7
ಅಪಘಾತ ತಡೆಯಲು ಹೊಸ ನಿಯಮ ರೂಪಿಸಿದ ನೇಪಾಳ: ಸಚಿವ ಸಂಪುಟ ಒಪ್ಪಿಗೆ

ಒಬ್ಬಂಟಿ ಪರ್ವತಾರೋಹಿಗಳಿಗೆ ಎವರೆಸ್ಟ್ ನಿಷೇಧ

Published:
Updated:
ಒಬ್ಬಂಟಿ ಪರ್ವತಾರೋಹಿಗಳಿಗೆ ಎವರೆಸ್ಟ್ ನಿಷೇಧ

ಕಠ್ಮಂಡು: ಅಪಘಾತಗಳು ಸಂಭವಿಸುವುದನ್ನು ತಡೆಯುವ ಸಲುವಾಗಿ, ಒಬ್ಬಂಟಿ ಪರ್ವತಾರೋಹಿಗಳಿಗೆ ಎವರೆಸ್ಟ್ ಸೇರಿದಂತೆ ಎಲ್ಲ ಪರ್ವತಗಳನ್ನು ಏರುವುದನ್ನು ನೇಪಾಳ ಸರ್ಕಾರ ನಿಷೇಧಿಸಿದೆ.

ಪರ್ವತಾರೋಹಣ ನಿಯಂತ್ರಣ ನಿಯಮಗಳನ್ನು ಪರಿಷ್ಕರಿಸಲು ನೇಪಾಳ ಸಚಿವ ಸಂಪುಟ ಶುಕ್ರವಾರ ಒಪ್ಪಿಗೆ ನೀಡಿದೆ.

‘ಈ ಮೊದಲು ಒಬ್ಬಂಟಿ ಪರ್ವತಾರೋಹಿಗಳಿಗೆ ಅವಕಾಶ ನೀಡಲಾಗುತ್ತಿತ್ತು. ಸುರಕ್ಷಿತ ಪರ್ವತಾರೋಹಣಕ್ಕಾಗಿ ಹಾಗೂ ಸಾವುಗಳ ಸಂಖ್ಯೆ ಕಡಿಮೆ ಮಾಡುವ ಉದ್ದೇಶದಿಂದ ಈ ಕ್ರಮಕೈಗೊಳ್ಳಲಾಗಿದೆ’ ಎಂದು ನೇಪಾಳದ ಸಂಸ್ಕೃತಿ, ಪ್ರವಾಸೋದ್ಯಮ ಹಾಗೂ ನಾಗರಿಕ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ಮಹೇಶ್ವರ್ ನೌಪನೆ ಹೇಳಿದ್ದಾರೆ.

ಅನುಭವಿ ಪರ್ವತಾರೋಹಿ ಸ್ವಿಟ್ಜರ್ಲೆಂಡ್‌ನ ಎಲೈ ಸ್ಟೆಕ್ ಅವರು ಈ ವರ್ಷ ಏಪ್ರಿಲ್‌ನಲ್ಲಿ ಒಬ್ಬಂಟಿಯಾಗಿ ನಪ್ಟ್ಸೆಪರ್ವತ ಏರುವ ವೇಳೆ ಜಾರಿ ಬಿದ್ದು ಮೃತಪಟ್ಟಿದ್ದರು.

ಒಬ್ಬಂಟಿಯಾಗಿ ಪರ್ವತಾರೋಹಣ ಮಾಡುವ ಸವಾಲು ಎದುರಿಸಲು ಇಚ್ಚಿಸುವ ಪರ್ವತಾರೋಹಿಗಳು ನೇಪಾಳ ಸರ್ಕಾರದ ಕ್ರಮಕ್ಕೆ ಆಕ್ರೋಶ ವ್ಯಕ್ತಪಡಿಸುವ ಸಾಧ್ಯತೆ ಇದೆ.

ಎರಡೂ ಕಾಲು ಇಲ್ಲದ ಹಾಗೂ ದೃಷ್ಟಿಹೀನ ಪರ್ವತಾರೋಹಿಗಳನ್ನೂ ನಿಷೇಧಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ.

‘ಈ ಶಿಫಾರಸನ್ನು ಸಂಪುಟಸಭೆ ಜಾರಿಗೆ ತಂದರೆ ಅದು ಅಂಗವಿಕಲರ ವಿರುದ್ಧದ ತಾರತಮ್ಯ ಹಾಗೂ ಮಾನವಹಕ್ಕುಗಳ ಉಲ್ಲಂಘನೆ ಆಗುತ್ತದೆ’ ಎಂದು ಮಾಜಿ ಗೋರ್ಖಾ ಯೋಧ ಹಾಗೂ ಎವರೆಸ್ಟ್ ಏರಲು ಸಿದ್ಧರಾಗುತ್ತಿರುವ ಹರಿ ಬುಧ ಮಗರ್ ಪ್ರತಿಕ್ರಿಯಿಸಿದ್ದಾರೆ. ಅಫ್ಗಾನಿಸ್ತಾನದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾಗ ಮಗರ್ ಅವರು ತಮ್ಮ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry