3
ವಿಜಯಪುರ ಇತಿಹಾಸದ ಪುಟಗಳಲ್ಲಿ ಕಪ್ಪುಚುಕ್ಕೆಯಾಗಿ ದಾಖಲಾದ ವರ್ಷ

ಒಳಿತನ್ನು ಬದಿಗೊತ್ತಿ ವಿಜೃಂಭಿಸಿದ ಅಪರಾಧ..!

Published:
Updated:
ಒಳಿತನ್ನು ಬದಿಗೊತ್ತಿ ವಿಜೃಂಭಿಸಿದ ಅಪರಾಧ..!

ವಿಜಯಪುರ: ಹೊಸ ವರ್ಷದ ಹೊಸ್ತಿಲಲ್ಲಿ 2017ರ ಘಟನಾವಳಿಗಳ ಸಿಂಹಾವಲೋಕನ ನಡೆಸಿದರೆ, ಅಪರಾಧ ಚಟುವಟಿಕೆಗಳೇ ವಿಜೃಂಭಿಸಿದ್ದು ರಾಚುತ್ತದೆ. ಸಾವು–ನೋವಿನ ಸಂಖ್ಯೆಯೂ ದಿಗ್ಭ್ರಮೆ ಮೂಡಿಸುತ್ತದೆ.

ಹತ್ತಾರು ಒಳಿತುಗಳ ನಡುವೆಯೂ ಅಪರಾಧ ಜಗತ್ತು ವಿಜಯಪುರ ಜಿಲ್ಲೆಯ ಜನರಲ್ಲಿ ತಲ್ಲಣ ಮೂಡಿಸಿದೆ. ಬಂದೂಕು, ಪಿಸ್ತೂಲ್‌ನಿಂದ ಹಾರಿದ ಗುಂಡುಗಳಿಗೆ ಲೆಕ್ಕವಿಲ್ಲ. ಕೊಲೆ ಎಸಗಲು ಸುಪಾರಿ ಪಡೆದಿದ್ದು ರಾಜ್ಯದಲ್ಲೇ ಸುದ್ದಿ ಮಾಡಿತು. ಭೀಮಾ ತೀರದಲ್ಲಿ ಬಂದೂಕಿನ ಆರ್ಭಟ ಯಥಾಪ್ರಕಾರ ಮುಂದುವರೆಯಿತು.

ವಿಜಯಪುರದಲ್ಲಿ ದಲಿತ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ, ಕೊಲೆಗೈದ ಘಟನೆ ರಾಜ್ಯದ ಎಲ್ಲೆಡೆ ಆಕ್ರೋಶಕ್ಕೆ ಕಾರಣವಾಯಿತು. ಜಿಲ್ಲೆಯ ಎಲ್ಲೆಡೆ ನಡೆದ ಬಂದ್‌ ಇತಿಹಾಸದ ಪುಟಗಳಲ್ಲಿ ದಾಖಲಾಯಿತು. ಪೈಶಾಚಿಕ ಕೃತ್ಯ ಖಂಡಿಸಿ, ಮಾನವೀಯತೆಯ ನೆಲೆಗಟ್ಟಿನಲ್ಲಿ ಹತ್ತಾರು ಸಂಘಟನೆಗಳ ಮನವಿಗೆ ಸ್ಪಂದಿಸಿದ ಜನಸ್ತೋಮ ಅಪಾರ ಸಂಖ್ಯೆಯಲ್ಲಿ ಜಮಾಯಿಸಿ ಅಭೂತಪೂರ್ವ ಬೆಂಬಲ ನೀಡಿತು. ಇತಿಹಾಸದಲ್ಲಿ ಹಿಂದೆಂದೂ ಈ ಪರಿ ಜನ ಜಮಾಯಿಸಿ ಪ್ರತಿಭಟಿಸಿದ್ದನ್ನು ನಾವು ಖಂಡಿರಲಿಲ್ಲ. ಮುಂದೆ ನಡೆಯುತ್ತದೆ ಎಂಬ ನಂಬಿಕೆಯೂ ನಮಗಿಲ್ಲ ಎಂದವರೇ ಹೆಚ್ಚು.

ರೈತರ ಪಾಲಿಗೆ ಆಶಾದಾಯಕ ವರ್ಷ. ಸತತ ಬರಪೀಡಿತ ಎಂಬ ಹಣೆಪಟ್ಟಿ ಕಳಚಿ ಬಿತ್ತು. ಹೆಸರು, ಉದ್ದು, ತೊಗರಿ ಭಾಗಶಃ ಹಾನಿಗೊಳಗಾಗಿದ್ದು ಬಿಟ್ಟರೇ, ಸಾಧಾರಣ ಫಸಲು ಕಣಜ ಸೇರಿದೆ. ಹಿಂಗಾರು ಕೃಷಿ ಫಸಲು ಸಮೃದ್ಧವಾಗಿದೆ. ಹಲವು ತೊಡರುಗಳ ನಡುವೆ ತೋಟಗಾರಿಕೆ ಬೆಳೆಯೂ ಬೆಳೆಗಾರರ ಕೈ ಹಿಡಿಯಲಿವೆ. ಹಿಂದಿನ ವರ್ಷದ ತೊಗರಿ ಉತ್ಪನ್ನ ಮಾರಾಟ ಮಾಡಿದ ರೈತರ ಕೈಗೆ ಕಾಸು ಸಿಕ್ಕಿದ್ದು ಇದೇ ವರ್ಷ.

ಸಿಹಿ...

ನಿಂಬೆ ಅಭಿವೃದ್ಧಿ ಮಂಡಳಿ ಸ್ಥಾಪಿಸುವುದಾಗಿ ಫೆಬ್ರುವರಿಯಲ್ಲಿ ಘೋಷಿಸಿದ್ದ ರಾಜ್ಯ ಸರ್ಕಾರ, ವರ್ಷಾಂತ್ಯದೊಳಗೆ ನಿಂಬೆಯ ಕಣಜ ಇಂಡಿ ಪಟ್ಟಣದಲ್ಲಿ ಕೇಂದ್ರ ಕಚೇರಿ ಆರಂಭಿಸಿದ್ದು, ಜಿಲ್ಲೆಯ ನಿಂಬೆ ಬೆಳೆಗಾರರ ಪಾಲಿಗೆ ಸಿಹಿ.

ಮೂರ್ನಾಲ್ಕು ದಶಕಗಳಿಂದ ಕಡತಕ್ಕೆ ಸೀಮಿತಗೊಂಡಿದ್ದ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ನಾಲ್ಕು ವರ್ಷದ ಅವಧಿಯಲ್ಲಿ ₹ 195 ಕೋಟಿ ವೆಚ್ಚದಲ್ಲಿ ಉದ್ಘಾಟನೆಗೊಂಡು ಕಬ್ಬು ನುರಿಸಲು ಆರಂಭಿಸಿದ್ದು ಹೆಗ್ಗಳಿಕೆಯ ವಿಚಾರ. ಈ ಎರಡೂ ಇಂಡಿ ಶಾಸಕ ಯಶವಂತರಾಯಗೌಡರ ಪರಿಶ್ರಮದ ಪ್ರತಿಫಲ ಎಂಬುದು ಇಲ್ಲಿ ಉಲ್ಲೇಖಾರ್ಹ.

ಮುಳವಾಡ, ಚಿಮ್ಮಲಗಿ ಏತ ನೀರಾವರಿ ಯೋಜನೆಯಡಿ ಕಾಲುವೆ ಕಾಮಗಾರಿ ಬಹುತೇಕ ಪೂರ್ಣ ಹಂತಕ್ಕೆ ತಲುಪಿದ್ದು 2017ರಲ್ಲೇ. ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವಿರತ ಶ್ರಮದ ಫಲವಿದು. ಬಹುತೇಕ ಕಾಲುವೆಗಳಲ್ಲಿ ಇದೀಗ ನೀರು ಹರಿದಿದ್ದು, ಕೃಷ್ಣೆ ಜಿಲ್ಲೆಯ ಹಲ ಕೆರೆಗಳ ಒಡಲು ಭರ್ತಿ ಮಾಡಿದ್ದಾಳೆ.

ವೃಕ್ಷ ಅಭಿಯಾನ ಟ್ರಸ್ಟ್‌ನ ಮ್ಯಾರಾಥಾನ್‌ ಓಟದಲ್ಲಿ ಚಲನಚಿತ್ರ ನಟ ಯಶ್‌ ಭಾಗಿಯಾಗಿ, ಸಚಿವ ಎಂ.ಬಿ.ಪಾಟೀಲ ಜತೆ ವಿಜಯಪುರಿಗರಲ್ಲಿ ಸಸಿ ಬೆಳೆಸಲು ಪ್ರೇರಣೆ ನೀಡಿದರು.

ಬಿಜಾಪುರದ ಆದಿಲ್‌ಶಾಹಿ ಸುಲ್ತಾನರ ಆಳ್ವಿಕೆಯಲ್ಲಿ ನಿರ್ಮಾಣಗೊಂಡಿದ್ದ 20ಕ್ಕೂ ಹೆಚ್ಚು ಬಾವಡಿಗಳಿಗೆ ಖಾಸಗಿ ಸಹಭಾಗಿತ್ವದಲ್ಲಿ ಕಾಯಕಲ್ಪ ನೀಡಿದ್ದು ಈ ವರ್ಷದ ಸಾಧನೆಯ ಮೈಲುಗಳಲ್ಲೊಂದು.ಜೀರ್ಣೋದ್ಧಾರದ ಬಳಿಕ ಶುದ್ಧ ಜಲದಿಂದ ತುಂಬಿ ತುಳುಕಿದ ಐತಿಹಾಸಿಕ ತಾಜ್‌ ಬಾವಡಿ

ವಿಜಯಪುರ ಮಹಿಳಾ ವಿಶ್ವವಿದ್ಯಾಲಯದ ಹೆಸರನ್ನು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಎಂದು ಮರು ನಾಮಕರಣಗೊಳಿಸಿದ್ದು ಇದೇ ವರ್ಷ. ಅದೂ ಸಚಿವ ಎಂ.ಬಿ.ಪಾಟೀಲ ಒತ್ತಾಸೆಯಿಂದ.

ಬರ ಮುಕ್ತ ಭಾರತಕ್ಕಾಗಿ ರಾಷ್ಟ್ರೀಯ ಜಲ ಸಮಾವೇಶ ವಿಜಯಪುರದಲ್ಲಿ ನಡೆಯಿತು. ಇಲ್ಲಿನ ಮಹಾನಗರ ಪಾಲಿಕೆಗೆ ನೂತನ ಕಟ್ಟಡ ನಿರ್ಮಿಸಿಕೊಳ್ಳಲು ಮಂಜೂರಾತಿ ನೀಡಿದ ರಾಜ್ಯ ಸರ್ಕಾರ ವರ್ಷಾಂತ್ಯದಲ್ಲಿ ಭೂಮಿಪೂಜೆ ನೆರವೇರಿಸಿದೆ.

ಬಜೆಟ್‌ನಲ್ಲಿ ಘೋಷಿಸಿದಂತೆ ವಿಜಯಪುರ ಜಿಲ್ಲೆಯಲ್ಲಿ ನೂತನ ಏಳು ತಾಲ್ಲೂಕು ಕೇಂದ್ರ ರಚನೆಗೆ ಅಧಿಸೂಚನೆ ಪ್ರಕಟಗೊಂಡಿದೆ. 2018ರಲ್ಲಿ ಜಿಲ್ಲೆಯ ಒಟ್ಟು ತಾಲ್ಲೂಕುಗಳ ಸಂಖ್ಯೆ ಹನ್ನೆರಡಕ್ಕೇರಲಿದೆ. ಆಲಮೇಲ ತಾಲ್ಲೂಕು ಕೇಂದ್ರದ ಸ್ಥಾನಮಾನಕ್ಕಾಗಿ ವಾರಕ್ಕೂ ಹೆಚ್ಚಿನ ಅವಧಿ ಅಹೋರಾತ್ರಿ ಹೋರಾಟ ನಡೆಯಿತು.

ಇತಿಹಾಸದ ಕಪ್ಪುಚುಕ್ಕೆ...

2017 ವಿಜಯಪುರ ಜಿಲ್ಲಾ ಇತಿಹಾಸದ ಕಪ್ಪುಚುಕ್ಕೆ. ಈ ಹಿಂದಿನ ಎಲ್ಲ ಅಪರಾಧ ಕೃತ್ಯ ಬದಿಗೆ ಸರಿಸಿ, ದುಷ್ಕೃತ್ಯಗಳು ಅಟ್ಟಹಾಸಗೈದ ವರ್ಷ.

ವಿಜಯಪುರದ ದಲಿತ ಬಾಲಕಿ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣ ರಾಜ್ಯವನ್ನೇ ಬೆಚ್ಚಿ ಬೀಳಿಸಿತು. ಎಲ್ಲೆಡೆ ಪ್ರತಿಭಟನೆ ಮಾರ್ದನಿಸಿದವು. ಬಹುತೇಕ ನಗರ, ಪಟ್ಟಣ ಬಂದ್‌ನಿಂದ ಸ್ತಬ್ಧಗೊಂಡಿದ್ದು ಇತಿಹಾಸದ ಪುಟಗಳಲ್ಲಿ ದಾಖಲಾಯಿತು.

ನಾಡ ಪಿಸ್ತೂಲು ಮಾರಾಟ ಜಾಲ ತನ್ನ ಕಬಂಧಬಾಹುಗಳನ್ನು ರಾಜ್ಯದ ಎಲ್ಲೆಡೆ ವಿಸ್ತರಿಸಿಕೊಳ್ಳುತ್ತಿರುವುದು ಆತಂಕ ಸೃಷ್ಟಿಸಿದೆ. ಪತ್ರಕರ್ತನ ಹತ್ಯೆಗಾಗಿ ಪತ್ರಕರ್ತನೇ ಸುಪಾರಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಡಿ, ಸಿಂದಗಿ ತಾಲ್ಲೂಕಿನ ಭೀಮಾ ತೀರದ ರೌಡಿ ಶೀಟರ್‌ಗಳಾದ ಶಶಿಧರ ಮುಂಡೆವಾಡಿ, ವಿಜಿ ಬಡಿಗೇರ್ ಪ್ರಮುಖ ಆರೋಪಿಗಳಾಗಿದ್ದು ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿತು.

ಭೀಮಾ ತೀರದ ಕುಖ್ಯಾತ ರೌಡಿಶೀಟರ್‌, ಉಮರಾಣಿಯ ಭೈರಗೊಂಡ ಕುಟುಂಬದ ವಿರುದ್ಧ ದಶಕಗಳಿಂದ ಹಗೆ ಸಾಧಿಸುತ್ತಿರುವ ಚಡಚಣ ಕುಟುಂಬದ ಕುಡಿ, ಧರ್ಮರಾಜ ಚಡಚಣ ತಾಯಿ ಊರಲ್ಲೇ ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದು 2017ರಲ್ಲೇ.

ವಿಜಯಪುರ ಜಿಲ್ಲಾ ನ್ಯಾಯಾಲಯ ಸಂಕಿರಣದಲ್ಲಿ ಮೊದಲ ಬಾರಿಗೆ ಮಾರಕಾಸ್ತ್ರ ಝಳಪಿಸಿದ್ದು, ಗುಂಡಿನ ಭೋರ್ಗರೆತ ಕೇಳಿಬಂದಿದ್ದು ಇದೇ ವರ್ಷದಲ್ಲಿ. ಕುಖ್ಯಾತ ರೌಡಿ ಶೀಟರ್ ಚಂದಪ್ಪ ಹರಿಜನ ಬಲಗೈ ಬಂಟ ಬಾಗಪ್ಪ ಹರಿಜನ ಮೇಲೆ ನ್ಯಾಯಾಲಯದ ಆವರಣದಲ್ಲೇ ಗುಂಡಿನ ದಾಳಿ ನಡೆದಿದ್ದು, ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿತು.

ಬಸವ ಜನ್ಮಭೂಮಿಯಲ್ಲೇ ಬಸವೇಶ್ವರರ ಮೂರ್ತಿಗೆ ಚಪ್ಪಲಿ ಹಾರ ಹಾಕಿ, ಅಪಮಾನಗೊಳಿಸಿದ ಘಟನೆ ವರ್ಷದಾರಂಭದ ಮಕರ ಸಂಕ್ರಾಂತಿ ಆಸುಪಾಸೇ ವಿಜಯಪುರ ತಾಲ್ಲೂಕಿನ ನಿಡೋಣಿಯಲ್ಲಿ ನಡೆಯಿತು.

ಸಾವಿನ ಸರಣಿ...

ಸಿಡಿಲು, ಸತತ ಮಳೆಯಿಂದ ನೆನೆದ ಹಳೆಯ ಮನೆಗಳ ಗೋಡೆ ಕುಸಿದು 10ಕ್ಕೂ ಹೆಚ್ಚು ಮಂದಿ ಜೀವ ತೆತ್ತರೆ, ದಣಿವಾಗಿ ಬಾಯಾರಿಸಿಕೊಳ್ಳಲು ಕೃಷಿ ಹೊಂಡಗಳ ಬಳಿ ತೆರಳಿದ ಮಕ್ಕಳ ಸಾವಿನ ಸಂಖ್ಯೆಯೂ ದಶಕ ದಾಟಿದ್ದು ವಿಪರ್ಯಾಸ.

ಧಾರಾಕಾರ ಸುರಿದ ವರ್ಷಧಾರೆಯ ಬಿರುಸಿಗೆ ಆತಂಕಗೊಂಡ ವಿಜಯಪುರ ತಾಲ್ಲೂಕಿನ ಕೋಟ್ಯಾಳ ಗ್ರಾಮದ ತೋಟದ ವಸತಿಯ ಐಶ್ವರ್ಯ, ಗೀತಾ ಸೋಲಂಕರ ಸಹೋದರಿಯರು, ಶಾಲೆಯಿಂದ ಮಧ್ಯಾಹ್ನವೇ ಮನೆಗೆ ಹೋಗಲು ಹೊರ ಬಂದು, ಡೋಣಿಯ ಪ್ರವಾಹಕ್ಕೆ ಬಲಿಯಾದ (ಜೂನ್‌ 19) ದುರ್ಘಟನೆ ಶೈಕ್ಷಣಿಕ ವಲಯದ ಕಪ್ಪುಚುಕ್ಕೆ.

ರೈತರ ಆತ್ಮಹತ್ಯೆಯೂ ಮುಂದುವರೆದವು. ಅಪಘಾತಗಳಲ್ಲಿ ಮೃತಪಟ್ಟವರ ಸಂಖ್ಯೆ ಶತಕ ದಾಟಿದೆ. ತಾಳಿಕೋಟೆ ಬಳಿ ಡೋಣಿಯ ಪ್ರವಾಹ ಬೈಕ್‌ ಸವಾರನನ್ನು ಬಲಿ ಪಡೆಯಿತು.

ವಿಜಯಪುರ ತಾಲ್ಲೂಕು ಉತ್ನಾಳದ ಮನೆಯೊಂದರಲ್ಲಿ ಫ್ರಿಜ್‌ ಸ್ಫೋಟಗೊಂಡು, ಸಹೋದರರಿಬ್ಬರು ಮೃತಪಟ್ಟಿದ್ದು ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿಸಿತು. ಶಹಾಪುರದಿಂದ ಪರ್ಸಿ ಸಾಗಿಸುತ್ತಿದ್ದ ಲಾರಿಯಲ್ಲಿ ಮಹಾರಾಷ್ಟ್ರಕ್ಕೆ ಕೂಲಿ ಅರಸಿ ಪಯಣಿಸಿದ ಸಿಂದಗಿ, ಇಂಡಿ ತಾಲ್ಲೂಕಿನ ಎಂಟು ಮಂದಿ ತಾಸಗಾಂವ್‌ ಬಳಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದು ಮನಕಲಕುವ ಘಟನೆ.

ರ‍್ಯಾಲಿಗಳ ಪರ್ವ... ಚುನಾವಣಾ ಜಪ...

ವಿಧಾನಸಭಾ ಚುನಾವಣಾ ಪೂರ್ವ ವರ್ಷವಾಗಿದ್ದರಿಂದ ರಾಜಕೀಯ ಕ್ಷೇತ್ರದಲ್ಲಿ ಹೆಚ್ಚಿನ ಪಲ್ಲಟಗಳು ನಡೆಯಲಿಲ್ಲ. ನಿರೀಕ್ಷೆಯಂತೆ ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ‘ಕೈ’ ಬಿಟ್ಟು, ತೆನೆ ಹೊತ್ತಿದ್ದು ಪ್ರಮುಖ ಬೆಳವಣಿಗೆ.

ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಯಾತ್ರೆಗಳ ಪರ್ವ ನಡೆಯಿತು. ಮೂರು ಪಕ್ಷಗಳ ಅಗ್ರೇಸರರು ಜಿಲ್ಲೆಯ ವ್ಯಾಪ್ತಿಯಲ್ಲಿ ಸಂಚರಿಸಿ ಮಿಂಚಿನ ಸಂಚಲನ ಸೃಷ್ಟಿಸಲು ಯತ್ನಿಸಿದರು. ಜಿಲ್ಲಾ ಘಟಕಗಳ ಅಧ್ಯಕ್ಷರ ಸರಣಿ ವೈಫಲ್ಯ ಕಾರ್ಯಕರ್ತರಲ್ಲಿ ಅಸಮಾಧಾನ ಮಡುಗಟ್ಟಿಸಿದೆ.

ಜಿಲ್ಲಾ ಕಾಂಗ್ರೆಸ್‌ನಲ್ಲಿ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಆಪ್ತರ ಮೇಲುಗೈ ಮತ್ತಷ್ಟು ಹೆಚ್ಚಿತು. ಕೆಪಿಸಿಸಿ, ನಾಮ ನಿರ್ದೇಶಿತ ಸದಸ್ಯರ ನೇಮಕದಲ್ಲಿ ಆಪ್ತೇಷ್ಟರ ಪ್ರಭಾವವೇ ಹೆಚ್ಚಿದೆ. ಬಿಜೆಪಿಯ ಬಣ ರಾಜಕಾರಣ ವರಿಷ್ಠರಿಗೆ ತಲೆ ನೋವಾಗಿದೆ. ಕೇಂದ್ರ–ರಾಜ್ಯದ ಮಾಜಿ ಸಚಿವರು ಪರಸ್ಪರ ಕೈಜೋಡಿಸುವ ಲಕ್ಷಣ ದಟ್ಟೈಸುತ್ತಿವೆ.

ಜೆಡಿಎಸ್‌ ಚುನಾವಣಾ ಪೂರ್ವ ವರ್ಷದಲ್ಲಿ ನೂತನ ಪದಾಧಿಕಾರಿಗಳನ್ನು ನೇಮಿಸಿದೆ. ಮೂರು ಪಕ್ಷಗಳು ಚುನಾವಣಾ ತಾಲೀಮಿನಲ್ಲಿ ತಲ್ಲೀನವಾಗಿವೆ. ಒಟ್ಟಾರೆ ಜಿಲ್ಲೆಯ ಫಲಿತಾಂಶಕ್ಕಿಂತ ತಮ್ಮ ತಮ್ಮ ಕ್ಷೇತ್ರಗಳಲ್ಲಿ ತಾವು ಗೆಲುವು ದಾಖಲಿಸಲು ಮುಂದಾಗಿರುವ ಮುಖಂಡರ ಸಂಖ್ಯೆಯೇ ಹೆಚ್ಚಿದೆ.

ವಿಧಾನ ಪರಿಷತ್ ಸದಸ್ಯ ಬಸನಗೌಡ ಪಾಟೀಲ ಯತ್ನಾಳ ಬಿಜೆಪಿ ಸೇರ್ಪಡೆಗೆ ಹಸಿರು ನಿಶಾನೆ ದೊರಕಲಿಲ್ಲ. ಕೋಲಾರ ಶಾಸಕ ವರ್ತೂರು ಪ್ರಕಾಶ ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟು, ತಳಮಟ್ಟದಿಂದ ಸಂಘಟನೆಗೆ ಮುಂದಾಗಿದ್ದರೆ, ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಸಹೋದರನ ಪುತ್ರಿ ಡಾ.ಕೆ.ಮಂಜುಳಾ ಸಿಂದಗಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಟಿಕೆಟ್‌ಗೆ ತೆರೆಮರೆಯ ಕಸರತ್ತು ನಡೆಸಿರುವುದು 2017ರ ವರ್ಷಾಂತ್ಯದ ಪ್ರಮುಖ ರಾಜಕೀಯ ವಿದ್ಯಮಾನ.

ಲಿಂಗಾಯತ ಪ್ರತ್ಯೇಕ ಧರ್ಮದ ಹಕ್ಕೊತ್ತಾಯ ಚಳವಳಿಯ ಮುಂಚೂಣಿಯಲ್ಲಿರುವ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ ತವರಿನಲ್ಲೂ ಸಮಾವೇಶ (ಡಿ 10) ನಡೆಯಿತು. ಲಿಂಗಾಯತ–ವೀರಶೈವ ಲಿಂಗಾಯತ ಮುಸುಕಿನ ಗುದ್ದಾಟ, ಶೀತಲ ಸಮರ ವರ್ಷಾಂತ್ಯದಲ್ಲಿ ಪ್ರಮುಖವಾಗಿ ಗಮನ ಸೆಳೆದವು. ವಿಧಾನಸಭಾ ಚುನಾವಣೆ ಸಂದರ್ಭ ಮತ ಗಳಿಕೆಯ ಮೇಲೂ ಈ ಅಂಶ ಪರಿಣಾಮ ಬೀರಲಿದೆ.

ಉದ್ಯಮ ರಂಗ...

ವರ್ಷದ ಆರಂಭದಿಂದ ಅಂತ್ಯದವರೆಗೂ ಉದ್ಯಮ ರಂಗ ಪ್ರಗತಿಯ ದಾಪುಗಾಲು ದಾಖಲಿಸಲಿಲ್ಲ. ಜಿಲ್ಲೆಯ ವ್ಯಾಪ್ತಿಯಲ್ಲಿ ಯಾವೊಂದು ಹೊಸ ಯೋಜನೆ ಅನುಷ್ಠಾನಗೊಳ್ಳಲಿಲ್ಲ.

ಆರಂಭದ ದಿನಗಳಲ್ಲಿ ಭಾರಿ ಮುಖಬೆಲೆಯ ನೋಟು ರದ್ದತಿ ಸದ್ದು ಮಾಡಿದರೆ, ಜುಲೈನಿಂದ ಈಚೆಗೆ ಜಿಎಸ್‌ಟಿ ಗುಮ್ಮ ವ್ಯಾಪಾರಿಗಳನ್ನು ಹೈರಾಣಾಗಿಸಿತು.

ಪವನ ವಿದ್ಯುತ್‌, ಸೋಲಾರ್ ವಿದ್ಯುತ್ ಉತ್ಪಾದನಾ ಕ್ಷೇತ್ರದಲ್ಲಿ ಬೃಹತ್‌ ಪ್ರಮಾಣದಲ್ಲಿ ಬಂಡವಾಳ ಹೂಡಲು ಮುಂದಾಗಿದ್ದ ಗ್ರೀನ್‌ಕೊ, ಗಮೇಸ, ಮೈತ್ರಾ ಸೇರಿದಂತೆ ಇನ್ನಿತರೆ ವಿದೇಶಿ ಕಂಪೆನಿಗಳು, ಸರಕು ಮತ್ತು ಸೇವಾ ತೆರಿಗೆ ಪದ್ಧತಿ (ಜಿಎಸ್‌ಟಿ) ಜಾರಿಗೊಂಡ ಬಳಿಕ ಬಂಡವಾಳ ಹೂಡಿಕೆಗೆ ಹಿಂಜರಿದವು.

ಸಾಂಸ್ಕೃತಿಕ...

ಸಾಂಸ್ಕೃತಿಕ ಲೋಕ ಒಟ್ಟಾರೆ ಬಡವಾಗಿತ್ತು. ಪೂರ್ವ ನಿಗದಿತ ಕಾರ್ಯಕ್ರಮ ಹೊರತುಪಡಿಸಿದರೆ ವಿಶೇಷ ಕಾರ್ಯಕ್ರಮ, ಅಪಾರ ಸಂಖ್ಯೆಯ ಜನರನ್ನು ಸೆಳೆದ ಸಾರ್ವಜನಿಕ ಸಮಾರಂಭ ನಡೆಯಲಿಲ್ಲ.

ಎಸ್‌.ಪಿ.ಬಾಲಸುಬ್ರಹ್ಮಣ್ಯಂ, ಎಂ.ಡಿ.ಪಲ್ಲವಿ ನೇತೃತ್ವದ ತಂಡ ಖಾಸಗಿ ಸಂಸ್ಥೆಯ ಸಮಾರಂಭದಲ್ಲಿ ಭಾಗಿಯಾದರೆ, ಚಲನಚಿತ್ರ ನಟ ಯಶ್‌, ರಾಧಿಕಾ ದಂಪತಿ ನೇತೃತ್ವದ ತಂಡ ಸಚಿವ ಎಂ.ಬಿ.ಪಾಟೀಲ ಹುಟ್ಟುಹಬ್ಬದಲ್ಲಿ ಭಾಗವಹಿಸಿ ರಸಮಂಜರಿ ನಡೆಸಿಕೊಟ್ಟಿತು. ಮುದ್ದೇಬಿಹಾಳ ಶಾಸಕ ಸಿ.ಎಸ್‌.ನಾಡಗೌಡ ಜನ್ಮದಿನ ಆಚರಣೆಯಲ್ಲೂ ಕಲಾವಿದರ ತಂಡ ರಸಮಂಜರಿಯ ರಸದೌತಣ ಉಣಬಡಿಸಿತು.

ನಿರಂತರ ಬೇಡಿಕೆಯ ನಡುವೆಯೂ ಯಥಾಪ್ರಕಾರ ರಾಷ್ಟ್ರೀಯ ನವರಸಪುರ ಉತ್ಸವ ನಡೆಯಲಿಲ್ಲ. ಕನ್ನಡ ಸಾಹಿತ್ಯ ಪರಿಷತ್‌ ಆರಂಭದಲ್ಲಿ ಚುರುಕಿದ್ದರೆ, ನಂತರದ ಅವಧಿ ನೀರಸದಿಂದ ಕೂಡಿದೆ. ಸಮ್ಮೇಳನಗಳಿಗೆ ಸೀಮಿತವಾಗಿದೆ. ಖಾಸಗಿ ಕಾರ್ಯಕ್ರಮದಲ್ಲಿ ಗಾಯಕ ವಿಜಯ ಪ್ರಕಾಶ್ ನೇತೃತ್ವದ ತಂಡ ಪಾಲ್ಗೊಂಡು ಗಾನಸುಧೆ ಹರಿಸಿತು.

ಕ್ರೀಡೆಯಲ್ಲಿ ಮಿಂಚಿದ ರಾಜೇಶ್ವರಿ...

ರಾಜೇಶ್ವರಿ ಗಾಯಕವಾಡ್‌ ವಿಜಯಪುರದ ಮಹಿಳಾ ಕ್ರಿಕೆಟ್‌ ಆಟಗಾರ್ತಿ. ಹಲವು ವರ್ಷಗಳಿಂದ ಭಾರತ ತಂಡದಲ್ಲಿದ್ದರೂ ಸುದ್ದಿ ಮಾಡಿದ್ದು 2017ರ ಜುಲೈನಲ್ಲಿ ಲಂಡನ್‌ನಲ್ಲಿ ನಡೆದ ಮಹಿಳಾ ವಿಶ್ವಕಪ್‌ ಕ್ರಿಕೆಟ್‌ ಚಾಂಪಿಯನ್‌ಷಿಪ್‌ನಲ್ಲಿ.

ಭಾರತ ಮಹಿಳಾ ತಂಡ ಸೆಮಿಫೈನಲ್‌, ಫೈನಲ್‌ ತಲುಪುವಲ್ಲಿ ರಾಜೇಶ್ವರಿ ನಿರ್ಣಾಯಕ ಪಾತ್ರ ವಹಿಸಿದ್ದರಿಂದ, ದೇಶ–ರಾಜ್ಯದ ಎಲ್ಲೆಡೆ ಖ್ಯಾತಿಯಾದರು. ನ್ಯೂಜಿಲೆಂಡ್‌ ವಿರುದ್ಧದ ಗೆಲುವಿನಲ್ಲಿ ಗಾಯಕವಾಡ್‌ ಪ್ರಮುಖ ಪಾತ್ರ ವಹಿಸಿದ್ದು, ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾದ ಪ್ರಮುಖ ಬ್ಯಾಟ್ಸ್‌ವುಮನ್‌ ಎಲಿಸಿ ವಿಲಾನಿ ವಿಕೆಟ್‌ ಕಬಳಿಸಿದ್ದು ಭಾರತ ಮಹಿಳಾ ಕ್ರಿಕೆಟ್‌ ತಂಡದಲ್ಲಿ ಸ್ಮರಣಾರ್ಹ ಘಟನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry