ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವನವಾಸಿಗಳೇ ನಿಜವಾದ ನಾಗರಿಕರು

ಸಮ್ಮೇಳನ ಉದ್ಘಾಟಿಸಿದ ಮುಡಿಗುಂಡ ಮಠದ ಶ್ರೀಕಂಠಸ್ವಾಮೀಜಿ ಅಭಿಪ್ರಾಯ
Last Updated 31 ಡಿಸೆಂಬರ್ 2017, 8:40 IST
ಅಕ್ಷರ ಗಾತ್ರ

ಚಾಮರಾಜನಗರ: ‘ವನವಾಸಿಗಳು ಯಾರಿಗೂ ಮೋಸ, ದೌರ್ಜನ್ಯ ಮಾಡುವುದಿಲ್ಲ. ಅವರು ವಾಸಿಸುವ ಸ್ಥಳದಲ್ಲಿ ಹೆಣ್ಣುಮಕ್ಕಳು ನಿರ್ಭೀತಿಯಿಂದ ಜೀವನ ನಡೆಸುತ್ತಾರೆ. ನಾಗರಿಕ ಸಮಾಜಕ್ಕೆ ಇರಬೇಕಾದ ಎಲ್ಲ ಲಕ್ಷಣಗಳು ವನದಲ್ಲಿದೆ. ಹಾಗಾಗಿ, ವನವಾಸಿಗಳೇ ದೇಶದ ನಿಜವಾದ ನಾಗರಿಕರು’ ಎಂದು ಕೊಳ್ಳೇಗಾಲದ ಮುಡಿಗುಂಡ ವಿರಕ್ತ ಮಠದ ಶ್ರೀಕಂಠಸ್ವಾಮೀಜಿ ಹೇಳಿದರು.

ನಗರದ ನಂದಿಭವನದಲ್ಲಿ ಶನಿವಾರ ವನವಾಸಿ ಕಲ್ಯಾಣ ಕರ್ನಾಟಕ ಜಿಲ್ಲಾ ಘಟಕದಿಂದ ನಡೆದ ವನವಾಸಿ ಸಮಸ್ಯೆ ಆಧಾರಿತ ಜಿಲ್ಲಾ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

ವನವಾಸಿ ಜನರು ಮುಗ್ಧ, ಸ್ವಚ್ಛ ಹಾಗೂ ಮುಕ್ತ ಮನಸ್ಸಿನ ಜನರು. ನಗರವಾಸಿಗಳ ಶಿಕ್ಷಣ ವನವಾಸಿಗಳಿಗೆ ಸಿಗುವಂತಾಗಬೇಕಾಗಿದೆ. ಅದೇ ರೀತಿ ವನವಾಸಿಗಳ ಪ್ರಾಮಾಣಿಕತನ ಮತ್ತು ಸಹಜತೆಯನ್ನು ನಗರವಾಸಿಗಳು ಅಳವಡಿಸಿಕೊಳ್ಳಬೇಕಾಗಿದೆ ಇದರಿಂದ ಸುಂದರ ಸಮಾಜ ನಿರ್ಮಾಣ ಸಾಧ್ಯ ಎಂದು ತಿಳಿಸಿದರು.

ವನವಾಸಿಗಳು ಸದಾ ಪ್ರಕೃತಿಯೊಂದಿಗೆ ಒಡನಾಟ ಹೊಂದಿರುತ್ತಾರೆ. ಹಾಗಾಗಿಯೇ ಅವರಿಗೆ ಪ್ರಕೃತಿಯ ಆಗುಹೋಗುಗಳ ಬಗ್ಗೆ ಬೇಗನೇ ಅರ್ಥವಾಗುತ್ತದೆ ಎಂದ ಅವರು, ವನವಾಸಿಗಳು ಹಿಂದಿನಿಂದ ಬಂದಿರುವ ಸಂಪ್ರದಾಯ ಉಳಿಸಿ, ಬೆಳೆಸಬೇಕು ಎಂದು ಸಲಹೆ ನೀಡಿದರು.

ವನವಾಸಿ ಕಲ್ಯಾಣ ಕ್ಷೇತ್ರೀಯ ಪ್ರಮುಖ್‌ ಕೃಷ್ಣಮೂರ್ತಿ ಮಾತನಾಡಿ, ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಶಿಕ್ಷಣ, ಮೂಲ ಸೌಲಭ್ಯ ಕಲ್ಪಿಸುವುದರೊಂದಿಗೆ ಅವರನ್ನು ಸಮಾಜದೊಂದಿಗೆ ಬೆಸೆಯುವ ಕಾರ್ಯ ವನವಾಸಿ ಕಲ್ಯಾಣ ಸಂಸ್ಥೆ ಮಾಡುತ್ತಿದೆ ಎಂದರು.

ಅಪೌಷ್ಟಿಕತೆ, ಅನಾರೋಗ್ಯ, ಸರ್ಕಾರಿ ಸೌಲಭ್ಯಗಳಿಂದ ವಂಚಿತ ರಾಗುವ ವನವಾಸಿಗಳ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತರುವ ಉದ್ದೇಶ ದಿಂದ 180 ಜಿಲ್ಲೆಗಳಲ್ಲಿ ಸಮ್ಮೇಳನ ಆಯೋಜಿಸಲಾಗಿದೆ ಎಂದು ತಿಳಿಸಿದರು.

ವನವಾಸಿ ಜನಾಂಗವನ್ನು ಪ್ರತ್ಯೇಕವಾಗಿ ಉಳಿಸುವ ಮೂಲಕ ನಗರದ ತಿಳಿವಳಿಕೆ ಇಲ್ಲದಂತಾಗಿದೆ. ನಾಗರಿಕ ಸಮಾಜದ ಕನಿಷ್ಠ ಮೂಲ ಸೌಲಭ್ಯವಿಲ್ಲದೇ ಜೀವನ ನಡೆಸುತ್ತಿದ್ದಾರೆ. ಸೌಲಭ್ಯಗಳ ಬಗ್ಗೆ ಮಾಹಿತಿ ಇಲ್ಲದೆ ವಂಚಿತರಾಗುತ್ತಿದ್ದಾರೆ ಎಂದರು.

ಬಳಿಕ, ವನವಾಸಿಯ ವಿವಿಧ ಜನಾಂಗದ ಮುಖಂಡರು ಸಮುದಾ ಯದ ಸಮಸ್ಯೆಯನ್ನು ತಿಳಿಸಿದರು

ಗಿರಿಜನ ವೈದ್ಯ ಮಹಿಳೆ ಜಡೆಮಾದಮ್ಮ ಅವರನ್ನು ಸನ್ಮಾನಿಸಲಾಯಿತು.

ಜಿಲ್ಲಾ ಪರಿಶಿಷ್ಟ ಪಂಗಡಗಳ ವಿಸ್ತರಣಾಧಿಕಾರಿ ಬಸವಣ್ಣ, ಅಟ್ಟುಗುಳಿ ಪುರ ಗ್ರಾ.ಪಂ ಮಾಜಿ ಸದಸ್ಯೆ ಮಹದೇವಮ್ಮ, ವನವಾಸಿ ಕಲ್ಯಾಣ ಕರ್ನಾಟಕ ಸಂಸ್ಥೆಯ ರಾಜ್ಯ ಘಟಕದ ಅಧ್ಯಕ್ಷ ವೆಂಕಟೇಶ್‌ ಸಾಗರ್‌, ಜಿಲ್ಲಾ ಘಟಕದ ಅಧ್ಯಕ್ಷ ನಾಗೇಶ್‌ ಹಂಗಳ, ಜಿಲ್ಲಾ ಕಾರ್ಯದರ್ಶಿ ಕೆ.ಎಲ್‌. ಮಹದೇವಸ್ವಾಮಿ, ಮುಖಂಡರಾದ ಶಿವಕುಮಾರ್‌, ಎಸ್‌. ಬಾಲಸುಬ್ರಹ್ಮಣ್ಯಂ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT