ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ವಚ್ಛ ಭಾರತ್‌’ ಅನುದಾನ ದುರುಪಯೋಗ

ಬಿಜೆಪಿ ನವಕರ್ನಾಟಕ ಪರಿವರ್ತನಾ ಯಾತ್ರೆಯಲ್ಲಿ ಯಡಿಯೂರಪ್ಪ ಆರೋಪ
Last Updated 31 ಡಿಸೆಂಬರ್ 2017, 9:00 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಕೇಂದ್ರ ಸರ್ಕಾರವು ಸ್ವಚ್ಛ ಭಾರತ್‌ ಅಭಿಯಾನದಡಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಗೆ ₹ 108.55 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಸಮುದಾಯ, ವೈಯಕ್ತಿಕ ಶೌಚಾಲಯ, ವಿದ್ಯುತ್‌, ಜೈವಿಕ ಅನಿಲ ಘಟಕಗಳಿಗೆ ಬಳಸಬೇಕಿದ್ದ ಈ ಹಣವನ್ನು ರಾಜ್ಯ ಸರ್ಕಾರವು ರಸ್ತೆ, ಪಾದಚಾರಿ ಮಾರ್ಗ ನಿರ್ಮಾಣ, ಗೋಡೆಗೆ ಬಣ್ಣ ಬಳಿಯಲು ವ್ಯಯಿಸಿ ದುರ್ಬಳಕೆ ಮಾಡಿಕೊಂಡಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಆರೋಪಿಸಿದರು.

ನಗರದ ಡಿಎಸಿಜಿ ಪಾಲಿಟೆಕ್ನಿಕ್‌ ಆವರಣದಲ್ಲಿ ಶನಿವಾರ ಆಯೋ ಜಿಸಿದ್ದ ಬಿಜೆಪಿ ನವಕರ್ನಾಟಕ ಪರಿವ ರ್ತನಾ  ಯಾತ್ರೆಯ ಸಮಾರಂಭದಲ್ಲಿ ಅವರು ಮಾತನಾಡಿದರು. ‘ಕೇಂದ್ರ ಸರ್ಕಾರವು ಸ್ವಚ್ಛ ಭಾರತ ಅಭಿಯಾನದಡಿ ರಾಜ್ಯಕ್ಕೆ ₹ 790 ಕೋಟಿ ಅನುದಾನ ಬಿಡುಗಡೆ ಮಾಡಿತ್ತು. ಈ ಹಣವನ್ನು ದುರ್ಬಳಕೆ ಮಾಡಲಾಗಿದೆ. ಈ ಬಗ್ಗೆ ನಮ್ಮ ಕಾರ್ಯಕರ್ತರೊಬ್ಬರು ಲೋಕಾಯುಕ್ತ, ಭ್ರಷ್ಟಾಚಾರ ಎಸಿಬಿ, ಸಿಬಿಐಗೆ ದೂರು ನೀಡಿದ್ದಾರೆ’ ಎಂದು ಹೇಳಿದರು.

ಬೆಂಗಳೂರಿನಲ್ಲಿ ತರಾತುರಿಯಲ್ಲಿ ಸಿಡಿಪಿ ಅಧಿಸೂಚನೆ ಹೊರಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸಿದ್ಧತೆ ನಡೆಸಿದ್ದಾರೆ. ಆ ಮೂಲಕ ಬಿಲ್ಡರ್ಸ್‌ಗೆ ಅನುಕೂಲ ಮಾಡಿ ಚುನಾವಣೆಗೆ ದುಡ್ಡು ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.

ಮಲಪ್ರಭಾ, ಘಟಪ್ರಭಾ ನಾಲೆ ನವೀಕರಣಕ್ಕೆ ₹ 600 ಕೋಟಿಗೆ ಟೆಂಡರ್‌ ಆಹ್ವಾನಿಸಲು ನಾಲ್ಕು ತಿಂಗಳ ಹಿಂದೆ ಸಿದ್ಧತೆ ನಡೆದಿತ್ತು. ಟೆಂಡರ್‌ ಮೊತ್ತವನ್ನು ₹1,100 ಕೋಟಿಗೆ ಏರಿಸಿ, ಒಳಒಪ್ಪಂದ ಮಾಡಿಕೊಂಡು ಗುತ್ತಿಗೆದಾರ ಡಿ.ಬಿ.ಉಪ್ಪಾರ ಅವರಿಗೆ ಟೆಂಡರ್‌ ನೀಡಲಾಗಿದೆ. ಇದಕ್ಕೆ ಸಿದ್ದರಾಮಯ್ಯ ಸ್ಪಷ್ಟೀಕರಣ ನೀಡಬೇಕು. ಈ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದರು.

ಬಿಬಿಎಂಪಿಯಲ್ಲಿ ಮೂಲೆ ನಿವೇಶನಗಳನ್ನು ಒತ್ತೆ ಇಟ್ಟು ₹ 975 ಕೋಟಿ ಸಾಲ ಪಡೆದಿದ್ದಾರೆ. ಮೈಸೂರು ಮಿನರಲ್ಸ್‌ ಲಿಮಿಟೆಡ್‌ನವರು ಬ್ಯಾಂಕಿ ನಲ್ಲಿ ಠೇವಣಿ ಇಟ್ಟಿದ್ದ ₹ 1,400 ಕೋಟಿ ರೈತರ ಸಾಲಮನ್ನಾ ಹೊಂದಾಣಿಕೆಗೆ ಬೇಕು ಎಂದು ಒತ್ತಾಯದಿಂದ ಪಡೆದಿದ್ದಾರೆ ಎಂದು ದೂಷಿಸಿದರು.

‘ಅಚ್ಛೆ ದಿನ್‌’ ಯಾವಾಗ ಬರುತ್ತೆ ಎಂದು ಎಲ್ಲ ಕಡೆ ಸಿದ್ದರಾಮಯ್ಯ ಕೇಳುತ್ತಾರೆ. ಗುಜರಾತ್‌, ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್‌ ಮುಳುಗಿದೆ. ಇನ್ನು ಕಾಂಗ್ರೆಸ್‌ ಸರ್ಕಾರ ಇರುವುದು ಕರ್ನಾಟಕದಲ್ಲಿ ಮಾತ್ರ. ಇಲ್ಲಿಂದ ಕಾಂಗ್ರೆಸ್‌ಗೆ ಮನೆಗೆ ಕಳುಹಿಸಿದಾಗ ‘ಅಚ್ಛೆ ದಿನ್‌’ ಬರುತ್ತದೆ. ಅಲ್ಲಿವರೆಗೆ ಕಾಯಿರಿ ಎಂದರು.

ಮುಖ್ಯಮಂತ್ರಿ ಉತ್ತರ ನೀಡಲಿ: ‘ವಸತಿ ಶಾಲೆಗಳಿಗೆ ಕಳೆದ ಬಜೆಟ್‌ನಲ್ಲಿ ಮೀಸಲಿಟ್ಟಿದ್ದ ಹಣವನ್ನು ಸಮಾಜ ಕಲ್ಯಾಣ ಇಲಾಖೆಯವರು ಬ್ಯಾಂಕಿನಲ್ಲಿ ಠೇವಣಿ ಇಟ್ಟು, ಬಡ್ಡಿ ತಿನ್ನುತ್ತಿದ್ದಾರೆ. ಶಾಲೆಗಳಿಗೆ ಕಟ್ಟಡ ಕಟ್ಟಲು ಮುಂದಾಗು ತ್ತಿಲ್ಲ. ಮುಖ್ಯಮಂತ್ರಿ ಇದಕ್ಕೆ ಉತ್ತರ ನೀಡಬೇಕಿದೆ’ ಎಂದು ಸಂಸದೆ ಶೋಭಾ ಕರಂದ್ಲಾಜೆ ದೂಷಿಸಿದರು.

ಅನ್ನಭಾಗ್ಯ ಯೋಜನೆ ತನ್ನ ಯೋಜನೆ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ. ಅನ್ನಭಾಗ್ಯಕ್ಕೆ ಕೇಂದ್ರ ಸರ್ಕಾರವು ಕೆ.ಜಿಗೆ ₹ 32 ದರದಲ್ಲಿ ಅಕ್ಕಿ ಖರೀದಿಸಿ ಕೆ.ಜಿಗೆ ₹ 3 ದರದಲ್ಲಿ, ಕೆ.ಜಿಗೆ ₹ 22 ದರದಲ್ಲಿ ಗೋಧಿ ಖರೀದಿಸಿ ಕೆ.ಜಿಗೆ ₹ 2 ದರದಲ್ಲಿ ಕರ್ನಾಟಕಕ್ಕೆ ಪೂರೈಸುತ್ತಿದೆ. ಕರ್ನಾಟಕದ ಪಡಿತರ ಕ್ಕಾಗಿ ಪ್ರತಿ ತಿಂಗಳು ಕೇಂದ್ರ ಸರ್ಕಾರವು ₹ 440 ಕೋಟಿ ವೆಚ್ಚ ಮಾಡುತ್ತಿದೆ. ಈ ಅಕ್ಕಿ, ಗೋಧಿಯನ್ನು ಕಾಂಗ್ರೆಸ್‌ನ ಪುಡಾರಿಗಳು ರಿಪಾಲಿಶ್‌ ಮಾಡಿ ಪಕ್ಕದ ರಾಜ್ಯಗಳಿಗೆ ಮಾರಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಸ್ತ್ರೀ ಶಕ್ತಿ, ಮಹಿಳಾ ಸ್ವಸಹಾಯ ಸಂಘಗಳವರಿಗೆ ಶೂನ್ಯ ಬಡ್ಡಿದರದಲ್ಲಿ ₹ 3 ಲಕ್ಷದವರೆಗೆ ಸಾಲ ಒದಗಿಸಲು ಕ್ರಮ ವಹಿಸಬೇಕು ಎಂದರು.

ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಮಾತನಾಡಿ, ‘ಕೇಂದ್ರ ಸರ್ಕಾರದ ಅನುದಾನ ವಿನಿಯೋಗಿಸಲು, ಯೋಜನೆ ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಗಮನಹರಿಸುತ್ತಿಲ್ಲ. ಭಾಷಣದಿಂದ ಅಭಿವೃದ್ಧಿ ಆಗುವುದಿಲ್ಲ. ಅದಕ್ಕೆ ಇಚ್ಛಾಶಕ್ತಿ ಬೇಕು. ಅದಕ್ಕಾಗಿ ನೀವೆಲ್ಲರೂ ಬಿಜೆಪಿ ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.

ವಿವಿಧ ಊರುಗಳ ಸಹಸ್ರಾರು ಜನ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ನಗರದಲ್ಲಿ ಫ್ಲಕ್ಸ್‌ಗಳು, ಬಿಜೆಪಿ ಬಾವುಟಗಳು ರಾರಾಜಿಸುತ್ತಿದ್ದವು. ಮೋದಿ, ಅಮಿತ್‌ಷಾ, ಯಡಿಯೂರಪ್ಪ ಭಾವಚಿತ್ರಗಳಿದ್ದ ಪರಿವರ್ತನಾ ಯಾತ್ರೆ ಟಿ–ಶರ್ಟ್‌ ಯುವಕರು ತೊಟ್ಟಿದ್ದರು.

ಉಂಡೇದಾಸರಹಳ್ಳಿಯ ಪರ್ವಿಜ್‌ ಮತ್ತು ಸ್ನೇಹಿತರು ಕಾಂಗ್ರೆಸ್‌ ತೊರೆದು, ಎಂ.ಸಿ.ಅಶೋಕ್‌ ಮತ್ತು ಎಚ್‌.ಎನ್‌.ಮಂಜಯ್ಯ ಜೆಡಿಎಸ್‌ ತೊರೆದು ಬಿಜೆಪಿ ಸೇರಿದರು.

ಮುಖಂಡರಾದ ಎಂ.ಪಿ.ರೇಣುಕಾ ಚಾರ್ಯ, ಆಯನೂರು ಮಂಜುನಾಥ್‌, ಡಿ.ಎನ್‌.ಜೀವರಾಜ್‌, ಬಿ.ಎಸ್‌.ಚೈತ್ರಶ್ರೀ, ರಾಮಸ್ವಾಮಿ ಶೆಟ್ಟಿಗದ್ದೆ, ರಾಜಶೇಖರ್‌, ಶಿಲ್ಪಾರಾಜಶೇಖರ್‌, ರವೀಂದ್ರ ಬೆಳವಾಡಿ, ಎಚ್‌.ಡಿ.ತಮ್ಮಯ್ಯ, ಎಂ.ಪಿ.ಕುಮಾರಸ್ವಾಮಿ, ಈ.ಆರ್.ಮಹೇಶ್‌, ಬಿ.ಜಿ.ಸೋಮಶೇಖರಪ್ಪ, ಸಿ.ಎಚ್‌.ಲೋಕೇಶ್‌, ಕೋಟೆ ರಂಗನಾಥ್‌, ಕವಿತಾ ಲಿಂಗರಾಜು, ಜಸಂತಾ ಅನಿಲ್‌ಕುಮಾರ್‌, ಕಲ್ಮರುಡಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT