ಭದ್ರಾ ನಾಲೆ ಹೂಳೆತ್ತುವ ಕಾಮಗಾರಿ ಆರಂಭ

6
ಕೊನೆ ಭಾಗಕ್ಕೆ ನೀರು ಹರಿಸಲು ಕ್ರಮ

ಭದ್ರಾ ನಾಲೆ ಹೂಳೆತ್ತುವ ಕಾಮಗಾರಿ ಆರಂಭ

Published:
Updated:

ಮಲೇಬೆನ್ನೂರು: ಕೊನೆಭಾಗದ ಅಚ್ಚುಕಟ್ಟಿಗೆ ಭದ್ರಾನಾಲೆ ನೀರು ಪೂರೈಸುವ ನಿಟ್ಟಿನಲ್ಲಿ ಕರ್ನಾಟಕ ನೀರಾವರಿ ನಿಗಮ ಕೈಗೆತ್ತಿಕೊಂಡಿರುವ ನಾಲೆಯ ಹೂಳು ಎತ್ತುವ ಕೆಲಸ ಶನಿವಾರ ಭರದಿಂದ ಮುನ್ನೆಡೆದಿದೆ.

ಕಿರು ಜಂಗಲ್ ಕಟಾವು ಹಾಗೂ ಹೂಳು ಎತ್ತಲು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಪದಾಧಿಕಾರಿಗಳು, ರೈತರು ಆಗ್ರಹಿಸಿ 11 ದಿನ ನಿಗಮದ ವಿಭಾಗೀಯ ಕಚೇರಿ ಎದುರು ಧರಣಿ ನಡೆಸಿ ಜಿಲ್ಲಾಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಗಮನ ಸೆಳೆದಿದ್ದರು.

ಒತ್ತಡಕ್ಕೆ ಮಣಿದ ಹಿರಿಯ ಅಧಿಕಾರಿಗಳು ನಾಲೆ ಹೂಳು ಎತ್ತಲು ಹಣ ಇಲ್ಲ ಎಂದು ಕೈಚೆಲ್ಲಿದ್ದರು. ಉಗ್ರ ಹೋರಾಟಕ್ಕೆ ಮಣಿದ ಅಧಿಕಾರಿ ವೃಂದ ಕೊನೆಗೆ ಸ್ವಲ್ಪ ಪ್ರಮಾಣದ ಹಣ ಬಿಡುಗಡೆ ಮಾಡಿದ್ದರು.

ಅದರಂತೆ ಮಲೇಬೆನ್ನೂರು ಶಾಖಾ ನಾಲೆ ಹಾಗೂ ದೇವರಬೆಳಕೆರೆ ಪಿಕಪ್ ನಾಲೆಗಳಲ್ಲಿ ನಾಲೆ ನೀರು ಬರುವ ಒಳಗಾಗಿ ಹೂಳು ಎತ್ತುವ ತುರ್ತು ಕಾಮಗಾರಿ ಮುಗಿಸಲು ಯತ್ನಿಸುವುದಾಗಿ ಗುತ್ತಿಗೆದಾರ ಸಿಂಗಾರಯ್ಯ ಮಾಹಿತಿ ನೀಡಿದರು.

ರೈತರ ಸಭೆಗೆ ಸಲಹೆ: ಕೊನೆಭಾಗಕ್ಕೆ ನೀರು ತಲುಪಿಸುವ ನಿಟ್ಟಿನಲ್ಲಿ ಆಂತರಿಕ ಸರದಿ ರೂಪಿಸಿ ಪಾಲಿಸುವ ನಿಟ್ಟಿನಲ್ಲಿ ಎಂಜಿನಿಯರುಗಳು ರೈತರ ಸಭೆ ಕರೆಯಲು ರೈತ ಸಂಘದ ರಾಜ್ಯ ಉಪಾಧ್ಯಕ್ಷ ವಾಸನದ ಓಂಕಾರಪ್ಪ, ಜಿ.ಪ್ರಭುಗೌಡ, ಹೊಳೆಸಿರಿಗೆರೆ ಫಾಲಾಕ್ಷಪ್ಪ ನೀರಾವರಿ ನಿಗಮದ ಎಂಜಿನಿಯರುಗಳಿಗೆ ಆಗ್ರಹಿಸಿದರು.

ನಾಲೆಗೆ ನೀರು ಬಿಡುಗಡೆಯಾದ ನಂತರ ಮೊದಲು ಅಚ್ಚುಕಟ್ಟಿನ ಕೊನೆಭಾಗದ ತೋಟಗಳಿಗೆ ನೀರು ತಲುಪಿಸುವ ವ್ಯವಸ್ಥೆ ಮಾಡಲು ಅಧೀಕ್ಷಕ, ಮುಖ್ಯ ಎಂಜಿನಿಯರ್ ಹಾಗೂ ಕಾಡಾ ಅಧ್ಯಕ್ಷರಿಗೆ ಕೋರಿದರು.

ಡ್ರಾಪ್ ನಿರ್ಮಿಸಿ: ಭದ್ರಾ ಉಪನಾಲೆಗಳಲ್ಲಿ ಡ್ರಾಪ್ ಹಾಗೂ ಪೈಪ್ ಔಟ್ಲೆಟ್ ನೀರು ಹರಿಯದೇ ಮೂರು ವರ್ಷದಿಂದ ಹಾಳಾಗಿ ಹೋಗಿವೆ. ತುರ್ತಾಗಿ ಸರ್ವೆ ಮಾಡಿ ನೀರಾವರಿ ಕಟ್ಟಡಗಳ ದುರಸ್ತಿ ಮಾಡಲು ರೈತರಾದ ಕಾಮಲಪುರದ ಹಾಲೇಶಪ್ಪ, ಹೊಳೆಸಿರಿಗೆರೆ ಬಸಪ್ಪ ಆಗ್ರಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry