ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡಾನೆ ದಾಳಿಗೆ ₹2.5 ಲಕ್ಷ ಮೌಲ್ಯದ ಬೆಳೆ ನಾಶ

ಕೆ.ಪಾಳ್ಯ ಗ್ರಾಮದಲ್ಲಿ ರಾಗಿ ಮೆದೆ, ಜೋಳದ ತೆನೆಗೆ ಹಾನಿ
Last Updated 30 ಡಿಸೆಂಬರ್ 2017, 20:54 IST
ಅಕ್ಷರ ಗಾತ್ರ

ಸಾತನೂರು(ಕನಕಪುರ): ತಾಲ್ಲೂಕಿನ ಸಾತನೂರು ಹೋಬಳಿ ಕೆ.ಪಾಳ್ಯ ಗ್ರಾಮದಲ್ಲಿ ಕಾಡು ಪ್ರಾಣಿಗಳಿಂದ ರಕ್ಷಿಸಿ ಕಟಾವು ಮಾಡಿ, ಮೆದೆ ಮಾಡಿದ್ದ ರಾಗಿ ಬಣೆ ಮತ್ತು ಜೋಳದ ತೆನೆಯನ್ನು ಕಾಡಾನೆಗಳು ಶುಕ್ರವಾರ ರಾತ್ರಿ ನಾಶಮಾಡಿ ಲಕ್ಷಾಂತರ ರೂಪಾಯಿ ನಷ್ಟಮಾಡಿವೆ.

ಕೆ.ಪಾಳ್ಯದ ರೈತರಾದ ನರಸಪ್ಪ, ತಿಮ್ಮಯ್ಯ, ವೆಂಕಟೇಶ, ಮಂಜುನಾಥ್‌, ರಂಗಯ್ಯ ಮೊದಲಾದವರ ರಾಗಿ ಮೆದೆ ಮತ್ತು ಜೋಳದ ತೆನೆ ರಾಶಿ ಕಾಡಾನೆ ದಾಳಿಗೆ ಹಾಳಾಗಿವೆ.

ಸಂಗಮ ವೈಲ್ಡ್‌ಲೈಫ್‌ ವ್ಯಾಪ್ತಿಯಲ್ಲಿ ಬರುವ ಈ ಗ್ರಾಮಗಳು ನಿರಂತರ ಕಾಡಾನೆ ದಾಳಿಗೆ ಸಿಲುಕುತ್ತಿವೆ. ವರ್ಷವಿಡೀ ಕಾವಲು ಕಾದು ಬೆಳೆಯನ್ನು
ಮಾಡಬೇಕಿದೆ. ಬೆಳೆ ಪ್ರಾರಂಭದಲ್ಲಿ ಬಿತ್ತನೆಗೆ ಕಾಡು ಹಂದಿಗಳ ಕಾಟ, ಬೆಳೆ ಬೆಳೆದ ಮೇಲೆ ಕಾಡಾನೆಗಳ ಕಾಟವಾಗಿದೆ. ಬಿತ್ತನೆ ಮಾಡಿದ ದಿನದಿಂದ ಕಟಾವು ಮಾಡುವ ತನಕ ರಾತ್ರಿ ಕಾವಲಿದ್ದು, ಇಲ್ಲಿ ಬೆಳೆ ಬೆಳೆಯಬೇಕಾದ ಪರಿಸ್ಥಿತಿ ರೈತರದಾಗಿದೆ ಎಂದು ರೈತ ನರಸಪ್ಪ ತಿಳಿಸಿದರು.

ಗ್ರಾಮದ ಹೊರವಲಯದಲ್ಲಿ ಬೆಳೆ ಮಾಡಿದ್ದು ಅಲ್ಲಿ ಕಾಡಾನೆಗಳ ದಾಳಿಯಿಂದ ಹೆದರಿ ಗ್ರಾಮದ ಬಳಿಗೆ ರಾಗಿ ಮತ್ತು ಜೋಳದ ತೆನೆಯನ್ನು ಟ್ರಾಕ್ಟರ್‌ ಮೂಲಕ ಸಾಗಿಸಲಾಗಿದೆ. ಇಲ್ಲಿಗೂ ಕಾಡಾನೆಗಳ ಹಿಂಡು ಬಂದಿದ್ದು ರಾಗಿ ಮೆದೆಯನ್ನು ನಾಶ ಮಾಡಿವೆ. ಜೋಳದ ತೆನೆಯನ್ನು ತಿಂದು ಧ್ವಂಸಮಾಡಿವೆ. ಸುಮಾರು ₹ 2.5 ಲಕ್ಷ ಮೌಲ್ಯದಷ್ಟು ಬೆಳೆ  ನಾಶವಾಗಿದೆ ಎಂದು ಮಂಜುನಾಥ್‌ ದೂರಿದರು.

ಸ್ಥಳೀಯ ರೈತ ತಿಮ್ಮಯ್ಯ ಮಾತನಾಡಿ, ‘ನಮ್ಮ ಹೆಸರಿನಲ್ಲೇ ಪಹಣಿ ಇರಬೇಕು, ಅದರ ಪೋಟೋ ತೆಗೆಸಿ ಅರ್ಜಿಯನ್ನು ಬರೆದು ಅರಣ್ಯ ಇಲಾಖೆಗೆ ಕೊಡಬೇಕು, ಕಂದಾಯ ಅಧಿಕಾರಿಗಳಿಂದ ಬೆಳೆ ಧೃಡೀಕರಣ ಪತ್ರವನ್ನು ನೀಡಬೇಕು. ಇದೆಲ್ಲವನ್ನು ನೀಡಬೇಕಾದರೆ ಒಂದು ಅರ್ಜಿ ಸಲ್ಲಿಕೆಗೆ ₹ 500 ರಿಂದ ₹1,000 ಖರ್ಚು ತಗಲುತ್ತದೆ‘ ಎಂದು ಅಳಲು ತೋಡಿಕೊಂಡರು.

‘ನಮ್ಮ ಸಮಯವೂ ವ್ಯರ್ಥವಾಗುತ್ತದೆ, ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿ ಅರ್ಜಿ ನೀಡಿದರೆ ಒಂದರೆಡು ವರ್ಷದಲ್ಲಿ ಎಕರೆಗೆ ಸಾವಿರ, ಎರಡು ಸಾವಿರ ಬರುತ್ತದೆ. ಅವರು ಕೊಡುವ ಹಣವು ಅರ್ಜಿ ದಾಖಲಾತಿ ಮಾಡಲು ಸಾಕಾಗುವುದಿಲ್ಲ’ ಎಂದು ಬೇಸರ
ವ್ಯಕ್ತಪಡಿಸಿದರು.

ಕೆಂಗೇರಿ, ಕಗ್ಗಲಿಪುರಕ್ಕೆ ಆನೆ ಹಿಂಡು

ಬೆಂಗಳೂರು: ಆಹಾರ ಅರಸಿ ಕಾಡಿನಿಂದ ಬಂದಿರುವ ಐದು ಕಾಡಾನೆಗಳ ಹಿಂಡು ಕೆಂಗೇರಿ ಸುತ್ತಮುತ್ತಲ ಗ್ರಾಮಗಳಲ್ಲಿ ಕಾಣಿಸಿಕೊಂಡು, ಗ್ರಾಮಸ್ಥರಲ್ಲಿ ಆತಂಕ ಮೂಡಿಸಿವೆ.

ಶನಿವಾರ ಮುಂಜಾನೆ ಮಾಗಡಿ ಅರಣ್ಯ ವಲಯದಿಂದ ಬಂದ ಆನೆಗಳ ಹಿಂಡು, ಮಂಚನಬೆಲೆ ಜಲಾಶಯದ ಮಾರ್ಗವಾಗಿ ಚಿಕ್ಕನಹಳ್ಳಿ, ದೊಡ್ಡ ಆಲದ ಮರದ ಮೂಲಕ ಮೈಸೂರು ರಸ್ತೆಯ ಬಳಿಯ ಕಂಬೀಪುರ ಗ್ರಾಮಕ್ಕೆ ದಾಂಗುಡಿ ಇಟ್ಟಿದ್ದವು.

ಗ್ರಾಮದ ಸುತ್ತಮುತ್ತಲಿನ ತೋಟಗಳಿಗೆ ದಾಳಿ ನಡೆಸಿದ ಆನೆಗಳು, ಬಾಳೆ ಫಸಲು ನಾಶ ಮಾಡಿವೆ. ಕುಂಬಳಗೊಡು ಹಾಗೂ ಕಗ್ಗಲಿಪುರ ಅರಣ್ಯ ಸಂರಕ್ಷಣಾಧಿಕಾರಿಗಳು ಆನೆಗಳನ್ನು ಬನ್ನೇರುಘಟ್ಟ ಅರಣ್ಯಕ್ಕೆ ಅಟ್ಟಲು, ರಾತ್ರಿ 7 ಗಂಟೆವರೆಗೂ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.

‘ಎರಡು ಆನೆಗಳು ಕಂಬೀಪುರದ ಗ್ಯಾಸ್ಟರ್‌ ಫಾರ್ಮ್‌ನಲ್ಲಿ ಬೀಡುಬಿಟ್ಟಿವೆ. ಆನೆಗಳನ್ನು ಕಾಡಿಗೆ ಕಳುಹಿಸಲು ಡ್ರೋಣ್‌ ಸಹಾಯ ಪಡೆದಿದ್ದೇವೆ. 40 ಮಂದಿ ಅರಣ್ಯ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಶೀಘ್ರ ಅವುಗಳನ್ನು ಅರಣ್ಯಕ್ಕೆ ಅಟ್ಟುತ್ತೇವೆ’ ಎಂದು ಕಗ್ಗಲಿಪುರ ವಲಯ ಅರಣ್ಯ ಸಂರಕ್ಷಣಾಧಿಕಾರಿ ವರುಣ್‌ ತಿಳಿಸಿದರು.

ಹಿಂದಿನ ವರ್ಷದ ಡಿಸೆಂಬರ್‌ನಲ್ಲೂ ಆನೆಗಳ ಹಿಂಡು ಆಹಾರ ಅರಸಿ, ಮಂಚನಬೆಲೆಗೆ ಬಂದಿತ್ತು. ಒಂದು ಆನೆ ಗಾಯಗೊಂಡು,
ಚಿಕಿತ್ಸೆ ಫಲಿಸದೆ ಅಸುನೀಗಿತ್ತು.

* ಕಷ್ಟಪಟ್ಟು ಬೆಳೆದ ಬೆಳೆಯನ್ನು ರಕ್ಷಿಸಿಕೊಳ್ಳಲು ಆಗುತ್ತಿಲ್ಲ, ಕಾಡಾನೆ ದಾಳಿಯಾಗಿ ನಾಶವಾದ ಬೆಳೆಗೆ ಪರಿಹಾರ ಕೋರಿ ಅರ್ಜಿ ಹಾಕಿದರೆ ಅವರು ಹತ್ತು ಹಲವು ದಾಖಲಾತಿಗಳನ್ನು ಕೇಳುತ್ತಾರೆ
-ತಿಮ್ಮಯ್ಯ ,ಸ್ಥಳೀಯ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT