7
ಮಹದಾಯಿ, ಜಿಲ್ಲಾ ವಿಭಜನೆ, ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಹಲವು ಹೋರಾಟ

ಪ್ರತಿಭಟನೆಗಳ ಬಿಸಿ ತಟ್ಟಿದ ವರ್ಷ

Published:
Updated:
ಪ್ರತಿಭಟನೆಗಳ ಬಿಸಿ ತಟ್ಟಿದ ವರ್ಷ

ಬೆಳಗಾವಿ: ಮಹದಾಯಿ ನದಿ ನೀರು ಹಂಚಿಕೆ, ಜಿಲ್ಲಾ ವಿಭಜನೆ, ಮಹಾರಾಷ್ಟ್ರ ಏಕೀಕರಣ ಸಮಿತಿ ಕ್ಯಾತೆ, ರೈತರ ಬೇಡಿಕೆಗಳು, ಲಿಂಗಾಯತ ಧರ್ಮಕ್ಕೆ ಮಾನ್ಯತೆ ಸೇರಿದಂತೆ ವಿವಿಧ ಕಾರಣಗಳಿಗಾಗಿ ರಾಜಕೀಯ ಪಕ್ಷಗಳು ಹಾಗೂ ಸಂಘ– ಸಂಸ್ಥೆಗಳು ನಡೆಸಿದ ನಿರಂತರ ಪ್ರತಿಭಟನೆಗಳಿಂದಾಗಿ 2017ರ ವರ್ಷವು ಪ್ರತಿಭಟನೆಗಳ ವರ್ಷವಾಗಿ ಇತಿಹಾಸದ ಪುಟದಲ್ಲಿ ದಾಖಲಾಯಿತು.

ಇವುಗಳ ಜೊತೆ ಒಂದಿಷ್ಟು ಒಳ್ಳೆಯ ಕೆಲಸಗಳು ಆಗಿವೆ. ಸ್ಮಾರ್ಟ್‌ ಸಿಟಿ ಯೋಜನೆಯ ಕಾಮಗಾರಿಗಳು ವೇಗ ಪಡೆದುಕೊಂಡಿವೆ. ಇದೇ ಮೊದಲ ಬಾರಿಗೆ ಮಹಿಳಾ ಟ್ವಿಂಟಿ 20 ಅಂತರರಾಷ್ಟ್ರೀಯ ಕ್ರಿಕೆಟ್‌ ಪಂದ್ಯಗಳು ನಡೆದಿವೆ. ಸಾಂಬ್ರಾ ವಿಮಾನ ನಿಲ್ದಾಣ ಮೇಲ್ದರ್ಜೆಗೇರಿಸಲಾಗಿದೆ. ಈಗ ರಾತ್ರಿ ವೇಳೆ ಕೂಡ ವಿಮಾನಗಳು ಹಾರಾಟ ನಡೆಸಬಹುದಾಗಿದೆ.

ಕೇಂದ್ರ ಸರ್ಕಾರದ ಫಸಲ್‌ ಬಿಮಾ ಯೋಜನೆ ಅನುಷ್ಠಾನದಲ್ಲಿ ಅತ್ಯುತ್ತಮ ಸಾಧನೆ ತೋರಿದ ಬೆಳಗಾವಿ ಜಿಲ್ಲಾಡಳಿತವು, ದೇಶದ ಗಮನ ಸೆಳೆದುಕೊಂಡಿತ್ತು. ಕಳೆದ ನಾಲ್ಕು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಉತ್ತಮ ಮಳೆಯಾಗಿದೆ. ಅಕ್ಟೋಬರ್‌ನಲ್ಲಿ ಸುರಿದ ಮಳೆಯಿಂದಾಗಿ ಜಿಲ್ಲೆಯ ಅಣೆಕಟ್ಟೆಗಳು, ಕೆರೆಗಳು, ಬಾವಿಗಳು ತುಂಬಿಕೊಂಡಿದ್ದು, ನೀರಿನ ಸಮಸ್ಯೆ ಬಗೆಹರಿಸಿತು.

‘ಮಹದಾಯಿ’ ಕಾಡಿದ ವರ್ಷ:

ವರ್ಷದ ಆರಂಭದಿಂದ ಕೊನೆಯವರೆಗೆ ಮಹದಾಯಿ ನದಿ ನೀರು ಹಂಚಿಕೆ ವಿಚಾರವಾಗಿ ಜಿಲ್ಲೆಯಲ್ಲಿ ಸಾಕಷ್ಟು ಪ್ರತಿಭಟನೆಗಳು ನಡೆದವು. ಬೆಳಗಾವಿ ಸೇರಿದಂತೆ ಮಹದಾಯಿ ನದಿ ನೀರು ಪಡೆಯಲಿರುವ ಮಲಪ್ರಭಾ ನದಿ ಅಚ್ಚುಕಟ್ಟು ಪ್ರದೇಶದ ಖಾನಾಪುರ, ರಾಮದುರ್ಗ, ಬೈಲಹೊಂಗಲ, ಸವದತ್ತಿಯಲ್ಲಿ ಪ್ರತಿಭಟನೆ ಕಾವು ಜೋರಾಗಿತ್ತು.

ಗೋವಾ ಹಾಗೂ ಮಹಾರಾಷ್ಟ್ರದ ಗಡಿಗೆ ಹೊಂದಿಕೊಂಡಿದ್ದರ ಫಲವಾಗಿ ಬೆಳಗಾವಿಯಲ್ಲಿ ಪ್ರತಿಭಟನೆಗಳು ಜೋರಾಗಿ ನಡೆದವು. ಈ ರಾಜ್ಯಗಳಿಗೆ ಬಸ್‌ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಈ ರಾಜ್ಯಗಳಲ್ಲಿ ಕರ್ನಾಟಕದ ಬಸ್‌ಗಳಿಗೆ ಕಲ್ಲು ಎಸೆದು ಹಾನಿಗೊಳಿಸಲಾಗಿತ್ತು. ಅಷ್ಟರಮಟ್ಟಿಗೆ ಪ್ರತಿಭಟನೆಗಳ ಬಿಸಿ ತಟ್ಟಿತ್ತು.

ಮರಾಠಾ ರ‍್ಯಾಲಿ:

ಮರಾಠಾ ಸಮುದಾಯದವರಿಗೆ ಮೀಸಲಾತಿ ನೀಡಬೇಕೆಂದು ಒತ್ತಾಯಿಸಿ ಮಹಾರಾಷ್ಟ್ರದಲ್ಲಿ ಆರಂಭವಾದ ‘ಏಕ್‌ ಮರಾಠಾ ಲಾಖ್‌ ಮರಾಠಾ’ ಪ್ರತಿಭಟನಾ ಮೆರವಣಿಗೆಯು ಬೆಳಗಾವಿಯಲ್ಲಿ ಫೆಬ್ರುವರಿ 16ರಂದು ನಡೆದಿತ್ತು. ಸುತ್ತಮುತ್ತಲಿನ ಪ್ರದೇಶಗಳಿಂದ ಆಗಮಿಸಿದ ಸಾವಿರಾರು ಜನರು ಭಾಗವಹಿಸಿದ್ದರು. ಮೀಸಲಾತಿಯ ಜೊತೆ ಗಡಿ ವಿವಾದವನ್ನು ಬಗೆಹರಿಸಬೇಕು ಹಾಗೂ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆಗೊಳಿಸಬೇಕೆಂದು ಪ್ರತಿಭಟನಾ ಮುಖಂಡರು ಹೊಸ ಅಂಶವನ್ನು ಸೇರಿದ್ದರು. ಇದಕ್ಕೆ ಕೆಲವು ಮರಾಠಿಗರು ಅಪಸ್ವರ ಎತ್ತಿದ್ದರು.

ಜಿಲ್ಲಾ ವಿಭಜನೆಗೆ ಪಟ್ಟು:

18 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿರುವ ಅತಿದೊಡ್ಡ ಜಿಲ್ಲೆಯಾದ ಬೆಳಗಾವಿಯನ್ನು ವಿಭಜಿಸಬೇಕೆನ್ನುವ ಕೂಗು ಮತ್ತೆ ಕೇಳಿಬಂದಿತು. ಆಡಳಿತಾತ್ಮಕ ದೃಷ್ಟಿಯಿಂದ ದೊಡ್ಡ ಜಿಲ್ಲೆಯನ್ನು ನಿಭಾಯಿಸುವುದು ಕಷ್ಟವಾಗುತ್ತಿದೆ. ಹೀಗಾಗಿ ಜಿಲ್ಲೆಯನ್ನು ಮೂರು ಜಿಲ್ಲೆಗಳಾಗಿ ವಿಭಜಿಸಬೇಕೆಂದು ಕೆಲವು ಸಂಘಟನೆಗಳು ಒತ್ತಾಯಿಸಿದರು.

ಗೋಕಾಕ, ಚಿಕ್ಕೋಡಿ ಹಾಗೂ ಬೈಲಹೊಂಗಲ ಜನರು ಪ್ರತ್ಯೇಕ ಜಿಲ್ಲೆಯನ್ನಾಗಿ ಘೋಷಿಸಬೇಕೆಂದು ರಸ್ತೆಗಿಳಿದು ಪ್ರತಿಭಟನೆ ನಡೆಸಿದರು. ಆದರೆ, ಇದಕ್ಕೆ ಕೆಲವು ಕನ್ನಡ ಪರ ಸಂಘಟನೆಗಳ ಮುಖಂಡರು ವಿರೋಧ ವ್ಯಕ್ತಪಡಿಸಿದರು. ಜಿಲ್ಲೆಯನ್ನು ವಿಭಜಿಸಿದರೆ ಕನ್ನಡಿಗರ ಸಾಮರ್ಥ್ಯ ಕಡಿಮೆಯಾಗುತ್ತದೆ. ಮಹಾರಾಷ್ಟ್ರದ ಜೊತೆ ನಡೆಯುತ್ತಿರುವ ಗಡಿವಿವಾದದ ಹೋರಾಟಕ್ಕೆ ಪೆಟ್ಟು ಬೀಳುತ್ತದೆ ಎನ್ನುವ ಆತಂಕ ವ್ಯಕ್ತಪಡಿಸಿದರು.

ಹಿಂದೆ ಜೆ.ಎಚ್‌. ಪಟೇಲ್‌ ಮುಖ್ಯಮಂತ್ರಿಯಾಗಿದ್ದಾಗಲೂ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿರಲಿಲ್ಲ. ಗಡಿವಿವಾದ ಇತ್ಯರ್ಥಗೊಳ್ಳುವವರೆಗೆ ವಿಭಜಿಸಬಾರದೆಂದು ತೀರ್ಮಾನ ಕೈಗೊಳ್ಳಲಾಗಿತ್ತು. ಇದೇ ನಿಲುವನ್ನು ರಾಜ್ಯ ಸರ್ಕಾರ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದರು. ಇದರಿಂದಾಗಿ ಯಾವುದೇ ತೀರ್ಮಾನ ಇಲ್ಲದೇ ಪ್ರಸ್ತಾವನೆ ನೆನೆಗುದಿಗೆ ಬಿದ್ದಿತು.

ಹೊಸ ತಾಲ್ಲೂಕುಗಳನ್ನಾಗಿ ನಿಪ್ಪಾಣಿ, ಕಾಗವಾಡ ಹಾಗೂ ಮೂಡಲಗಿಗೆ ರಾಜ್ಯ ಸರ್ಕಾರ ಒಪ್ಪಿಗೆ ನೀಡಿದ್ದು, ಹೊಸ ವರ್ಷದಲ್ಲಿ ಕಾರ್ಯಾರಂಭಿಸಲಿವೆ.

ಲಿಂಗಾಯತ ಹೋರಾಟಕ್ಕೆ ಪ್ರೇರಣೆ:

ಹಲವು ವರ್ಷಗಳಿಂದ ಕೇಳಿಬರುತ್ತಿದ್ದ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟಕ್ಕೆ ಈ ವರ್ಷ ಹೆಚ್ಚಿನ ಬಲ ಒದಗಿಬಂತು. ಹೋರಾಟದ ಸಾರಥ್ಯ ವಹಿಸಿರುವ ನಾಗನೂರು ರುದ್ರಾಕ್ಷಿಮಠದ ಸಿದ್ದರಾಮ ಸ್ವಾಮೀಜಿಯವರು ಬೆಳಗಾವಿಯವರಾಗಿದ್ದ ಕಾರಣ, ಜಿಲ್ಲೆಯಲ್ಲಿ ಈ ಹೋರಾಟಕ್ಕೆ ಹೆಚ್ಚಿನ ಬಲ ಸಿಕ್ಕಿತು.

ಬೆಳಗಾವಿಯ ಲಿಂಗರಾಜ ಮೈದಾನದಲ್ಲಿ ಮೊದಲ ಬೃಹತ್‌ ಸಮಾವೇಶವು ಆಗಸ್ಟ್‌ 22ರಂದು ನಡೆಯಿತು. ಸಮಾವೇಶದಲ್ಲಿ ಪಾಲ್ಗೊಂಡ ವಿವಿಧ ಮಠಾಧೀಶರು, ರಾಜಕೀಯ ನಾಯಕರು ಬೇಡಿಕೆ ಈಡೇರಿಸುವಂತೆ ರಾಜ್ಯ ಸರ್ಕಾರಕ್ಕೆ ಗಡುವು ನೀಡಿದರು. ನಂತರ ಹೋರಾಟವು ರಾಜ್ಯದಾದ್ಯಂತ ಪಸರಿಸಿತು.

ಕಲ್ಲು ತೂರಾಟ:

ವರ್ಷಾಂತ್ಯದ ನವೆಂಬರ್‌ ಹಾಗೂ ಡಿಸೆಂಬರ್‌ನಲ್ಲಿ ಬೆಳಗಾವಿಯ ಖಡಕ್‌ ಗಲ್ಲಿ, ಖಂಜರ್‌ ಗಲ್ಲಿ, ಜಾಲಗಾರ ಗಲ್ಲಿ, ಘೀ ಗಲ್ಲಿ, ಚವಾಟ ಗಲ್ಲಿಯಲ್ಲಿ ಹಿಂದೂ ಮುಸ್ಲಿಂ ಗುಂಪುಗಳ ನಡುವೆ ನಡೆದ ಕಲ್ಲು ತೂರಾಟ ಪ್ರಸಂಗಗಳು ನಗರವನ್ನು ಬೆಚ್ಚಿಬೀಳಿಸಿತು.

ಕೇವಲ ಎರಡು ತಿಂಗಳ ಅವಧಿಯಲ್ಲಿ ಐದು ಬಾರಿ ಕಲ್ಲು ತೂರಾಟ ನಡೆದಿತ್ತು. ರಾತ್ರಿ ವೇಳೆ ಇಡೀ ನಗರ ನಿದ್ರೆಗೆ ಜಾರಿದ ಸಂದರ್ಭದಲ್ಲಿ ಈ ಪ್ರದೇಶಗಳಲ್ಲಿ ಕಲ್ಲುಗಳ ತೂರಾಟ ನಡೆದಿತ್ತು. ಕಲ್ಲು ತೂರಾಟ ನಡೆದಿದ್ದನ್ನು ವಿರೋಧಿಸಿ ಕೆಲವು ಸಂಘಟನೆಗಳು ಹಾಗೂ ರಾಜಕೀಯ ಮುಖಂಡರು ಪ್ರತಿಭಟನೆ ನಡೆಸಿದರು.

ಆದಾಯ ತೆರಿಗೆ ದಾಳಿ:

ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳಕರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರ ನಿವಾಸಗಳ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿದ್ದರು.

ಬಿರುಸಿನ ರಾಜಕೀಯ ಚಟುವಟಿಕೆ;

ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ಕಾರಣದಿಂದ ಈ ವರ್ಷ ಜಿಲ್ಲೆಯಲ್ಲಿ ಸಾಕಷ್ಟು ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆದವು. ಜಿಲ್ಲೆಯಲ್ಲಿ ಪ್ರಭಾವ ಹೊಂದಿರುವ ಜಾರಕಿಹೊಳಿ ಸಹೋದರರ ನಡುವಿನ ಭಿನ್ನಾಭಿಪ್ರಾಯವು ಹೈಲೈಟ್‌ ಆಗಿತ್ತು.

ಯಮಕನಮರಡಿ ಕ್ಷೇತ್ರದಿಂದ ತಮ್ಮ ಲಖನ್‌ ಜಾರಕಿಹೊಳಿ ಅವರನ್ನು ಕಣಕ್ಕಿಳಿಸಲು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಯೋಚಿಸಿದ್ದರು. ಹಾಲಿ ಈ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಸತೀಶ ಜಾರಕಿಹೊಳಿ ಅವರಿಗೆ ರಾಯಚೂರಿನಿಂದ ಪ್ರತಿನಿಧಿಸುವಂತೆ ಹೇಳಿದ್ದರು. ಇದನ್ನು ಸತೀಶ ನಿರಾಕರಿಸಿದ್ದರು. ಈ ವಿಷಯವಾಗಿ ಸಹೋದರರಲ್ಲಿ ಅಸಮಾಧಾನ ಉಂಟಾಗಿತ್ತು.

ಇದು ಚುನಾವಣೆಯಲ್ಲಿ ವ್ಯತಿರಿಕ್ತ ಪರಿಣಾಮ ಬೀರಬಲ್ಲದು ಎಂದು ಅರಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಸೆಂಬರ್‌ ತಿಂಗಳಿನಲ್ಲಿ ಯಮಕನಮರಡಿಯಲ್ಲಿ ನಡೆದ ಸಮಾರಂಭದಲ್ಲಿ ಈ ಸಲವೂ ಸತೀಶ ಅವರೇ ಈ ಕ್ಷೇತ್ರದಿಂದ ಕಣಕ್ಕೆ ಇಳಿಯುತ್ತಾರೆ. ಅವರನ್ನು ಗೆಲ್ಲಿಸಿಕೊಡಿ ಎಂದು ಕ್ಷೇತ್ರದ ಮತದಾರರಲ್ಲಿ ಮನವಿ ಮಾಡುವ ಮೂಲಕ ಬಿಕ್ಕಟ್ಟನ್ನು ಬಗೆಹರಿಸಿದ್ದರು.

ಕುಡಚಿ ಕ್ಷೇತ್ರದ ಶಾಸಕ ಪಿ.ರಾಜೀವ ಅವರು ಬಿಎಸ್‌ಆರ್‌ ಕಾಂಗ್ರೆಸ್‌ ಪಕ್ಷ ತೊರೆದು ಬಿಜೆಪಿ ಸೇರಿದ್ದು ಪ್ರಮುಖ ಘಟನೆಯಾಗಿದೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿಯುವುದು ಖಾತರಿಯಾಗಿದೆ.

ಚಳಿಗಾಲದ ಅಧಿವೇಶನವು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನವೆಂಬರ್‌ 13ರಿಂದ 10 ದಿನಗಳ ಕಾಲ ನಡೆಯಿತು. ಅಧಿವೇಶನ ನೆಪದಲ್ಲಿ ಬೆಳಗಾವಿಗೆ ಬಂದಿದ್ದ ಹಲವು ನಾಯಕರು ಜಿಲ್ಲೆಯಲ್ಲಿ ಸುತ್ತಾಡಿ ತಮ್ಮ ಪಕ್ಷವನ್ನು ಬಲಪಡಿಸಲು ಪ್ರಯತ್ನಿಸಿದರು. ಕಾರ್ಯಕರ್ತರನ್ನು ಭೇಟಿಯಾದರು. ಅವರ ಅಹವಾಲುಗಳಿಗೆ ಕಿವಿಯಾದರು.

ವಿವಾದಗಳು:

ಕಾಂಗ್ರೆಸ್‌ ಕಾರ್ಯಕರ್ತರೊಬ್ಬರ ಮೇಲೆ ತಮ್ಮ ಬೆಂಬಲಿಗರಿಂದ ಹಲ್ಲೆ ನಡೆಸಿದ್ದಾರೆ ಎನ್ನುವ ವಿವಾದವು ಕಾಗವಾಡ ಶಾಸಕ ರಾಜು ಕಾಗೆ ಅವರನ್ನು ಸುತ್ತಿಕೊಂಡಿತ್ತು. ಲಿಂಗಾಯತ ಸಮಾವೇಶಕ್ಕೆ ಹೋಗದಂತೆ ತಮ್ಮದೇ ಪಕ್ಷದ ‘ಹರಾಮಖೋರ್‌’ ನಾಯಕರು ತಮ್ಮನ್ನು ತಡೆದಿದ್ದರು ಎಂದು ಹುಕ್ಕೇರಿ ಶಾಸಕ, ಬಿಜೆಪಿಯ ಉಮೇಶ ಕತ್ತಿ ಹೇಳಿಕೆ ನೀಡಿದ್ದು ಮಾಧ್ಯಮಗಳಲ್ಲಿ ವಿವಾದ ಸೃಷ್ಟಿಸಿತ್ತು.

‘ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ತೀರ್ಪು ಮಹಾರಾಷ್ಟ್ರದ ಪರ ಬಂದರೆ, ನಾನು ಮೊದಲು ಭಗವಾ ಧ್ವಜ ಹಿಡಿದು ಜೈ ಮಹಾರಾಷ್ಟ್ರ ಎಂದು ಕೂಗುವೆ’ ಎಂದು ಹೇಳಿಕೆ ನೀಡಿದ್ದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಆಕಾಂಕ್ಷಿ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಅವರೂ ವಿವಾದದಲ್ಲಿ ಸಿಲುಕಿಕೊಂಡರು.

‘ನಾನು ಮರಾಠಿ ಮನುಷ್ಯನಾಗಿ ಬಂದಿದ್ದೇನೆ. ಬೆಳಗಾವಿಯು ಮಹಾರಾಷ್ಟ್ರಕ್ಕೆ ಸೇರಬೇಕೆಂದು ಇಲ್ಲಿನ ಮರಾಠಿ ಜನರು ಬಯಸಿದ್ದಾರೆ’ ಎಂದು ಹೇಳಿಕೆ ನೀಡಿದ್ದ ಶಾಸಕ ಸಂಜಯ ಪಾಟೀಲ ಅವರಿಗೂ ವಿವಾದ ಬಿಸಿ ತಟ್ಟಿತ್ತು.

ಕ್ರೀಡಾ ಸ್ಪೂರ್ತಿ:

ಬೆಳಗಾವಿಯ ಕಣಬರಗಿ ರಸ್ತೆಯಲ್ಲಿ ನಿರ್ಮಾಣವಾಗಿರುವ ಕೆಎಸ್‌ಸಿಎ ಕ್ರಿಕೆಟ್‌ ಮೈದಾನದಲ್ಲಿ ಮೊಟ್ಟಮೊದಲ ಬಾರಿಗೆ ಅಂತರರಾಷ್ಟ್ರೀಯ ಕ್ರಿಕೆಟ್‌ ಪಂದ್ಯ ನಡೆಯಿತು. ಭಾರತ ಮಹಿಳಾ ‘ಎ’ ತಂಡ ಹಾಗೂ ಬಾಂಗ್ಲಾ ಮಹಿಳಾ ‘ಎ’ ತಂಡದ ನಡುವಣ ಟ್ವೆಂಟಿ– 20 ಟೂರ್ನಿ ಡಿಸೆಂಬರ್‌ನಲ್ಲಿ ನಡೆಯಿತು. ಭಾರತ ತಂಡವು 2–1 ಅಂತರದಿಂದ ಟೂರ್ನಿಯನ್ನು ತನ್ನದಾಗಿಸಿಕೊಂಡಿತು.

ಇದಕ್ಕಿಂತ ಮುಂಚೆ ನವೆಂಬರ್‌ನಲ್ಲಿ ಕರ್ನಲ್‌ ಸಿ.ಕೆ. ನಾಯ್ಡು ಟೂರ್ನಿ ನಡೆಯಿತು. ಕರ್ನಾಟಕ ಹಾಗೂ ಪಶ್ಚಿಮ ಬಂಗಾಳ ತಂಡಗಳ ನಡುವೆ ನಡೆದ ಈ ಪಂದ್ಯವು ಡ್ರಾದಲ್ಲಿ ಅಂತ್ಯಗೊಂಡಿತು.

ಮೌಢ್ಯ ವಿರೋಧಿ ಸಂಕಲ್ಪ ದಿನಕ್ಕೆ ಇನ್ನಷ್ಟು ಪ್ರಚಾರ;

ಸಂವಿಧಾನ ಶಿಲ್ಪಿ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಪರಿನಿರ್ವಾಣ ದಿನವಾದ ಡಿ.6ರಂದು ಶಾಸಕ ಸತೀಶ ಜಾರಕಿಹೊಳಿ ನೇತೃತ್ವದ ಮಾನವ ಬಂಧುತ್ವ ವೇದಿಕೆಯು ಆಯೋಜಿಸಿದ್ದ 4ನೇ ವರ್ಷದ ಮೌಢ್ಯ ವಿರೋಧಿ ಸಂಕಲ್ಪ ದಿನಕ್ಕೆ ಸಾಕಷ್ಟು ಜನಬೆಂಬಲ ವ್ಯಕ್ತವಾಯಿತು. ಪ್ರತಿವರ್ಷ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವವರ ಸಂಖ್ಯೆ ಏರಿಕೆ ಕಾಣುತ್ತಿದೆ.

ಶತಮಾನದ ರೈಲ್ವೆ ಸೇತುವೆ ಇನ್ನು ನೆನಪು ಮಾತ್ರ:

ರೈಲ್ವೆ ನಿಲ್ದಾಣ ಬಳಿ ಬ್ರಿಟಿಷರು 1916ರಲ್ಲಿ ನಿರ್ಮಿಸಿದ್ದ ರೈಲ್ವೆ ಮೇಲ್ಸೇತುವೆಯನ್ನು ತೆರವುಗೊಳಿಸಿ, ಹೊಸ ಮೇಲ್ಸೇತುವೆ ನಿರ್ಮಿಸಲು ರೈಲ್ವೆ ಇಲಾಖೆ ಅಕ್ಟೋಬರ್‌ನಲ್ಲಿ ಆರಂಭಿಸಿತು. ಮುಂಬರುವ ಮಾರ್ಚ್‌ ವೇಳೆಗೆ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕಾಮಗಾರಿ ಮುಗಿಯುವವರೆಗೆ ವಾಹನಗಳ ಸಂಚಾರವನ್ನು ತಿಲಕವಾಡಿ 1ನೇ, 2ನೇ ಹಾಗೂ 3ನೇ ಗೇಟ್‌ ಮೂಲಕ ತಿರುಗಿಸಲಾಗಿದೆ.

ಕೈಸುಟ್ಟುಕೊಂಡ ಠೇವಣಿದಾರರು:

ಜಿಲ್ಲೆಯ ಹಲವೆಡೆ ಶಾಖೆ ಹೊಂದಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಕೋ–ಆಪರೇಟಿವ್‌ ಸೊಸೈಟಿ ಹಾಗೂ ಭೀಮಾಂಬಿಕಾ ಕೋ– ಆಪರೇಟಿವ್‌ ಸೊಸೈಟಿಯಲ್ಲಿ ಹಣ ಹೂಡಿಕೆ ಮಾಡಿದ್ದ ಸಾವಿರಾರು ಠೇವಣಿದಾರರು ಕೈಸುಟ್ಟುಕೊಂಡರು. ಸೊಸೈಟಿಯು ಆರ್ಥಿಕ ದಿವಾಳಿಗೆ ಒಳಗಾಗಿ, ಠೇವಣಿದಾರರಿಗೆ ಹಣ ಮರಳಿಸಲು ವಿಫಲವಾಯಿತು. ತಮ್ಮ ಹಣ ವಾಪಸ್‌ ನೀಡಬೇಕೆಂದು ಒತ್ತಾಯಿಸಿ ಠೇವಣಿದಾರರು ಹಲವು ದಿನ ಪ್ರತಿಭಟನೆ ಮಾಡಿದರು. ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ಸೊಸೈಟಿ ಅಧ್ಯಕ್ಷ, ಚಿತ್ರ ನಿರ್ಮಾಪಕ ಆನಂದ ಅಪ್ಪುಗೋಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದರು. ಜಾಮೀನಿನ ಮೇಲೆ ಹೊರಬಂದಿದ್ದಾರೆ.

ಬಾಂಗ್ಲಾದೇಶಿಯರ ಬಂಧನ:

ದೇಶದೊಳಗೆ ಅಕ್ರಮವಾಗಿ ನುಸುಳಿದ್ದ ಬಾಂಗ್ಲಾದೇಶದ 20 ಜನ ಯುವಕರನ್ನು ಬೆಳಗಾವಿಯ ಗಾಂಧಿನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮೇ ತಿಂಗಳಿನಲ್ಲಿ ಪೊಲೀಸರು ಬಂಧಿಸಿದ್ದರು. ಬಂಧಿತರ ಬಳಿ ಆಧಾರ್‌, ಸಿಮ್‌ ಕಾರ್ಡ್‌ ಇದ್ದಿದ್ದು, ಆತಂಕ ಸೃಷ್ಟಿಸಿತ್ತು.

ಏಣಗಿ ಬಾಳಪ್ಪ ನಿಧನ:

ನಡೆದಾಡುವ ರಂಗಭೂಮಿ ವಿಶ್ವಕೋಶ ಎಂದೇ ಖ್ಯಾತರಾಗಿದ್ದ ಕಲಾವಿದ ಏಣಗಿ ಬಾಳಪ್ಪ ಆಗಸ್ಟ್‌ ತಿಂಗಳಿನಲ್ಲಿ ತಮ್ಮ ಸ್ವಗ್ರಾಮವಾದ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಏಣಗಿಯಲ್ಲಿ ನಿಧನರಾದರು. ನಾಡಿನ ಹಲವು ಜನ ರಂಗಭೂಮಿ ಕಲಾವಿದರು, ನಾಯಕರು ಕಂಬನಿ ಮಿಡಿದರು.

ರಾಮ್‌ಭಾವು ಪೋತ್ದಾರ ನಿಧನ:

ಜನತಾ ಪರಿವಾರದ ಜಿಲ್ಲೆಯ ಹಿರಿಯ ನಾಯಕ ರಾಮ್‌ಭಾವು ಪೋತ್ದಾರ ಆಗಸ್ಟ್‌ನಲ್ಲಿ ನಿಧನರಾದರು. ಇವರ ಅಂತ್ಯಕ್ರಿಯೆಯಲ್ಲಿ ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry