7
ಚುನಾವಣೆ ಹೊಸ್ತಿಲಲ್ಲಿ ಹೊಸ ವರ್ಷ

ರೂಪ ಪಡೆಯದ ಗಣಿಪ್ರದೇಶಗಳ ಅಭಿವೃದ್ಧಿ

Published:
Updated:
ರೂಪ ಪಡೆಯದ ಗಣಿಪ್ರದೇಶಗಳ ಅಭಿವೃದ್ಧಿ

ಬಳ್ಳಾರಿ: ಜಿಲ್ಲೆಯಲ್ಲಿ ಗಣಿಗಾರಿಕೆಯಿಂದ ಬಾಧಿತರಾದ ಜನರು ಮತ್ತು ಪ್ರದೇಶಗಳ ಅಭಿವೃದ್ಧಿ ಸ್ಪಷ್ಟ ರೂಪು ಪಡೆಯದ ಸನ್ನಿವೇಶದಲ್ಲಿ 2017 ಕೊನೆಯಾಗುತ್ತಿದೆ. ಇದೇ ವೇಳೆ ವಿಧಾನಸಭೆಯ ಚುನಾವಣೆಯೂ ಹೊಸ್ತಿಲಲ್ಲಿದೆ. ರಾಜಕೀಯ ಪಕ್ಷಗಳ ಸಿದ್ಧತೆಗಳೂ ಭರ್ಜರಿಯಾಗಿ ನಡೆದಿವೆ.

ಜಿಲ್ಲಾ ಖನಿಜ ನಿಧಿಯ ಬಳಕೆ ದೊಡ್ಡಮಟ್ಟದಲ್ಲಿ ಇನ್ನೂ ಆರಂಭವಾಗಿಲ್ಲ. ಆದರೆ ಸದ್ದಿಲ್ಲದೆ ಸಭೆಗಳನ್ನು ನಡೆಸಲಾಗುತ್ತಿದೆ. ಸಭೆಯಲ್ಲಿ ಆದ ಚರ್ಚೆಗಳೇನು ಎಂಬುದನ್ನು ಜಿಲ್ಲಾಡಳಿತ ಬಹಿರಂಗ ಪಡಿಸಿಲ್ಲ. ಇದೇ ವೇಳೆ, ‘ಗಣಿಗಾರಿಕೆಯಿಂದ ಸಂಡೂರು ತಾಲ್ಲೂಕಿನ ಕುಮಾರಸ್ವಾಮಿ ಗುಡಿಯನ್ನು ಉಳಿಸಿ’ ಹೋರಾಟವೂ ತೀವ್ರಗೊಂಡಿದೆ.

ಇತ್ತೀಚೆಗೆ ಅಲ್ಲಿಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಯಾವ ಭರವಸೆಯನ್ನೂ ನೀಡದೇ ತೆರಳಿದ್ದು ಸ್ಥಳೀಯರಲ್ಲಿ ಅಸಮಾಧಾನವನ್ನೂ ಮೂಡಿಸಿದೆ.

ಕಾಲುವೆ ನೀರನ್ನು ನೆಚ್ಚಿಕೊಂಡ ರೈತರು ಈ ಬಾರಿಯೂ ಕೃಷಿ ಚಟುವಟಿಕೆಗೆ ನೀರು ಸಾಕಾಗದೆ ಬೆಳೆ ನಷ್ಟದ ಭೀತಿಯಲ್ಲೇ ದಿನ ಕಳೆಯುತ್ತಿದ್ದಾರೆ. ‘ಬೆಳೆಗಳಿಗೆ ಬೇಕಾದಾಗ ನೀರು ಬಿಡಿ. ಬೇಡವಾದಾಗ ನಿಲ್ಲಿಸಿರಿ’ ಎಂಬ ಅವರ ಮಾತನ್ನು ನೀರಾವರಿ ಸಲಹಾ ಸಮಿತಿಯು ಕೇಳಿಸಿಕೊಂಡಿಲ್ಲ. ಕಂಪ್ಲಿ ಶಾಸಕರಾದಿಯಾಗಿ ರೈತರು ಆ ಬಗ್ಗೆ ಜಿಲ್ಲಾಡಳಿತದ ಗಮನ ಸೆಳೆಯುವ ಪ್ರಯತ್ನ ಭಾಗಶಃ ಯಶಸ್ಸು ಕಂಡಿದೆ. ಬಲದಂಡೆ ನಾಲೆಗೆ ನೀರು ಹರಿಸುವ ಭರವಸೆ ದೊರೆತಿದೆ.

ಬರಗಾಲ ಮತ್ತು ಅತಿವೃಷ್ಟಿಯ ಕಾರಣಕ್ಕೆ ಬೆಳೆ ನಷ್ಟದ ಮಾತೂ ವರ್ಷವಿಡೀ ಕೇಳಿಸುತ್ತಲೇ ಇತ್ತು. ನಷ್ಟ ಪರಿಹಾರ ಮತ್ತು ಬೆಳೆ ವಿಮೆಯ ಹಣ ಸಂಪೂರ್ಣವಾಗಿ ಎಲ್ಲ ರೈತರಿಗೂ ದೊರಕಿಲ್ಲ ಎಂಬ ದೂರು ಹಾಗೇ ಉಳಿದಿದೆ.

ಕುಂಟುತ್ತಿರುವ ಅಭಿವೃದ್ಧಿ...

ಜಿಲ್ಲಾ ಕೇಂದ್ರವಾದ ನಗರದ ಅಭಿವೃದ್ಧಿಯೂ ಕುಂಟುತ್ತಾ ಸಾಗಿದೆ. ದಶಕಗಳ ಬಳಿಕ, ನಗರದ ಎಚ್‌.ಆರ್‌.ಗವಿಯಪ್ಪ ವೃತ್ತವನ್ನು ಅಭಿವೃದ್ಧಿಗೊಳಿಸಿ, 150 ಅಡಿ ಎತ್ತರದ ರಾಷ್ಟ್ರಧ್ವಜವನ್ನು ಹಾರಿಸಿ, ಸಿಗ್ನಲ್‌ ಮುಕ್ತಗೊಳಿಸಿದ್ದನ್ನು ಬಿಟ್ಟರೆ ಎದ್ದು ಕಾಣುವಂಥ ಅಭಿವೃದ್ಧಿ ನಡೆಯಲಿಲ್ಲ.

ಜಿಲ್ಲಾ ಕ್ರೀಡಾಂಗಣವನ್ನು ಆರು ತಿಂಗಳಲ್ಲಿ ಅಭಿವೃದ್ಧಿಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ರಾಮಪ್ರಸಾದ್ ನೀಡಿದ್ದ ಭರವಸೆಗೆ ಒಂದೂವರೆ ವರ್ಷವಾಗಿದೆ. ಅಲ್ಲಿಯೂ ಬದಲಾವಣೆ ಕಂಡುಬಂದಿಲ್ಲ. ಸಂಡೂರಿನಲ್ಲಿ ಜಿಲ್ಲಾಡಳಿತ ಏರ್ಪಡಿಸಿದ್ದ ಬೃಹತ್‌ ಉದ್ಯೋಗ ಮೇಳದ ಫಲಿತವೂ ಸ್ಪಷ್ಟವಾಗಲಿಲ್ಲ. ನಗರ ಸೌಂದರ್ಯೀಕರಣಕ್ಕಾಗಿ ಆರಂಭಿಸಿದ ಗೋಡೆ ಚಿತ್ರಕಲೆ ಉತ್ಸವವೂ ಅಪರಿಪೂರ್ಣವಾಯಿತು.

ಹೈದರಾಬಾದ್‌ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ವತಿಯಿಂದ ನಡೆಯಬೇಕಾಗಿದ್ದ ಅಭಿವೃದ್ಧಿಯೂ ದೂರವೇ ಉಳಿಯಿತು. ನಿರೀಕ್ಷೆಯಂತೆ ಅನುದಾನ ಬಿಡುಗಡೆ ಆಗದಿರುವುದು ಮತ್ತು ಬಿಡುಗಡೆಯಾದದ್ದು  ಸಮಪರ್ಕವಾಗಿ ಬಳಕೆ ಆಗದಿರುವುದು ಈ ಬಾರಿಯೂ ಚರ್ಚೆ ಆಯಿತು.

ಪ್ರತಿಭಟನೆ ಸಾಲು....

ಜಿಲ್ಲೆ ಇಡೀ ವರ್ಷ ನಿರಂತರ ಪ್ರತಿಭಟನೆಗಳನ್ನೂ ಕಂಡಿತು, ಮರಳಿಗಾಗಿ ಕಟ್ಟಡ ಕಾರ್ಮಿಕರು ಧರಣಿ ನಡೆಸಿದರೆ, ಮೂಲಸೌಕರ್ಯಕ್ಕಾಗಿ ಆಗ್ರಹಿಸಿ ಬಳ್ಳಾರಿ ನಗರ ಅಭಿವೃದ್ಧಿ ಸಮಿತಿಯು ಪಾಲಿಕೆಯ ಮುಂದೆ ಕಸ ಸುರಿದು ಪ್ರತಿಭಟಿಸಿತು. ಕಾಲುವೆ ನೀರಿಗಾಗಿ ರೈತರು ಪ್ರತಿಭಟನೆ ನಡೆಸಿದರು. ಗಣಿಕಾರ್ಮಿಕರು ಉದ್ಯೋಗಕ್ಕಾಗಿ ಧರಣಿ ನಡೆಸಿದರು.

ಗಣಿ ಲಾರಿಗಳ ವಿರುದ್ಧದ ಧರಣಿ ನಿರತರೊಂದಿಗೆ ನಡೆಸಿದ್ದ ಸಭೆಯಲ್ಲಿ ಜಿಲ್ಲಾಧಿಕಾರಿ ಆಕ್ಷೇಪಾರ್ಹ ಮಾತನಾಡಿದರು ಎಂದು ಆಕ್ರೋಶ ವ್ಯಕ್ತಪಡಿಸಿ, ಅವರ ವಿರುದ್ಧ ಸಂಡೂರಿನ ಜನ ಸರ್ಕಾರಕ್ಕೆ ಪತ್ರವನ್ನೂ ಬರೆದರು. ಸಂಡೂರು ಕುಮಾರಸ್ವಾಮಿ ಗುಡಿ ರಕ್ಷಣೆಗೆ ಆಗ್ರಹಿಸಿ ಸಂಡೂರು ಬಂದ್‌ ಆಚರಿಸಲಾಗಿತ್ತು,

ಬಯಲು ಬಹಿರ್ದೆಸೆ ಮುಕ್ತವಾಗುವುದೇ...

2102ರ ಸಮೀಕ್ಷೆಯಲ್ಲಿ ಗುರುತಿಸಿದ ಎಲ್ಲ ಕುಟುಂಬಗಳಿಗೂ ಶೌಚಾಲಯ ನಿರ್ಮಿಸಿಕೊಡುವ ಪ್ರಯತ್ನ ಜಿಲ್ಲಾ ಪಂಚಾಯಿತಿಯಿಂದ ಸಮರೋಪಾದಿಯಲ್ಲಿ ನಡೆದಿದ್ದರೂ, ಜನವರಿ 26ರ ಗಣರಾಜ್ಯೋತ್ಸವದ ವೇಳೆಗೆ ಅದು ಗುರಿ ಮುಟ್ಟುವ ಸಾಧ್ಯತೆ ಕ್ಷೀಣಗೊಂಡಿದೆ. 201ರ ಬಳಿಕ ಅಸ್ತಿತ್ವಕ್ಕೆ ಬಂದ ಕುಟುಂಬಗಳ ಪೈಕಿ ಎಷ್ಟು ಮನೆಗಳಲ್ಲಿ ಶೌಚಾಲಯಳಿವೆ? ಇಲ್ಲ ಎಂಬ ಬಗ್ಗೆ ಪಂಚಾಯಿತಿ ಗಂಭೀರ ಗಮನ ಹರಿಸಿಲ್ಲ.

ಮಾನವ–ಪ್ರಾಣಿ ಸಂಘರ್ಷ...

ಬೆಟ್ಟ, ಕಾಡುಗಳಿಂದ ಆವೃತ್ತವಾಗಿರುವ ಜಿಲ್ಲೆಯಲ್ಲಿ ಈ ವರ್ಷವೂ ಮನುಷ್ಯ–ಪ್ರಾಣಿಗಳ ನಡುವೆ ಸಂಘರ್ಷ ತಲೆದೋರಿತ್ತು. ಕೂಡ್ಲಿಗಿ, ಕಂಪ್ಲಿ, ಹೊಸಪೇಟೆ, ಸಂಡೂರು, ಬಳ್ಳಾರಿ ನಗರ ಸೇರಿದಂತೆ ಕೆಲವೆಡೆ ಕರಡಿ, ಚಿರತೆಗಳು ಕಾಣಿಸಿಕೊಂಡವು. ಇತ್ತೀಚೆಗಷ್ಟೇ ಚಿರತೆಯೊಂದು ಸಂಡೂರಿನ ಬಾಲಕನೊಬ್ಬನ ಮೇಲೆ ದಾಳಿ ಮಾಡಿತ್ತು. ಬಳ್ಳಾರಿ ನಗರದ ಎಂ.ಕೆ,ನಗರದ ಮೇಲೆ ಕೆಲವು ದಿನಗಳ ಹಿಂದೆಯಷ್ಟೇ ಕಾಣಿಸಿಕೊಂಡಿದ್ದ ಎರಡು ಚಿರತೆಗಳು ಸೃಷ್ಟಿಸಿದ್ದ ಆತಂಕ ಇನ್ನೂ ಕೊನೆಗೊಂಡಿಲ್ಲ.

ನಕಲಿ ಅಂಕಪಟ್ಟಿಗೂ ಮಾನ್ಯತೆ:

ದ್ವಿತೀಯ ಪಿಯುಸಿ ನಕಲಿ ಅಂಕಪಟ್ಟಿ ಕೊಟ್ಟು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪದವಿ ತರಗತಿಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳುವ ಕುರಿತ ಚರ್ಚೆ ಇಡೀ ವರ್ಷ ಗಮನ ಸೆಳೆದಿತ್ತು. ಪರೀಕ್ಷೆಗೆ ಹಾಜರಾಗಲು ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದ ವಿಶ್ವವಿದ್ಯಾಲಯ ಮತ್ತೆ ಎಲ್ಲ ವಿದ್ಯಾರ್ಥಿಗಳಿಗೂ ಅವಕಾಶ ನೀಡಿದೆ. ಅದಕ್ಕೆ ಕಾರಣವಾಗಿ ಹೈಕೋರ್ಟ್‌ನ ಮಧ್ಯಂತರ ತೀರ್ಪನ್ನು ಮುಂದಿಡಲಾಗಿದೆ.

ಮೂರೂ ಪಕ್ಷಗಳ ಬಲಾಬಲ ಪ್ರದರ್ಶನ ಶುರು

ಜೆಡಿಎಸ್‌ನ ಏಕೈಕ ಶಾಸಕ, ಹಗರಿಬೊಮ್ಮನಹಳ್ಳಿಯ ಎಸ್‌. ಭೀಮಾನಾಯ್ಕ ಅವರು ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡ ಬಳಿಕ ಹೆಚ್ಚೂ ಕಡಿಮೆ ಅನಾಥ ಸ್ಥಿತಿಯಲ್ಲಿದ್ದ ಪಕ್ಷ ಮತ್ತೆ ಚಿಗುರಿದೆ. ಫೆಬ್ರುವರಿಯಲ್ಲಿ ಹೊಸ ಪದಾಧಿಕಾರಿಗಳ ನೇಮಕದ ಬಳಿಕ ವರಿಷ್ಠ ಎಚ್‌,ಡಿ.ದೇವೇಗೌಡರು ಜಿಲ್ಲೆಗೆ ಎರಡು ಬಾರಿ ಭೇಟಿ ನೀಡಿದ್ದರು. ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿಯವರೂ ಭೇಟಿ ನೀಡಿದ್ದರು. ಜಿಲ್ಲೆಯಲ್ಲಿ ಪಕ್ಷದ ಪುನರ್‌ಸ್ಥಾಪನೆ ಪಕ್ಷಕ್ಕೆ ಪ್ರಮುಖ ಸವಾಲಾಗಿದೆ.

ಬಿಜೆಪಿಗೆ ಚನ್ನಬಸವನಗೌಡ ಮತ್ತು ಕಾಂಗ್ರೆಸ್‌ಗೆ ಮಹ್ಮದ್‌ ರಫೀಕ್‌ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಆಯ್ಕೆಯಾದರು. ಮೂರೂ ಪಕ್ಷಗಳಲ್ಲಿ ಬಲಾಬಲ ಪ್ರದರ್ಶನ ಆರಂಭವಾದ ವರ್ಷವಿದು.

ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡ ಹಗರಿಬೊಮ್ಮನಹಳ್ಳಿ ಶಾಸಕ ಎಸ್‌.ಭಿಮಾನಾಯ್ಕ ಅವರ ವಿರುದ್ಧ ಅಲ್ಲಿನ ಮಾದಿಗ ಸಮುದಾಯ ತನ್ನ ಅಸಮಾಧಾನವನ್ನು ದಾಖಲಿಸಿದೆ. ಅವರಿಗೆ ಟಿಕೆಟ್‌ ಕೊಟ್ಟರೆ ಜಿಲ್ಲೆಯಲ್ಲಿ ಕಾಂಗ್ರೆಸ್‌ ಸೋಲಿಗೆ ಯತ್ನಿಸುವದಾಗಿಯೂ ಮುಖಂಡರು ಹೇಳಿದ್ದಾರೆ,

ಶತಮಾನೋತ್ಸವ ಸಂಭ್ರಮ:

ವೀರಶೈವ ವಿದ್ಯಾವರ್ಧಕ ಸಂಘದ ಶತಮಾನೋತ್ಸವ, ಕ್ರೈಸ್ಟ್‌ ದ ಕಿಂಗ್‌ ಚರ್ಚಿನ ದ್ವಿಶತಮಾನೋತ್ಸವ, ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ರಾಜ್ಯಮಟ್ಟದ ಫುಟ್‌ಬಾಲ್‌ ಪಂದ್ಯಾವಳಿ, ಶಟಲ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿ, ರಾಜ್ಯಮಟ್ಟದ ಪ್ರತಿಭಾ ಕಾರಂಜಿ–ಕಲೋತ್ಸವ, ಅಂಧರ ಕ್ರಿಕೆಟ್‌ ಪಂದ್ಯಾವಳಿಗೂ ಜಿಲ್ಲೆ ಸಾಕ್ಷಿಯಾಯಿತು.

ಉರುಳಿ ಬಿದ್ದ ಕೊಟ್ಟೂರು ತೇರು:

ಫೆಬ್ರುವರಿಯಲ್ಲಿ ಕೊಟ್ಟೂರಿನಲ್ಲಿ ಲಕ್ಷಾಂತರ ಭಕ್ತರ ಸಮ್ಮುಖದಲ್ಲೇ ಕೊಟ್ಟೂರೇಶ್ವರ ತೇರು ಉರುಳಿಬಿದ್ದದ್ದು ಜಿಲ್ಲೆಯ ಮಟ್ಟಿಗೆ ಮರೆಯಲಾಗದ ದಿನ. ವರ್ಷಾಂತ್ಯಕ್ಕೆ ಮತ್ತೆ ತೇರಿನ ಮರುನಿರ್ಮಾಣ ಪೂರ್ಣಗೊಳ್ಳುವ ಹಂತದಲ್ಲಿದೆ. ಸರ್ಕಾರ ಅದಕ್ಕಾಗಿ ₨ 2 ಕೋಟಿ ಅನುದಾನ ನೀಡಿದೆ.

ಜಲ ಮಿತ ಬಳಕೆಯ ಕೃಷಿ:

ಮಳೆ ಅಭಾವದ ನಡುವೆ ಬಸವಳಿದ ರೈತರ ನಡುವೆಯೇ, ಮಳೆಯಾಶ್ರಯದಲ್ಲೇ ಪ್ರಯೋಗ ನಡೆಸಿ ಸಿರಿಧಾನ್ಯ, ಭತ್ತವನ್ನು ಬೆಳೆದ ರೈತರ ನಗವೂ ವರ್ಷವನ್ನು ಕಳೆಗಟ್ಟಿಸಿತ್ತು. ಕೃಷಿ ಇಲಾಖೆಯ ಉತ್ತೇಜನದಿಂದಾಗಿ ಸಾವಿರಾರು ಎಕರೆಯಲ್ಲಿ ಈ ಬಾರಿ ರೈತರು ಕೂರಿಗೆ ಪದ್ಧತಿಯನ್ನು ಬಿತ್ತನೆ ನಡೆಸಿ ಭತ್ತ ಬೆಳೆದಿದ್ದು ವಿಶೇಷ.

ಜಿಪಂ ಅಧ್ಯಕ್ಷೆಯ ‘ಅಧಿಕಾರ ಗ್ರಹಣ’:

ಜಾತಿ ಆದಾಯ ಪ್ರಮಾಣಪತ್ರದ ವಿವಾದದಿಂದ ಇಡೀ ವರ್ಷ ಸಿ.ಭಾರತಿ ಜಿಲ್ಲೆಯ ಗಮನ ಸೆಳೆದರು. ಅಧಿಕಾರ ನಿರಂತರವಾಗಿ ಅವರಿಗೆ ದಕ್ಕಲಿಲ್ಲ. ಈಗಲೂ ಅದೇ ಪರಿಸ್ಥಿತಿ. ಪರಿಣಾಮವಾಗಿ ಉಪಾಧ್ಯಕ್ಷೆ ಪಿ.ದೀನಾ ಅವರಿಗೆ ಹಂಗಾಮಿ ಅಧ್ಯಕ್ಷರಾಗುವ ಅವಕಾಶ ಲಭಿಸುತ್ತಲೇ ಇದೆ.

ಕ್ರೀಡಾ ಇಲಾಖೆಗೆ ಕಂಳಕ:

ಹಲವು ಕ್ರೀಡಾಕೂಟಗಳಿಂದ ಗಮನ ಸೆಳೆದ ಜಿಲ್ಲೆಯಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ಅವ್ಯವಹಾರದ ಕಳಂಕವೂ ಮೆತ್ತಿಕೊಂಡಿತ್ತು. ಜಿಲ್ಲಾ ಪಂಚಾಯಿತಿಯ ಲಿಂಕ್ ಡಾಕ್ಯುಮೆಂಟ್‌ನ ₨ 66 ಲಕ್ಷವನ್ನು ಅಕ್ರಮವಾಗಿ ಬಳಸಿದ ಆರೋಪದ ಮೇರೆಗೆ ಇಲಾಖೆಯ ಸಹಾಯಕ ನಿರ್ದೇಶಕ ರಾಜುಭಾವಿ ಹಳ್ಳಿ ಬಂಧಿತರಾಗಿ ಜೈಲು ಸೇರಿದರು.

ಪ್ರಭಾರಿ ಸಹಾಯಕ ನಿರ್ದೇಶಕ ರಹಮತ್‌ ಉಲ್ಲಾ ಉಸ್ತುವಾರಿಯಲ್ಲಿ ಇಲಾಖೆಯು ಮತ್ತೆ ಕ್ರೀಡಾಪಟು ಸ್ನೇಹಿಯಾದ ವೃತ್ತಿಪರತೆಯನ್ನು ರೂಢಿಸಿಕೊಳ್ಳಲು ಆರಂಭಿಸಿದೆ.

ರೆಡ್ಡಿ ಸಹೋದರರು....

ಹರಪನಹಳ್ಳಿ ಕ್ಷೇತ್ರದ ವಿವಿಧ ಜಾತಿ–ಸಮುದಾಯಗಳ ಬೆಂಬಲಿಗರು ನಿರಂತರವಾಗಿ ಬಿಜೆಪಿ ಮುಖಂಡ ಜಿ.ಕರುಣಾಕರರೆಡ್ಡಿ ಅವರ ಬಳ್ಳಾರಿ ನಗರದ ಮನೆಗೆ ಭೇಟಿ ನೀಡಿದ್ದರು.

ನಗರದಲ್ಲಿ ಬಡಾವಣೆ ನಿರ್ಮಾಣ ವಿವಾದದ ಸಂಬಂಧ ಕರುಣಾಕರರೆಡ್ಡಿ ಅವರು ಸಂಸದ ಬಿ.ಶ್ರೀರಾಮುಲು ವಿರುದ್ಧ ಸ್ಥಳೀಯ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದು, ಸೋಮಶೇಖರರೆಡ್ಡಿ ಮತ್ತು ಜನಾರ್ದನರೆಡ್ಡಿ ಅವರನ್ನು ಕೆರಳಿಸಿದ್ದು ಪ್ರಮುಖ ಘಟನೆ.

ಆ ಹಿನ್ನೆಲೆಯಲ್ಲೇ ಜಿ.ಸೋಮಶೇಖರರೆಡ್ಡಿ ತಮ್ಮ ಸಹೋದರನ ವಿರುದ್ಧವೇ ಸುದ್ದಿಗೋಷ್ಠಿ ನಡೆಸಿದ್ದರು. ಈ ನಡುವೆ, ಬಳ್ಳಾರಿ ಭೇಟಿಗೆ ಸುಪ್ರೀಂ ಕೋರ್ಟ್‌ ನಿರ್ಬಂಧ ವಿಧಿಸಿರುವ ಕಾರಣ, ಜನಾರ್ದನರೆಡ್ಡಿ ತಮ್ಮ 25ನೇ ವಿವಾಹ ವಾರ್ಷಿಕೋತ್ಸವಕ್ಕೆ, ದೀಪಾವಳಿಗೆ, ಸಂಬಂಧಿಕರೊಬ್ಬರ ಮದುವೆಗಾಗಿ ನಗರಕ್ಕೆ ಭೇಟಿ ನೀಡಿದ್ದರು.

ಕೊಟ್ಟೂರು ಕೆರೆ ತುಂಬಿತು

ಏಪ್ರಿಲ್‌ನಲ್ಲಿ ನಡೆದ ಸ್ವಚ್ಛತಾ ಕಾರ್ಯದ ಪರಿಣಾಮವಾಗಿ ಮಳೆಗಾಲದಲ್ಲಿ ಕೊಟ್ಟೂರಿನ ಬೃಹತ್‌ ಕೆರೆ ತುಂಬಿದ್ದು ಐತಿಹಾಸಿಕ ದಾಖಲೆ. ‘ನಮ್ಮ ಕೆರೆ ನಮ್ಮ ಹಕ್ಕು’ ಬಳಗದ ಮೂಲಕ ಕೊಟ್ರೇಶ್‌ ಮತ್ತು ಗೆಳೆಯರು ಆರಂಭಿಸಿದ ಅಭಿಯಾನಕ್ಕೆ ವಿವಿಧ ಸಂಘ–ಸಂಸ್ಥೆಗಳು ಬೆಂಬಲ, ಶ್ರಮದಾನದ ಸಹಕಾರ ನೀಡಿದ ಪರಿಣಾಮವಾಗಿ ಕೆರೆಯಲ್ಲಿ ಈಗ ಜೀವಕಳೆ ತುಂಬಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry