7
ಸಿಹಿ–ಕಹಿ ಘಟನೆಗಳ ನಡುವೆ ವರ್ಷಕ್ಕೆ ವಿದಾಯ, ಹೊಸ ನಿರೀಕ್ಷೆಗಳೊಂದಿಗೆ 2018ಕ್ಕೆ ಸ್ವಾಗತ ಕೋರಲು ಸಿದ್ಧತೆ

ಬರದ ಕಹಿ ನೆನಪು; ವರುಣ ತಂದ ಸೊಂಪು

Published:
Updated:
ಬರದ ಕಹಿ ನೆನಪು; ವರುಣ ತಂದ ಸೊಂಪು

ಚಾಮರಾಜನಗರ: ಸಚಿವ ಎಚ್‌.ಎಸ್‌. ಮಹದೇವಪ್ರಸಾದ್‌ ಅವರ ನಿಧನದ ಕಹಿ ಘಟನೆಯೊಂದಿಗೆ ಆರಂಭವಾದ 2017, ಅಭಿವೃದ್ಧಿಪರ್ವದ ನಿರೀಕ್ಷೆಯೊಂದಿಗೆ ಅಂತ್ಯಕಾಣುತ್ತಿದೆ. 2018 ಜಿಲ್ಲೆಯ ಸ್ವರೂಪದ ಮಹತ್ತರ ಬದಲಾವಣೆಗಳಿಗೆ ಸಾಕ್ಷಿಯಾಗುವ ಭರವಸೆಯನ್ನು ಹುಟ್ಟುಹಾಕಿದೆ.

ಮಳೆ ತಂತು ಬೆಳೆ!: ಸಂಕಟ, ನೋವು–ನಲಿವುಗಳೇನೇ ಇದ್ದರೂ 2017 ಜಿಲ್ಲೆಯ ಜನರಿಗೆ, ಮುಖ್ಯವಾಗಿ ರೈತರಿಗೆ ಸಂತಸ ತಂದ ವರ್ಷ ಎಂದೇ ಹೇಳಬಹುದು. ಹತ್ತಾರು ವರ್ಷಗಳಿಂದ ಮಳೆಯಿಲ್ಲದೆ ಬರಗಾಲದಿಂದ ತತ್ತರಿಸಿದ್ದ ಜಿಲ್ಲೆಗೆ ವರುಣನ ಕೃಪೆ ತಮ್ಮ ಭೂಮಿಯಲ್ಲಿ ಮತ್ತೆ ಹಸಿರು ಚಿಗುರಿಸುವ ಆಸೆ ಮೂಡಿಸಿತು. ಅದಕ್ಕೆ ಪೂರಕವೆಂಬಂತೆ ಅನೇಕ ವರ್ಷಗಳಿಂದ ಪಾಳುಬಿದ್ದಿದ್ದ ಭೂಮಿಯನ್ನೂ ರೈತರು ಉಳುಮೆ ಮಾಡಿ ಬೆಳೆ ಬೆಳೆಯುತ್ತಿದ್ದಾರೆ.

ಹತ್ತಾರು ವರ್ಷಗಳಿಂದ ಗರಿಷ್ಠ ಮಟ್ಟವನ್ನೇ ಕಾಣದಿದ್ದ ಸುವರ್ಣಾವತಿ ಮತ್ತು ಚಿಕ್ಕಹೊಳೆ ಜಲಾಶಯಗಳು ಹಾಗೂ ಇತರೆ ಸಣ್ಣಪುಟ್ಟ ಜಲಾಶಯಗಳ ಒಡಲು ಭರ್ತಿಯಾಗಿದ್ದು, ಬತ್ತಿಹೋಗಿದ್ದ ಕೊಳವೆಬಾವಿಗಳಲ್ಲಿ ಮತ್ತೆ ನೀರು ತುಂಬಿಕೊಂಡಿದ್ದು, 2017 ಜಿಲ್ಲೆಗೆ ನೀಡಿದ ಕೊಡುಗೆಗಳು. ಹೊಗೆನಕಲ್‌ ಮೈದುಂಬಿಕೊಂಡು ಧುಮುಕುವ ಮೂಲಕ ಪ್ರವಾಸಿಗರನ್ನು ತನ್ನತ್ತ ಸೆಳೆಯಿತು. ಆದರೆ, ವರ್ಷದ ಅಂತ್ಯದಲ್ಲಿ ಬೆಂಗಳೂರಿನ ಮೂವರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟ ದುರಂತವೂ ನಡೆಯಿತು.

ರೈತರಲ್ಲಿ ಹೊಸ ಕನಸು ಬಿತ್ತಿದ್ದು, ಮೇ ನಂತರದಲ್ಲಿ ಬಂದ ಮಳೆ. ಆದರೆ, ವರ್ಷದ ಮೊದಲಾರ್ಧ ಸುಡುವ ಬಿಸಿಲು, ನೀರು, ಮೇವಿನ ಕೊರತೆ ರೈತರನ್ನು ಕಂಗೆಡಿಸಿತ್ತು. ಹನೂರು ಸಮೀಪದ ಕೆವಿಎನ್‌ ದೊಡ್ಡಿ ಗ್ರಾಮದಲ್ಲಿ ಗೋಶಾಲೆಯಲ್ಲಿದ್ದ 13 ಹಸುಗಳು ಮೇವಿನ ಕೊರತೆಯಿಂದ ಮೃತಪಟ್ಟಿದ್ದು ದೊಡ್ಡ ಚರ್ಚೆಗೆ ಎಡೆಮಾಡಿಕೊಟ್ಟಿತು.

ತೆಂಗಿನ ಮರಗಳಲ್ಲಿ ಕಾಣಿಸಿಕೊಂಡ ಬೆಂಕಿರೋಗ, ಹೊಲಗಳಿಗೆ ದಾಳಿಯಿಟ್ಟ ಸೈನಿಕ ಹುಳುಗಳು, ಕಾಡುಪ್ರಾಣಿಗಳ ದಾಳಿ ನೂರಾರು ಎಕರೆ ಫಸಲು ನಷ್ಟಕ್ಕೆ ಕಾರಣವಾದವು.

ಜಿಲ್ಲೆಯ ಬಹುತೇಕ ಕೆರೆಕಟ್ಟೆಗಳು ಭರ್ತಿಯಾಗಿದ್ದು ಜನರಲ್ಲಿ ಸಂತಸ ತಂದಿತು. ಮಳೆ ಅಬ್ಬರಕ್ಕೆ ಕೆಲವೆಡೆ ರಸ್ತೆ ಸಂಪರ್ಕ ಕಡಿತಗೊಂಡರೆ, ಮಲೆಮಹದೇಶ್ವರ ದೇವಸ್ಥಾನದ ಆವರಣ ಜಲಾವೃತವಾಯಿತು. ಕೆಲವೆಡೆ ಮನೆಕುಸಿತ ಸಂಭವಿಸಿದವು. ಯಳಂ ದೂರು ತಾಲ್ಲೂಕಿನಲ್ಲಿ ಗೋಡೆ ಕುಸಿದು ಒಬ್ಬರು ಮೃತಪಟ್ಟರು. ತಮಿಳುನಾಡಿಗೆ ಸಮೀಪವಿರುವುದರಿಂದ ‘ಒಖಿ’ ಚಂಡ ಮಾರುತದ ಪ್ರಭಾವ ದಟ್ಟವಾಗಿತ್ತು.

ಗುಂಡ್ಲುಪೇಟೆಯ ಕಗ್ಗಳದ ಹುಂಡಿ ಗ್ರಾಮದಲ್ಲಿ ರೈತ ನಾಗೇಶ್‌ ಆತ್ಮಹತ್ಯೆ ಪ್ರಕರಣ ತೀವ್ರ ಪ್ರತಿಭಟನೆಗೆ ಕಾರಣವಾಯಿತು. ಚೆಂಡು ಹೂವು ಸಂಸ್ಕರಣಾ ಕಂಪೆನಿ ಮತ್ತು ಪೊಲೀಸರ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಶವವನ್ನಿಟ್ಟು ಪ್ರತಿಭಟನೆ ನಡೆಸಲಾಯಿತು.

ಜಾತ್ರೆ ಉತ್ಸವಗಳು: ಜಿಲ್ಲೆಯ ಬದುಕಿನೊಳಗೆ ಹಾಸುಹೊಕ್ಕಾಗಿರುವ ಜಾನಪದ ಕಲೆ ಮತ್ತು ಜಾತ್ರೆ ಉತ್ಸವಗಳು ಈ ವರ್ಷ ವಿಜೃಂಭಣೆಯಿಂದ ನಡೆದವು. ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರೆಯಲ್ಲಿ ಪಂಕ್ತಿಸೇವೆ ವಿವಾದ ರಾಜ್ಯದ ಗಮನಸೆಳೆದು ತೀವ್ರ ಚರ್ಚೆಗೆ ಒಳಗಾಯಿತು. ಪ್ರಾಣಿಬಲಿ ನಿಷೇಧದ ನಡುವೆ ಪಂಕ್ತಿಸೇವೆಗೆ ಹೈಕೋರ್ಟ್‌ ಅವಕಾಶ ನೀಡಿದ್ದು, ಹಲವು ಗೊಂದಲಗಳಿಗೆ ಕಾರಣವಾಯಿತು.

ಮಲೆಮಹದೇಶ್ವರ ಬೆಟ್ಟದಲ್ಲಿ ನಡೆಯುವ ನಾಲ್ಕೂ ಪ್ರಮುಖ ಜಾತ್ರಾ ಮಹೋತ್ಸವಗಳು ಲಕ್ಷಾಂತರ ಭಕ್ತರ ಹಾಜರಾತಿಯೊಂದಿಗೆ ನಿರ್ವಿಘ್ನವಾಗಿ ನಡೆದವು.

ಸಂತೇಮರಹಳ್ಳಿಯ ಕಸ್ತೂರು ಬಂಡಿ ಜಾತ್ರೆ, ಬಿಳಿಗಿರಿ ರಂಗನಾಥಸ್ವಾಮಿ ರಥೋತ್ಸವ, ಕನಕಗಿರಿಯಲ್ಲಿ ಭಗವಾನ್‌ ಬಾಹುಬಲಿ ಪ್ರತಿಷ್ಠಾಪನೆ, ಪ್ರಮುಖ ಆಕರ್ಷಣೆಗಳಾದವು.

ನಗರದ ಚಾಮರಾಜೇಶ್ವರ ಸ್ವಾಮಿ ರಥಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು ಮತ್ತು ಹೊಸರಥ ನಿರ್ಮಾಣವಾಗದ ಕಾರಣ, ಪ್ರತಿ ಆಷಾಢದಲ್ಲಿ ವಿಶೇಷವಾಗಿ ನಡೆಯುವ ಚಾಮರಾಜೇಶ್ವರ ಸ್ವಾಮಿ ರಥೋತ್ಸವ 180 ವರ್ಷದ ಇತಿಹಾಸದಲ್ಲೇ ಮೊದಲ ಬಾರಿಗೆ ಸ್ಥಗಿತಗೊಂಡಿದ್ದು ಭಕ್ತರಿಗೆ ನೋವನ್ನುಂಟುಮಾಡಿತು.

ದಾಖಲೆಯ ಪ್ರಯತ್ನ: ಕನಕಗಿರಿಯಲ್ಲಿ ಅತಿಶಯ ಮಹೋತ್ಸವದಲ್ಲಿ 9 ಕಾಲೇಜುಗಳ 1,290 ವಿದ್ಯಾರ್ಥಿಗಳು ಗಿನ್ನೆಸ್‌ ದಾಖಲೆಗಾಗಿ ಮಹರ್ಷಿ ಪೂಜ್ಯಪಾದರ ಬಲಪಾದುಕೆ ಆಕೃತಿಯಲ್ಲಿ ನಿಂತು ಗಮನ ಸೆಳೆದರು.

ಪ್ರಮುಖರ ಭೇಟಿ: ಪಕ್ಷ ಸಂಘಟನೆಯ ಸಲುವಾಗಿ ಎಚ್‌.ಡಿ. ದೇವೇಗೌಡ, ಬಿ.ಎಸ್. ಯಡಿಯೂರಪ್ಪ, ನಟ ಉಪೇಂದ್ರ ಭೇಟಿ ನೀಡಿದರು. ಮುಂಬರುವ ಚುನಾವಣೆಗಾಗಿ ವಿವಿಧ ರಾಜಕೀಯ ಪಕ್ಷಗಳ ಒಳಗಿನ ಲಾಬಿ, ಗೊಂದಲಗಳು ಬಹಿರಂಗವಾದವು.

ಸಂತಸ, ನೋವು–ನಲಿವು: ಜರ್ಮನಿ ಯಲ್ಲಿ ನಡೆದ ಅಂಗವಿಕಲರ ಕ್ರೀಡಾ ಕೂಟದಲ್ಲಿ ಜಿಲ್ಲೆಯ ಕ್ರೀಡಾಪಟು ಎಂ. ಪ್ರಭುಸ್ವಾಮಿ ಎರಡು ಚಿನ್ನದ ಪದಕಗಳನ್ನು ಗಳಿಸಿದರು. ಜಿಲ್ಲೆಯವರಾದ ಡಾ. ಎಸ್‌. ಬಿಸಲಯ್ಯ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಒಲಿದರೆ, ದೊಡ್ಡಮೋಳೆ ಗ್ರಾಮದ ನೀಲಗಾರ ಕಲಾವಿದ ಸಣ್ಣಶೆಟ್ಟಿ ಜಾನಪದ ಅಕಾಡೆಮಿ ಪ್ರಶಸ್ತಿಗೆ ಭಾಜನರಾದರು.

ಯಳಂದೂರು ಪಟ್ಟಣ ಸಮೀಪ ಬಸ್‌ ಡಿಕ್ಕಿ ಹೊಡೆದು ಬೈಕ್‌ನಲ್ಲಿದ್ದ ತಾಯಿ, ಮಗ ಮತ್ತು ಗರ್ಭಿಣಿ ಸೊಸೆ ಮೃತಪಟ್ಟ ಘಟನೆ ಎಲ್ಲರ ಮನಕಲಕಿತು.

2018 ಜಿಲ್ಲೆಯ ಜನರಲ್ಲಿ ಅಪಾರ ನಿರೀಕ್ಷೆಗಳನ್ನು ಮೂಡಿಸಿದೆ. ರಾಜಕೀಯ, ಸಾಮಾಜಿಕ ಪಲ್ಲಟಗಳ ಜತೆಗೆ, ಕೃಷಿ, ಕೈಗಾರಿಕೆ, ಶಿಕ್ಷಣ ಮತ್ತಿತರ ಕ್ಷೇತ್ರಗಳಲ್ಲಿ ಪ್ರಗತಿಯ ಕನಸು ಕಟ್ಟಿಕೊಂಡು ಹೊಸ ವರ್ಷಕ್ಕೆ ಕಾಲಿರಿಸುತ್ತಿದ್ದಾರೆ.

ಉಪಚುನಾವಣೆ: ಕಾಂಗ್ರೆಸ್‌ಗೆ ಗೆಲುವು

ಎಚ್‌.ಎಸ್‌. ಮಹದೇವಪ್ರಸಾದ್‌ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ನಡೆದ ಉಪಚುನಾವಣೆ ಇಡೀ ರಾಜ್ಯದ ಕುತೂಹಲ ಕೆರಳಿಸಿತು. ಬಿಜೆಪಿ ಮತ್ತು ಕಾಂಗ್ರೆಸ್‌ನ ಎಲ್ಲ ಮುಖಂಡರೂ ಜಿಲ್ಲೆಯಲ್ಲಿ ಠಿಕಾಣಿ ಹೂಡಿದರು. ಚುನಾವಣೆಯಲ್ಲಿ ವ್ಯಾಪಕವಾಗಿ ಹಣ ಹಂಚಲಾಗಿದೆ ಎಂಬ ದೂರುಗಳು ಕೇಳಿಬಂದವು. ಕಾಂಗ್ರೆಸ್‌ ಮಹಿಳಾ ಘಟಕದ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್‌ ಮನೆಯೊಂದರಲ್ಲಿ ಹಣ ಹಂಚುತ್ತಿರುವ ವಿಡಿಯೊ ದೃಶ್ಯಾವಳಿ ವೈರಲ್‌ ಆಯಿತು.ಬಿಜೆಪಿ ಅಭ್ಯರ್ಥಿ ಎದುರು ಜಯಗಳಿಸಿದ ಎಚ್‌ಎಸ್‌ಎಂ ಅವರ ಪತ್ನಿ ಮೋಹನಕುಮಾರಿ, ಮುಂದೆ ಸಚಿವ ಸ್ಥಾನದ ಜತೆಗೆ, ಜಿಲ್ಲೆಯ ಉಸ್ತುವಾರಿ ಹೊಣೆಗಾರಿಕೆಯನ್ನೂ ಪಡೆದುಕೊಂಡರು.

ಸಿದ್ದರಾಮಯ್ಯಗೆ ಕಾಡದ ಭಯ

ಚಾಮರಾಜನಗರಕ್ಕೆ ಕಾಲಿಟ್ಟರೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂಬ ನಂಬಿಕೆಯನ್ನು ಸುಳ್ಳಾಗಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮ್ಮ ಅಧಿಕಾರಾವಧಿಯಲ್ಲಿ 22 ಬಾರಿ ಜಿಲ್ಲೆಯ ವಿವಿಧ ಭಾಗಗಳಿಗೆ ಭೇಟಿ ನೀಡಿದರು. 2017ರಲ್ಲಿಯೇ 10 ಬಾರಿ ಬಂದಿದ್ದು ವಿಶೇಷ. ಎಚ್‌ಎಸ್‌ಎಂ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಮತ್ತು ಗುಂಡ್ಲುಪೇಟೆ ಉಪಚುನಾವಣೆ ಪ್ರಚಾರ ಕಾರ್ಯಕ್ಕೆಂದು ಆರು ಬಾರಿ ಭೇಟಿ ನೀಡಿದರೆ, ನಾಲ್ಕು ಸಲ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲು ಭೇಟಿ ನೀಡಿದ್ದರು. ಕೆರೆಗಳಿಗೆ ನೀರು ತುಂಬಿಸುವ ಯೋಜನೆ, ಬಹುಗ್ರಾಮ ಕುಡಿಯುವ ನೀರು ಯೋಜನೆ ಮತ್ತು ಜೋಡಿ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿದರು.

ವನಸುಟ್ಟ ಬೆಂಕಿ

ಬಂಡೀಪುರ ಉದ್ಯಾನ ಮತ್ತು ಬಿಆರ್‌ಟಿ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡ ಕಾಳ್ಗಿಚ್ಚು, ಅರಣ್ಯ ಇಲಾಖೆಯ ಸಿಬ್ಬಂದಿಯನ್ನು ಬಲಿತೆಗೆದುಕೊಂಡ ದುರಂತ ಈ ವರ್ಷದ ಕಹಿ ಘಟನೆಗಳಲ್ಲಿ ಒಂದು. ವ್ಯಾಪಕವಾಗಿ ಹರಡಿದ ಕಿಚ್ಚು ನೂರಾರು ಎಕರೆ ಕಾಡನ್ನು ಬಲಿತೆಗೆದುಕೊಂಡಿತು.

ಆನೆಗಳ ಗಣತಿ ಕಾರ್ಯದಲ್ಲಿ ವಿವಿಧ ರಾಜ್ಯಗಳ ಆಸಕ್ತರು ಪಾಲ್ಗೊಂಡು, ಕಾಡುಮೇಡಿನಲ್ಲಿಅಲೆದು ಮಾಹಿತಿ ಕಲೆಹಾಕಿದರು.

ಹುಲಿ ‘ಪ್ರಿನ್ಸ್‌’ ಸಾವು, ಆನೆಗಳ ಸಾವು, ಬೇಟೆಗಾರರಿಗೆ ಬಲಿಯಾದ ಜಿಂಕೆಗಳು ಮುಂತಾದ ಅರಣ್ಯ ಸಂಬಂಧಿ ಘಟನಾವಳಿಗಳು ಸುದ್ದಿಯಾದವು. ಕಾವೇರಿ ವನ್ಯಜೀವಿ ಧಾಮದಲ್ಲಿ ಬೇಟೆಗಾರರ ಉರುಳಿಗೆ ಜಿಂಕೆಗಳು ಸಿಲುಕಿದ್ದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು.

ಬೆಂಕಿಯ ಜ್ವಾಲೆಗೆ ಕರಿಗಟ್ಟಿದ್ದ ಕಾಡು, ವರ್ಷಾಂತ್ಯದ ವೇಳೆಗೆ ಹಸಿರುಹೊದ್ದುಕೊಂಡು ಸಂಭ್ರಮಿಸಿದ ಬೆನ್ನಲ್ಲೇ, ಮುಂದಿನ ವರ್ಷದ ಬಿರುಬೇಸಿಗೆಯಲ್ಲಿ ಎದುರಾಗಬಹುದಾದ ಕಾಳ್ಗಿಚ್ಚಿನ ಮತ್ತೊಂದು ದಾಳಿಯನ್ನು ಎದುರಿಸಲು ಸಜ್ಜುಗೊಳ್ಳುತ್ತಿದೆ. ಜತೆಗೆ ಹುಲಿಗಣತಿಯ ಮುಖ್ಯ ಕಾರ್ಯವೂ ನಡೆಯಲಿದೆ.

ಅಭಿವೃದ್ಧಿಯ ಜಪ, ಎಲ್ಲೆಡೆ ಅವಶೇಷ: ಚಾಮರಾಜನಗರ ಮತ್ತು ಕೊಳ್ಳೇಗಾಲ ನಗರದ ವ್ಯಾಪ್ತಿಗಳಲ್ಲಿ ಅಭಿವೃದ್ಧಿ ಚಟುವಟಿಕೆಗಳು ಶುರುವಾದವು. ಸುಮಾರು ಒಂದು ತಿಂಗಳು ಎಲ್ಲೆಡೆ ಜೆಸಿಬಿಗಳ ಆರ್ಭಟ ಕಂಡುಬಂತು. ರಸ್ತೆ ವಿಸ್ತರಣೆಗಾಗಿ ಕಟ್ಟಡಗಳನ್ನು ತೆರವುಗೊಳಿಸಲಾಯಿತು. ಇದರ ವಿರುದ್ಧ ಪ್ರತಿಭಟನೆಗಳೂ ನಡೆದವು. ವ್ಯಾಪಾರಿಗಳಿಗೆ ತೀವ್ರ ಆರ್ಥಿಕ ನಷ್ಟವಾದರೆ, ಇಡೀ ನಗರ ದೂಳಿನ ಮಳೆಯಲ್ಲಿ ನೆನೆಯುವಂತಾಗಿದೆ.

ಅಭಿವೃದ್ಧಿಯ ನಿರೀಕ್ಷೆಯ ನಡುವೆಯೇ, ಒಮ್ಮೆಲೆ ನಗರದೆಡೆಲ್ಲೆಡೆ ಕಾಮಗಾರಿ ಆರಂಭಿಸಿರುವುದು ನಿತ್ಯ ಜನಜೀವನಕ್ಕೆ ತೀವ್ರ ಅಡಚಣೆ ಉಂಟಾಗಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಈ ತೊಂದರೆಗಳ ನಡುವೆಯೇ, ಮುಂಬರುವ ವರ್ಷ ನಗರದ ಪ್ರಮುಖ ರಸ್ತೆಗಳೆಲ್ಲವೂ ಸುಸಜ್ಜಿತಗೊಳ್ಳಲಿವೆ ಎಂಬ ಸಮಾಧಾನವೂ ಜನರಲ್ಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry