7
ಕನ್ನಡ ಜೈನ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷ, ಸಾಹಿತಿ ಜಿನದತ್ತ ದೇಸಾಯಿ ಬೇಸರ

ಹಿಂದುಳಿಯುತ್ತಿದೆ ಸಾಹಿತ್ಯ ಕ್ಷೇತ್ರ

Published:
Updated:
ಹಿಂದುಳಿಯುತ್ತಿದೆ ಸಾಹಿತ್ಯ ಕ್ಷೇತ್ರ

ಶ್ರವಣಬೆಳಗೊಳ: ‘ಯುವಕರಲ್ಲಿ ಸಾಹಿತ್ಯಾಸಕ್ತಿ ಬತ್ತಿ ಹೋಯಿತೇ ಎನ್ನುವ ಸಂಶಯ ಕಾಡಲಾರಂಭಿಸಿದೆ. ಬರವಣಿಗೆಯಲ್ಲಿ ಏಕೆ ತೊಡಗುತ್ತಿಲ್ಲ? ಎಲ್ಲರೂ ಎಂಜಿನಿಯರಿಂಗ್, ಮೆಡಿಕಲ್, ಮ್ಯಾನೆಜ್‌ಮೆಂಟ್ ಕೋರ್ಸ್‌ಗಳತ್ತ ಧಾವಿಸುತ್ತಿರುವಾಗ ಸಾಹಿತ್ಯ ಕ್ಷೇತ್ರ ಸಹಜವಾಗಿಯೇ ಹಿಂದುಳಿಯುತ್ತಿದೆ’ ಎಂದು ಕನ್ನಡ ಜೈನ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ, ಸಾಹಿತಿ ಜಿನದತ್ತ ದೇಸಾಯಿ ಬೇಸರ ವ್ಯಕ್ತಪಡಿಸಿದರು.

ಬಾಹುಬಲಿ ಮಹಾಮಸ್ತಕಾಭಿಷೇಕ ಅಂಗವಾಗಿ ಗೊಮ್ಮಟ ನಗರದಲ್ಲಿ ಆಯೋಜಿಸಿದ್ದ ಕನ್ನಡ ಜೈನ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಪಾಲಕರ ಆಸೆ, ಆಕಾಂಕ್ಷೆಗಳು ದುಡ್ಡಿನ ಹಿಂದೆಯೇ ಓಡುತ್ತಿವೆ. ತಮ್ಮ ಮಕ್ಕಳು ಹಣ ಟಂಕಿಸುವ ಯಂತ್ರಗಳಾದರೆ ಸಾಕು ಎನ್ನುವವರು ಹೆಚ್ಚಾಗುತ್ತಿದ್ದಾರೆ. ಪರಿಸ್ಥಿತಿ ಹೀಗಾದಾಗ ಮಕ್ಕಳು ಸಂಸ್ಕೃತಿ, ಸಾಹಿತ್ಯಗಳತ್ತ ಏಕೆ ತಿರುಗಿ ನೋಡುತ್ತಾರೆ? ಮಕ್ಕಳು ಹಣದ ಯಂತ್ರಗಳಾದರೆ ಅವರ ವ್ಯಕ್ತಿತ್ವ ಪರಿಪೂರ್ಣವಾಗುವುದಕಲ್ಲ ಎನ್ನುವುದನ್ನು ಪಾಲಕರು ಅರ್ಥಮಾಡಿಕೊಳ್ಳಬೇಕಿದೆ’ ಎಂದರು.

ಕನ್ನಡ ಸಾಹಿತ್ಯದ ಬೆಳವಣಿಗೆಗೆ ಶಿಕ್ಷಣ ಮಾಧ್ಯಮ ಒಂದು ದೊಡ್ಡ ತಡೆಯಾಗಿ ಮಾರ್ಪಟ್ಟಿದೆ. ಮಾತೃಭಾಷಾ ಮಾಧ್ಯಮದಿಂದ ದೂರವಾದ ವಿದ್ಯಾರ್ಥಿಗಳು ಮಾತೃಭಾಷೆಯಲ್ಲಿನ ಸಾಹಿತ್ಯದಿಂದಲೂ ವಂಚಿತರಾಗುತ್ತಿದ್ದಾರೆ. ನನ್ನ ಐದು ಮೊಮ್ಮಕ್ಕಳಿಗೂ ನಾನು ಬರೆದ ಕೃತಿಗಳನ್ನು ಓದಲು ಆಗುವುದಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಇಂಗ್ಲಿಷ್ ಮಾಧ್ಯಮದಲ್ಲಿ ಓದುವ ವಿದ್ಯಾರ್ಥಿಗಳು ಕನ್ನಡ ಭಾಷೆಯನ್ನು ಅರ್ಥ ಮಾಡಿಕೊಳ್ಳಲು ಆಗದಿರುವಾಗ ಅವರು ಸಾಹಿತ್ಯ ಓದುವುದು ಸಾಧ್ಯವೇ ಇಲ್ಲ. ಶಿಕ್ಷಣ ಮಾಧ್ಯಮ ಯಾವುದೇ ಭಾಷೆಯದ್ದಾಗಿದ್ದರೂ ಮಕ್ಕಳು ಕನ್ನಡವನ್ನು ಒಂದು ಭಾಷೆ ಯಾಗಿಯಾದರೂ ಅಭ್ಯಾಸಿಸಬೇಕು. ಇಲ್ಲವಾದರೆ ಅವರು ನಮ್ಮ ಸಾಹಿತ್ಯ ಸಂಪತ್ತಿನಿಂದ ವಂಚಿತರಾಗುತ್ತಾರೆ’ ಎಂದರು.

ಒಂದು ದೇಶದ ಸಂಸ್ಕೃತಿ ನಾಶ ಮಾಡಬೇಕೆನ್ನುವವನು, ಆ ದೇಶದ ಭಾಷೆ ನಾಶ ಮಾಡಿದರೆ ಸಾಕು ಎನ್ನುವ ಅನುಭವದ ಮಾತೊಂದಿದೆ. ಕನ್ನಡ ಸಂಸ್ಕೃತಿಯನ್ನು ಹಾಳು ಮಾಡುವುದೆಂದರೆ ಜೈನ ಸಂಸ್ಕೃತಿಯನ್ನೂ ಹಾಳು ಮಾಡಿದಂತೆಯೇ ಸರಿ. ಕನ್ನಡ ಮತ್ತು ಜೈನ ಸಂಸ್ಕೃತಿಗಳನ್ನು ಬೇರೆ ಬೇರೆಯಾಗಿ ನೋಡಲು ಸಾಧ್ಯವಿಲ್ಲ ಎಂದು ವಿವರಿಸಿದರು.

ಬದುಕು ಸಾಹಿತ್ಯಕ್ಕಿಂತ ದೊಡ್ಡದು, ದೊಡ್ಡ ಬದುಕನ್ನು ಬಾಳಿದವನು ಮಾತ್ರವೇ ದೊಡ್ಡ ಸಾಹಿತ್ಯವನ್ನು ರಚಿಸಬಲ್ಲ. ಒಬ್ಬ ಸಾಹಿತಿ ಹುಟ್ಟಿಬರಲು ಅವನಲ್ಲಿನ ಪ್ರತಿಭೆಯಂತೆ ಹೃದಯ ವೈಶಾಲ್ಯತೆಯೂ ಕಾರಣವಾಗಿರುತ್ತದೆ. ಎಲ್ಲ ಮಹಾಕೃತಿಗಳ ಜೀವಾಳವಾಗಿ ಜೈನ ಸಂಸ್ಕೃತಿ ಮಿಡಿಯುತ್ತಿದೆ. ಕಲೆ, ಸಾಹಿತ್ಯ ಮರಳಿ ನಳನಳಿಸಬೇಕಾದರೆ ಜೈನ ಸಂಸ್ಕೃತಿ ಕಾಯ್ದುಕೊಳ್ಳಬೇಕು. ಅದು ಮಂಕಾದರೆ ನಮ್ಮ ಸಾಹಿತ್ಯ ಕೃತಿಗಳು ಮಂಕಾಗುತ್ತವೆ ಎಂದು ಎಚ್ಚರಿಸಿದರು.

ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ, ಶಾಸಕ ಕೆ.ಅಭಯಚಂದ್ರ ಜೈನ್‌, ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮನು ಬಳಿಗಾರ್‌, ದೂರದರ್ಶನ ಕೇಂದ್ರದ ಡೆಪ್ಯೂಟಿ ಡೈರೆಕ್ಟರ್‌ ಜನರಲ್‌ ಚಂದ್ರಶೇಖರ್‌, ಶಾಸಕ ಸಿ.ಎನ್‌.ಬಾಲಕೃಷ್ಣ, ವಿಧಾನ ಪರಿಷತ್‌ ಸದಸ್ಯ ಗೋಪಾಲಸ್ವಾಮಿ, ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ರಮೇಶ್‌, ತಾಲ್ಲೂಕು ಪಂಚಾಯಿತಿ ಸದಸ್ಯೆ ಮಹಾಲಕ್ಷ್ಮೀ ಶಿವರಾಜ್‌, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹೇಮಾ ಪ್ರಭಾಕರ್‌, ದಿಗಂಬರ ಜೈನ ಸಮಾಜ ಅಧ್ಯಕ್ಷ ಜಿ.ಪಿ.ಪದ್ಮಕುಮಾರ್‌, ಕೂಷ್ಮಾಂಡಿನಿ ದಿಗಂಬರ ಜೈನ ಮಹಿಳಾ ಸಮಾಜ ಅಧ್ಯಕ್ಷೆ ಪೂರ್ಣಿಮಾ ಅನಂತಪದ್ಮನಾಭ್‌, ಎಸ್‌.ಜಿತೇಂದ್ರ ಕುಮಾರ್‌, ಸಾಃಇತಿ ಹಂಪ ನಾಗರಾಜಯ್ಯ ಇದ್ದರು. ಪಿ.ವೈ.ರಾಜೇಂದ್ರ ಕುಮಾರ್‌ ಸ್ವಾಗತಿಸಿದರು. ಹಿರಿಯ ಪತ್ರಕರ್ತ ಎಸ್‌.ಎನ್‌. ಅಶೋಕ ಕುಮಾರ್‌ ನಿರೂಪಿಸಿದರು.

ಜೈನ ವಿದ್ವಾಂಸರ ಸಂಖ್ಯೆ ಹೆಚ್ಚಾಗಲಿ: ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ

ಶ್ರವಣಬೆಳಗೊಳ: ಇತಿಹಾಸದಲ್ಲಿ ಶ್ರವಣ ಸಂಸ್ಕೃತಿಯ ಮೇಲೆ ಆದ ಆಘಾತಗಳಿಂದ ಮಠ, ಗ್ರಂಥಗಳನ್ನು ಸಾಕಷ್ಟು ನಾಶವಾಗಿದ್ದರೂ ಇನ್ನೂ ಹಲವು ಉಳಿದುಕೊಂಡಿವೆ. ಜೈನ ಸಾಹಿತ್ಯ ಪರಂಪರೆ ಇನ್ನಷ್ಟು ಬೆಳೆಯಬೇಕು ಮತ್ತು ವಿದ್ವಾಂಸರ ಸಂಖ್ಯೆ ಹೆಚ್ಚಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

ಕನ್ನಡ ಜೈನ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ‘ಧರ್ಮ ಮತ್ತು ಸಾಹಿತ್ಯಗಳೆರಡೂ ಅವಿಭಾಜ್ಯ ಅಂಗಗಳು. ಧರ್ಮದ ಅನೇಕ ಆಚಾರ, ವಿಚಾರಗಳು ಸಾಹಿತ್ಯಕ್ಕೆ ಪ್ರೇರಣೆ ನೀಡುತ್ತವೆ. ನನ್ನ ದೃಷ್ಟಿಯಲ್ಲಿ ಸಾಹಿತ್ಯ ಸೃಷ್ಟಿಯಾಗಿದ್ದೇ ಮಂತ್ರಗಳ ಮೂಲಕ, ನಮ್ಮ ಜೀವನಕ್ಕೆ ಮಂತ್ರಗಳು ಮೌಲ್ಯ ಕೊಡುತ್ತವೆ. ಮಂತ್ರಗಳನ್ನು ರಚನೆ ಮಾಡಿದ ಸಾಹಿತಿಗಳು ಬಹಳ ಶ್ರೇಷ್ಟರಾಗಿದ್ದಾರೆ. ಒಂದೊಂದು ಸಾಲಿನಲ್ಲಿ ಬ್ರಹ್ಮಾಂಡವನ್ನೇ ತುಂಬಬಲ್ಲ ಸಾಹಿತ್ಯವನ್ನು ಅವರು ರಚಿಸಿದ್ದಾರೆ. ಅವರನ್ನು ಗೌರವಿಸಬೇಕು’ ಎಂದರು.

‘ಧರ್ಮದಷ್ಟೆ ಸಾಹಿತ್ಯವೂ ಶಾಶ್ವತವಾಗಿರುತ್ತದೆ. ದೇಶದ ಹಲವು ಸಾಹಿತ್ಯ ಕೃತಿಗಳಿಗೆ ಮಹಾಭಾರತ ಹಾಗೂ ರಾಮಾಯಣಗಳೇ ಆಧಾರಗಳಾಗಿವೆ. ಧಾರ್ಮಿಕ ಸಾಹಿತ್ಯಗಳು ಧರ್ಮದಿಂದಾಗಿ ಉಳಿದಿವೆ. ಧರ್ಮಕ್ಕೆ ಸ್ವರೂಪ ಬಂದಿರುವುದು ಸಾಹಿತ್ಯದಿಂದಾಗಿದೆ. ಬಾಹುಬಲಿ ಮೂರ್ತಿಯನ್ನು ನೋಡುವಾಗ ಅದರ ಬಾಹ್ಯ ಸೌಂದರ್ಯ ಮಾತ್ರವೇ ನಮಗೆ ಕಾಣುತ್ತದೆ. ಆದರೆ ಸಂಬಂಧಿಸಿದ ಮಂತ್ರ ಕೇಳುತ್ತಾ ನೋಡಿದರೆ ಒಳಗಿನ ಸೌಂದರ್ಯ ನಮ್ಮ ಅನುಭವಕ್ಕೆ ಬರುತ್ತದೆ. ಅದರ ಅನುಭೂತಿಯೇ ಬೇರೆಯಾಗುತ್ತದೆ’ ಎಂದು ನುಡಿದರು.

ಧರ್ಮ ಹೇಗೆ ಶಾಶ್ವತವೋ ಹಾಗೆಯೇ ಸಾಹಿತ್ಯವೂ ಶಾಶ್ವತ. ಧರ್ಮ ಉಳಿದಿರುವುದು ಸಾಹಿತ್ಯದಿಂದ ಹೀಗಾಗಿ ಒಂದಕ್ಕೊಂದು ಪೂರಕ ಎಂದು ವಿವರಿಸಿದರು.

ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರು ಪ್ರಾಚೀನ ವಿಶ್ವವಿದ್ಯಾಲಯ ಸ್ಥಾಪನೆಗೆ ಅತೀವ ಆಸಕ್ತಿ ತೋರುವ ಮೂಲಕ ಪ್ರಾಚೀನ ಭಾಷೆ ಮುಂದಿನ ಜನಾಂಗಕ್ಕೆ ಉಳಿಸುವ ಮಹತ್ಕಾರ್ಯ ಮಾಡುತ್ತಿದ್ದಾರೆ. ಮಸ್ತಕಾಭಿಷೇಕ ಅಂತರದ 12 ವರ್ಷಗಳ ಪೈಕಿ 1 ವರ್ಷಗಳ ಕಾಲ ಧರ್ಮ ರಕ್ಷಣೆ ಮಾಡಿದರೆ ಉಳಿದ 11 ವರ್ಷ ಸಾಹಿತ್ಯ ರಕ್ಷಣೆಯ ತಪಸ್ಸು ಮಾಡುತ್ತಿದ್ದಾರೆ ಎಂದು ಕೊಂಡಾಡಿದರು.

ಇಂಥ ತಪೋಃಶಕ್ತಿ ಇಲ್ಲದೇ ಹೋದರೆ ಸಾಹಿತ್ಯ ನಿಲ್ಲಲು ಸಾಧ್ಯವಿಲ್ಲ. ಹಂಪಾ ನಾಗರಾಜಯ್ಯ ಅವರು ಜೈನ ಸಾಹಿತ್ಯ ಪರಂಪರೆಯ ಶ್ರೇಷ್ಠ ಸಾಹಿತಿ ಎಂದು ಪ್ರಶಂಸೆ ವ್ಯಕ್ತಪಡಿಸಿದ ಧರ್ಮಾಧಿಕಾರಿ, ಇವರ ಸಂಶೋಧನೆ ಮುಂದಿನ ಸಮಾಜಕ್ಕೆ ಆಕರ. ಇಂಥ ಮೇರು ಸಾಹಿತಿ ಜೈನ ಸಾಹಿತ್ಯ ವಲಯದಲ್ಲಿ ಬೇರೊಬ್ಬರು ಸಿಗುವುದಿಲ್ಲ ಎಂದರು.

ಆಧುನಿಕತೆ ಹೆಸರಿನಲ್ಲಿ ಸಂಸ್ಕೃತಿ, ಧರ್ಮ, ಸಂಪ್ರದಾಯಗಳಿಂದ ದೂರಾಗುತ್ತಿರುವ ಜೈನ ಯುವಜನಾಂಗಕ್ಕೆ, ಜೈನ್ ಮಿಲನ್ ನಂತಹ ಸಂಸ್ಥೆಗಳ ಮೂಲಕ ಸಾಹಿತ್ಯವನ್ನು ಪರಿಚಯಿಸಿ ಮರಳಿ ಹಾದಿಗೆ ಕರೆತರುವ ಕೆಲಸ ನಿರಂತರವಾಗಿ ಸಾಗುತ್ತಿದೆ. ಎಲ್ಲರೂ ನಮ್ಮ ಜನಾಂಗ ಹಳಿ ತಪ್ಪಿ ನಡೆಯದಂತೆ ಜಾಗೃತಿ ಮೂಡಿಸಲು ಶ್ರಮಿಸಬೇಕು ಎಂದರು.

ಮುಂದಿನವರ್ಷ ಹಳಗನ್ನಡ ಸಾಹಿತ್ಯ

ಶ್ರವಣಬೆಳಗೊಳ: ಮುಂದಿನ ವರ್ಷ ಶ್ರವಣಬೆಳಗೊಳದಲ್ಲಿ ಅಖಿಲ ಭಾರತ ಹಳಗನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮನು ಬಳಿಗಾರ್‌ ಇಲ್ಲಿ ಶನಿವಾರ ಹೇಳಿದರು.

ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವ ಅಂಗವಾಗಿ ಗೊಮ್ಮಟ ನಗರದಲ್ಲಿ ಏರ್ಪಡಿಸಿದ್ದ ಕನ್ನಡ ಜೈನ ಸಾಹಿತ್ಯ ಸಮ್ಮೇಳನದಲ್ಲಿ ಪುಸ್ತಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ಈ ವರ್ಷವೇ ಹಳಗನ್ನಡ ಸಮ್ಮೇಳನ ನಡೆಸಲು ನಿರ್ಧರಿಸಲಾಗಿತ್ತು. ಆದರೆ ನವೆಂಬರ್‌ನಲ್ಲಿ ಮೈಸೂರಲ್ಲಿ ಸಾಹಿತ್ಯ ಸಮ್ಮೇಳನ ನಡೆದ ಕಾರಣ ಸಾಧ್ಯವಾಗಲಿಲ್ಲ. ಸಮ್ಮೇಳನ ನಡೆಸಲು ಕನಿಷ್ಠ ಐದು ತಿಂಗಳಾದರೂ ಪೂರ್ವ ತಯಾರಿಬೇಕು. ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಜತೆ ಚರ್ಚಿಸಿ ಚುನಾವಣೆ ಮುಗಿದ ಬಳಿಕ ಮೇನಲ್ಲಿ ಸಮ್ಮೇಳನ ನಡೆಸಲಾಗುವುದು ಎಂದು ತಿಳಿಸಿದರು.

ಭಕ್ತರ ಒತ್ತಾಯದ ಮೇರೆಗೆ ಭರತೇಶ ವೈಭವ ಗ್ರಂಥವನ್ನು ಮರು ಮುದ್ರಿಸಲಾಗಿದೆ. ಅದೇ ರೀತಿ ಇನ್ನೆರಡು ಜೈನ ಗ್ರಂಥಗಳನ್ನು ಈ ವರ್ಷದ ಅನುದಾನದಲ್ಲಿಯೇ ಮರು ಮುದ್ರಿಸಲಾಗುವುದು ಎಂದು ಭರವಸೆ ನೀಡಿದರು.

ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ, ಧರ್ಮ ಮತ್ತು ಸಾಹಿತ್ಯ ಜೊತೆ ಜೊತೆಯಾಗಿ ಹೋಗುತ್ತಿರುವ ಅವಿಭಾಜ್ಯ ವಿಷಯಗಳು. ಧರ್ಮದ ಅರಿವಿನಿಂದ ಬದುಕು ರೂಪಿತಗೊಳ್ಳುತ್ತದೆ. ಸಾಹಿತ್ಯದಿಂದ ಮಾತ್ರ ಧರ್ಮವನ್ನು ಅನುಸರಿಸಲು ಸಾಧ್ಯ ಎಂದರು.

ಧರ್ಮವನ್ನು ಅನುಸರಿಸಲು, ಅಳವಡಿಸಿಕೊಳ್ಳಲು, ಆಚರಿಸಲು ಸಾಹಿತ್ಯ ಪ್ರೇರಣೆ ಕೊಡಲಿದೆ. ಇಂದಿಗೂ ನಮ್ಮ ನಡುವೆ ಶ್ರೇಷ್ಠವಾಗಿ ಉಳಿದುಕೊಂಡಿರುವುದು ಧರ್ಮ ಸಾಹಿತ್ಯವೇ ಹೊರತು ಲೌಕಿಕ ಸಾಹಿತ್ಯ ಅಲ್ಲ ಎಂದು ಪ್ರತಿಪಾದಿಸಿದರು. ಆಧುನಿಕತೆ ಹೆಸರಿನಲ್ಲಿ ಸಂಪ್ರದಾಯ, ಆಚಾರ-ವಿಚಾರಗಳು ಬದಲಾಗುತ್ತಿದ್ದು, ಇದನ್ನು ಸರಿಪಡಿಸಲು ಎಲ್ಲರೂ ಎಚ್ಚೆತ್ತುಕೊಳ್ಳಬೇಕು ಎಂದು ಕರೆ ನೀಡಿದರು.

ಜೈನಮಠದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಸರ್ವಾಧ್ಯಕ್ಷ, ಸಾಹಿತಿ ಜಿನದತ್ತ ದೇಸಾಯಿ, ಶಾಸಕರಾದ ಕೆ.ಅಭಯ ಚಂದ್ರ ಜೈನ್‌, ಸಿ.ಎನ್.ಬಾಲಕೃಷ್ಣ, ಸಾಹಿತಿ ಡಾ.ಹಂಪ ನಾಗರಾಜಯ್ಯ, ಕರ್ನಾಟಕ ಜೈನ ಅಸೋಸಿಯೇಷನ್‌ ಅಧ್ಯಕ್ಷ ಎಸ್‌.ಜಿತೇಂದ್ರ ಕುಮಾರ್‌ ಇದ್ದರು. ವಿವಿಧೆಡೆಗಳಿಂದ ಬಂದಿದ್ದ ಅನೇಕ ವಿದ್ವಾಂಸರು, ಸಾಹಿತಿಗಳು ಪಾಲ್ಗೊಂಡಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry