3

ನೋವಿನಲ್ಲಿ ಮರೆಯಾದ ‘ಸಂಭ್ರಮ’

Published:
Updated:
ನೋವಿನಲ್ಲಿ ಮರೆಯಾದ ‘ಸಂಭ್ರಮ’

ದಾವಣಗೆರೆ: ಹಲವು ಬಗೆಯ ನೋವು– ನಲಿವುಗಳಿಗೆ ವೇದಿಕೆಯಾಗಿದ್ದ ‘2017’ಕ್ಕೆ ಇಂದು (ಡಿ.31) ತೆರೆ ಬೀಳಲಿದೆ. ಒಂದು ವರ್ಷದ ಅವಧಿಯಲ್ಲಿ ಸಾಗಿ ಬಂದ ದಾರಿಯತ್ತ ಹೊರಳಿ ನೋಡಿದರೆ ‘ಸಂಭ್ರಮ’ಕ್ಕಿಂತ ‘ನೋವಿನ ಕ್ಷಣ’ಗಳೇ ಹೆಚ್ಚು ಕಾಡುತ್ತಿವೆ.

ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಜನರ ಪರದಾಟ; ಅಡಿಕೆ ತೋಟ ಉಳಿಸಿಕೊಳ್ಳಲು ರೈತರು ಪಟ್ಟ ಪಡಿಪಾಟಲು; ಸೈನಿಕ ಹುಳುಬಾಧೆಯಿಂದ ಮೆಕ್ಕೆಜೋಳ ಬೆಳೆ ನಾಶ; ನಡೆಯದ ವಿಶ್ವ ಕನ್ನಡ ಸಮ್ಮೇಳನ ಬೇಸರವನ್ನುಂಟು ಮಾಡಿವೆ. ಶೌಚಾಲಯ ನಿರ್ಮಾಣಕ್ಕೆ ಗ್ರಾಮಸ್ಥರು ಸಹಕಾರ ನೀಡದಿರುವುದರಿಂದ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಂಡ ಹರಪನಹಳ್ಳಿ ತಾಲ್ಲೂಕಿನ ಮತ್ತಿಹಳ್ಳಿಯ ಯುವತಿ ಅನ್ನಪೂರ್ಣ; ಟಿವಿ ದಾರಾವಾಹಿ ಪಾತ್ರ ಅನುಕರಣೆ ಮಾಡಿ ಬೆಂಕಿ ಹಚ್ಚಿಕೊಂಡು ಮೃತಪಟ್ಟ ಹರಿಹರದ ಬಾಲಕಿ ಪ್ರಾರ್ಥನಾ, ಮೂವರನ್ನು ಬಲಿ ತೆಗೆದುಕೊಂಡ ಕಾಡಾನೆಗಳ ಸೆರೆ ಕಾರ್ಯಾಚರಣೆ ಪ್ರಕರಣಗಳು ನೋವಿನ ಕಥೆಗಳನ್ನು ಸಾರುತ್ತಿವೆ.

ಭೂಗತ ವಿದ್ಯುತ್‌ ಕೇಬಲ್‌ ಅಳವಡಿಕೆ ಕಾಮಗಾರಿ ಆರಂಭ, ರಿಂಗ್‌ ರಸ್ತೆ ರೈಲ್ವೆ ಮೇಲ್ಸೇತುವೆ ಕಾಮಗಾರಿ ಆರಂಭ, ನ್ಯಾಮತಿ ತಾಲ್ಲೂಕು ಘೋಷಣೆ, ₹ 446 ಕೋಟಿ ವೆಚ್ಚದ ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆಗೆ ಶಂಕುಸ್ಥಾಪನೆಯಂತಹ ಸಂಗತಿಗಳು ಅಭಿವೃದ್ಧಿಗೆ ಸಾಕ್ಷಿಯಾಗಿವೆ.

ವರ್ಷಾಂತ್ಯದಲ್ಲಿ ರಾಜಕೀಯ ಸಂಚಲನ ಮೂಡಿಸುವ ಸಮಾವೇಶಗಳು ನಡೆದವು. ಬಿಜೆಪಿಯ ಪರಿವರ್ತನಾ ಯಾತ್ರೆ ಹಾಗೂ ಕಾಂಗ್ರೆಸ್‌ ಸರ್ಕಾರದ ‘ಸಾಧನಾ ಸಂಭ್ರಮ’ ಸಮಾವೇಶಗಳು ಮುಂದಿನ ಏಪ್ರಿಲ್‌– ಮೇ ತಿಂಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುನ್ನುಡಿ ಬರೆದವು.

***

ಮರೆಯಲಾಗದ ದುರಂತ...

ಹರಪನಹಳ್ಳಿ ತಾಲ್ಲೂಕಿನ ಮತ್ತಿಹಳ್ಳಿಯಲ್ಲಿ ಶೌಚಾಲಯ ನಿರ್ಮಿಸಿಕೊಳ್ಳಲು ಜಾಗ ನೀಡಲು ಗ್ರಾಮಸ್ಥರು ಅಡ್ಡಿಪಡಿಸಿದ್ದರಿಂದ ಬೇಸತ್ತ ಅನ್ನಪೂರ್ಣ ಎಂಬ ಪದವೀಧರೆ ಯುವತಿ ನವೆಂಬರ್‌ 27ರಂದು ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಮನೆಯ ಬಾಲ್ಕನಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಸ್ವಚ್ಛ ಭಾರತ ಯೋಜನೆಯಡಿ ಶೌಚಾಲಯ ನಿರ್ಮಿಸಿಕೊಳ್ಳದಿದ್ದರೆ ಪಡಿತರ ಸ್ಥಗಿತಗೊಳಿಸುವುದಾಗಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರು. ಸಂಬಂಧಿಕರು ಗ್ರಾಮ ಪಂಚಾಯ್ತಿ ಕಚೇರಿ ಎದುರು ಶವವಿಟ್ಟು ಪ್ರತಿಭಟನೆ ನಡೆಸಿದ್ದರು. ಬಳಿಕ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಭಾರ ಪಿಡಿಒ ವೀರೇಶಯ್ಯ ಅವರನ್ನು ಅಮಾನತುಗೊಳಿಸಲಾಗಿತ್ತು.

* ಖಾಸಗಿ ವಾಹಿನಿಯಲ್ಲಿ ಪ್ರವಾಸವಾಗುತ್ತಿದ್ದ ‘ನಂದಿನಿ’ ದಾರಾವಾಹಿ ಪಾತ್ರದ ಅನುಕರಣೆ ಮಾಡಲು ಹೋಗಿ ಹರಿಹರದ ಆಶ್ರಯ ಕಾಲೊನಿಯ ಎರಡನೇ ತರಗತಿಯ ವಿದ್ಯಾರ್ಥಿನಿ ಪ್ರಾರ್ಥನಾ ನವೆಂಬರ್‌ 11ರಂದು ಬಟ್ಟೆಗೆ ಬೆಂಕಿ ಹಚ್ಚಿಕೊಂಡಿದ್ದಳು. ತೀವ್ರ ಸುಟ್ಟ ಗಾಯಗಳಿಂದ ಬಳಲಿದ್ದ ಬಾಲಕಿ ಮರುದಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು. ಪೋಷಕರಿಗೆ ಎಚ್ಚರಿಕೆ ಘಂಟೆಯಾಗಿದ್ದ ಈ ಪ್ರಕರಣ ರಾಜ್ಯದ ಗಮನ ಸೆಳೆದಿತ್ತು.

* ಚನ್ನಗಿರಿ ತಾಲ್ಲೂಕಿನ ಬಸವಾಪಟ್ಟಣ ಸಮೀಪದ ಬೆಳಲಗೆರೆಯಲ್ಲಿ ಆಗಸ್ಟ್‌ 17ರಂದು ರಾತ್ರಿ ಪಾಲಾಕ್ಷ ಹಾಗೂ ಶಶಿಕಲಾ ದಂಪತಿಯು ಪುತ್ರ ಕಾರ್ತಿಕ್‌ ಹಾಗೂ ಪುತ್ರಿ ವರ್ಷಿಣಿಗೆ ವಿಷವುಣಿಸಿ ತಾವೂ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾಲಬಾಧೆಯಿಂದ ಈ ಕೃತ್ಯಕ್ಕೆ ಮುಂದಾಗಿರಬಹುದು ಎಂದು ಶಂಕಿಸಲಾಗಿದೆ.

ಕುಡಿಯುವ ನೀರಿಗೆ ಹಾಹಾಕಾರ

ತುಂಗಭದ್ರಾ ನದಿ ಹಾಗೂ ಕುಂದವಾಡ, ಟಿ.ವಿ.ಸ್ಟೇಷನ್‌ ಕೆರೆಗಳಲ್ಲಿ ನೀರು ಬತ್ತಿರುವುದರಿಂದ ದಾವಣಗೆರೆ ನಗರದಲ್ಲಿ ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ 15 ದಿನಗಳಿಗೆ ಒಮ್ಮೆ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿತ್ತು. ಈ ಹಿಂದೆಂದೂ ಕಾಣದ ಬರಗಾಲ ಬಂದಿದ್ದರಿಂದ ನಗರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿತ್ತು. ಕುಂದವಾಡ ಹಾಗೂ ಟಿ.ವಿ. ಸ್ಟೇಷನ್‌ ಕೆರೆಗಳಲ್ಲಿ ಅಳಿದುಳಿದ ನೀರನ್ನು ಜನ ಬಿಂದಿಗೆ, ಕ್ಯಾನ್‌ಗಳಲ್ಲಿ ತುಂಬಿಕೊಂಡು ಹೋಗುತ್ತಿದ್ದ ದೃಶ್ಯ ಕಂಡುಬರುತ್ತಿತ್ತು. ದುಪ್ಪಟ್ಟು ಹಣ ನೀಡಿ ಟ್ಯಾಂಕರ್‌ಗಳಲ್ಲಿ ನೀರು ಹಾಕಿಸಿಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿತ್ತು.

ಕಮರಿದ ಅಡಿಕೆ ತೋಟ...

ಕಳೆದ ವರ್ಷ ಮುಂಗಾರು ಹಾಗೂ ಹಿಂಗಾರು ಮಳೆ ಕೈಕೊಟ್ಟ ಪರಿಣಾಮ ಅಂತರ್ಜಲ ಮಟ್ಟ ಭಾರಿ ಪ್ರಮಾಣದಲ್ಲಿ ಕುಸಿದಿತ್ತು. ಕೊಳವೆಬಾವಿಗಳು ಬತ್ತಿದ ಪರಿಣಾಮ ಚನ್ನಗಿರಿ, ದಾವಣಗೆರೆ ತಾಲ್ಲೂಕಿನ ಅಡಿಕೆ ತೋಟಗಳು ಒಣಗತೊಡಗಿದ್ದವು. ರೈತರು ಟ್ಯಾಂಕರ್‌ಗಳ ಮೂಲಕ ನೀರು ತಂದು ತೋಟ ಉಳಿಸಿಕೊಳ್ಳಲು ಏಪ್ರಿಲ್‌– ಮೇ ತಿಂಗಳಲ್ಲಿ ಹರಸಾಹಸ ಪಟ್ಟರು. ಬದುಕಿಗೆ ಆಸರೆಯಾಗಿದ್ದ ತೋಟದ ಒಣಗಿದ ಅಡಿಕೆ ಮರಗಳನ್ನು ಕೆಲವು ರೈತರು ಕಡಿದು ಹಾಕಿದರು. ಜಿಲ್ಲೆಯಲ್ಲಿ ಸುಮಾರು 4,500 ಹೆಕ್ಟೇರ್‌ ಅಡಿಕೆ ತೋಟ ನಾಶವಾಗಿದ್ದವು.

ಸೈನಿಕ ಹುಳುವಿಗೆ ಬೆಳೆ ಹಾನಿ

ಜಿಲ್ಲೆಯಲ್ಲಿ ಮೆಕ್ಕೆಜೋಳ ಬೆಳೆಗೆ ಸೈನಿಕ ಹುಳು ಬಾಧೆ ತೀವ್ರವಾಗಿ ಕಾಣಿಸಿಕೊಂಡಿತ್ತು. ಸುಮಾರು 56 ಸಾವಿರ ಹೆಕ್ಟೇರ್‌ ಮೆಕ್ಕೆಜೋಳ ಬೆಳೆ ಹಾನಿಯಾಗಿದೆ ಎಂದು ಕೃಷಿ ಇಲಾಖೆ ಅಂದಾಜು ಮಾಡಿದೆ. ಭತ್ತದ ಗದ್ದೆಯಲ್ಲೂ ಸೈನಿಕ ಹುಳು ಕಾಣಿಸಿಕೊಂಡಿದ್ದು, ರೈತರನ್ನು ಚಿಂತೆಗೀಡು ಮಾಡಿತ್ತು. ಬೆಳೆ ಹಾನಿಗೆ ಪರಿಹಾರ ವಿತರಿಸುವಂತೆ ಒತ್ತಾಯಿಸಿ ರೈತರು ಪ್ರತಿಭಟನೆ ನಡೆಸಿದ್ದರೂ, ಇನ್ನೂ ಪರಿಹಾರ ವಿತರಣೆಯಾಗಿಲ್ಲ.

ನಡೆಯದ ವಿಶ್ವ ಕನ್ನಡ ಸಮ್ಮೇಳನ

3ನೇ ವಿಶ್ವ ಕನ್ನಡ ಸಮ್ಮೇಳನ ನಡೆಸಲು ರಾಜ್ಯ ಸರ್ಕಾರವು ₹ 30 ಕೋಟಿ ಅನುದಾನವನ್ನು ಬಜೆಟ್‌ನಲ್ಲಿ ಮೀಸಲಿಟ್ಟಿತ್ತು. ಬಳಿಕ ದಾವಣಗೆರೆಯಲ್ಲಿ ನವೆಂಬರ್‌ ಅಥವಾ ಡಿಸೆಂಬರ್‌ ತಿಂಗಳಲ್ಲಿ ಸಮ್ಮೇಳನ ನಡೆಸಲು ತೀರ್ಮಾನ ಕೈಗೊಳ್ಳಲಾಗಿತ್ತು. ಎಂ. ಲಕ್ಷ್ಮೀನಾರಾಯಣ ಅವರನ್ನು ಸಮ್ಮೇಳನದ ವಿಶೇಷಾಧಿಕಾರಿಯನ್ನಾಗಿಯೂ ನೇಮಿಸಲಾಗಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಹಿತಿಗಳು ಹಾಗೂ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮ್ಮೇಳನದ ಸ್ವರೂಪ ಹೇಗಿರಬೇಕು ಎಂದೂ ಚರ್ಚಿಸಿದ್ದರು. ನವೆಂಬರ್‌ ತಿಂಗಳ ಅಂತ್ಯದಲ್ಲಿ ಮೈಸೂರಿನಲ್ಲಿ 83ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ನಡೆದಿರುವುದರಿಂದ ಹಾಗೂ ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ‘ಸಾಧನಾ ಸಂಕಲ್ಪ’ ಸಮಾವೇಶಗಳನ್ನು ರಾಜ್ಯದಾದ್ಯಂತ ನಡೆಸಲು ಮುಂದಾಗಿರುವುದರಿಂದ ವಿಶ್ವ ಕನ್ನಡ ಸಮ್ಮೇಳನ ನನೆಗುದಿಗೆ ಬಿತ್ತು.

ಜಗಳೂರಿಗೆ ದೀಪಿಕಾ ಪಡುಕೋಣೆ ಭೇಟಿ

ಜಗಳೂರು ತಾಲ್ಲೂಕಿನ ಪಲ್ಲಾಗಟ್ಟೆ ಹಾಗೂ ಬಿಳಿಚೋಡು ಗ್ರಾಮಗಳಿಗೆ ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಅವರು ಅಕ್ಟೋಬರ್‌ 10ರಂದು ಭೇಟಿ ನೀಡಿದ್ದರು. ತಮ್ಮ ‘ದಿ ಲಿವ್‌, ಲವ್‌ ಲಾಫ್‌ ಫೌಂಡೇಶನ್‌’ನ ನೆರವಿನಿಂದ ಚಿಕಿತ್ಸೆ ಪಡೆದು ಗುಣಮುಖರಾಗುತ್ತಿರುವ ಮನೋರೋಗಿಗಳೊಂದಿಗೆ ಸಮಾಲೋಚನೆ ನಡೆಸಿದರು.

ಪ್ರಮುಖ ಘಟನಾವಳಿಗಳು...

* ದಾವಣಗೆರೆ ನಗರದ ಹಳೇ ಬಸ್‌ನಿಲ್ದಾಣದ ಬಳಿ ರಸ್ತೆ ಪಕ್ಕದಲ್ಲಿ ಹೂವು ಮಾರಾಟ ಮಾಡುತ್ತಿದ್ದ ಅಂಗಡಿಗಳನ್ನು ಜ. 3ರಂದು ತೆರವುಗೊಳಿಸಲಾಯಿತು. ಎಪಿಎಂಸಿ ಆವರಣ ಹಾಗೂ ಭರತ್‌ ಕಾಲೊನಿಯಲ್ಲಿನ ಪುಷ್ಪ ಹರಾಜು ಕೇಂದ್ರದಲ್ಲಿ ವ್ಯಾಪಾರ ನಡೆಸಲು ಪರ್ಯಾಯ ವ್ಯವಸ್ಥೆ ಕಲ್ಪಿಸಲಾಯಿತು.

* ಪೂರ್ವ ವಲಯದ ಐಜಿಪಿಯಾಗಿ ಜ. 13ರಂದು ಡಾ. ಎಂ.ಎ.ಸಲೀಂ ಅಧಿಕಾರ ಸ್ವೀಕಾರ

* ಸಂತೇಬೆನ್ನೂರಿನಲ್ಲಿ ಜನವರಿ 21 ಹಾಗೂ 22ರಂದು ಸಾಹಿತಿ ಪ್ರೊ.ಎಸ್‌.ಬಿ.ರಂಗನಾಥ ಸರ್ವಾಧ್ಯಕ್ಷತೆಯಲ್ಲಿ 8ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು.

* ಒಂದೇ ವರ್ಷದಲ್ಲಿ ಎರಡು ಘಟಿಕೋತ್ಸವ ನಡೆಸಿರುವುದಕ್ಕೆ ದಾವಣಗೆರೆ ವಿಶ್ವವಿದ್ಯಾಲಯ ಸಾಕ್ಷಿಯಾಯಿತು. ಜನವರಿ 20ರಂದು ನಾಲ್ಕನೇ ಘಟಿಕೋತ್ಸವ ನಡೆದಿತ್ತು. ಕುಲಪತಿ ಪ್ರೊ.ಬಿ.ಬಿ. ಕಲಿವಾಳ ಅವರ ಅವಧಿ ಡಿ.29ಕ್ಕೆ ಮುಗಿಯಲಿರುವುದರಿಂದ ತರಾತುರಿಯಲ್ಲಿ 5ನೇ ಘಟಿಕೋತ್ಸವವನ್ನು ಡಿಸೆಂಬರ್‌ 23ರಂದು ನಡೆಸಲಾಯಿತು. ಇದಕ್ಕೆ ವಿದ್ಯಾರ್ಥಿ ಸಂಘಟನೆಗಳಿಂದ ಆಕ್ಷೇಪವೂ ಕೇಳಿಬಂದಿದ್ದವು.

* ಮೇ 8ರಂದು ಶಾಮನೂರು ಶಿವಶಂಕರಪ್ಪ ಕನ್ವೆನ್ಷನ್‌ ಸೆಂಟರ್‌ (ಎಸ್‌.ಎಸ್‌. ಮಾಲ್‌) ಉದ್ಘಾಟನೆಗೊಂಡಿತು. ಇದರಲ್ಲಿ ಎರಡು ಸ್ಕ್ರೀನ್‌ಗಳಿರುವ ಹವಾನಿಯಂತ್ರಿತ ಸಿನಿಮಾ ಮಂದಿರವನ್ನೂ ನಿರ್ಮಿಸಲಾಗಿದೆ.

* ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಈ ಬಾರಿ ರಾಜ್ಯಕ್ಕೆ ಜಿಲ್ಲೆಯು 19ನೇ ಸ್ಥಾನದಿಂದ 14ನೇ ಸ್ಥಾನಕ್ಕೇರಿದೆ. ಆದರೆ, ಒಟ್ಟಾರೆ ಫಲಿತಾಂಶ ಶೇ 79.09ದಿಂದ ಶೇ 75.33ಗೆ ಕುಸಿದಿದೆ.

* ಹರಿಹರದ ಹರಿಹರೇಶ್ವರ ಮೂರ್ತಿಗೆ ₹ 64 ಲಕ್ಷ ಮೌಲ್ಯದ ವಜ್ರಖಚಿತ ಕಿರೀಟ ಧಾರಣೆ ಡಿ.11ರಂದು ನಡೆಯಿತು.

* ಹಮಾಲಿ ಕೆಲಸ ಮಾಡುವ ಅಂತರರಾಷ್ಟ್ರೀಯ ಪವರ್‌ಲಿಫ್ಟರ್‌ ಮಂಜಪ್ಪ ಕೇರಳದಲ್ಲಿ ನಡೆದ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಎರಡು ಕಂಚಿನ ಪದಕ ಪಡೆದು ಗಮನ ಸೆಳೆದಿದ್ದಾರೆ.

* ದಾವಣಗೆರೆಯ ಅಂತರರಾಷ್ಟ್ರೀಯ ಈಜುಪಟು ರೇವತಿ ನಾಯಕ ಅವರು ದುಬೈನಲ್ಲಿ ಡಿಸೆಂಬರ್‌ 10ರಿಂದ ನಡೆದ ಪ್ಯಾರಾ ಏಷ್ಯನ್‌ ಗೇಮ್ಸ್‌ನ ಈಜು ಸ್ಪರ್ಧೆಯಲ್ಲಿ ಮೂರು ಕಂಚು ಗೆದ್ದುಕೊಂಡು ಗಮನ ಸೆಳೆದಿದ್ದಾರೆ.

* ವೈಚಾರಿಕ ಬರಹಗಾರ ಪ್ರೊ.ಬಿ.ವಿ.ವೀರಭದ್ರಪ್ಪ ಅವರು ಸೆ.29ರಂದು ನಿಧನರಾದರು.

* ‘ಜನಪದ ಜೋಗಿ’ ಮಹಾಂತೇಶ್‌ ಅವರು ಜ. 17ರಂದು ದಾವಣಗೆರೆಯಲ್ಲಿ ನಿಧನರಾದರು.

* ತಮಿಳುನಾಡಿನ ಕೃಷ್ಣಗಿರಿಯಿಂದ ಉತ್ತರ ಪ್ರದೇಶದ ಅಲಹಾಬಾದ್‌ಗೆ ‘ಆಫ್ರಿಕನ್‌ ಕ್ಯಾಟ್‌ಫಿಶ್‌’ ಸಾಗಿಸುತ್ತಿದ್ದ ಲಾರಿಯನ್ನು ಜಗಳೂರಿನ ಪೊಲೀಸರು ಸೆಪ್ಟೆಂಬರ್‌ 15ರಂದು ವಶಪಡಿಸಿಕೊಂಡಿದ್ದರು. ಲಾರಿಯಲ್ಲಿದ್ದ ಕ್ಯಾಟ್‌ಫಿಶ್‌ ಅನ್ನು 45 ದಿನಗಳ ಬಳಿಕ ಜಿಲ್ಲಾ ನ್ಯಾಯಾಲಯದ ಆದೇಶದಂತೆ ನಾಶ ಮಾಡಲಾಯಿತು.

* ದಾವಣಗೆರೆ ನಗರದ ಚೇತನಾ ಫಾರ್ಮಾ ಮಳಿಗೆಗೆ ಅಕ್ಟೋಬರ್‌ 19ರಂದು ರಾತ್ರಿ ಬೆಂಕಿ ತಗುಲಿತ್ತು. ಕೋಟ್ಯಂತರ ರೂಪಾಯಿ ಮೌಲ್ಯದ ಔಷಧಗಳು ಬೆಂಕಿಗೆ ಆಹುತಿಯಾದವು. ಕಳೆದ ವರ್ಷ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಎಪಿಎಂಸಿ ತರಕಾರಿ ಮಾರುಕಟ್ಟೆಗೆ ಬೆಂಕಿ ಬಿದ್ದಿದ್ದವು. ಈ ಬಾರಿ ಚೇತನಾ ಫಾರ್ಮಾ ಮಳಿಗೆಗೆ ಬೆಂಕಿಗೆ ಆಹುತಿಯಾಯಿತು.

* ದಾವಣಗೆರೆ ಮಹಾನಗರ ಪಾಲಿಕೆಯನ್ನು 41 ವಾರ್ಡ್‌ಗಳಿಂದ 45 ವಾರ್ಡ್‌ಗಳಿಗೆ ಹೆಚ್ಚಿಸಲಾಗಿದೆ.

* ವ್ಯಂಗ್ಯಚಿತ್ರಗಾರ ಎಚ್‌.ಬಿ.ಮಂಜುನಾಥ್‌ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

* ದಾವಣಗೆರೆ ನಗರದಲ್ಲಿ ಎಂಟು ಹಾಗೂ ಉಳಿದ ಐದು ತಾಲ್ಲೂಕು ಕೇಂದ್ರಗಳಲ್ಲಿ ತಲಾ ಒಂದರಂತೆ ಒಟ್ಟು 13 ‘ಇಂದಿರಾ ಕ್ಯಾಂಟೀನ್‌’ ಮಂಜೂರಾತಿ.

* ‘ಲಿಂಗಾಯತ’ ಪ್ರತ್ಯೇಕ ಧರ್ಮದ ಬೇಡಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು ‘ವೀರಶೈವ ಲಿಂಗಾಯತ ಸ್ವತಂತ್ರ ಧರ್ಮ’ ಮಾನ್ಯತೆಗಾಗಿ ಪ್ರತಿಪಾದಿಸುತ್ತಿದ್ದಾರೆ. ಲಿಂಗಾಯತ ಪ್ರತ್ಯೇಕ ಧರ್ಮ ಮಾನ್ಯತೆ ನೀಡುವ ನಿಟ್ಟಿನಲ್ಲಿ ತಮ್ಮ ಪಕ್ಷದ ಸರ್ಕಾರದ ಕ್ರಮವನ್ನು ಕಟುವಾಗಿ ಟೀಕಿಸುವ ಮೂಲಕ ಸುದ್ದಿಯಾಗಿದ್ದರು.

* ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯಲ್ಲಿ ನವೆಂಬರ್‌ 30ರಿಂದಲೇ ಆಟೊಗಳಿಗೆ ಮೀಟರ್‌ ಬಳಕೆ ಕಡ್ಡಾಯಗೊಳಿಸಿ ನಿರ್ಧಾರ ತೆಗೆದುಕೊಳ್ಳಲಾಯಿತು. ಆದರೆ, ಆದೇಶ ಜಾರಿಗೆ ಬರಲಿಲ್ಲ. ಬಹುತೇಕ ಆಟೊಗಳು ಇನ್ನೂ ಮೀಟರ್‌ ಅಳವಡಿಸಿಕೊಂಡಿಲ್ಲ.

* ಅಪರಾಧ ಚಟುವಟಿಕೆಗಳ ಮೇಲೆ ನಿಗಾ ವಹಿಸಲು ನಗರದ 29 ಕಡೆ ಅತ್ಯಾಧುನಿಕ ಸಿಸಿಟಿವಿ ಕ್ಯಾಮೆರಾ ಅಳವಡಿಕೆ

* ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಬಿ.ಬಿ. ಕಲಿವಾಳ ಅವರು ಡಿ.29ರಂದು ನಿವೃತ್ತರಾದರು.

* ಡಿ.25ರಂದು ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ಹರಿಹರ, ದಾವಣಗೆರೆಯಲ್ಲಿ ಬಿಜೆಪಿಯ ಪರಿವರ್ತನಾ ಯಾತ್ರೆ ನಡೆಯಿತು. ಡಿ.27ರಂದು ಹೊನ್ನಾಳಿಯಲ್ಲಿ ಪರಿವರ್ತನಾ ಯಾತ್ರೆ ನಡೆಸುವ ಮೂಲಕ ವಿಧಾನಸಭೆ ಚುನಾವಣೆಗೆ ರಣ ಕಹಳೆ ಊದಿದರು.

* ಡಿ.26ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊನ್ನಳ್ಳಿ, ಹರಪನಹಳ್ಳಿ ಹಾಗೂ ಜಗಳೂರಿನಲ್ಲಿ ಕಾಂಗ್ರೆಸ್‌ ಸರ್ಕಾರದ ‘ಸಾಧನಾ ಸಂಭ್ರಮ’ ಸಮಾವೇಶ ನಡೆಸಿದರು. ಕೋಟ್ಯಂತರ ರೂಪಾಯಿ ವೆಚ್ಚದ ಹಲವು ಕಾಮಗಾರಿಗಳಿಗೆ ಏಕಕಾಲಕ್ಕೆ ಶಂಕುಸ್ಥಾಪನೆ ನೆರವೇರಿಸಿ, ಮುಂದಿನ ಚುನಾವಣೆಗೆ ಸಿದ್ಧತೆ ನಡೆಸಿದರು.

* ಜಿಲ್ಲೆಯ ಆರು ಎಪಿಎಂಸಿಗಳಿಗೆ ಜ.12ರಂದು ನಡೆದಿದ್ದ ಚುನಾವಣೆಯಲ್ಲಿ ಕಾಂಗ್ರೆಸ್‌ ಮೇಲುಗೈ ಸಾಧಿಸಿದೆ. ದಾವಣಗೆರೆ, ಹೊನ್ನಾಳಿ, ಜಗಳೂರು, ಹರಪನಹಳ್ಳಿ ಎಪಿಎಂಸಿಗಳಲ್ಲಿ ಕಾಂಗ್ರೆಸ್‌ ಬೆಂಬಲಿಗರು ಅಧಿಕಾರದ ಚುಕ್ಕಾಣಿ ಹಿಡಿದಿದ್ದರೆ, ಚನ್ನಗಿರಿ ಎಪಿಎಂಸಿಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರು ಪ್ರಾಬಲ್ಯ ಸಾಧಿಸಿದ್ದರು. ಹರಿಹರ ಎಪಿಎಂಸಿ ಅತಂತ್ರವಾಗಿತ್ತು.

* ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಅವರ ಕಟ್ಟುನಿಟ್ಟಿನ ಸೂಚನೆ ಮೇರೆಗೆ ಸಂಸದ ಜಿ.ಎಂ. ಸಿದ್ದೇಶ್ವರ ಹಾಗೂ ಎಸ್‌.ಎ. ರವೀಂದ್ರನಾಥ ಅವರ ‘ಬಣ’ ರಾಜಕಾರಣಕ್ಕೆ ತೆರೆ ಬಿದ್ದಿತು. ಸುಮಾರು ಎಂಟು ತಿಂಗಳ ಬಳಿಕ ಪಕ್ಷದ ಕಾರ್ಯಕ್ರಮಗಳಲ್ಲಿ ಸಿದ್ದೇಶ್ವರ ಹಾಗೂ ರವೀಂದ್ರನಾಥ ವೇದಿಕೆ ಹಂಚಿಕೊಂಡು, ಮುಂದಿನ ವಿಧಾನಸಭಾ ಚುನಾವಣೆ ಎದುರಿಸಲು ಸಜ್ಜಾದರು.

* ವೈ.ಎ.ನಾರಾಯಣಸ್ವಾಮಿ ರಾಜೀನಾಮೆಯಿಂದ ತೆರವಾಗಿದ್ದ ವಿಧಾನ ಪರಿಷತ್‌ನ ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಫೆಬ್ರುವರಿ 3ರಂದು ನಡೆದ ಉಪ ಚುನಾವಣೆಯಲ್ಲಿ ಜೆಡಿಎಸ್‌ನ ರಮೇಶ್‌ ಬಾಬು ಗೆಲುವು ಸಾಧಿಸಿದರು.

* ಜಿಲ್ಲಾ ಪಂಚಾಯ್ತಿಯಲ್ಲಿ ಅಧಿಕಾರ ಹಂಚಿಕೆ ನಡೆಯಿತು. ಸದಸ್ಯರ ಒತ್ತಡಕ್ಕೆ ಮಣಿದು ಉಮಾ ರಮೇಶ್‌ ರಾಜೀನಾಮೆ ನೀಡಿದ್ದರಿಂದ ತೆರವಾಗಿದ್ದ ಅಧ್ಯಕ್ಷೆ ಸ್ಥಾನಕ್ಕೆ ಮಂಜುಳಾ ಟಿ.ವಿ. ರಾಜು ಅವರು ಡಿ.13ರಂದು ಅವಿರೋಧವಾಗಿ ಆಯ್ಕೆಗೊಂಡರು.

* ಏಪ್ರಿಲ್‌ 13ರಂದು ಮಹಾನಗರ ಪಾಲಿಕೆಯ ಮೇಯರ್‌ ಆಗಿ ಅನಿತಾಬಾಯಿ ಹಾಗೂ ಉಪ ಮೇಯರ್‌ ಆಗಿ ಮಂಜಮ್ಮ ಆಯ್ಕೆಯಾಗಿದ್ದಾರೆ.

* ಏಪ್ರಿಲ್‌ 24ರಂದು ಹರಿಹರ ನಗರಸಭೆಯ ಅಧ್ಯಕ್ಷೆ ಆಶಾ ಮರಿಯೋಜಿರಾವ್‌ ವಿರುದ್ಧ 24 ಸದಸ್ಯರು ಅವಿಶ್ವಾಸ ಗೊತ್ತುವಳಿ ಮಂಡನೆಗೆ ಅರ್ಜಿ ಸಲ್ಲಿಸಿದ್ದರು. ಬಳಿಕ ಈ ಪ್ರಕ್ರಿಯೆಗೆ ಹೈಕೋರ್ಟ್‌ನಿಂದ ತಡೆಯಾಜ್ಞೆ ತರಲಾಗಿತ್ತು. ತಡೆಯಾಜ್ಞೆ ತೆರವುಗೊಂಡ ಬಳಿಕ ಡಿ.16ರಂದು ನಡೆದ ಅವಿಶ್ವಾಸ ಗೊತ್ತುವಳಿ ಮಂಡನೆ ಸಭೆಯಲ್ಲಿ ಅಧ್ಯಕ್ಷೆಯನ್ನು ಪದಚ್ಯುತಗೊಳಿಸಲಾಯಿತು.

* ಚುನಾವಣಾ ವೆಚ್ಚ ಭರಿಸಲಾಗದೇ ಇರುವುದರಿಂದ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಹರಪನಹಳ್ಳಿ ಶಾಸಕ ಎಂ.ಪಿ. ರವೀಂದ್ರ ನವೆಂಬರ್‌ 26ರಂದು ನಿರ್ಧಾರ ಪ್ರಕಟಿಸಿದರು.

* ಜೆಡಿಯು ರಾಜ್ಯ ಘಟಕದ ಅಧ್ಯಕ್ಷರಾಗಿ ಚನ್ನಗಿರಿಯ ಮಹಿಮ ಪಟೇಲ್‌ ಅವರು ಬೆಂಗಳೂರಿನಲ್ಲಿ ನ.30ರಂದು ಅಧಿಕಾರ ಸ್ವೀಕರಿಸಿದರು.

ಮಹಾ ಮಳೆಗೆ ಬೀದಿಪಾಲಾದ ಬದುಕು

ದಾವಣಗೆರೆ ನಗರದಲ್ಲಿ ಸೆ.25ರಂದು ಸಂಜೆ ಆರಂಭಗೊಂಡ ‘ಮಹಾ’ ಮಳೆ ಸುಮಾರು 10 ಗಂಟೆಗಳ ಕಾಲ ನಿರಂತರವಾಗಿ ಸುರಿಯುವ ಮೂಲಕ ರಾಜಕಾಲುವೆ ಸುತ್ತಲಿನ ಹಾಗೂ ತಗ್ಗು ಪ್ರದೇಶದ ನಿವಾಸಿಗಳ ಬದುಕನ್ನು ಮೂರಾಬಟ್ಟೆ ಮಾಡಿತು.

ಎರಡು ದಶಕಗಳಲ್ಲಿ ಇಂಥ ‘ಮಹಾ’ ಮಳೆ ನಗರದಲ್ಲಿ ಬಂದಿರಲಿಲ್ಲ. ನೀಲಮ್ಮನ ತೋಟದಲ್ಲಿ ಸುಮಾರು 40 ಮನೆಗಳು, ಭಾರತ್‌ ಕಾಲೊನಿಯಲ್ಲಿ 50, ಚಿಕ್ಕನಹಳ್ಳಿಯಲ್ಲಿ 32 ಮನೆಗಳ ಕುಸಿದು ಬಿದ್ದಿದ್ದವು. ಎಸ್‌.ಎಸ್‌.ಮಲ್ಲಿಕಾರ್ಜುನ ನಗರ, ಎಚ್‌.ಕೆ.ಆರ್‌.ನಗರ, ಎಸ್‌.ಪಿ.ಎಸ್‌. ನಗರ, ಆಜಾದ್‌ ನಗರ, ಬಾಷಾ ನಗರ, ಶಿವಾಜಿನಗರ, ಬೂದಾಳ್‌ ರಸ್ತೆಯ ಹಲವು ಮನೆಗಳಿಗೂ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡವು. ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದಲ್ಲಿ ಕೆಸರು ತುಂಬಿಕೊಂಡಿತ್ತು. ಅಗ್ನಿಶಾಮಕ ದಳದ ಕಚೇರಿ ಸಂಪೂರ್ಣ ಜಲಾವೃತಗೊಂಡಿತ್ತು.

ಜಿಲ್ಲಾಡಳಿತ ಎರಡು ಕಡೆ ಗಂಜಿ ಕೇಂದ್ರಗಳನ್ನು ತೆರೆದಿತ್ತು. ಮುಂದಿನ ಮೂರ್ನಾಲ್ಕು ದಿನಗಳ ಕಾಲ ಮಳೆ ಆರ್ಭಟವಿತ್ತು. ಮಳೆಯ ಅನಾಹುತದಿಂದ ಎಚ್ಚೆತ್ತುಕೊಂಡ ಜಿಲ್ಲಾಡಳಿತ ರಾಜಕಾಲುವೆ ಒತ್ತುವರಿ ತೆರವುಗೊಳಿಸಲು ನಿರ್ಧಾರ ಕೈಗೊಂಡಿತು. ಹರಿಹರದಲ್ಲೂ ಮಳೆಯ ಅವಾಂತರದಿಂದ ಹಲವು ಬಡಾವಣೆಗಳಲ್ಲಿನ ಹಲವು ಮನೆಗಳಿಗೆ ನೀರು ನುಗ್ಗಿದ್ದವು.

ಗ್ರಾಮೀಣ ಭಾಗದಲ್ಲೂ ಉತ್ತಮ ಮಳೆ ಸುರಿದ ಪರಿಣಾಮ ಜಗಳೂರು, ಹರಪನಹಳ್ಳಿ ತಾಲ್ಲೂಕಿನ ಹಲವು ಕೆರೆಗಳು ಹಾಗೂ ಚೆಕ್‌ಡ್ಯಾಂಗಳು ಭರ್ತಿಯಾಗಿದ್ದವು. ಅಕ್ಟೋಬರ್‌ ಮೊದಲ ವಾರ ಸುರಿದ ಮಳೆಗೆ ಭರ್ತಿಯಾಗಿದ್ದ ದಾವಣಗೆರೆ ತಾಲ್ಲೂಕಿನ ತುರ್ಚಘಟ್ಟ ಕೆರೆ ಹಾಗೂ ಹರಪನಹಳ್ಳಿಯ ಮಾಚಿಹಳ್ಳಿ ತಾಂಡಾದ ಕೆರೆ ಏರಿ ಒಡೆದು ಅಪಾರ ಹಾನಿ ಸಂಭವಿಸಿತ್ತು.

ಅಭಿವೃದ್ಧಿ ಪಥದಲ್ಲಿ...

* ನಗರದಲ್ಲಿ ಭೂಗತ ವಿದ್ಯುತ್‌ ಕೇಬಲ್‌ ಅಳವಡಿಸುವ ಮೊದಲನೇ ಹಂತದ ₹ 82.75 ಕೋಟಿ ವೆಚ್ಚದ ಕಾಮಗಾರಿಗೆ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದ ಬಳಿ ಚಾಲನೆ ನೀಡಲಾಯಿತು. ಎಚ್‌ಟಿ ಹಾಗೂ ಎಲ್‌ಟಿ ಮಾರ್ಗಗಳನ್ನು ಭೂಮಿಯೊಳಗೆ ಹಾಕುವ ಕೆಲಸ ನಡೆಯುತ್ತಿದೆ. ₹ 532 ಕೋಟಿ ವೆಚ್ಚದಲ್ಲಿ ನಗರದ ಎಲ್ಲೆಡೆ ಭೂಗತ ಕೇಬಲ್‌ ಅಳವಡಿಸಲು ಉದ್ದೇಶಿಸಲಾಗಿದೆ.

* ನಗರದಲ್ಲಿ ₹ 23 ಕೋಟಿ ವೆಚ್ಚದಲ್ಲಿ ರಿಂಗ್‌ ರಸ್ತೆ ರೈಲ್ವೆ ಮೇಲ್ಸೇತುವೆ ಕಾಮಗಾರಿ ಆರಂಭಗೊಂಡಿತು. ‘ದೂಡಾ’ ಅನುಷ್ಠಾನಗೊಳಿಸುತ್ತಿರುವ ಈ ಕಾಮಗಾರಿಗೆ 2011ರಲ್ಲೇ ಯೋಜನೆ ರೂಪಿಸಲಾಗಿತ್ತು.

* ಕೆಎಸ್‌ಆರ್‌ಟಿಸಿ ದಾವಣಗೆರೆ ವಿಭಾಗದಿಂದ ಶಿವಮೊಗ್ಗ ವಿಭಾಗ ಪ್ರತ್ಯೇಕಗೊಂಡವು. ಜೂನ್‌ 28ರಂದು ಶಿವಮೊಗ್ಗ ವಿಭಾಗ ಉದ್ಘಾಟನೆಗೊಂಡವು. ಚಿತ್ರದುರ್ಗ ವಿಭಾಗವನ್ನೂ ಪ್ರತ್ಯೇಕಗೊಳಿಸಲಾಗಿದೆ.

* ಹೊನ್ನಾಳಿಯ ತುಂಗಭದ್ರಾ ನದಿಗೆ ನಿರ್ಮಿಸಿದ ₹ 21.78 ಕೋಟಿ ವೆಚ್ಚದ ದ್ವಿಪಥ ಸೇತುವೆಯನ್ನು ಜುಲೈ 28ರಂದು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ.

* ರಾಜ್ಯ ಬಜೆಟ್‌ನಲ್ಲಿ ದಾವಣಗೆರೆ ಜಿಲ್ಲೆಗೆ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯನ್ನು ಕೊಡುಗೆಯಾಗಿ ನೀಡಲಾಗಿದೆ. ಜೊತೆಗೆ ಸಾಸ್ವೇಹಳ್ಳಿ ಏತ ನೀರಾವರಿ ಯೋಜನೆಗೆ ₹ 446 ಕೋಟಿ ನಿಗದಿಗೊಳಿಸಲಾಗಿತ್ತು. ನ.18ರಂದು ಈ ಕಾಮಗಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿದರು. ತುಂಗಭದ್ರಾ ನದಿಯಿಂದ ಹರಪನಹಳ್ಳಿ ತಾಲ್ಲೂಕಿನ 60 ಕೆರೆಗಳನ್ನು ತುಂಬಿಸುವ ಯೋಜನೆಯನ್ನೂ ಬಜೆಟ್‌ನಲ್ಲಿ ಘೋಷಿಸಲಾಗಿತ್ತು.

* ದಾವಣಗೆರೆಯಲ್ಲಿ ₹ 31.98 ಕೋಟಿ ವೆಚ್ಚದಲ್ಲಿ ನಿರ್ಮಿಸಿದ್ದ ನೂತನ ಇಎಸ್‌ಐ ಆಸ್ಪತ್ರೆಯನ್ನು ಏಪ್ರಿಲ್‌ 28ರಂದು ಹುಬ್ಬಳ್ಳಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಕಾರ್ಮಿಕ ರಾಜ್ಯ (ಸ್ವತಂತ್ರ) ಸಚಿವ ಬಂಡಾರು ದತ್ತಾತ್ರೇಯ ಆನ್‌ಲೈನ್‌ ಮೂಲಕ ಉದ್ಘಾಟಿಸಿದರು. 100 ಹಾಸಿಗೆಯ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ₹ 50 ಕೋಟಿ ಬಿಡುಗಡೆ ಮಾಡುವುದಾಗಿ ಸಚಿವರು ಭರವಸೆ ನೀಡಿದರು.

* ದಾವಣಗೆರೆ ಬಯಲು ಶೌಚಮುಕ್ತ ಜಿಲ್ಲೆಯಾಗಿ ವರ್ಷಾಂತ್ಯದಲ್ಲಿ ಘೋಷಣೆಯಾಗಿದೆ. 2017-18ನೇ ಸಾಲಿನಲ್ಲಿ ಇದುವರೆಗೆ ಜಿಲ್ಲೆಯಲ್ಲಿ 89,262 ಶೌಚಾಲಯಗಳನ್ನು ನಿರ್ಮಿಸುವ ಮೂಲಕ ರಾಜ್ಯದಲ್ಲೇ ಮೊದಲ ಸ್ಥಾನವನ್ನು ಗಳಿಸಿದೆ.

* ಮೇ 13ರಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಾದೇಶಿಕ ಕಚೇರಿ ಆವರಣದಲ್ಲಿ ₹ 6 ಕೋಟಿ ವೆಚ್ಚದಲ್ಲಿ ನೂತನ ಪ್ರಯೋಗಾಲಯಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು.

* ಡಿಸೆಂಬರ್‌ 4ರಂದು ಆಂಧ್ರಪ್ರದೇಶ ಗಡಿ ಮೂಲಕ ಮೊಳಕಾಲ್ಮುರು ತಾಲ್ಲೂಕು ಪ್ರವೇಶಿಸಿ ಎರಡು ಕಾಡಾನೆಗಳು ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ದಾಂದಲೆ ನಡೆಸಿದವು. ಚನ್ನಗಿರಿ ತಾಲ್ಲೂಕಿನಲ್ಲಿ ಮೂವರನ್ನು ಹಾಗೂ ಒಂದು ಎತ್ತನ್ನು ಕಾಡಾನೆ ಬಲಿ ತೆಗೆದುಕೊಂಡಿತು. ಗ್ರಾಮೀಣ ಭಾಗದಲ್ಲಿ ರೈತರು ಹೊಲಗಳಿಗೆ ತೆರಳಲು ಆತಂಕ ಪಡುತ್ತಿದ್ದರು.

* ಡಿ. 17ರಿಂದ ಮೈಸೂರಿನ ದಸರಾ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ‘ಅಭಿಮನ್ಯು’ ಸೇರಿ ಏಳು ಆನೆಗಳೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿ ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆ ಆರಂಭಿಸಿದರು. ಡಿ.21ರಂದು ಮಾನಮಟ್ಟಿ ಸಮೀಪದ ಮನ್ನಾಜಂಗಲ್‌ನಲ್ಲಿ ಒಂದು ಕಾಡಾನೆಯನ್ನು ಸೆರೆ ಹಿಡಿಯಲಾಯಿತು. ಡಿ.23ರಂದು ಕಗ್ಗಿ ಅರಣ್ಯ ಪ್ರದೇಶದಲ್ಲಿ ಮತ್ತೊಂದು ಕಾಡಾನೆಯನ್ನೂ ಸೆರೆ ಹಿಡಿಯಲಾಯಿತು. ಎರಡೂ ಕಾಡಾನೆಗಳನ್ನು ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರಕ್ಕೆ ಸಾಗಿಸಲಾಗಿದೆ. ವರ್ಷಾಂತ್ಯದಲ್ಲಿ ಇಪ್ಪತ್ತು ದಿನಗಳ ಕಾಲ ಜಿಲ್ಲೆಯಲ್ಲಿ ಆನೆಯ ಅವಾಂತರದ್ದೇ ಸುದ್ದಿಯಾಗಿತ್ತು.

* ಏಪ್ರಿಲ್‌ 17ರ ರಾತ್ರಿ ಜಗಳೂರು ತಾಲ್ಲೂಕಿನ ಮಾಗಡಿ ಗ್ರಾಮದಲ್ಲಿ ಮೇಕೆ ಮರಿಯನ್ನು ಹೊತ್ತೊಯ್ದಿದ್ದ ಚಿರತೆಯನ್ನು ಕುರಿಗಾಹಿಗಳು ಹೊಡೆದು ಸಾಯಿಸಿದ್ದರು. ಬಳಿಕ ಅದಕ್ಕೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದರು. ಇದಾದ ಎರಡು ದಿನಗಳ ಬಳಿಕ ಮೃತಪಟ್ಟಿದ್ದ ಚಿರತೆಯ ಎರಡು ಮರಿಗಳು ಅರಣ್ಯ ಇಲಾಖೆಯ ಬೋನಿಗೆ ಬಿದ್ದಿದ್ದವು.

* ಜುಲೈ 2ರಂದು ಹರಪನಹಳ್ಳಿ ತಾಲ್ಲೂಕಿನ ನಂದಿಬೇವೂರು ಗ್ರಾಮದಲ್ಲಿ ರೈತರ ಮೇಲೆ ದಾಳಿ ನಡೆಸಿದ್ದ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸೆರೆ ಹಿಡಿದ ಬಳಿಕ ಉದ್ರಿಕ್ತ ಗ್ರಾಮಸ್ಥರು ದೊಣ್ಣೆಗಳಿಂದ ಹೊಡೆದು ಅದನ್ನು ಸಾಯಿಸಿದ್ದರು.

* ಅಕ್ಟೋಬರ್‌ 7ರಂದು ಹರಪನಹಳ್ಳಿ ತಾಲ್ಲೂಕು ಅಳಗಂಚಿಕೇರಿಯ ಪಾಲಿಹೌಸ್‌ಗೆ ನುಗ್ಗಿದ ಬಾಣಂತಿ ಚಿರತೆ ಗ್ರಾಮಸ್ಥರ ಆಕ್ರೋಶಕ್ಕೆ ಬಲಿಯಾಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry