7
ಸಕಾರಾತ್ಮಕ ನೆಲೆಯಲ್ಲಿ ಷೇರುಪೇಟೆಯ ವರ್ಷಾಂತ್ಯದ ವಹಿವಾಟು ಅಂತ್ಯ

ನಾಲ್ಕನೇ ವಾರವೂ ಸೂಚ್ಯಂಕ ಏರಿಕೆ

Published:
Updated:
ನಾಲ್ಕನೇ ವಾರವೂ ಸೂಚ್ಯಂಕ ಏರಿಕೆ

ಮುಂಬೈ: ದೇಶದ ಷೇರುಪೇಟೆಗಳಲ್ಲಿ ಸತತ ನಾಲ್ಕನೇ ವಾರವೂ ಸೂಚ್ಯಂಕಗಳು ಏರಿಕೆ ದಾಖಲಿಸಿವೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) ವಾರದ ವಹಿವಾಟಿನಲ್ಲಿ 116 ಅಂಶ ಏರಿಕೆ ಕಂಡು ಹೊಸ ಮಟ್ಟವಾದ 34,057ಕ್ಕೆ ತಲುಪಿತು.

ವರ್ಷಾಂತ್ಯದ ನಾಲ್ಕು ದಿನಗಳ ವಹಿವಾಟು ಆರಂಭದಲ್ಲಿ ಮಂದತಿಯಲ್ಲಿ ಸಾಗಿತ್ತು. ಡಿಸೆಂಬರ್‌ ತಿಂಗಳ ಸರ್ಕಾರಿ ಬಾಂಡ್‌ಗಳ ವಾಯಿದಾ ವಹಿವಾಟು ಅವಧಿ ಗುರುವಾರ ಮುಕ್ತಾಯವಾಗಿದ್ದೂ ಚಟುವಟಿಕೆಯನ್ನು ತಗ್ಗಿಸಿತ್ತು. ಹೀಗಿದ್ದರೂ ಭವಿಷ್ಯದ ಬಗೆಗಿನ ಸಕಾರಾತ್ಮಕ ಭಾವನೆಯು ಸಾರ್ವಕಾಲಿಕ ದಾಖಲೆ ಮಟ್ಟದಲ್ಲಿ ವಹಿವಾಟು ನಡೆಯುವಂತೆ ಮಾಡಿತು.

ಹೆಚ್ಚುವರಿ ಸಾಲ ಪಡೆಯುವ ಕೇಂದ್ರ ಸರ್ಕಾರದ ಯೋಜನೆ, ವಿತ್ತೀಯ ಕೊರತೆ, ಕಚ್ಚಾ ತೈಲ ಬೆಲೆ ಏರಿಕೆಯಂಥ ವಿದ್ಯಮಾನಗಳು ಮಾರಾಟಕ್ಕೆ ಒತ್ತು ನೀಡಿದರೆ, ಉತ್ತಮ ಪ್ರಗತಿಯ ನಿರೀಕ್ಷೆ, ಮೂರನೇ ತ್ರೈಮಾಸಿಕದಲ್ಲಿ ಕಂಪೆನಿಗಳ ಆರ್ಥಿಕ ಸಾಧನೆ ಚೇತರಿಸಿಕೊಳ್ಳುವ ವಿಶ್ವಾಸ ಹಾಗೂ ಮುಂಬರುವ ಕೇಂದ್ರ ಬಜೆಟ್‌ ಮಾರುಕಟ್ಟೆ ಸ್ನೇಹಿಯಾಗಿರುವ ನಿರೀಕ್ಷೆಗಳು ಸೂಚ್ಯಂಕವನ್ನು ಕುಸಿಯದಂತೆ ತಡೆದವು. ಅಂತಿಮವಾಗಿ 2017ನೇ ವರ್ಷವನ್ನು ಸಕಾರಾತ್ಮಕ ನೆಲೆಯಲ್ಲಿ ಅವಿಸ್ಮರಣೀಯವಾಗಿರಿಸುವಂಥ ವಹಿವಾಟು ನಡೆಯಿತು.

ರಿಯಲ್ ಎಸ್ಟೇಟ್‌, ಆರೋಗ್ಯಸೇವೆ, ತಂತ್ರಜ್ಞಾನ, ವಿದ್ಯುತ್‌, ವಾಹನ, ಗ್ರಾಹಕ ಬಳಕೆ ವಸ್ತುಗಳು, ಎಫ್‌ಎಂಸಿಜಿಗಳಲ್ಲಿ ಉತ್ತಮ ವಹಿವಾಟು ನಡೆಯಿತು. ಲೋಹ, ಸರ್ಕಾರಿ ಸ್ವಾಮ್ಯದ ಕಂಪೆನಿಗಳು, ತೈಲ ಮತ್ತು ಅನಿಲ, ಬ್ಯಾಂಕಿಂಗ್ ಷೇರುಗಳು ಲಾಭ ಗಳಿಕೆ ಉದ್ದೇಶದ ವಹಿವಾಟಿಗೆ ಒಳಗಾದವು.

ಸನ್‌ ಫಾರ್ಮಾ ಶೇ 7.60ರಷ್ಟು ಗರಿಷ್ಠ ಗಳಿಕೆ ಕಂಡುಕೊಂಡಿತು. ವಿಪ್ರೊ (ಶೇ 4.09) ಡಾ. ರೆಡ್ಡಿ (ಶೇ 3.9), ಟಾಟಾ ಸ್ಟೀಲ್‌ (ಶೇ 3.07) ರಷ್ಟು ಗಳಿಕೆ ಕಂಡುಕೊಂಡಿವೆ.

ಚಿನ್ನ ₹ 545 ಏರಿಕೆ

ಚಿನ್ನ, ಬೆಳ್ಳಿ ಬೆಲೆ ಸತತ ಮೂರನೇ ವಾರವೂ ಏರಿಕೆ ದಾಖಲಿಸಿದೆ. ₹ 10 ಗ್ರಾಂಗೆ ₹ 545 ರಷ್ಟು ಹೆಚ್ಚಾಗಿ ₹ 29,240ರಂತೆ ಮಾರಾಟವಾಯಿತು.

ಸಂಗ್ರಹಕಾರರು ಮತ್ತು ಚಿಲ್ಲರೆ ಮಾರಾಟಗಾರರಿಂದ ಬೇಡಿಕೆ ಹೆಚ್ಚಾಗಿದೆ. ಇದರಿಂದ ಬೆಲೆ ಏರಿಕೆ ಕಂಡಿದೆ ಎಂದು ತಜ್ಞರು ಹೇಳಿದ್ದಾರೆ.

ಕೈಗಾರಿಕೆಗಳಿಂದ ಬೇಡಿಕೆ ಹೆಚ್ಚಾಗಿದ್ದರಿಂದ ಬೆಳ್ಳ ₹ 1,245 ರಷ್ಟು ಏರಿಕೆ ಕಂಡು ಪ್ರತಿ ಕೆ.ಜಿಗೆ ₹ 38,425 ರಂತೆ ಮಾರಾಟವಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry