಸಿಕೊಂಡರು. ಆದರೆ ಸತ್ತವನ ಕುತ್ತಿಗೆಗೆ ಬ್ಯಾಟ್‌ಗಳಿಂದ ಹೊಡೆಯಲಿಲ್ಲ
ವೆಂದು ಗೊತ್ತಾಯಿತು. ಅವರ ಹೇಳಿಕೆಗಳ ಸತ್ಯಾಂಶವನ್ನು ಖಚಿತಪಡಿಸಿಕೊಳ್ಳಲು ಶವಪರೀಕ್ಷೆ ಮಾಡಿದ ವೈದ್ಯರಿಗೆ ಬ್ಯಾಟ್‌ಗಳನ್ನು ತಲುಪಿಸಿ ಶವಪರೀಕ್ಷಾ ವರದಿಯಲ್ಲಿ ಕಂಡುಬರುವ ಗಾಯಗಳನ್ನು ಅವರಿಗೆ ಕಳುಹಿಸಿಕೊಟ್ಟಿರುವ ಬ್ಯಾಟುಗಳಿಂದ ಉಂಟುಮಾಡಬಹುದೇ? ಎಂದು ಕೇಳಿಕೊಂಡರು. ಬ್ಯಾಟ್‌ಗಳನ್ನು ಮತ್ತು ಶವದ ಮೇಲೆ ಕಂಡುಬಂದ ಹೊರ ಮತ್ತು ಒಳ ಗಾಯಗಳನ್ನು ಪರೀಕ್ಷಿಸಿಕೊಂಡ ವೈದ್ಯರು, ಶವದ ಕುತ್ತಿಗೆಯಲ್ಲಿ ಕಂಡುಬಂದ ಮೂಳೆಮುರಿತ ಮತ್ತು ಗಾಯಗಳ ಹೊರತಾಗಿ ಬೇರೆ ಕಡೆ ಕಂಡುಬಂದ ಗಾಯಗಳನ್ನು ಮಾತ್ರ ಬ್ಯಾಟುಗಳಿಂದ ಉಂಟುಮಾಡಬಹುದೆಂದು ಸ್ಪಷ್ಟಪಡಿಸಿದರು. ತನಿಖಾಧಿಕಾರಿಯು ವೈದ್ಯರಿಂದ ಸ್ಪಷ್ಟನಾ ಪತ್ರವನ್ನು ಪಡೆದುಕೊಂಡ ಮೇಲೆ ಅವರ ಸ್ಥಿತಿಯು ಇಕ್ಕುಳದಲ್ಲಿ ಸಿಕ್ಕಿಕೊಂಡಂತಾಯಿತು. ಕಾರಣ ಶವದ ಕುತ್ತಿಗೆಯ ಮೇಲೆ ಮತ್ತು ಒಳಗೆ ಕಂಡುಬಂದ ಮಾರಕ ಗಾಯಗಳು ಕಗ್ಗಂಟಾದವು.

ಕಟ್ಟಡದಲ್ಲಿದ್ದ ಮಕ್ಕಳ ಹೇಳಿಕೆಗಳನ್ನು ದಾಖಲು ಮಾಡಿಕೊಂಡಾಗ ಕುನ್ನಯ್ಯ ಮತ್ತು ಅಚ್ಚಯ್ಯ ಪೆಟ್ಟು ತಿಂದು ಸತ್ತವನಂತೆ ಬಿದ್ದಿದ್ದ ವ್ಯಕ್ತಿಯ ಕುತ್ತಿಗೆಯನ್ನು ಜೋರಾಗಿ ಇತ್ತಿಂದತ್ತಾ, ಅತ್ತಿಂದಿತ್ತಾ ಕಾಲಿನಿಂದ ತುಳಿದಿದ್ದನ್ನು ತಿಳಿಸಿಯೇ ಬಿಟ್ಟರು. ಈ ಮಾಹಿತಿ ಆಧರಿಸಿ ತನಿಖಾಧಿಕಾರಿಯು ಕೂಡಲೇ ಶವಪರೀಕ್ಷಾ ವೈದ್ಯರನ್ನು ಸಂಪರ್ಕಿಸಿದರು. ವೈದ್ಯರು ಒಬ್ಬ ವ್ಯಕ್ತಿಯು ಕಾಲಿನಿಂದ ಕುತ್ತಿಗೆಯನ್ನ ತೂಕ ಬಿಟ್ಟು ತುಳಿದರೆ ಅಂತಹ ಗಾಯಗಳು ಆಗಲು ಸಾಧ್ಯವೆಂದು ಖಚಿತವಾಗಿ ಉತ್ತರಿಸಿದರು.

ಕುನ್ನಯ್ಯ ಮತ್ತು ಅಚ್ಚಯ್ಯ ನೋಡಲು ಅಪ್ರಾಪ್ತ ವಯಸ್ಸಿನವರಂತೆ ಕಾಣುತ್ತಿದ್ದರು. ಅವರ ಜನ್ಮದಿನಾಂಕಗಳು ಎಲ್ಲಿಯೂ ದಾಖಲಾಗಿರಲಿಲ್ಲ. ಅವರು ಶಾಲೆಗೆ ಹೋದವರೂ ಅಲ್ಲ. ಹೀಗಾಗಿ ಅವರ ನಿರ್ದಿಷ್ಟ ವಯಸ್ಸನ್ನು ಕಂಡುಹಿಡಿಯಬೇಕಾದ ಅನಿವಾರ್ಯತೆ ಎದುರಾಯಿತು. ತನಿಖಾಧಿಕಾರಿಯು ಅದನ್ನು ನಿರ್ಧರಿಸಿಕೊಳ್ಳಲು ಸಂಬಂಧಪಟ್ಟ ವಿಧಿವೈದ್ಯ ತಜ್ಞರು ಹಾಗೂ ವಿಧಿವಿಜ್ಞಾನ ತಜ್ಞರ ಮುಂದೆ ಅಣ್ಣ
ತಮ್ಮಂದಿರನ್ನು ಹಾಜರುಪಡಿಸಿ ವಿವಿಧ ಪರೀಕ್ಷೆಗಳಿಗೆ ಒಳಪಡಿಸಿದರು. ಎರಡೂ ಪ್ರಕಾರಗಳಿಂದ ಬಂದ ವರದಿಯಂತೆ ಕುನ್ನಯ್ಯ 11 ವರ್ಷ, ಅಚ್ಚಯ್ಯ 6 ವರ್ಷ ವಯಸ್ಸಿನವರೆಂದು ಗೊತ್ತಾಯಿತು.

ತನಿಖೆ ಮುಗಿಸಿ ಆರೋಪಣಾ ವರದಿಯನ್ನು ಕೊಲೆ ಆರೋಪ ಹೊರಿಸುತ್ತಾ ಅಣ್ಣ ತಮ್ಮಂದಿರ ವಿರುದ್ಧ ವಿಚಾರಣೆಗಾಗಿ ಬಾಲಾಪರಾಧಿಗಳ ನ್ಯಾಯಾಲಯಕ್ಕೂ, ಇತರರ ವಿರುದ್ಧ ಕೊಲೆ ಪ್ರಯತ್ನ ಆರೋಪದ ಮೇಲೆ ಕಮಿಟಲ್ ಕೋರ್ಟಿಗೆ ಸಲ್ಲಿಸಲಾಯಿತು. ಈ ಹಂತದಲ್ಲಿ ವಕೀಲ ಗೆಳೆಯ ಬಾಲಕೃಷ್ಣನ್, ತನ್ನ ಜೊತೆ ನಾನೂ ಅಣ್ಣತಮ್ಮಂದಿರ ಪರ ವಕಾಲತ್ತನ್ನು ವಹಿಸಬೇಕೆಂದು ಕೇಳಿಕೊಂಡನು. ಆಗಲೇ ನಾನು ಕೆಲವು ಕೊಲೆ ಪ್ರಕರಣಗಳ ವಿಚಾರಣೆಯಲ್ಲಿ ಆರೋಪಿಗಳ ಪರ ಭಾಗವಹಿಸುತ್ತಿದ್ದು, ಇದರಲ್ಲೂ ಭಾಗವಹಿಸುವುದು ಕಷ್ಟವಾಗುವುದೆಂದು ತಿಳಿಸಿ ಪ್ರಕರಣದ ವಿಚಾರಣೆಯ ಸಂಬಂಧ ಸಮಾಲೋಚನೆ ನಡೆಸಲು ಒಪ್ಪಿದೆ.

ಬಾಲಾಪರಾಧಿಗಳ ನ್ಯಾಯಾಲಯದಲ್ಲಿ ಅಣ್ಣತಮ್ಮಂದಿರ ವಿರುದ್ಧ ಜಿಂಕೆರಾಮನ ಕೊಲೆ ಸಂಬಂಧದ ವಿಚಾರಣೆ ಪ್ರಾರಂಭವಾದಾಗ ಅನೇಕ ಕಾನೂನು ಸಂಬಂಧಿ ರೋಚಕ ವಿಷಯಗಳು ಹೊರಬರಲಾರಂಭಿಸಿದವು. ಭಾರತ ದಂಡ ಸಂಹಿತೆಯ ಕಲಂ 82ರಂತೆ ‘ಏಳು ವರ್ಷಗಳಿಗಿಂತ ಕಡಿಮೆ ವಯಸ್ಸಿನ ಮಗು ಮಾಡಿದ ಯಾವುದೇ ಕೃತ್ಯವೂ ಅಪರಾಧವಾಗುವುದಿಲ್ಲ’. ಇದರರ್ಥ ಏಳು ವರ್ಷ ವಯಸ್ಸು ತುಂಬದ ಒಂದು ಮಗು ಕೊಲೆಯನ್ನೇ ಮಾಡಿದರೂ ಆ ಮಗುವು ಕೊಲೆ ಮಾಡಿದೆ ಎಂದು ಪರಿಗಣಿಸುವಂತಿಲ್ಲ ಎಂಬುದು ನ್ಯಾಯಸಂಗತಿಯ ಪೂರ್ವಭಾವನೆ. ಮುಂದುವರೆದಂತೆ ಆ ವಯಸ್ಸಿನೊಳಗಿನ ಮಗುವು ಕೊಲೆಯನ್ನು ಮಾಡಿಯೇ ಇಲ್ಲ ಎಂದು ಒಪ್ಪಿಗೆಯಾದಂತೆಯೇ ಭಾವಿಸಿಕೊಳ್ಳಬೇಕೆಂದು ಕಾನೂನು ಬಲಾತ್ಕರಿಸುತ್ತದೆ. ಇದನ್ನು ಭಾರತ ಸಂವಿಧಾನದ ಆರ್ಟಿಕಲ್ 361 ಕ್ಕೆ (2 ಮತ್ತು 3) ಹೋಲಿಸಿ ನೋಡಿದಾಗ ‘ರಾಷ್ಟ್ರಪತಿಯ ಅಥವಾ ಒಂದು ರಾಜ್ಯದ ರಾಜ್ಯಪಾಲರ ಪದಾವಧಿಯಲ್ಲಿ ಅವರ ವಿರುದ್ಧ ಯಾವುದೇ ಕ್ರಿಮಿನಲ್ ವ್ಯವಹರಣೆಯನ್ನು ಯಾವುದೇ ನ್ಯಾಯಾಲಯದಲ್ಲಿ ಹೂಡತಕ್ಕದ್ದಲ್ಲ ಮತ್ತು ಮುಂದುವರೆಸತಕ್ಕದ್ದಲ್ಲ; ರಾಷ್ಟ್ರಪತಿಯ ಅಥವಾ ಒಂದು ರಾಜ್ಯದ ರಾಜ್ಯಪಾಲರ ಪದಾವಧಿಯಲ್ಲಿ ಅವನನ್ನು ದಸ್ತಗಿರಿ ಮಾಡಲು ಅಥವಾ ಕಾರಾಗೃಹದಲ್ಲಿರಿಸಲು ಯಾವುದೇ ನ್ಯಾಯಾಲಯವೂ ಯಾವುದೇ ಆದೇಶಿಕೆಯನ್ನು ಹೊರಡಿಸತಕ್ಕದ್ದಲ್ಲ’. ಅಂದರೆ ರಾಷ್ಟ್ರಪತಿ ಮತ್ತು ರಾಜ್ಯಪಾಲರುಗಳಂತೆ ಏಳು ವರ್ಷ ಒಳಗಿನ ವಯಸ್ಸಿನ ಮಗುವಿಗೆ ಭಾರತ ದಂಡ ಸಂಹಿತೆಯ ಕಲಂ 82 ಸಂಪೂರ್ಣ ಸಂರಕ್ಷಣೆ ಒದಗಿಸುತ್ತದೆ. ಇನ್ನೂ ಜೀವಂತವಿದ್ದ ಜಿಂಕೆರಾಮನ ಕುತ್ತಿಗೆಯ ಮೇಲೆ ಕಾಲಿನಿಂದ ತುಳಿದು ಸಾವನ್ನುಂಟುಮಾಡಿದ ಅಚ್ಚಯ್ಯ, ಕಾನೂನಿನ ಈ ತತ್ವದ ಬಲದಿಂದ ಸುಲಭವಾಗಿ ಹೊರನಡೆದ.

ಭಾರತ ದಂಡ ಸಂಹಿತೆಯ ಕಲಂ 83ರಂತೆ ‘ಏಳು ವರ್ಷ ಮೀರಿದ ಆದರೆ ಹನ್ನೆರಡು ವರ್ಷಕ್ಕೆ ಕಡಿಮೆ ವಯಸ್ಸಿನ ಮಗು ಒಂದು ಕೃತ್ಯವನ್ನು ಮಾಡುವಾಗ ಅದು ಆ ಸಂದರ್ಭದಲ್ಲಿ ತನ್ನ ವರ್ತನೆಯ ಸ್ವರೂಪ ಮತ್ತು ಪರಿಣಾಮವನ್ನು ನಿರ್ಣಯಿಸಲು ಸಾಕಾಗುವಷ್ಟು ತಿಳಿವಳಿಕೆಯನ್ನು ಹೊಂದಿಲ್ಲದಿದ್ದರೆ, ಆ ಮಗು ಮಾಡಿದ ಕೃತ್ಯವು ಅಪರಾಧವಾಗುವುದಿಲ್ಲ. ಈ ಕಲಂ ಕುನ್ನಯ್ಯನಿಗೆ ಸಂಬಂಧಪಟ್ಟದ್ದಾಗಿ ಅವನು ಕೃತ್ಯವೆಸಗಿದ ಸಮಯದಲ್ಲಿ ಅಪರಿಪಕ್ವ ತಿಳಿವಳಿಕೆಯವನಾಗಿದ್ದನಲ್ಲದೆ, ತಾನೇ ನಿರ್ಣಯಿಸಿಕೊಳ್ಳುವ ಬುದ್ಧಿಶಕ್ತಿ ಇಲ್ಲದವನಾಗಿದ್ದನೆಂದು ನಿರೂಪಿಸಬೇಕಾಗಿ ಬಂತು.

ವಿಚಾರಣೆಯಲ್ಲಿ ಅನೇಕ ಮಕ್ಕಳು ಸಾಕ್ಷ್ಯ ನುಡಿದರು. ಅವರು ತಮ್ಮ ಸಾಕ್ಷ್ಯದಲ್ಲಿ ಬೇರೆಯ ಮಕ್ಕಳು ಪೆಟ್ಟು ತಿಂದು ಬಿದ್ದಿದ್ದ ವ್ಯಕ್ತಿಯ ಹತ್ತಿರ ಸುಳಿಯಲು ಅಂಜುತ್ತಿದ್ದಾಗ ‘ಕುನ್ನಯ್ಯನು ತಾನು ಹೆಣವನ್ನು ಮುಟ್ಟಲು ಹೆದರುವುದಿಲ್ಲವೆಂದೂ, ಧೈರ್ಯವಂತನೆಂದೂ ತನ್ನ ಬೆನ್ನನ್ನು ತಾನೇ ತಟ್ಟಿ
ಕೊಳ್ಳುತ್ತಾ ತನ್ನ ಬಲಗಾಲನ್ನು ಕೆಳಗೆ ಬಿದ್ದಿದ್ದವನ ಕುತ್ತಿಗೆಯ ಮೇಲಿಟ್ಟು ಬಲವಾಗಿ ತುಳಿದನು’ ಎಂಬುದಾಗಿ ತಿಳಿಸಿದ್ದರು. ‘ಕುನ್ನಯ್ಯನು ಸತ್ತಿರುವ ವ್ಯಕ್ತಿಯ ಕುತ್ತಿಗೆಯನ್ನು ತುಳಿದೆನೆಂದು ತಾವೆಲ್ಲರೂ ನಿಜವಾಗಿ ಭಾವಿಸಿದ್ದಾಗಿಯೂ’ ತಿಳಿಸಲು ಮರೆತಿರಲಿಲ್ಲ. ಇಂತಹ ಸಾಕ್ಷ್ಯದೆದುರು ನ್ಯಾಯಸಂಗತಿಯ ಪೂರ್ವಭಾವನೆಯನ್ನು (Presumtion of Law) ಹಿಮ್ಮೆಟ್ಟಿಸಲು ಬೇಕಾಗಿರುವ ಪ್ರತಿಪ್ರಮಾಣಗಳನ್ನು ಬಾಲಾಪರಾಧಿ ನ್ಯಾಯಾಲಯ ಒಪ್ಪುವಂತೆ ಒದಗಿಸಿದಂತಾಗಿ ಕುನ್ನಯ್ಯನು ಕೊಲೆ ಆರೋಪದಿಂದ ಬಿಡುಗಡೆಗೆ ಅರ್ಹನೆಂದು ಬಾಲಾಪರಾಧ ನ್ಯಾಯಾಲಯ ತೀರ್ಮಾನಿಸಿತು.

ಈ ಪ್ರಕರಣದಲ್ಲಿ ನನ್ನ ಗೆಳೆಯ ಪ್ರತ್ಯಕ್ಷವಾಗಿಯೂ, ನಾನು ಪರೋಕ್ಷವಾಗಿಯೂ ಭಾಗವಹಿಸಿದ್ದರಿಂದ ನಮಗೆ ಸಿಕ್ಕಿದ್ದು ‘ಮುಗ್ಧತೆಯ ಪರಾಕಾಷ್ಠೆ ಏನು’ ಎಂಬುದು.

(ಲೇಖಕ ಹೈಕೋರ್ಟ್‌ ವಕೀಲ)

ಹೆಸರುಗಳನ್ನು ಬದಲಾಯಿಸಲಾಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT