ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

34 ಕೆರೆಗಳಿಗೆ ನೀರು– ಅನುಮೋದನೆಗೆ ಯತ್ನ: ಶಾಸಕ ಸಿ.ಟಿ. ರವಿ ಭರವಸೆ

ಬಿಜೆಪಿ ನವಕರ್ನಾಟಕ ಪರಿವರ್ತನಾ ಯಾತ್ರೆಯಲ್ಲಿ ಶಾಸಕ ಸಿ.ಟಿ.ರವಿ ಹೇಳಿಕೆ
Last Updated 31 ಡಿಸೆಂಬರ್ 2017, 8:56 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ‘ತಾಲ್ಲೂಕಿನ ಲಕ್ಯಾ, ಸಖರಾಯಪಟ್ಟಣ ಹೋಬಳಿ ವ್ಯಾಪ್ತಿಯ 34 ಕೆರೆಗಳಿಗೆ ಭದ್ರಾ ಮತ್ತು ಎತ್ತಿನಹೊಳೆಯಿಂದ ನೀರು ತುಂಬಿಸುವ ಯೋಜನೆ ಅನುಮೋದನೆಗೆ ಪ್ರಯತ್ನ ನಡೆದಿದೆ’ ಎಂದು ಶಾಸಕ ಸಿ.ಟಿ.ರವಿ ಹೇಳಿದರು.

ನಗರದ ಡಿಎಸಿಜಿ ಪಾಲಿಟೆಕ್ನಿಕ್‌ ಆವರಣದಲ್ಲಿ ಶನಿವಾರ ಆಯೋಜಿ ಸಿದ್ದ ಬಿಜೆಪಿ ನವಕರ್ನಾಟಕ ಪರಿವ ರ್ತನಾ  ಯಾತ್ರೆಯ ಸಮಾರಂಭದಲ್ಲಿ ಅವರು ಮಾತನಾಡಿದರು.

‘ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧಪಡಿಸುವ ನಿಟ್ಟಿನಲ್ಲಿ ಒಪ್ಪಿಗೆ ಪಡೆಯಲಾಗಿದೆ. ₹ 750 ಕೋಟಿ ವೆಚ್ಚದ ಈ ಯೋಜನೆ ತಾಂತ್ರಿಕ ಅನುಮೋದನೆ ಪಡೆಯುವ ಹಂತದಲ್ಲಿದೆ. ಸಂಕಲ್ಪದ ಯೋಜನೆಗೆ ಆರಂಭದ ಹೆಜ್ಜೆ ಇಟ್ಟಿದ್ದೇವೆ. ಬಜೆಟ್‌ನಲ್ಲಿ ಯೋಜನೆ ಘೋಷಣೆಯಾಗಲಿದೆ’ ಎಂದು ಭರವಸೆ ನೀಡಿದರು.

‘ಬಗರ್‌ ಹುಕುಂನಲ್ಲಿ 11,407 ಅರ್ಜಿಗಳು ಬಾಕಿ ಇದ್ದವು. ಈ ಪೈಕಿ 10,476 ಅರ್ಜಿಗಳನ್ನು ವಿಲೇವಾರಿ ಮಾಡಿ, ಫಲಾನುಭವಿಗಳಿಗೆ ಸಾಗುವಳಿ ಪತ್ರ ನೀಡಿದ್ದೇವೆ. ಉಳಿದ 941 ಅರ್ಜಿಗಳನ್ನು ವಿಲೇವಾರಿ ಮಾಡಲು ಕ್ರಮ ವಹಿಸಲಾಗುವುದು’ ಎಂದರು.

‘ಚಿಕ್ಕಮಗಳೂರಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ. ಪ್ರವಾಸೋದ್ಯಮಲ್ಲಿನ ಅಭಿವೃದ್ಧಿ ಇದಕ್ಕೆ ಕಾರಣ. ಇಂದಿರಾ ಗಾಂಧಿ ಅವರಿಗೆ ರಾಜಕೀಯ ಮರುಜನ್ಮ ನೀಡಿದ್ದು ಚಿಕ್ಕಮಗಳೂರು. ಇಂದಿರಾ ಅವರು ಆಯ್ಕೆಯಾದ ನಂತರ ಈ ಕ್ಷೇತ್ರವನ್ನು ಮರೆತುಬಿಟ್ಟರು. ಅವರು ಶಂಕುಸ್ಥಾಪನೆ ನೆರವೇರಿಸಿದ ಇಲ್ಲಿನ ರೈಲ್ವೆ ಯೋಜನೆ ಕಾಮಗಾರಿಯು ವಾಜಪೇಯಿ ಪ್ರಧಾನಿಯಾಗಿದ್ದಾಗ ಆರಂಭವಾಯಿತು’ ಎಂದರು.

‘ಚಿಕ್ಕಮಗಳೂರಿನ ಒಳಚರಂಡಿ ವ್ಯವಸ್ಥೆಗೆ ₹ 87 ಕೋಟಿ ಮಂಜೂರು ಮಾಡಿಸಿ ಶೇ 90 ಕಾಮಗಾರಿ ಮುಗಿದಿದೆ. ಅಮೃತ್‌ ಯೋಜನೆಯಡಿ ₹ 122 ಕೋಟಿ ಮಂಜೂರು ಮಾಡಿ ಸಿದ್ದೇವೆ. ₹ 390 ಕೋಟಿ ವೆಚ್ಚದ ಕಡೂರು– ಚಿಕ್ಕಮಗಳೂರು–ಮೂಡಿ ಗೆರೆ ಚತುಷ್ಟಥ ರಸ್ತೆಗೆ ವಿಸ್ತೃತ ಯೋಜನಾ ವರದಿ (ಡಿಪಿಆರ್‌) ಸಿದ್ಧವಾ ಗಿದೆ. ಚಿಕ್ಕಮಗಳೂರು– ಬೇಲೂರು– ಹಾಸನ– ಬಿಳಿಕೆರೆ ಸಂಪರ್ಕ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ವ್ಯಾಪ್ತಿಗೆ ಸೇರಿಸಿ ಅದನ್ನೂ ಚತುಷ್ಟಥ ಮಾಡಲು ಪ್ರಯತ್ನ ನಡೆದಿದೆ’ ಎಂದು ಹೇಳಿದರು.

‘ಚಿಕ್ಕಮಗಳೂರನ್ನು ಅಭಿವೃದ್ಧಿಯಲ್ಲಿ ಹಿಂದುಳಿಯಲು ಬಿಟ್ಟಿಲ್ಲ. ಇಲ್ಲಿಗೊಂದು ಇಎಸ್‌ಐ ಆಸ್ಪತ್ರೆ ಮಂಜೂರು ಮಾಡಿಸಲು ಪ್ರಯತ್ನ ನಡೆದಿದೆ. ವೈದ್ಯಕೀಯ ಕಾಲೇಜಿಗೆ ಮಂಜೂರು ಮಾಡಿಸಲಾಗಿತ್ತು. ನಾಲ್ಕೂವರೆ ವರ್ಷಗಳಿಂದ ಕಾಂಗ್ರೆಸ್‌ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ. ಬಜೆಟ್‌ನಲ್ಲಿ ಘೋಷಣೆ ಮಾಡಿದ್ದರು, ಹಣ ಬಿಡುಗಡೆ ಮಾಡಿಲ್ಲ’ ಎಂದರು.

‘ಚಿಕ್ಕಗಳೂರು ವಿಧಾನಸಭಾ ಕ್ಷೇತ್ರಕ್ಕೆ 51 ಸುವರ್ಣ ಗ್ರಾಮ ಯೋಜನೆ ತಂದು ಗ್ರಾಮಗಳ ಅಭಿವೃದ್ಧಿಗೆ ಆದ್ಯತೆ ನೀಡಿದೆ. ಒಂಬತ್ತು ಗ್ರಾಮ ವಿಕಾಸ ಯೋಜನೆ ತರಲಾಗಿದೆ. ಹರಿಜನ, ಗಿರಿಜನ ಕಾಲೊನಿಗಳ ಬೀದಿಗಳನ್ನು ಕಾಂಕ್ರಿಟ್‌ ಮಾಡಿಸಿದ್ದೇವೆ’ ಎಂದರು.

‘ಸಿ.ಟಿ.ರವಿಗೆ ವೋಟು ಕೊಟ್ಟರೆ ಊರಿಗೆ ಬೆಂಕಿ ಹಚ್ಚುತ್ತಾರೆ ಎಂದು ಕಾಂಗ್ರೆಸ್‌, ಜೆಡಿಎಸ್‌ನವರು ಹೇಳಿದ್ದರು. ನಾನು ಅಭಿವೃದ್ಧಿ, ಪ್ರೀತಿ, ಸಿದ್ಧಾಂತ, ನ್ಯಾಯದ ರಾಜಕಾರಣ ಮಾಡಿದ್ದೇನೆ. ದತ್ತಪೀಠದ ಪರವಾಗಿ ಹೋರಾಡುತ್ತಿದ್ದೇನೆ. ಅದು ಅನ್ಯಾಯದ ಹೋರಾಟ ಅಲ್ಲ’ ಎಂದರು.

‘ದೇಶಭಕ್ತ ಬಿಜೆಪಿಯಲ್ಲೇ  ರಾಜಕಾರಣ ಮಾಡಬೇಕು ಎಂದು ತೀರ್ಮಾನಿಸಿ ಪಕ್ಷ ಸೇರಿದೆ. ದೇವೇಗೌಡರ ಪಕ್ಷ ಸೇರಿಕೋ ಎಂದು ನಮ್ಮ ಅಪ್ಪ ಹೇಳಿದ್ದರು. ಅಪ್ಪನ ಮಾತು ಕೇಳಿ ಜೆಡಿಎಸ್‌ ಸೇರಿಕೊಂಡಿದ್ದರೆ ದೇವೇಗೌಡ, ಕುಮಾರಸ್ವಾಮಿ, ರೇವಣ್ಣ ಮತ್ತು ಅವರ ಮಕ್ಕಳಿಗೆ ಜೈ ಅನ್ನಬೇಕಿತ್ತು. ಶಾಸಕನಾಗುವ ಭಾಗ್ಯವನ್ನು ಆ ಪಕ್ಷ ಕರುಣಿಸುತ್ತಿರಲಿಲ್ಲ. ಬಿಜೆಪಿ ಸೇರಿದ್ದರಿಂದ ಕಾರ್ಯಕರ್ತನಾಗಿದ್ದ ನಾನು, ನಿಮ್ಮ ಮುಂದೆ ನಿಲ್ಲುವಂಥ ಶಕ್ತಿಯನ್ನು ಈ ಪಕ್ಷ ನೀಡಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT