6
ಅಯ್ಯಪ್ಪ ಸೇವಾ ಸಮಾಜಂ ರಾಷ್ಟ್ರೀಯ ಅಧ್ಯಕ್ಷ ಟಿ.ಬಿ.ಶೇಖರ್‌ಗೆ ಸನ್ಮಾನ

ಭಕ್ತಿ ಭಾಷೆ ಅರಿತ ಉದ್ಯಮಿ

Published:
Updated:
ಭಕ್ತಿ ಭಾಷೆ ಅರಿತ ಉದ್ಯಮಿ

ತುಮಕೂರು: ’ಉದ್ಯಮಿಯಾದರೂ ಜನಾನುರಾಗಿ, ಸದಾ ಸಮಾಜಮುಖಿ, ಧಾರ್ಮಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಟಿ.ಬಿ.ಶೇಖರ್ ಅವರಿಗೆ ಭಕ್ತಿಯ ಭಾಷೆ ಗೊತ್ತಿದೆ’ ಎಂದು ನಿವೃತ್ತ ಐಎಎಸ್ ಅಧಿಕಾರಿ ಡಾ.ಸಿ.ಸೋಮಶೇಖರ್ ಹೇಳಿದರು.

ಶನಿವಾರ ತುಮಕೂರು ನಾಗರಿಕ ಸಮಿತಿಯು ಶಬರಿಮಲೈ ಅಯ್ಯಪ್ಪ ಸೇವಾ ಸಮಾಜಂ ರಾಷ್ಟ್ರೀಯ ಅಧ್ಯಕ್ಷ ಟಿ.ಬಿ.ಶೇಖರ್ ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಅಭಿನಂದನಾ ಭಾಷಣ ಮಾಡಿದರು.

‘ಶೇಖರ್ ಅವರು ಅಯ್ಯಪ್ಪ ಸೇವಾ ಸಮಾಜಂ ರಾಷ್ಟ್ರೀಯ ಅಧ್ಯಕ್ಷರಾದ ಬಳಿಕ ಶಬರಿಮಲೈಯಲ್ಲಿ ಭಕ್ತರಿಗೆ ಮೂಲಸೌಕರ್ಯಗಳನ್ನು ಹೆಚ್ಚಿನ ರೀತಿಯಲ್ಲಿ ಒದಗಿಸುವ ಕಾರ್ಯ ನಡೆದಿದೆ ಎಂದು ತಿಳಿದಿದೆ. ಮಲೆಯಾಳಿ, ತಮಿಳು ಭಾಷೆ ಬರುತ್ತೊ ಇಲ್ಲವೊ. ಆದರೆ ಅವರಿಗೆ ಭಕ್ತಿಯ ಭಾಷೆ ಗೊತ್ತಿದೆ. ಹೀಗಾಗಿ ಭಕ್ತರು ಇವರನ್ನು ಅವಿರೋಧವಾಗಿ ಅಧ್ಯಕ್ಷರನ್ನಾಗಿ ಮಾಡಿದ್ದಾರೆ’ಎಂದರು.

’ಸಮಾಜದಲ್ಲಿದ್ದ ಮೇಲೆ ಸಮಾಜದ ಋಣ ತೀರಿಸಲೇಬೇಕು. ಆ ಕಾರ್ಯವನ್ನು ತಪ್ಪದೇ ನೆರವೇರಿಸಿಕೊಂಡು ಬಂದಿದ್ದಾರೆ. ಶಬರಿಮಲೈಯಲ್ಲಿ ಪ್ರತಿ ವರ್ಷ 5 ಕೋಟಿಗೂ ಹೆಚ್ಚು ಭಕ್ತರು ಸೇರುತ್ತಾರೆ. ಯಾರಿಗೂ ಸಮಸ್ಯೆಯಾಗದಂತೆ ನೋಡಿಕೊಳ್ಳುವುದು, ಮೂಲಸೌಕರ್ಯ ಕಲ್ಪಿಸುವ ಹೊಣೆಗಾರಿಕೆ ಅತ್ಯಂತ ಜವಾಬ್ದಾರಿ ಕೆಲಸ. ಅದನ್ನು ಅಚ್ಚುಕಟ್ಟಾಗಿ ಶೇಖರ್ ಮಾಡಿಕೊಂಡು ಬರುತ್ತಿದ್ದಾರೆ’ ಎಂದು ತಿಳಿಸಿದರು.

ಸನ್ಮಾನಿತರಾಗಿ ಮಾತನಾಡಿದ ಟಿ.ಬಿ. ಶೇಖರ್, ‘1983ರಲ್ಲಿ ಶಬರಿಮಲೈಗೆ ಕುತೂಹಲಕ್ಕೆ ಹೋದವನು

ಭಕ್ತನಾಗಿ ಪರಿವರ್ತನೆಯಾದೆ. ನಾಸ್ತಿಕನಾದವನು ಆಸ್ತಿಕನಾದೆ’ ಎಂದು ನುಡಿದರು.

’ಸತತ 34 ವರ್ಷಗಳಿಂದ ಶಬರಿ ಮಲೈ ಯಾತ್ರೆ ಕೈಗೊಳ್ಳುತ್ತಿದ್ದೇನೆ. ಭಕ್ತರ ಸಹಕಾರದಲ್ಲಿ ನಗರದಲ್ಲೂ ಅಯ್ಯಪ್ಪ ಸ್ವಾಮಿ ದೇವಸ್ಥಾನ ನಿರ್ಮಾಣ ಮಾಡಲಾಗಿದೆ. ಇದೆಲ್ಲವೂ ದೈವ ಸಂಕಲ್ಪದಿಂದಲೇ ಆಗಿರುವುದು. ಮನುಷ್ಯನ ಜೀವನದಲ್ಲಿ ಹಲವಾರು ರೀತಿ ತಿರುವುಗಳು ಬರುತ್ತವೆ. ಆದರೆ, ಕಾಯ, ವಾಚ, ಮನಸ್ಸಿನಿಂದ ಕಾರ್ಯನಿರ್ವಹಿಸಿದಾಗ ಸಮಾಜ ಗುರುತಿಸುತ್ತದೆ. ಜನಮುಖಿ ಕಾರ್ಯ ಮಾಡಿದ ಆತ್ಮತೃಪ್ತಿ ಸಿಗುತ್ತದೆ’ ಎಂದು ನುಡಿದರು.

‘ಸಂಯಮ, ಶಾಂತಿ ಗುಣ ನಮ್ಮ ತಾಯಿಯವರಿಂದ ಬಂದ ಗುಣಗಳು. ಪರಹಿತ, ಕಿರಿಯರ ಕಾಳಜಿ, ಅಸಹಾಯಕರಿಗೆ ನೆರವು ನೀಡುವಂತಹ ಸದ್ಗುಣಗಳನ್ನು ತಾಯಿಯವರೇ ಕಲಿಸಿದ್ದು’ ಎಂದು ನುಡಿದರು.

ಸಿದ್ಧಗಂಗಾಮಠದ ಅಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ, ಚಿಕ್ಕತೊಟ್ಲುಕೆರೆ ಅಟವಿ ಕ್ಷೇತ್ರದ ಅಟವಿ ಶಿವಲಿಂಗ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು.

ಶಬರಿ ಮಲೈ ಅಯ್ಯಪ್ಪ ಸೇವಾ ಸಮಾಜಂ ಗೌರವ ಅಧ್ಯಕ್ಷ ಎಸ್.ಶಿವರಾಂ, ಕಾರ್ಯದರ್ಶಿ ಈರೋಡ್ ಎನ್.ರಾಜನ್, ಶಬರಿ ಮಲೈ ಅಯ್ಯಪ್ಪ ಸೇವಾ ಸಮಾಜಂ ಅಧ್ಯಕ್ಷ ರೋಜಾ ಷಣ್ಮುಗಂ, ಪತ್ರಕರ್ತ ಎಸ್.ನಾಗಣ್ಣ ವೇದಿಕೆಯಲ್ಲಿದ್ದರು. ನಾಗರಿಕ ಸಮಿತಿ ಅಧ್ಯಕ್ಷ ಎಸ್.ಜಿ.ಚಂದ್ರಮೌಳಿ ಅಧ್ಯಕ್ಷತೆವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry