ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಪ್ಪಾಣಿ ತಾಲ್ಲೂಕು ಶೀಘ್ರ ಅಸ್ತಿತ್ವಕ್ಕೆ: ಸಚಿವ

Last Updated 31 ಡಿಸೆಂಬರ್ 2017, 5:26 IST
ಅಕ್ಷರ ಗಾತ್ರ

ನಿಪ್ಪಾಣಿ: ‘ನಿಪ್ಪಾಣಿ ತಾಲ್ಲೂಕು ಶೀಘ್ರದಲ್ಲಿ ಅಸ್ತಿತ್ವಕ್ಕೆ ಬರುವ ದಿಸೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಸಂಬಂಧಪಟ್ಟ ಕಡತಗಳಿಗೆ ಸಹಿ ಹಾಕಿ ಸರ್ಕಾರಕ್ಕೆ ಕಳಿಸಿಕೊಟ್ಟಿದ್ದಾರೆ ಎಂದು ಮಾಜಿ ಶಾಸಕ ಸುಭಾಷ ಜೋಶಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಈ ವಿಷಯ ತಿಳಿಸಿದ ಅವರು, ಸಚಿವರು ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರರನ್ನು ಕರೆಸಿಕೊಂಡು ಕಡತಗಳಿಗೆ ಸಹಿ ಹಾಕಿದ್ದಾರೆ. ಕೆಲವೇ ದಿನಗಳಲ್ಲಿ ನಿಪ್ಪಾಣಿ ತಾಲ್ಲೂಕು ಅಸ್ತಿತ್ವಕ್ಕೆ ಬಂದಿರುವ ಬಗ್ಗೆ ಸರ್ಕಾರದಿಂದ ಅಧಿಸೂಚನೆ ಹೊರಡಲಿದೆ. ಈಗ ಯಾವುದೇ ಅಡಕು–ತೊಡಕುಗಳಿಲ್ಲ. ತಾಲ್ಲೂಕು ರಚನೆ ವಿಷಯದಲ್ಲಿ ನಡೆಸಿದ ಹೋರಾಟಕ್ಕೆ ಜಯ ಸಿಕ್ಕಿದೆ’ ಎಂದು ಹೇಳಿದರು.

‘ನಿಪ್ಪಾಣಿ ತಾಲ್ಲೂಕು ಘೋಷಣೆ ಕೈಬಿಟ್ಟ ಪರಿಣಾಮ ಶುಕ್ರವಾರ ಆರಂಭಿಸಿದ ಹೋರಾಟದ ಹಿನ್ನೆಲೆಯಲ್ಲಿ ಸಚಿವರು, ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ, ನಗರಸಭೆ ಅಧ್ಯಕ್ಷ ವಿಲಾಸ ಗಾಡಿವಡ್ಡರ ಮತ್ತು ನನ್ನನ್ನು ಶನಿವಾರ ದೂರವಾಣಿ ಮೂಲಕ ಸಂಪರ್ಕಿಸಿ ಕರೆಸಿಕೊಂಡರು’ ಎಂದು ಅವರು ವಿವರಿಸಿದರು.

ನಂತರ ಹೆಚ್ಚುವರಿ ಜಿಲ್ಲಾಧಿಕಾರಿ ಸುರೇಶ ಇಟ್ನಾಳ, ಚಿಕ್ಕೋಡಿ ತಹಶೀಲ್ದಾರ್ ಚಿದಂಬರ ಕುಲಕರ್ಣಿ ಅವರನ್ನೂ ಸಹ ಕರೆಸಿ ನಿಪ್ಪಾಣಿ ತಾಲ್ಲೂಕು ಶೀಘ್ರದಲ್ಲಿ ಅಸ್ತಿತ್ವಕ್ಕೆ ಬರುವ ದಿಸೆಯಲ್ಲಿ ಕಡತಗಳನ್ನು ತಯಾರಿಸಿ ಶಿಫಾರಸು ಪತ್ರದೊಂದಿಗೆ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿಕೊಟ್ಟಿದ್ದಾರೆ ಎಂದು ಹೇಳಿದರು.

‘ಜಿಲ್ಲಾಧಿಕಾರಿಗಳ ಕಾರ್ಯಾಲಯ ನಗರಸಭೆ ಅಧ್ಯಕ್ಷರಿಗೆ ಮನವಿ ಮಾಡಿ ಕೊಂಡಂತೆ ತಾತ್ಪೂರ್ತಿಕವಾಗಿ ಇಲ್ಲಿನ ಮುನಿಸಿಪಲ್‌ ಪ್ರೌಢಶಾಲೆಯಲ್ಲಿ ತಾಲ್ಲೂಕು ಕಾರ್ಯಾಲಯಕ್ಕೆ ನಗರ ಸಭೆಯು ಅನುವು ಮಾಡಿಕೊಡಲಿದೆ. ಹೋರಾಟಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು. ಈ ಕುರಿತಂತೆ ಜ. 2ರಂದು ನಗರಸಭೆಯಲ್ಲಿ ಸಭೆ ನಡೆಸಲಾಗುವುದು’ ಎಂದರು.

ಸ್ಥಳೀಯ ನಗರಸಭೆ ಅಧ್ಯಕ್ಷ ವಿಲಾಸ ಗಾಡಿವಡ್ಡರ ಮಾತನಾಡಿ ‘ನಿಪ್ಪಾಣಿ ತಾಲ್ಲೂಕು ರಚನೆ ಕೈಬಿಟ್ಟದ್ದನ್ನು 8 ದಿನ ಮೊದಲೇ ಗೊತ್ತಿದ್ದರೂ ಶಾಸಕಿ ಶಶಿಕಲಾ ಜೊಲ್ಲೆ ಯಾವುದೆ ಪ್ರಯತ್ನ ನಡೆಸಲಿಲ್ಲ. ಆದರೆ ನಾವು ಬೀದಿಗಿಳಿದು ಹೋರಾಟ ನಡೆಸಿದ ಬಳಿಕ ಈಗ ಹೋರಾಟದ ಮಾತನಾಡುತ್ತಿದ್ದಾರೆ ಎಂದು ಸುಭಾಷ ಜೋಶಿ ಟೀಕಿಸಿದರು.

ಮಾಜಿ ಶಾಸಕ ಕಾಕಾಸಾಹೇಬ ಪಾಟೀಲ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಖಾದಿ ಗ್ರಾಮೋದ್ಯೋಗ ನಿಗಮ ಮಂಡಳಿಯ ಮಾಜಿ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಸ್ಥಳೀಯ ನಗರ ಯೋಜನೆ ಪ್ರಾಧಿಕಾರದ ಅಧ್ಯಕ್ಷ ಬಾಳಾಸಾಹೇಬ ದೇಸಾಯಿ–ಸರಕಾರ, ಪಂಕಜ ಪಾಟೀಲ, ರಾಜೇಶ ಕದಮ, ರಾಜು ಪಾಟೀಲ, ನಗರಸಭೆ ಸದಸ್ಯ ರವೀಂದ್ರ ಚಂದ್ರಕುಡೆ, ಸಂಜಯ ಸಾಂಗಾವಕರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT