7

‘ಚುನಾವಣಾ ಕಣಕ್ಕೆ ಜನಸಂಗ್ರಾಮ ಪರಿಷತ್ತಿನ ಅಭ್ಯರ್ಥಿಗಳು’

Published:
Updated:

ಧಾರವಾಡ: ‘ಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಜನ ಸಂಗ್ರಾಮ ಪರಿಷತ್ತಿನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ’ ಎಂದು ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ರಾಘವೇಂದ್ರ ಕುಷ್ಟಗಿ ಹೇಳಿದರು.

‘ರಾಜ್ಯದಾದ್ಯಂತ ಜೆಡಿಎಸ್‌, ಕಾಂಗ್ರೆಸ್ ಹಾಗೂ ಬಿಜೆಪಿ (ಜೆಸಿಬಿ) ಪಕ್ಷಗಳ ಕಾರ್ಯವೈಖರಿಯಿಂದಾಗಿ ಜನರು ಬೇಸತ್ತಿದ್ದಾರೆ. ಈ ನಿಟ್ಟಿನಲ್ಲಿ ಜನ ಸಂಗ್ರಾಮ ಪರಿಷತ್‌ ವತಿಯಿಂದ ಈ ಬಾರಿ ಚುನಾವಣೆ ಎದುರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಗುರುವಾರ ಬೆಂಗಳೂರಿನಲ್ಲಿ ನಡೆದ ಪರಿಷತ್ತಿನ ರಾಜ್ಯ ಸಮಿತಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ರಾಜಕೀಯ ಪಕ್ಷಗಳ ಬಗ್ಗೆ ಅಸಮಾಧಾನ ಹೊಂದಿರುವ, ದೇಶದ ಬದಲಾವಣೆಗೆ ಆಸಕ್ತಿ ಹೊಂದಿರುವವರು ಜ.15ರೊಳಗೆ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳ ಆಯ್ಕೆಗೆ ಮೂರು ಜನರ ಸಮಿತಿ ರಚಿಸಲಾಗಿದೆ. ಸಲ್ಲಿಕೆಯಾದ ಅರ್ಜಿ ಪರಾಮರ್ಶಿಸುವ ತಂಡ, ಅಭ್ಯರ್ಥಿಯ ಹಿನ್ನೆಲೆ ಹಾಗೂ ಸಮಗ್ರ ಮಾಹಿತಿ ತಿಳಿದು ಒಪ್ಪಿಗೆ ನೀಡಿದರೆ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಲಾಗುವುದು’ ಎಂದು ತಿಳಿಸಿದರು.

‘ಚುನಾವಣೆ ವೇಳೆ ತಗಲುವ ಸ್ವಲ್ಪ ವೆಚ್ಚವನ್ನು ಭರಿಸುವ ನಿಟ್ಟಿನಲ್ಲಿ ‘ನೋಟ್ ಕೊಡಿ, ವೋಟ್ ಕೊಡಿ’ ಎಂದು ಜನರಿಂದ ಚಂದಾ ಸಂಗ್ರಹಿಸಲಾಗುವುದು. ಈ ಮೂಲಕ ರಾಜಕೀಯ ಪಕ್ಷಗಳ ಆಮಿಷಕ್ಕೆ ಒಳಗಾಗದಂತೆ ಮನವಿ ಮಾಡಲಾಗುವುದು. ಎಲ್ಲ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಪ್ರಯತ್ನ ನಡೆದಿದೆ. ಚುನಾವಣೆ ಪೂರ್ವ ತಯಾರಿ ಅಂಗವಾಗಿ ಶನಿವಾರ (ಡಿ.30) ಇಲ್ಲಿನ ಅಂಬೇಡ್ಕರ್‌ ಭವನದಲ್ಲಿ ನಡೆಯುವ ಕಾರ್ಯಕರ್ತರ ಕಾರ್ಯಾಗಾರದಲ್ಲಿ ಚರ್ಚೆ ನಡೆಯಲಿದೆ’ ಎಂದರು.

‘ಸಭೆಯಲ್ಲಿ ಎಸ್.ಆರ್. ಹಿರೇಮಠ ನೇತೃತ್ವದಲ್ಲಿ ರಾಜ್ಯ ಪ್ರವಾಸ ನಡೆಸುವ ಕುರಿತು ಚರ್ಚಿಸಲಾಗುವುದು. ಮೊದಲ ಹಂತದಲ್ಲಿ ಬೆಳಗಾವಿ ವಿಭಾಗದಿಂದ ಪ್ರವಾಸ ಪ್ರಾರಂಭಿಸಲಾಗುವುದು’ ಎಂದು ಕುಷ್ಟಗಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಪರಿಷತ್‌ನ ರಾಜ್ಯಾಧ್ಯಕ್ಷ ವಿ.ಎ. ಮಾಲಿಪಾಟೀಲ, ರಾಜ್ಯ ಪ್ರಧಾನಕಾರ್ಯದರ್ಶಿ ಜಾನ್ ವೆಸ್ಲಿ, ಎಸ್.ಆರ್. ಹಿರೇಮಠ, ಎಂ. ಅರವಿಂದ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry