7
ಹಿಂದೂ–ಮುಸ್ಲಿಂ ಸಾಮೂಹಿಕ ವಿವಾಹ

‘ಬಸವಣ್ಣನ ನಾಡಿನಲ್ಲಿ ಸೌಹಾರ್ದ ಸಂದೇಶ’

Published:
Updated:
‘ಬಸವಣ್ಣನ ನಾಡಿನಲ್ಲಿ ಸೌಹಾರ್ದ ಸಂದೇಶ’

ಸಿಂದಗಿ: ಹಿಂದೂ–ಮುಸ್ಲಿಂ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಒಂದೇ ವೇದಿಕೆಯಲ್ಲಿ ನಡೆದಿರುವುದು ಸಿಂದಗಿ ತಾಲ್ಲೂಕು ಇತಿಹಾಸದಲ್ಲೇ ಇದೇ ಮೊದಲು. ಈ ವಿಧಾಯಕ ಸ್ವರೂಪದ ಕಾರ್ಯ ಮಾಡಿದ ಮುಸ್ಲಿಂ ಯುವಕನ ಹೃದಯ ವೈಶಾಲ್ಯತೆ ಕಾರ್ಯ ಶ್ಲಾಘನೀಯವಾದುದು ಎಂದು ಮಾಜಿ ಶಾಸಕ ಶರಣಪ್ಪ ಸುಣಗಾರ ಪ್ರಶಂಸೆ ಮಾಡಿದರು.

ಶನಿವಾರ ನಗರದ ಬಸ್ ಡಿಪೊ ಎದುರು ನಿರ್ಮಾಣಗೊಂಡ ಭವ್ಯ ಮಂಟಪದಲ್ಲಿ ಹಜರತ್ ಮಹಿಬೂಬ ಸುಭಾನಿ ಉರುಸ್ ನಿಮಿತ್ತ ಹಮ್ಮಿಕೊಂಡ ಹಿಂದೂ–ಮುಸ್ಲಿಂ ಉಚಿತ ಸಾಮೂಹಿಕ ವಿವಾಹ ಮಹೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿವಾಹ ಮಹೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಶಾಸಕ ರಮೇಶ ಭೂಸನೂರ, ಪುರಸಭೆ ಅಧ್ಯಕ್ಷ, ಯುವ ಮಿತ್ರ ಭಾಷಾಸಾಬ ತಾಂಬೋಳಿ ಹಿಂದೂ–ಮುಸ್ಲಿಂ ವಧು–ವರರನ್ನು ಒಂದೇ ವೇದಿಕೆಯಲ್ಲಿ ತರುವ ಮೂಲಕ ಎರಡು ಧರ್ಮಗಳ ಕೊಂಡಿಯಾಗಿ ಕಾರ್ಯ ನಿರ್ವಹಿಸಿದ್ದಾರೆ ಎಂದು ಗುಣಗಾನ ಮಾಡಿದರು.

ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿಠ್ಠಲ ಕೊಳ್ಳುರ ಈ ವಿವಾಹ ಮಹೋತ್ಸವ ಇಡೀ ತಾಲ್ಲೂಕಿನಲ್ಲಿ ಸಂಚಲನ ಮೂಡಿಸಿದೆ. ಸರ್ವಧರ್ಮ ಸಮನ್ವಯತೆಯ ಸಂದೇಶ ಇದಾಗಿದೆ. ಯಾರಿಗೂ ಕೈ ಚಾಚದೇ ₹ 15–20 ಲಕ್ಷ ವೆಚ್ಚದಲ್ಲಿ ತನ್ನ ಸ್ವಂತ: ಖರ್ಚಿನಿಂದ ಈ ಅದ್ಭುತ ಕಾರ್ಯ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಾಜಿ ಸಚಿವ ಎಂ.ಸಿ.ಮನಗೂಳಿ ಬಡತನದ ಕುಲುಮೆಯಲ್ಲಿ ಬೆಂದ ಈ ಮುಸ್ಲಿಂ ಯುವಕ ತನ್ನ ದುಡಿಮೆಯಲ್ಲಿ ದಾನ, ಧರ್ಮ ಪರೋಪಕಾರದಂಥ ಮೌಲ್ಯಗಳನ್ನು ಮೈಗೂಡಿಸಿಕೊಂಡಿರುವುದು ಅಭಿನಂದನಾರ್ಹ ಕಾರ್ಯ ಎಂದರು.

ಯಾಕೂಬ ನಾಟೀಕಾರ ಮಾತನಾಡಿ, ಯಾವುದೇ ಧರ್ಮ, ಜಾತಿ ಮುಖ್ಯವಲ್ಲ. ಏನಾದರೂ ಆಗು ಮೊದಲು ಮಾನವನಾಗು ಎಂಬ ಸಂದೇಶ ಇಂದು ಅನಾವರಣಗೊಂಡಿದೆ ಎಂದರು.

ಸೈಯದ ಮಹಿಬೂಬ ಹುಸೇನಿ ಮಗರಬಿ, ಮಾಡಬಾಳ ಕುಮಾರಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಇದೇ ಸಂದರ್ಭದಲ್ಲಿ ವಿವಾಹ ಮಹೋತ್ಸವದ ರೂವಾರಿ, ಪುರಸಭೆ ಅಧ್ಯಕ್ಷ ಭಾಷಾಸಾಬ ತಾಂಬೋಳಿ ಅವರಿಗೆ ವಿವಿಧ ಸಂಘಟನೆಗಳಿಂದ ಸನ್ಮಾನಗಳ ಸುರಿಮಳೆ ಹರಿದು ಬಂದಿತು.

ಸಾಮೂಹಿಕ ವಿವಾಹದಲ್ಲಿ ಆರು ಜೋಡಿ ಹಿಂದೂ ವಧು–ವರರು, ನಾಲ್ಕು ಜೋಡಿ ಮುಸ್ಲಿಂ ವಧು–ವರರು ಗೃಹಸ್ಥಾಶ್ರಮಕ್ಕೆ ಪ್ರವೇಶಿಸಿದರು. ಸಮಾರಂಭದಲ್ಲಿ ಪಾಲ್ಗೊಳ್ಳಬೇಕಿದ್ದ ಸಚಿವರಾದ ಎಂ.ಬಿ.ಪಾಟೀಲ, ಆರ್.ಬಿ.ತಿಮ್ಮಾಪುರ, ಯು.ಟಿ.ಖಾದರ, ಮುಸ್ಲಿಂ ಯುನಿಟಿ ಸಂಸ್ಥಾಪಕ ಅಧ್ಯಕ್ಷ ಬೊಮ್ಮನಹಳ್ಳಿ ಬಾಬು ಅವರು ಗೈರು ಉಳಿದಿದ್ದರು.

ವೇದಿಕೆಯಲ್ಲಿ ಪುರಸಭೆ ಸದಸ್ಯರುಗಳು, ಗಣ್ಯರು ಇದ್ದರು.ಸಮಾರಂಭದ ನಂತರ ಜಾನಪದ ಕಲಾವಿದ ಶಬ್ಬೀರ್ ಡಾಂಗೆ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಮೈಬೂಬ ಸಿಂದಗಿಕರ ನಿರೂಪಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry