7
ನಾಲ್ಕುವರೆ ವರ್ಷದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಬಳಕೆ ಕುರಿತು ಶಾಸಕ ಡಾ.ರಫೀಕ್ ಅಹಮ್ಮದ್ ವಿವರ

ನಗರ ಅಭಿವೃದ್ಧಿಗೆ ₹ 1300 ಕೋಟಿ ಅನುದಾನ ಬಳಕೆ

Published:
Updated:

ತುಮಕೂರು: ‘2013ರಲ್ಲಿ ನಾನು ಶಾಸಕನಾದ ಬಳಿಕ ಈವರೆಗೆ ತುಮಕೂರು ನಗರದಲ್ಲಿ ₹ 1300 ಕೋಟಿ ಮೊತ್ತದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ’ ಎಂದು ಶಾಸಕ ಡಾ.ರಫೀಕ್ ಅಹಮ್ಮದ್ ಹೇಳಿದರು.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸ್ಮಾರ್ಟ್ ಸಿಟಿ ಅನುದಾನ ಹೊರತುಪಡಿಸಿಯೇ ನಗರ ಅಭಿವೃದ್ಧಿಗೆ ಇಷ್ಟೊಂದು ಮೊತ್ತದ ಅನುದಾನ ತರಲಾಗಿದೆ. ಕೆಲ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡಿದ್ದು, ಇನ್ನಷ್ಟು ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿವೆ’ ಎಂದರು.

’ಸ್ಮಾರ್ಟ್ ಸಿಟಿ’ ಯೋಜನೆ ನಾನು ಶಾಸಕನಾಗಿರುವ ಅವಧಿಯಲ್ಲಿ ಸಿಕ್ಕ ಅತ್ಯಂತ ಬೃಹತ್ ಮೊತ್ತದ ಯೋಜನೆಯಾಗಿದೆ. ಯೋಜನೆಯಡಿ ₹ 2,200 ಕೋಟಿ ಅನುದಾನ ಲಭಿಸುತ್ತಿದೆ ಎಂದು ತಿಳಿಸಿದರು.

‘ಮಹಾನಗರ ಪಾಲಿಕೆಯಿಂದ ವಿವಿಧ ಅನುದಾನದಲ್ಲಿ ಒಟ್ಟು ₹ 350 ಕೋಟಿಗೂ ಹೆಚ್ಚು ಮೊತ್ತದಲ್ಲಿ ಕಾಮಗಾರಿ ಕೈಗೊಳ್ಳಲಾಗಿದ್ದು, ಬಹುತೇಕ ಕಾಮಗಾರಿ ಪೂರ್ಣಗೊಂಡಿವೆ. ದಿಬ್ಬೂರು ಪ್ರದೇಶದಲ್ಲಿ ರಾಜೀವ್ ಆವಾಜ್ ಯೋಜನೆಯಡಿ 1200 ಮನೆಗಳ ಕಾಮಗಾರಿ ಪೂರ್ಣಗೊಂಡಿದೆ’ ಎಂದರು.

’ಲೋಕೋಪಯೋಗಿ ಇಲಾಖೆಯಿಂದ ಅಮಾನಿಕೆರೆಯಲ್ಲಿ ₹ 9.7 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸೇತುವೆ ನಿರ್ಮಾಣ, ಸರ್ಕಾರಿ ಪಾಲಿಟೆಕ್ನಿಕ್ ಆವರಣದಲ್ಲಿ ₹ 1 ಕೋಟಿ ವೆಚ್ಚದಲ್ಲಿ ಮಹಿಳಾ ಹಾಸ್ಟೆಲ್ ನಿರ್ಮಾಣ ಮಾಡಲಾಗಿದೆ. ಲೋಕೋಪಯೋಗಿ ಇಲಾಖೆವತಿಯಿಂದ ₹ 2 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗಿದೆ’ ಎಂದು ಹೇಳಿದರು.

‘ತುಮಕೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಮಾನಿಕೆರೆಯಲ್ಲಿ ₹5.53 ಕೋಟಿ ವೆಚ್ಚದಲ್ಲಿ ಗ್ಲಾಸ್ ಹೌಸ್ ನಿರ್ಮಾಣ ಮಾಡಲಾಗಿದೆ. ₹ 2.58 ಕೋಟಿ ವೆಚ್ಚದಲ್ಲಿ ಸಮುದಾಯ ಭವನ, ಶೆಟ್ಟಿಹಳ್ಳಿ ರೈಲ್ವೆ ಕೆಳ ಸೇತುವೆ ನಿರ್ಮಾಣ ಮಾಡಿ ಚಾವಣಿ ನಿರ್ಮಾಣ ಮಾಡಲಾಗಿದೆ’ ಎಂದು ಹೇಳಿದರು.

‘₹ 5.60 ಕೋಟಿ ವೆಚ್ಚದಲ್ಲಿ  ಕ್ಯಾತ್ಸಂದ್ರದಲ್ಲಿ ಸುಸಜ್ಜಿತವಾದ ಒಳಾಂಗಣ ಕ್ರೀಡಾ ಸಮುಚ್ಚಯ ಹಾಗೂ ನಗರದ ಎರಡು ಕಡೆ ₹.5.98 ಕೋಟಿ ವೆಚ್ಚದಲ್ಲಿ ಪಾದಚಾರಿ ಮೇಲ್ಸೇತುವೆ(ಸ್ಕೈ ವಾಕ್) ನಿರ್ಮಾಣ ಮಾಡಲಾಗಿದೆ’ ಎಂದರು.

’ಶಿವಕುಮಾರ ಸ್ವಾಮೀಜಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ ಜಿಲ್ಲಾಧಿಕಾರಿ ಕಚೇರಿಯಿಂದ ಶಿರಾಗೇಟ್ ಕನಕ ವೃತ್ತ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ರಸ್ತೆ ವಿಸ್ತರಣೆ ಕಾಮಗಾರಿ ಕೈಗೊಳ್ಳಲಾಗಿದೆ’ ಎಂದು ಹೇಳಿದರು.

’ ಅಂತರಸನಹಳ್ಳಿಯಲ್ಲಿ ಬಸ್‌ ಡಿಪೊ,  2ನೇ ಹಂತದ ಒಳಚರಂಡಿ ಯೋಜನೆ, ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ  ಸಮುದಾಯ ಭವನಗಳು,  ಕನ್ನಡ ಭವನ, ತಡೆಗೋಡೆ ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿ ಕೈಗೊಳ್ಳಲಾಗಿದೆ. ನಗರದ ಕೆಲವು ಧಾರ್ಮಿಕ ಸ್ಥಳಗಳಿಗೂ ಅನುದಾನ ದೊರಕಿಸಲಾಗಿದೆ’ ಎಂದು ಹೇಳಿದರು.

’ಅಲ್ಪಸಂಖ್ಯಾತರ ಕಾಲೊನಿ ಅಭಿವೃದ್ಧಿ, ಎಪಿಎಂಸಿ ಮಾರುಕಟ್ಟೆ ನವೀಕರಣ, ಮಹಿಳಾ ಕಾಲೇಜು ಸ್ಥಾಪನೆ, ರಾಷ್ಟ್ರೀಯ ಮಾಧ್ಯಮ ಶಿಕ್ಷಣ ಅಭಿಯಾನದಡಿ ಶಾಲಾ ಕಟ್ಟಡಗಳ ನಿರ್ಮಾಣ ಮಾಡಲಾಗಿದೆ ಎಂದು ವಿವರಿಸಿದರು.

ತುಮಕೂರು ನಗರ ಬ್ಲಾಕ್ ಕಾಂಗ್ರೆಸ್–1 ರ ಅಧ್ಯಕ್ಷ ಮೆಹಬೂಬ್ ಪಾಷಾ, 2ನೇ ಬ್ಲಾಕ್ ಅಧ್ಯಕ್ಷ ಆಟೊ ರಾಜು, ನಗರ ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಮಂಜುಳಾ ಗೋಷ್ಠಿಯಲ್ಲಿದ್ದರು.

***

4 ಕಡೆ ಇಂದಿರಾ ಕ್ಯಾಂಟೀನ್

’ಜನವರಿ ಎರಡನೇ ವಾರದಲ್ಲಿ ನಗರದ ನಾಲ್ಕು ಕಡೆಗಳಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಲಾಗುವುದು’ ರಫೀಕ್ ಅಹಮ್ಮದ್ ಹೇಳಿದರು. ‘ಮಹಾನಗರ ಪಾಲಿಕೆ ಆವರಣ, ಕ್ಯಾತ್ಸಂದ್ರ, ಶಿರಾಗೇಟ್ ಕನಕ ವೃತ್ತದಲ್ಲಿ ಹಾಗೂ ಜೆ.ಸಿ.ರಸ್ತೆ ಬಾಳನಕಟ್ಟೆಯಲ್ಲಿ ಕ್ಯಾಂಟೀನ್ ಮಾಡಲಾಗುವುದು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry