ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತಕ್ಕೆ ದಕ್ಕಿದ ರಾಜತಾಂತ್ರಿಕ ಗೆಲುವು

Last Updated 30 ಡಿಸೆಂಬರ್ 2017, 20:45 IST
ಅಕ್ಷರ ಗಾತ್ರ

ಭಾರತದ ರಾಜತಾಂತ್ರಿಕ ಗೆಲುವು

ಅಮೆರಿಕದ ಅಧ್ಯಕ್ಷರ ಬದಲಾವಣೆಯಂತಹ ಮಹತ್ವದ ಜಾಗತಿಕ ವಿದ್ಯಮಾನ 2017 ಹೊಸ ವರ್ಷದ ಆರಂಭಕ್ಕೆ ಮುನ್ನುಡಿ ಬರೆಯಿತು. ಬರಾಕ್‌ ಒಬಾಮ ವಿದಾಯ ಮತ್ತು ಡೊನಾಲ್ಡ್‌ ಟ್ರಂಪ್‌ ಶ್ವೇತಭವನ ಪ್ರವೇಶ ಈ ವರ್ಷದ ಬಹು ಮುಖ್ಯ ಘಟನೆ.

ಚೀನಾ ಜತೆ ದೋಕಲಾ ಗಡಿ ಸಂಘರ್ಷ ಮತ್ತು ಅಂತರರಾಷ್ಟ್ರೀಯ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ಭಾರತದ ದಲ್ವೀರ್‌ ಭಂಡಾರಿ ಆಯ್ಕೆಯಲ್ಲಿ ಭಾರತ ರಾಜತಾಂತ್ರಿಕ ಗೆಲುವು ಸಾಧಿಸಿದ ವರ್ಷವಿದು. ಪಾಕಿಸ್ತಾನದ ಜೈಲಿಯನಲ್ಲಿರುವ ಕುಲಭೂಷಣ್‌ ಜಾಧವ್‌ ಬಿಡುಗಡೆ ಭಾರತದ ರಾಜತಾಂತ್ರಿಕ ಜಾಣ್ಮೆಗೆ ಸವಾಲಾಗಿದೆ.

ದೋಕಲಾ: ಸರಿದ ಯುದ್ಧದ ಕಾರ್ಮೋಡ

ಭಾರತ- ಚೀನಾ ಗಡಿಯಲ್ಲಿನ ತಂಟೆ, ತಕರಾರು ಹೊಸದಲ್ಲ. ದಶಕಗಳ ಇತಿಹಾಸ ಇದೆ. ಅದರ ಮುಂದುವರೆದ ಭಾಗವೇ ದೋಕಲಾ ಸಂಘರ್ಷ. ಭಾರತ, ಭೂತಾನ್ ಮತ್ತು ಟಿಬೆಟ್ ನಡುವಿನ ಗಡಿಭಾಗ ದೋಕಲಾ ಪ್ರದೇಶದಲ್ಲಿ ಚೀನಾ ಅಕ್ರಮವಾಗಿ ರಸ್ತೆ ನಿರ್ಮಿಸಲು ಮುಂದಾದಾಗ ಭಾರತದ ಸೈನಿಕರು ಮಾನವ ಗೋಡೆ ನಿರ್ಮಿಸಿ ಅಡ್ಡಗಟ್ಟಿದ್ದರು.ಚೀನಿ ಸೈನಿಕರು ಭಾರತದ ಬಂಕರ್‌ ನಾಶ ಮಾಡುವುದರೊಂದಿಗೆ ಬಿಕ್ಕಟ್ಟು ಉಲ್ಬಣಿಸಿತು.

ಎರಡು ತಿಂಗಳಲ್ಲಿ ಹೇಳಿಕೆ, ಪ್ರತಿ ಹೇಳಿಕೆಗಳ ವಾಕ್ಸಮರ ತಾರಕಕ್ಕೇರಿ ಯುದ್ಧದ ಕಾರ್ಮೋಡ ನಿರ್ಮಾಣವಾಗಿತ್ತು. ಮೊದಲಿದ್ದ ಸ್ಥಿತಿ ಕಾಪಾಡಿಕೊಳ್ಳುವ ಒಪ್ಪಂದದೊಂದಿಗೆ ಎರಡೂ ದೇಶಗಳು ಸೈನಿಕರನ್ನು ಹಿಂದಕ್ಕೆ ಕರೆಸಿಕೊಂಡವು. ಚೀನಾ ರಸ್ತೆ ನಿರ್ಮಿಸುವ ಯೋಜನೆ ಕೈಬಿಟ್ಟಿತು. 73 ದಿನಗಳ ಬಿಕ್ಕಟ್ಟು ಶಮನವಾಗಿ, ಯುದ್ಧದ ಕಾರ್ಮೋಡ ಸರಿಯಿತು.

ಇದನ್ನು ಭಾರತದ ರಾಜತಾಂತ್ರಿಕ ಗೆಲುವೆಂದು ಬಣ್ಣಿಸಲಾಯಿತು.ಒತ್ತಡದ ಸ್ಥಿತಿಯಲ್ಲೂ ಸಂಯಮ ಕಳೆದುಕೊಳ್ಳದ ಭಾರತ ಪ್ರಬುದ್ಧತೆ ಮತ್ತು ತಾಳ್ಮೆ ಪ್ರದರ್ಶಿಸಿತು. ಭಾರತ– ಚೀನಾ ಸಂಬಂಧಕ್ಕೆ ಅಗ್ನಿಪರೀಕ್ಷೆಯಾಗಿದ್ದ ದೋಕಲಾ ಬಿಕ್ಕಟ್ಟು ಅಂತ್ಯದೊಂದಿಗೆ ಎರಡೂ ರಾಷ್ಟ್ರಗಳ ಸಂಬಂಧ, ವಾಣಿಜ್ಯ ವಹಿವಾಟಿಗೆ ಆಗಿದ್ದ ಅಡ್ಡಿ, ಆತಂಕ ದೂರವಾದವು. ಬ್ರಿಕ್ಸ್‌ ಸಮ್ಮೇಳನದಲ್ಲಿ ಪುನಃ ಎರಡೂ ರಾಷ್ಟ್ರಗಳ ಬಾಂಧವ್ಯ ಚಿಗುರೊಡೆಯಿತು.

ಭಂಡಾರಿ ಆಯ್ಕೆ: ಭಾರತಕ್ಕೆ ಧಕ್ಕಿದ ಗೆಲುವು

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯ ರಾಷ್ಟ್ರಗಳ ವಿರೋಧ ಮತ್ತು ಹಲವು ಸುತ್ತುಗಳ ಮತದಾನದನ ಹೊರತಾಗಿಯೂ ಹೇಗ್‌ ಅಂತರರಾಷ್ಟ್ರೀಯ ನ್ಯಾಯಾಲಯದ(ಐಸಿಜೆ) ನ್ಯಾಯಮೂರ್ತಿಯಾಗಿ ಭಾರತೀಯ ಮೂಲದ ದಲ್ವೀರ್ ಭಂಡಾರಿ ಚುನಾಯಿತರಾದರು.

ಎರಡನೇ ಬಾರಿ ಆಶ್ಚರ್ಯಕರ ರೀತಿಯ ಈ ಗೆಲುವು ಭಾರತಕ್ಕೆ ಅಷ್ಟು ಸುಲಭದ್ದಾಗಿರಲಿಲ್ಲ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಐದು ಕಾಯಂ ಸದಸ್ಯರ ನಡುವೆ ಒಡಕು ಮೂಡಿಸುವ ಭಾರತದ ತಂತ್ರ ಫಲ ನೀಡಿತು. ಕೊನೆಯ ಕ್ಷಣದಲ್ಲಿ ಬ್ರಿಟನ್‌ ತನ್ನ ಅಭ್ಯರ್ಥಿ ಕ್ರಿಸ್ಟೋಫರ್‌ ಗ್ರೀನ್‌ವುಡ್‌ ಅವರನ್ನು ಕಣದಿಂದ ಹಿಂದಕ್ಕೆ ಕರೆಸಿಕೊಂಡಿತು. ಇದು ಕೂಡ ಭಾರತದ ರಾಜತಾಂತ್ರಿಕ ಯತ್ನಕ್ಕೆ ದೊರೆತ ಜಯವಾಗಿತ್ತು.

(ನ್ಯಾಯಮೂರ್ತಿ ದಲ್ವೀರ್‌ ಭಂಡಾರಿ)

71 ವರ್ಷಗಳ ಅಂತರಾಷ್ಟ್ರೀಯ ನ್ಯಾಯಾಲಯದ ಇತಿಹಾಸದಲ್ಲಿ ಮೊದಲ ಬಾರಿಗೆ ಐಸಿಜೆಯಲ್ಲಿ ಬ್ರಿಟನ್ ಪ್ರತಿನಿಧಿಸುವ ನ್ಯಾಯಮೂರ್ತಿ ಇಲ್ಲದಂತಾಗಿದೆ. ಭದ್ರತಾ ಮಂಡಳಿಯ ಕಾಯಂ ಸದಸ್ಯ ರಾಷ್ಟ್ರವೊಂದು ಸಾಮಾನ್ಯ ಸದಸ್ಯ ರಾಷ್ಟ್ರವನ್ನು ಎದುರಿಸಲಾಗದೆ ಹಿಂದೆ ಸರಿದಿದ್ದು ಕೂಡ ಇದೇ ಮೊದಲು.

ಪಾಕಿಸ್ತಾನದ ಜತೆ ಕುಲಭೂಷಣ್ ಜಾಧವ್ ಪ್ರಕರಣ, ಚೀನಾದೊಂದಿಗೆ ಬ್ರಹ್ಮಪುತ್ರ ನದಿ ನೀರು ಹಂಚಿಕೆ ವಿವಾದ ಸೇರಿ ಅನೇಕ ವಿವಾದ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಇರುವುದರಿಂದ ಐಸಿಜೆಯಲ್ಲಿ ಭಂಡಾರಿ ಉಪಸ್ಥಿತಿ ಭಾರತಕ್ಕೆ ಅನಿವಾರ್ಯ.

ರಾಜತಾಂತ್ರಿಕ ಸಮಸ್ಯೆಯಾದ ಕುಲಭೂಷಣ್‌ ಪ್ರಕರಣ

ಭಾರತ ಮತ್ತು ಪಾಕಿಸ್ತಾನ ನಡುವೆ ಜಟೀಲ ರಾಜತಾಂತ್ರಿಕ ಸಮಸ್ಯೆಯಾಗಿರುವ ಭಾರತೀಯ ನಿವೃತ್ತ ಸೇನಾಧಿಕಾರಿ ಕುಲಭೂಷಣ್ ಜಾಧವ್ ಪ್ರಕರಣ ಕೂಡ ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿದೆ.

(ಕುಲಭೂಷಣ್‌ ಜಾಧವ್‌ ತಾಯಿ ಮತ್ತು ಪತ್ನಿ)

ಬೇಹುಗಾರಿಕೆ ಸಂಬಂಧ ಪಾಕಿಸ್ತಾನ ಮಿಲಿಟರಿ ಕೋರ್ಟ್ ಕುಲಭೂಷಣ್ ಜಾಧವ್‌ಗೆ ವಿಧಿಸಿದ್ದ ಗಲ್ಲು ಶಿಕ್ಷೆಗೆ ಐಸಿಜೆ ತಡೆ ನೀಡಿದ್ದು, ಅಂತಿಮ ತೀರ್ಪು ನೀಡುವವರೆಗೂ ಗಲ್ಲು ಶಿಕ್ಷೆ ವಿಧಿಸದಂತೆ ತಾಕೀತು ಮಾಡಿದೆ. ಇದರಿಂದ ಪಾಕಿಸ್ತಾನಕ್ಕೆ  ಮುಖಭಂಗವಾಗಿದೆ.ಇದು ಕೂಡ ಭಾರತಕ್ಕೆ ಸಿಕ್ಕ ತಾತ್ಕಾಲಿಕ ಗೆಲುವು.

ಜಾಧವ್‌ ಭೇಟಿಯಾಗಲು ಭಾರತದ ರಾಯಭಾರಿಗಳಿಗೆ ಅವಕಾಶ ನಿರಾಕರಿಸಿದ್ದ ಪಾಕಿಸ್ತಾನ ವರ್ಷಾಂತ್ಯದಲ್ಲಿ ಜಾಧವ್  ತಾಯಿ ಮತ್ತು ಪತ್ನಿಗೆ ಮಾನವೀಯ ನೆಲೆಯಲ್ಲಿ ಅವಕಾಶ ಕಲ್ಪಿಸಿತ್ತು. 22 ತಿಂಗಳ ನಂತರ ಜಾಧವ್‌ ತನ್ನ ತಾಯಿ, ಪತ್ನಿ ಜತೆ ಮುಖಾಮುಖಿಯಾದರು.

ಆದರೆ, ಜಾಧವ್‌ ಕುಟುಂಬವನ್ನು ಪಾಕಿಸ್ತಾನ ಗೌರವದಿಂದ ನಡೆಸಿಕೊಳ್ಳಲಿಲ್ಲ. ಅವರು ಧರಿಸಿದ್ದ ಬಟ್ಟೆ ಬದಲಾಯಿಸುವಂತೆ ಮಾಡಿದ ಅಧಿಕಾರಿಗಳು, ತಾಳಿ, ಬಳೆ ತೆಗೆಸಿ, ಕುಂಕುಮ ಅಳಿಸಿದರು ಎಂದು ಭಾರತ ಆರೋಪಿಸಿತ್ತು. ವರ್ಷದ ಕೊನೆಯಲ್ಲಿ ನಡೆದ ಈ ಘಟನೆ ವಿವಾದದ ಬಿರುಗಾಳಿ ಎಬ್ಬಿಸಿದ್ದು, ಎರಡೂ ರಾಷ್ಟ್ರಗಳ ರಾಜತಾಂತ್ರಿಕ ಸಮರಕ್ಕೆ ನಾಂದಿ ಹಾಡಿತು.

ಗೃಹಬಂಧನದಿಂದ ಹಫೀಜ್‌ಗೆ ಮುಕ್ತಿ

2008ರ ಮುಂಬೈ ದಾಳಿಗೆ 9 ವರ್ಷ ತುಂಬುವ ಕೆಲವೇ ದಿನಗಳ ಮುನ್ನ ದಾಳಿಯ ಪ್ರಧಾನ ಸಂಚುಕೋರ ಮತ್ತು ಲಷ್ಕರ್ ಉಗ್ರ ಹಫೀಜ್‌ ಸಯೀದ್‌ನನ್ನು ಪಾಕಿಸ್ತಾನ ಗೃಹ ಬಂಧನದಿಂದ ಬಿಡುಗಡೆ ಮಾಡಿತು.ಈ ಸರ್ಕಾರದ ನಿರ್ಧಾರಕ್ಕೆ ಭಾರತ, ಅಮೆರಿಕ ಮಾತ್ರವಲ್ಲ ಇಡೀ ವಿಶ್ವಸಮುದಾಯ ಆಕ್ರೋಶ ವ್ಯಕ್ತಪಡಿಸಿತು.

(ಉಗ್ರ ಹಫೀಜ್‌ ಸಯೀದ್‌)

ಜಾಗತಿಕ ಉಗ್ರನ ಪಟ್ಟಿಯಲ್ಲಿರುವ ಹಫೀಜ್ ಬಂಧನಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರಿ ಒತ್ತಡ ಕೇಳಿಬಂದ ಬೆನ್ನಲ್ಲೇ ಪಾಕಿಸ್ತಾನ ಸರ್ಕಾರ ಆತನನ್ನು ಗೃಹಬಂಧನದಲ್ಲಿ ಇರಿಸಿತ್ತು. ಮುಂಬೈದಾಳಿಯಲ್ಲಿ ಆತನ ಕೈವಾಡ ಕುರಿತು ಭಾರತ ಸಲ್ಲಿಸಿದ ಸಾಕ್ಷ್ಯ ಸೇರಿದಂತೆ ಯಾವ ಪ್ರಬಲ ಸಾಕ್ಷ್ಯಗಳನ್ನು ಸರ್ಕಾರ ಕೋರ್ಟ್‌ಗೆ ಸಲ್ಲಿಸಲಿಲ್ಲ. ಸಮರ್ಥ ವಾದವನ್ನೂ ಮಂಡಿಸಲಿಲ್ಲ. ಇದರ ಪರಿಣಾಮ 297 ದಿನಗಳ ಗೃಹಬಂಧನದಿಂದ ಆತ ಹೊರಬಂದ.

ಗೃಹಬಂಧನದಿಂದ ಮುಕ್ತನಾದ ಹಫೀಜ್ ಕಾಶ್ಮೀರದ ಸ್ವತಂತ್ರಕ್ಕಾಗಿ ಹೋರಾಟ ಮಾಡುವುದಾಗಿ ಹೇಳಿದ. ಪಾಕ್‌ ಸರ್ಕಾರದ ಎಚ್ಚರಿಕೆ ಕಡೆಗಣಿಸಿ ಲಾಹೋರ್‌ನಲ್ಲಿ ತನ್ನ ರಾಜಕೀಯ ಪಕ್ಷ ಮಿಲ್ಲಿ ಮುಸ್ಲಿಮ್‌ ಲೀಗ್‌ (ಎಂಎಂಎಲ್‌) ಕಚೇರಿ ತೆರೆದು ಸೆಡ್ಡು ಹೊಡೆದಿದ್ದಾನೆ.

ಶ್ವೇತಭವನದಲ್ಲಿ ಟ್ರಂಪ್‌ ರಾಜ್ಯಭಾರ

ಅಮೆರಿಕದಲ್ಲಿ ಬರಾಕ್ ಒಬಾಮ ಯುಗ ಮುಗಿದು ರಿಪಬ್ಲಿಕನ್‌ ಪಕ್ಷದ ಡೊನಾಲ್ಡ್‌ ಟ್ರಂಪ್‌ ಟ್ರಂಪ್ ಶ್ವೇತಭವನ ಪ್ರವೇಶಿಸಿದರು. ಇದಕ್ಕಾಗಿ ಇಡೀ ಜಗತ್ತು ವಾಷಿಂಗ್ಟನ್‌ನ ಶ್ವೇತಭವನದ ಮೇಲೆ ಕಣ್ಣು ನೆಟ್ಟು ಕುಳಿತಿತ್ತು.

ಹೊಸ ವರ್ಷದ ಆರಂಭದಲ್ಲಿಯೇ ಟ್ರಂಪ್‌ ಅಮೆರಿಕದ 45ನೇ ಅಧ್ಯಕ್ಷರಾಗಿ ಅಧಿಕಾರದ ಚುಕ್ಕಾಣಿ ಹಿಡಿದರು. ಶ್ವೇತ ಭವನ ತೊರೆಯುವ ಮುನ್ನ ದೇಶದ ಪ್ರಜೆಗಳಿಗೆ ಬಹಿರಂಗ ವಿದಾಯ ಪತ್ರ ಬರೆದ ಒಬಾಮ ಅಮೆರಿಕದ ಪ್ರಜೆಗಳಿಗೆ ಧನ್ಯವಾದ ಸಮರ್ಪಿಸಿದರು.

ವೀಸಾ ನೀತಿ ಬದಲಿಗೆ ಭಾರತ ಆತಂಕ

ಟ್ರಂಪ್‌ ಅಧಿಕಾರಕ್ಕೆ ಬರುತ್ತಲೇ ಭಾರತೀಯ ಐಟಿ ಉದ್ಯೋಗಿಗಳು ಹೆಚ್ಚಾಗಿ ಬಳಸುವ ಎಚ್‌1ಬಿ ಹಾಗೂ ಎಲ್-1  ವೀಸಾ ನೀತಿಯಲ್ಲಿ ಬದಲಾವಣೆ ತರಲು ಮುಂದಾದರು. ಸಹಜವಾಗಿ ಇದು ಭಾರತದ ಆತಂಕ ಹೆಚ್ಚಿಸಿತು.

(ಡೋನಾಲ್ಡ್‌ ಟ್ರಂಪ್‌)

ಅಮೆರಿಕ 13 ವರ್ಷ ಹಳೆಯದಾದ ವೀಸಾ ನಿಯಮ ರದ್ದುಗೊಳಿಸಿ,ನವೀಕರಣ ಪ್ರಕ್ರಿಯೆಯನ್ನು ಮತ್ತಷ್ಟು ಕಠಿಣಗೊಳಿಸಿತು. ಇದು ಅಮೆರಿಕದಲ್ಲಿ ದುಡಿಯುತ್ತಿರುವ ಭಾರತದ ಲಕ್ಷಾಂತರಮಾಹಿತಿ ತಂತ್ರಜ್ಞರಲ್ಲಿ ಆತಂಕ ಶುರುವಾಗಿತ್ತು.

ಈ ನಡುವೆ ಎಚ್-1ಬಿ ವೀಸಾ ನಿಯಮಗಳ ಉಲ್ಲಂಘನೆ ಮಾಡಿದ ಟಿಸಿಎಸ್ ಮತ್ತು ಇನ್ಫೊಸಿಸ್ ಸೇರಿದಂತೆ ಇನ್ನಿತರ ಭಾರತೀಯ ಕಂಪನಿಗಳ ವಿರುದ್ಧ ಅಮೆರಿಕ ತನಿಖೆ ಆದೇಶಿಸಿತು. ಹೀಗಾಗಿ ಭಾರತ ಪದೇ ಪದೇ ಯಾವುದೇ ದುಡುಕಿನ ನಿರ್ಧಾರ ಕೈಗೊಳ್ಳದಂತೆ ಅಮೆರಿಕಕ್ಕೆ ಮನವಿ ಮಾಡಿತು.

ಚಾಬಹಾರ್ ಬಂದರು ಕಾರ್ಯಾರಂಭ

ಇರಾನ್‌ನಲ್ಲಿ ಭಾರತ ₹ 550 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸುತ್ತಿರುವ ಚಾಬಹಾರ್ ಬಂದರಿನ ಪ್ರಥಮ ಹಂತ ವರ್ಷಾಂತ್ಯಕ್ಕೆ ಕಾರ್ಯಾರಂಭ ಮಾಡಿದೆ. ಭಾರತ–ಇರಾನ್–ಅಫ್ಗಾನಿಸ್ತಾನ ವಾಣಿಜ್ಯ ಮಾರ್ಗದ ಪ್ರಮುಖ ಕೊಂಡಿಯಾಗಿರುವ ಈ ಬಂದರು ಮೂರೂ ದೇಶಗಳ ಮಧ್ಯೆ ವಾಣಿಜ್ಯ ವಹಿವಾಟನ್ನು ವೃದ್ಧಿಸಲಿದೆ.

ಇದರ ಜತೆಯಲ್ಲೇ ಮಧ್ಯಪ್ರಾಚ್ಯ ದೇಶಗಳ ಜತೆ ಭಾರತದ ವಾಣಿಜ್ಯ ವಹಿವಾಟು ವೃದ್ಧಿಸಲು ಈ ಮಾರ್ಗ ನೆರವಾಗಲಿದೆ.ಮೂರೂ ದೇಶಗಳ ವಾಣಿಜ್ಯ ಮಾರ್ಗದ ಭಾಗವಾಗಿ  ಈ ಹೆದ್ದಾರಿಯ ಕಾಮಗಾರಿ 2005ರಲ್ಲೇ ಪ್ರಾರಂಭವಾಗಿತ್ತು.

ಪಾಕಿಸ್ತಾನದ ಗ್ವಾದರ್‌ನಲ್ಲಿ ಚೀನಾ ಬಂದರೊಂದನ್ನು ಅಭಿವೃದ್ಧಿಪಡಿಸುತ್ತಿದೆ. ಭಾರತ–ಅಫ್ಗಾನಿಸ್ತಾನಗಳು ತನ್ನ ನೆಲದ ಮೂಲಕ ಸರಕುಗಳ ಸಾಗಣೆ ನಡೆಸದಂತೆ ಪಾಕಿಸ್ತಾನವು ತಡೆಯೊಡ್ಡಿತ್ತು. ಈಗ ಈ ವಾಣಿಜ್ಯ ಮಾರ್ಗವು ಕಾರ್ಯಾರಂಭ ಮಾಡಿರುವುದರಿಂದ ಪಾಕಿಸ್ತಾನ ಮತ್ತು ಚೀನಾಕ್ಕೆ ಭಾರತವು ಸಡ್ಡು ಹೊಡೆದಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT