7
400 ರೈತರಿಗೆ ತತ್ಕಾಲ್‌ ಟಿಕೆಟ್‌ ಮಾಡಿಸಿದ್ದು ಯಾರು– ಉಪೇಂದ್ರ ಪ್ರಶ್ನೆ

‘ಬಿಎಸ್‌ವೈ ವಿರುದ್ಧ ಪ್ರತಿಭಟನೆ ಪ್ರಾಯೋಜಿತವೇ?’

Published:
Updated:

ಧಾರವಾಡ: ಬೆಂಗಳೂರಿನಲ್ಲಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಮಹದಾಯಿ ರೈತರು ಪ್ರತಿಭಟನೆ ನಡೆಸಿದ್ದು ಪ್ರಾಯೋಜಿತವೇ? ಎಂದು ಚಿತ್ರನಟ ಉಪೇಂದ್ರ ಟ್ವೀಟ್‌ ಮಾಡಿರುವುದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ರೈತರು ವಿರೋಧಪಕ್ಷದ ವಿರುದ್ಧ ಪ್ರತಿಭಟನೆ ಮಾಡಿದರೆ ವಿನಾ ಆಡಳಿತ ಪಕ್ಷದ ವಿರುದ್ಧ ಮಾಡಲಿಲ್ಲ. ಅಲ್ಲದೆ, 400 ರೈತರು ತತ್ಕಾಲ್‌ ರೈಲು ಟಿಕೆಟ್‌ ಅನ್ನು ಹೇಗೆ ಪಡೆದರು ? ಪೊಟ್ಟಣದಲ್ಲಿ ಆಹಾರ, ಬಿಸ್ಲೆರಿ ನೀರು ಅವರಿಗೆ ಹೇಗೆ ಸಿಕ್ಕಿತು. ನೀವೇನಾದರೂ ಸಹಕಾರ ನೀಡಿದ್ದೀರಾ ದಿನೇಶ್‌ ಗುಂಡೂರಾವ್‌’ ಎಂದು ಉಪೇಂದ್ರ ಟ್ವೀಟ್‌ ಮಾಡಿರುವುದಕ್ಕೆ ರೈತ ಸೇನಾ ಕರ್ನಾಟಕದ ಅಧ್ಯಕ್ಷ ವೀರೇಶ ಸೊಬರದಮಠ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಚಿತ್ರನಟ ಉಪೇಂದ್ರ ಅವರು, ಮೊದಲು ಹೋರಾಟ ಹಾಗೂ ರೈತರು ಅನುಭವಿಸುತ್ತಿರುವ ನೋವು ತಿಳಿದುಕೊಳ್ಳಲಿ. ಒಂದು ಪಕ್ಷ ಕಟ್ಟಿದ ಮಾತ್ರಕ್ಕೆ ಎಲ್ಲೋ ಕುಳಿತು ರೈತರ ಹೋರಾಟ ಕುರಿತು ಹಗುರವಾಗಿ ಮಾತನಾಡುವುದು ಸರಿಯಲ್ಲ’ ಎಂದು ಅವರು ಹೇಳಿದ್ದಾರೆ.

‘ರೈತರಿಗಾಗಿ ಪಕ್ಷಗಳು ಹುಟ್ಟಿಕೊಂಡಿವೆಯೇ ಹೊರತು, ಪಕ್ಷಗಳಿಗಾಗಿ ರೈತರು ಹುಟ್ಟಿಲ್ಲ. ಇನ್ನೂ ಸಾಕಷ್ಟು ಪಕ್ಷಗಳನ್ನು ಹುಟ್ಟಿಸುವ ತಾಕತ್ತು ರೈತರಿಗೆ ಇದೆ ಎಂಬುದನ್ನು ತಿಳಿಯಬೇಕು. ಹೋರಾಟ ಸಂದರ್ಭದಲ್ಲಿ ರೈತರು ತಿಂದ ಲಾಠಿ ಏಟು, ಅನುಭವಿಸಿದ ಜೈಲುವಾಸವನ್ನು ಅರಿತು ಮಾತನಾಡಲಿ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿರುಗೇಟು ನೀಡಿದರು.

‘ಮಹದಾಯಿ ವಿಷಯದಲ್ಲಿ ರೈತ ಸೇನಾ ಕರ್ನಾಟಕ ಪ್ರಾಮಾಣಿಕ ಹೋರಾಟ ನಡೆಸುತ್ತಿದೆ. ಯಡಿಯೂರಪ್ಪ ಅವರು ನೀರು ತರುವ ಭರವಸೆ ನೀಡಿದ್ದರು. ಅವರು ಮಾತಿಗೆ ತಪ್ಪಿದ್ದಕ್ಕೆ ಬಿಜೆಪಿ ಕಚೇರಿ ಎದುರು ಧರಣಿ ಮಾಡಿದ್ದೆವು. ಆದರೆ, ಇದು ಕಾಂಗ್ರೆಸ್‌ ಪ್ರೇರಿತ ಹೋರಾಟ ಎಂದು ಬಿಂಬಿಸಿದ್ದು ಖಂಡನೀಯ’ ಎಂದರು.

‘ಅನಾಥರಂತೆ ಬೆಂಗಳೂರಿಗೆ ತೆರಳಿ ನಡೆಸಿದ ಹೋರಾಟಕ್ಕೆ ಅಲ್ಲಿನ ಜನ ಸಹಕಾರ ನೀಡಿದ್ದಾರೆ. ಊಟಕ್ಕೆ ಅಕ್ಕಿ ನೀಡಿದ್ದಾರೆ. ಯಾವುದೇ ರಾಜಕೀಯ ವ್ಯಕ್ತಿಗಳಿಂದಲೂ ಸಹಾಯ ಪಡೆದಿಲ್ಲ. ಎಲ್ಲದಕ್ಕೂ ಲೆಕ್ಕಪತ್ರ ಇದೆ’ ಎಂದು ಸೊಬರದಮಠ ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry